ಸೃಷ್ಟಿ, ದೃಷ್ಟಿ ಕಾವ್ಯ.....
ನಡೆ ನುಡಿಯ ಬೆಳಕಾದ ದಾರಿಯೊಂದನು ದೇವನೆನ್ನುವುದಾದರೆ, ಪಯಣ ಗುಡಿಯ ಕಡೆಗೆ...
ರಣ ಕುಣಿವ ಬದುಕ ಹಾದಿಗೂ ಇಷ್ಟು ಪ್ರೇಮ ಪೇಯವ ಹಂಚುವನಾದರೆ, ನಡಿಗೆ ದೇವನ ಕಡೆಗೆ...
___ ಶಬ್ದಕೆ ನಿಲುಕದ ಶಾಲೀನತೆ...
ಪುಟ್ಟ ದೇವತೆ: 'ಶಾರ್ವಿ...' 😍 ಗೆಳತಿ ಶ್ಯಾಮಲಾ ರವಿರಾಜ್ ಮಗಳು... |
ಇದ್ದರೂ ಇರಬಹುದು ದೇವರು ಹೀಗೆ;
ಆಡುವ ಕೂಸಿನ ಮಡಿಲಲಿ ಆಯಿಯ ನಗುವು ಆಟಿಕೆಯಾದ ಹಾಗೆ,
ಮುಗುದೆ ಮಗುವಿನ ಪ್ರೀತಿ ತಾಯೊಡಲ ನಿತ್ಯ ಸಂಭ್ರಮವಾದ ಹಾಗೆ,
ಜಗದ ಜಂಜಡದ / ಜಗಮಗದ ನಡುವೆಯೂ ಹಸುಳೆ ಕಂದನ ನಗುವು ಮನ ಸೆಳೆದು ಜಗವ ಮರೆಸುವ ಹಾಗೆ...
____ ಜೀವಂತ ದೈವೀಕತೆ...
&&&
ನನಗೋ ಉಳಿಸಿಕೊಳ್ಳುವ ಅಭ್ಯಾಸವೇ ಇಲ್ಲ - ಯೋಗ್ಯತೆಯ ಅಸಲಿಯತ್ತು...
ಉಳಿಸಿಕೊಳ್ಳಬೇಕಾದ ದರ್ದಂತೂ ನಿನಗಿಲ್ಲ - ಸ್ವಾಭಿಮಾನದ ಪ್ರಶ್ನೆ...
ಅಲ್ಲಿಗೆ ಏನು ಉಳಿಯಿತು, ಏನು ಉಳಿದೀತು - ನಾಳೆಗೆ...
ಭಾವವ ಕಲುಷಿತಗೊಳಿಸಿಕೊಂಡು ಬಂಧವ ಕಾಯ್ದುಕೊಳ್ಳಲಾದೀತಾ...!!
____ ಬಾಂಧವ್ಯದ ಸೊಗಡು...
&&&
ಹುಡುಕುವವರಿಗಾಗಿ (ಅಭ್ಯಾಸ ಬಲದಿಂದ ಅಲ್ಲ ಪ್ರೀತಿಯ ದೆಸೆಯಿಂದ) ಹುಡುಕುತ್ತಾ ಸಂತೆ ಪೇಟೆಯಲ್ಲಿ ಕಳೆದುಹೋದೆ - ಸ್ವಂತಕ್ಕೆ ಸತ್ತೇ ಹೋದಂತಾದೆ...
ಚೋದ್ಯ ನೋಡಿ - ಪ್ರೀತಿಯ ಪಸೆಯೇ ಇಲ್ಲದವನೂ ತನಗಾಗಿ ಹುಡುಕುವುದು ಪ್ರೀತಿಯನ್ನೇ...
ಪ್ರೀತಿ ಇಲ್ಲದ ಮೇಲೆ, ಪ್ರೀತಿಗಲ್ಲದ ಮೇಲೆ, ಏಳು ಸಾಗರ ದಾಟಿ, ನೂರು ಕೋಟಲೆಗಳ ಕೋಟೆಯ ಕುಟ್ಟಿ, ಕೂಡಿದ ರಾಜಕುವರಿಯ ಹಸಿ ಎದೆಯಲಿ ಏನ ಬಿತ್ತಬಹುದು...
ಎದೆಯೊಲವ ಗೆಲ್ಲದಲೇ ಗೆದ್ದೆನೆಂದವ ಗೆದ್ದುದಾದರು ಏನನು...? ಎಷ್ಟನ್ನು...??
ನಾನೆಂದರಿಲ್ಲಿ 'ನಾನು' ಅಷ್ಟೇ ಆಗದೇ ಪ್ರೀತಿ ಹುಡುಕುವ ಮುನ್ನ ನನ್ನಲಿ ತುಸುವಾದರೂ ಪ್ರೀತಿಯ ಬೆಳೆದುಕೊಂಡರೆ ಚೆನ್ನವೇನೋ...
____ ಹುಡುಹುಡುಕಿ ಹುಡುಕಾಟ ಸುಸ್ತಾಗಿ ಹೊರಡುವ ಮುನ್ನ...
&&&
ಕ್ಷಮಿಸಿ -
ಮಾತಿಲ್ಲದೇ ಬದುಕೇ ಇಲ್ಲ ಎಂಬಂತೆ ಒಂದು ಕ್ಷಣ ಸುಮ್ಮನುಳಿಯದೇ ವಟವಟ ಹಲುಬಾಟದ ಮಾತಿನ ಪ್ರಾಣಿ ನಾನು...
ಅಂತಿಪ್ಪಲ್ಲಿ,
ಯಾವುದೇ ಕಡು ನೋವಿನೆದುರು ಒಂದು ಸಣ್ಣ ಸಮಾಧಾನದ ಬಿಡಿ ಮಾತೂ ಹುಟ್ಟದ ಬೇವರ್ಸಿಯಾಗ್ತೇನೆ...
ಆಗೆಲ್ಲ ಎಷ್ಟು ಕೆಟ್ಟ ಅಥವಾ ದುರ್ಬಲ ಮಾತುಗಾರ ನಾನು ಎಂಬುದು ಅರಿವಾಗುತ್ತೆ...
___ ಶ್ರಾದ್ಧದ ತಾರೀಖೂ ನೆನಪಾಗದಂತ ಮರೆವಿನ ವರವೊಂದು ಜರೂರು ಬೇಕಿತ್ತು...
&&&
ಸಂಜೆಯ ನಿಶಾಂತತೆಯಲಿ ಎನ್ನೆದೆಯ ಭಾವಗಳ ಎನಗೇ ಒಡೆದು ತೋರುವ ಹಾಂಗೆ ನೀ ನಿರುಮ್ಮಳವಾಗಿ ಮಾತಿಗಿಳಿಯುವಾಗ...
ಚಪ್ಪಲಿಗಂಟಿದ ಉಪ್ಪುಪ್ಪು ಮರಳಲ್ಲಿ ಸಾಗರವ ಹುಡುಕುವ ನಾನೆಂಬ ಮರುಳ, ಹೊಕ್ಕುಳ ಬಳ್ಳಿ ಕೊರಳ ಸುತ್ತಿದಂಗೆ ಒಳಗೊಳಗೇ ಚಡಪಡಿಸುತ್ತೇನೆ...
ಮನ್ಸಿನ್ ಗ್ಯಾಲರಿಗೆ ರೋದನೆಗಳಂದ್ರೆ ಅಷ್ಟು ಪಿರೂತಿನಾ... ?!! ಅಂತ ನೀ ಕೇಳಿದ ಉತ್ತರವಿಲ್ಲದ ಪ್ರಶ್ನೆಗೆ ಸಮಜಾಯಿಷಿಯ ಹುಡುಕುತ್ತಾ ಮುಂದಿನ ಇರುಳ ಹಾಯುತ್ತೇನೆ ಮತ್ತು ಹಗಲಾದ ಮೇಲೂ ಕತ್ತಲಲ್ಲೇ ಉಳಿದು ಹೋಗುತ್ತೇನೆ...
ನಿನಗೆ ಕೊಡಬಹುದಾದ ಮಾತುಗಳೆಲ್ಲ ನಿನ್ನನು ಕಡು ಮೌನಕ್ಕೆ ದೂಡಿಬಿಟ್ಟರೇ ಎಂಬ ಭಯದಲ್ಲಿ ಮಾತು ಮರೆಯು(ಸು)ತ್ತೇನೆ...
ಕೊಡಲು ನಿಂತಾಗ ಮರೆತು ಬಂದದ್ದು ನೆನಪಾಗಿ - ಮಳೆಯ ಮೀಯಲು ಬಂದರೆ ರಣ ಬಿಸಿಲು ಮೈಮುರಿದಂತೆ ಕನಲುತ್ತೇನೆ...
ಸಾವು ನೋವಿನ ಸಮ್ಮುಖದಲ್ಲೂ ಹುಟ್ಟದ ಪ್ರಕ್ಷುಬ್ಧ ಮೌನದ ಸುಳಿಯೊಂದು ಬೆಳೆದು ನಿಂತುಬಿಡುತ್ತದೆ ನಿನ್ನೆಯ ಆಪ್ತ ನಗುವೊಂದು ಇಂದೀಗ ಅಪರಿಚಿತ ಖಾಲಿ ಖಾಲಿ ನೋಟವ ಎಸೆಯುವಾಗ...
______ಬಗೆಹರಿಯಲಾರದ/ಬರೆಯಬಾರದ ಕವಿತೆ...
&&&
ನಾಕು ದಶಕ ಅವಳ ಮಡಿಲಲೇ ಆಡಿ ಬೆಳೆದೆ, ಉಳಿದೆ - ಒಂದಿಷ್ಟೂ, ಒಂದು ಗುಟುಕಿನಷ್ಟೂ ಅರ್ಥವಾಗಲಿಲ್ಲ, ಎಂದೂ ಬತ್ತದ ಅವಳೆದೆಯ ಪ್ರೀತಿ ಸರಿತೆ...
ಅವಳೆಂದರೆ ತನ್ನೊಳಗೇ, ಎದೆ ಗೂಡ ಮೂಲೆ ಒಲೆಯಲೇ ಸ್ವಯಂ ಉರಿದು ಹೋದ ಕಣ್ಣ ಹನಿಗಳ "ಕವಿತೆ..."
ಮೆಲುಕುಗಳಲಿ ನಾನೀಗವಳನು ಮತ್ತೆ ಓದಬೇಕು - ನಾ ಈಗ ಮತ್ತೆ ಮತ್ತೆ ಓದಿಯೂ ನೆನಪಷ್ಟೇ ಆದ ಅವಳಿಗೆ ಏನಾಗಬೇಕು...
____ ಆಯೀ ಎಂಬ ಸೃಷ್ಟಿ, ದೃಷ್ಟಿ ಕಾವ್ಯ...
&&&
ಇಲ್ಕೇಳು -
ನಾನೇ ಸತ್ತರೆ ಊರಿಗೆಲ್ಲ ಅಲ್ಲದಿದ್ದರೂ ಹತ್ತಿರದ ನಾಕಾರು ಮನಸುಗಳಿಗೆ ಸುದ್ದಿ ತಿಳಿಯಲು ಸಾಕಷ್ಟು ಮಾಧ್ಯಮಗಳಿವೆ ಈ ಹೊತ್ತು...
ಆದರೆ,
ನಾನಲ್ಲದೇ ಸತ್ತದ್ದು ನನ್ನೊಳಗಿನ ಭಾವಗಳು, ಮತ್ತವುಗಳ ದೀಪ್ತಿಯಾದರೆ ಅದನ್ನು ನಾನೇ ಬಿಡಿಸಿ ಹೇಳಬೇಕು ನೋಡು - ಅಪದ್ಧ ಮಾತಾಡಿ, ಇಲ್ಲಾ ರುದ್ರ ಮೌನದಿಂದ...
ಪ್ರೀತಿ ಎಂದರೆ ಏನೂ ಎಂಬ ನೂರು ಖಡಕ್ ಪ್ರತಿಕ್ರಿಯೆ, ಮಾರುತ್ತರ ಮತ್ತು ಸಮರ್ಥನೆಗಳು ಕಟ್ಟಿ ಕೊಡದ ಭಾವ ತೀವ್ರತೆಯನ್ನ ಒಂದು ಸಣ್ಣ ಆತ್ಮೀಕ ಸ್ಪಂದನೆ ಹಾಗೂ ಹೆಗಲಾಗುವ ಸಾವಧಾನದ ಒಡನಾಟ ಎತ್ತಿ ಕೊಟ್ಟುಬಿಡುತ್ತದಲ್ಲ - ಇದನರಿಯದೇ ಸಣ್ಣ ಸಣ್ಣದನೆಲ್ಲ ಕಡೆಗಣಿಸಿ ದೊಡ್ಡದೇನನ್ನೋ ಬಯಸುವ ನನ್ನ ಮನದ ಬೋಳೆತನ, ಏನದಕ್ಕೆ ಹೆಸರು...!
ಎಷ್ಟು ದುರ್ಬಲನಾಗಿದ್ದೇನೆ - ಹೆಗಲು ತಬ್ಬಬೇಕಾದಲ್ಲಿ ಕೈಕುಲುಕಿ ಶಿಷ್ಟಾಚಾರದ ನಗು ತೇಲಿಬಿಡುತ್ತೇನೆ...
ಒಂದು ಹಾಯ್, ಒಂದೇ ಒಂದು ಮುಗುಳ್ನಗು, ಮಿಡಿದು ಕೊಡುವ ಒಂದು ಕ್ಷಣ ಎಷ್ಟೆಷ್ಟನ್ನೆಲ್ಲ ದಾಟಿಸಿಬಿಡಬಲ್ಲದು, ನನಗೂ ತುಂಬಿಕೊಡಬಲ್ಲದು - ನಾನಾದರೋ ಇವನೆಲ್ಲ ಬುಧ್ಯಾಪೂರ್ವಕ ಮರೆತು, ಎದುರಿರುವ ನಿನ್ನ ಕಣ್ತಪ್ಪಿಸಿ ಆಗಸಕೆ ಮುಖಮಾಡಿ ನನ್ನವರು ಎಲ್ಲೀ ಎಂದಳುತ್ತೇನೆ...
ನನಗೇ ನನ್ನಲ್ಲಿ ಸಮಯವಿಲ್ಲ, ನಿನಗೆಲ್ಲಿಂದ ಕೊಡಲೀ ಎಂಬಂತ ನನ್ನದೇ ಆಲಸ್ಯ, ಅಹಮಿಕೆಗಳನೆಲ್ಲ ಮೂಟೆ ಕಟ್ಟಿ ಮೂಲೇಲಿಟ್ಟು ಮರೆಯಬೇಕಿತ್ತು; ಬದಲಿಗೆ, ನಿಭಾಯಿಸಲರಿಯದೇ ನನಗೂ ಕಾಣದ ಹಾಗೆ ನಾನೇ ಹುಗ್ಶಿಟ್ಟು, ಎಂಥ ಮಧುರ ನೇಹವಿ(ತ್ತೆ)ತ್ತು, ಅವರಿವರ ಅಡುಂಬೋಲಗಳ ನಡುವೆ ಕದ್ದು ಹೋಯಿತೂ ಅಥವಾ ಯಾರ್ಯಾರೋ ನಿನ್ನಂಥವರು ಅವರವರ ಆಸೆಯಂತೆ ಮೆದ್ದು ಹೋದರೂ ಎಂದು ಹಳಹಳಿಸುತ್ತೇನೆ...
ಇನ್ನಾದರೂ,
ಎಲ್ಲಾ ಗೊತ್ತಿದ್ದೂ ಏನೂ ಅರಿವಿಲ್ಲದ ನಾನು ಅಳಿದು ಹೋಗಬೇಕು, ನಾನಾಗಿ ಒಂದಿಷ್ಟು ನಿನಗೆ ಸಿಗಬೇಕು...
___ ಪ್ರೀತಿ ಅನುರೋಧ...
&&&
ನೀರಿಲ್ಲದ ಊರಲ್ಲಿ ಹೂವರಳೋ ಹೊನಲಿಗಿನ್ನೂ ಬರವಿಲ್ಲ...
ಈ ಶಹರದ ಏನೇನೋ ಅವಸರಗಳ ಸಪೂರ ಸಂಜೆಗಳಲಿ ಒಂಥರಾ ಸಂತಸ ಮತ್ತು ಅದೇನೋ ಅಮೂರ್ತ ಸಂಕಟ...
___ ಬಿಸಿಲ ಋತುವಿನ ಬೆಂಗಳೂರಿನ ಬೀದಿಯ ಬೀಡಾಡಿ ಪಥಿಕನ ಹೊಂಗೆ ಸಂಗ...
ಈ ಪರಿ ಅಪರಂಪಾರ ಗಡಿಬಿಡಿಯ ಜಗತ್ತು ಕೂಡ ಒಂದೇ ಒಂದು ಒಂಟಿ ಪ್ರಾಣಿಯ ಖಾಲಿ ಖಾಲಿ ಸಂಜೆಗಳ ಬೋಳು ಬೋಳು ಭಾವಗಳಿಗೆ ಎಂಟಾಣೆ ಜೀವ ತುಂಬಲೂ ಸೋಲುತ್ತದಲ್ಲ - ಏನೀ ಬರಡು ಬದುಕಿನ ಹಿಕಮತ್ತು...
____ ಹಿಡಿದ ಬೆರಳ ಬಿಡಿಸಿಕೊಂಡ ನಿನ್ನೆಗಳ ಬಿಡುತ್ತಾ ಸಾಗುವ ಹಾದಿ ಯಾಕಿಷ್ಟು ಬಿಗಿ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment