ಸುಪ್ತ ಸ್ವರಗಳಲಿ ಪ್ರೀತಿ ಗುಪ್ತಗಾಮಿನಿ.....
ನನಗೆಂದೇ ನೀ ಇಟ್ಟ ಹೆಸರು ನನಗಷ್ಟೇ ಕೇಳಬೇಕು - ಹಾಂಗೆ, ಇನಿ ದನಿಯಲಿ ನನ್ನ ಕಿವಿಯಲಷ್ಟೇ ನೀನದರ ಕೂಗಬೇಕು; ಅವಳ ಎಂದಿನ ಶರತ್ತು...
ಕಿವಿಯಲುಸುರಿದ ಹೆಸರಿಗಂಟಿದ ಬಿಸಿ ಉಸಿರಿನುರಿಗೆ - ಮೈತುಂಬಾ ಮುಳ್ಳೆದ್ದ ಹಿತಾಘಾತದ ನವಿರಿನ ವಿಭ್ರಾಂತಿಯ ಮೆಲ್ಲುವಾಸೆ ಅವಳ ಶರತ್ತಿನ ಹಿಂದಣ ಹಕೀಕತ್ತು...
ಎನ್ನ ಹಲ್ಲಿನ ಒರಟು ಓಲೈಕೆಗೆ ಬಿರ್ರನೆ ಬಿಸಿಯೇರಿ ಕೆಂಪಾದ ಕಿವಿಯ ಶಂಖವ ಅಲಂಕರಿಸಿದ ಬಿದಿಗೆ ಚಂದ್ರನ ಗುರುತು - ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ತೊನೆವ ಆಸೆ ಅಲೆಗಳಿಗೆ ಬಿರಿದು ಬಿಗಿದ ಅವಳ ಎದೆಯಂಚು...
ಬೆರಳ ಬೆಸುಗೆಗೆ, ತೋಳ ತೆಕ್ಕೆಗೆ, ನೂರು ನಖರೆಗಳ ಸಂಚು ಮಧುರ ಪಾಪದ ಕಾವ್ಯಕೆ...
___ ಪ್ರೇಮ ಕಥೆಯೊಂದರ ಆರಂಭದ ರೋಮಾಂಚನ ಮತ್ತು ಅಂತ್ಯದ ನಿಟ್ಟುಸಿರ ನಡುವಿನ ಆಹಾಕಾರದ ಮುಸ್ಸಂಜೆಗಳು ಹೆಂಗೆಲ್ಲಾ ಕೂಡುತ್ತವೆ ಹಾಗೂ ಕಾಡುತ್ತವೆ...
&&&
ಕಣ್ಣಲಿ ಕಣ್ಣ ಹುಗಿದು, ಹೆಣ್ಣುಸಿರು ಬಳ್ಳಿಯ ಹಾಗೆ ಗಂಡೆದೆಯ ಹಬ್ಬುವುದು ಪ್ರೀತಿಯ ಬೊಗಸೆಯಲಿ ಅವಲಕ್ಕಿ ಬೆಲ್ಲದ ಪ್ರಸಾದ ಅಂತೇನೋ ಗುಣುಗಿದೆ, ಎಳಸು ಪೋಲಿಯ ಫಿಲ್ಮೀ ರಾಗದಲಿ...
ಪರಮ ಪೋಲಿಯ ಪವಿತ್ರ ನುಡಿಗಳಿಗೆ ಸುಳ್ಳೇ ಸೋಲದವಳಂತೆ ಗುರಾಯ್ಸಿ, ಏಯ್! ಸುಮ್ನಿರೋ ದಾರಿ ತಪ್ಪಿಸ್ಬೇಡ ಅಂತ ಗದರ್ತಾಳೆ...
ಈಗಷ್ಟೇ ನಿನ್ನ ಊರು ಏರಿಯ ಕಡೆಗೆ ಹೊರಳಿಕೊಂಡಿದೀನ್ಕಣೇ, ಮಧುರ ಪಾಪದ ಹಾದೀಲಿ ತಪ್ಪು ಒಪ್ಪು ಯಾವುದೇ ಅಂತ ಕೆಣಕ್ತೇನೆ...
ಥೂ, ಸುಮ್ನೇ ಬಾಯ್ಮುಚ್ಚು ಅಂತಾಳೆ...
ಆಹಾ!! ಇರುಳು ಮೈಯ್ಯ ಬಳಸಿ ಹೆಗಲ ಕಚ್ಚುವ ಹೊತ್ತಲ್ಲಿ ಹುಡುಗಿ "ಬಾಯ್ಮುಚ್ಚೂ" ಅಂತ ಬೈಯ್ಯೋದು ರಸಿಕನೆದೆಗೆ ಎಂಥಾ ಚಂದ ಆಹ್ವಾನ...
____ ಉಫ್!!! ಪ್ರೀತಿಯ ಪ್ರೀತಿಯಿಂದಲೇ ಮುಚ್ಚಿಟ್ಟು ಸುಖವಾಗಿ ಕೊಲ್ಲುವ ನೂರು ನಖರೆಗಳ ಅವಳಿಂದಲೆ ಕಲೀಬೇಕು...
&&&
ನಟ್ಟ ನಡು ರಾತ್ರಿ ಕಡು ನಿದ್ದೆಯಲವಳ ಬೆಚ್ಚನುಸಿರು ಎನ್ನೆದೆಯ ಹಬ್ಬುವಾಗ, ಬೆಳುದಿಂಗಳು ಪಾರಿಜಾತವ ತಾಕುವಂಗೆ ಅವಳ ಹಣೆ ಬಯಲ ಮುದ್ದಿಸಿದೆ - ಇರುಳ ಸೆರಗಿನ ಮರೆಯಲಿ ತುಳುಕುವ ಕಂಗಳು ಮುಚ್ಚಿರುವ ಹೊತ್ತಿಗೆ, ಮಾತಾಗಲಾರದೆ ಕನಲುತ್ತ ಕೂತಿದ್ದ ಎನ್ನ ಹೊಟ್ಟೆಯೊಳಗಣ ಗುಟ್ಟು ಗುಟ್ಟಿನ ಪಾಪಿ ಪಿಂಡಗಳಿಷ್ಟು ಬಿಡುಗಡೆಯ ನಗು ಬೀರಿದವು...
ಪಾಪದ ಹುಡುಗಿ, ತೋಳ ವರಸೆ ಸಡಿಲವಾಯ್ತಾ ಎಂಬಂತೆ ನಿದ್ದೆ ಮರುಳಲೇ ಇನ್ನೂ ಬಿಗಿ ತಬ್ಬಿ, ಹಿಡಿ ಮೈಯ್ಯಾಗೆನ್ನ ತೆಕ್ಕೆಯಲಿ ಹುದುಗಿ, ಅವಳ ನೆಮ್ಮದಿಯ ಊರಿಗೆ ನನ್ನನೂ ಕರೆವಳು...
ಹೇಳದೆ ಕಾಣದೆ ಕಾಡುವ ನೋವಿಗೆ ನೇಹದಲಿ ನೆಳಲಾಗಿ ಅನ್ಯೋನ್ಯದಲಿ ಬೆನ್ನು ತೀಡುತಾ ಯಾರ ಹಾಡನು ಇಲ್ಲಿ ಯಾರು ಹಾಡುವುದು - ಯಾರ ನೆನಪನು ಕಡೆದು, ಯಾರ ನಾಳೆಯ ಯಾರು ಕೂಡುವುದು...
ಕತ್ತಲ ಗರ್ಭದಲಿ ಕಾರುಣ್ಯ ಕರುಳ ಸಂತೈಸುವಾಗ ಕಾಂಬ ಕನಸಿಗೆ ಯಾವುದೇ ಸುಂಕವಿಲ್ಲ...
____ "ಸುಪ್ತ ಸ್ವರಗಳಲಿ ಪ್ರೀತಿ ಗುಪ್ತಗಾಮಿನಿ..."
&&&
ಯೇ ಗೂಬೆ -
ಕವಿಯ ಶೃಂಗಾರ ಕಾವ್ಯದ ವ್ಯಾಕರಣ ಅರ್ಥವಾಗಬೇಕಿಲ್ಲ ನಮಗೆ - ಮೈಯ್ಯರಳುವ ಸಮೀಕರಣ ಕಾಲಕ್ಕೆ ಅರ್ಥಾರ್ಥಗಳ ಕೇಳದೇ ಆವರಿಸಿ ಆಸ್ವಾದಿಸುವ ಬೆಚ್ಚ ಬೆರಗೊಂದೇ ಸಾಕು ಸ್ವರ್ಗದ ಆ ಹಾದಿಗೆ...
___ ತುಟಿ ಕಟಿ ಸಂಕ್ರಮಣ...
&&&
ಬೆಲ್ಲದ ಕೆಸರಿನ ಹುಳಿ ಹೆಂಡದಂತವಳೇ -
ಪ್ರೇಮವ ಕೂಡಿ ಪ್ರೇಮವೇ ಆದೇನೆಂಬ ಖಯಾಲಿಯಲ್ಲಿ ಪ್ರೇಮವ ಹುಡುಕುತ್ತಾ ಹೊರಟೆ...
ನಿನ್ನ ಕಣ್ಣ ಮೊನೆಯಲ್ಲಿನ ವಿಸ್ತಾರದಲ್ಲಿನ ಕಾವು, ಆ ತುಟಿ ಕೊಂಕಿನ ಆಳದಲ್ಲಿನ ಆಸೆಯ ತೇವ ಈ ಅಬ್ಬೇಪಾರಿ ಜಂಗಮನನು ಪ್ರೇಮಿಯಾಗುವಲ್ಲಿಗೆ ನಿಲ್ಲಿಸಿತು...
ನಾನೀಗ ಒಂದೇ ಪೆಟ್ಟಿಗೆ ಅಲ್ಪತೃಪ್ತ ಹಾಗೂ ಪರಮ ಸಂತೃಪ್ತ...
___ ನಿನ್ನ ಮಿಡಿಯುವ, ನಿನ್ನೊಳಗೆ ಮಿಡಿಯುವ ಈ ಅಮಲೆಂದೂ ಇಳಿಯದಿರಲಿ...
&&&
ಇವಳೇ -
ಏಕಾಂತದ ಮುಸ್ಸಂಜೆಯಲಿ ಶರಂಪರ ಜಗಳಕ್ಕೊಮ್ಮೆ ಸಿಕ್ಕು ಬಾ - ಸಿಕ್ಕು ಬಿಡಿಸುವಂಥ ಪ್ರೀತಿ ಇನ್ನೂ ಬಾಕಿ ಇದ್ದರೆ...
ಪರಚಾಡಿ ಮೌನದ ಬೆವರಿಳಿಸು ಬಾ - ಎದೆಯಿಂದ ಕಳೆದು ಹೋದ ನಗುವೊಂದು ತುಟಿಯ ಮುತ್ತಲ್ಲಿ ನಮಗಾಗಿ ಕಾಯುತಿದೆ...
____ ಸಮ್ಮೋಹ ಸಂಧಾನ...
&&&
ಕಪ್ಪು ಹುಡುಗೀ -
ನಾನು ನಾನು ಅನ್ನುತ್ತಾ ಹೇಳಿದ ಕಥೆಗಳನೇ ಮತ್ತೆ ಮತ್ತೆ ವಟಗುಡುವ ನಾನು ಮತ್ತು ಇದು ಹೊಸತೆನ್ನುವ ಹಾಗೆ ಕಿವಿಯಾಗಿ ಹಾಮ್ ಹೂಮ್ ಅನ್ನುತ್ತಾ ನಿದ್ದೆಹೋಗುವ ನೀನು...
ಒಂದು ಇನ್ನೊಂದು ಅನ್ನುತಲೇ ನೂರು ಮುದ್ದು ಕದಿಯುವ ನೀನು ಮತ್ತು ಒಲ್ಲೆನೆಂಬ ಒಣ ಜಂಬ ತೋರಿದಂಗೆ ಕಾಯಿಸಿ ಸತಾಯಿಸಿ ಸೆಳೆದು ಮೈಯ್ಯೆಲ್ಲಾ ಮುತ್ತು ಮಳೆಯಾಗುವ ನಾನು...
ಕತ್ತಲ ಕಮರಿಯಲೂ ಬದುಕು ಜೀವಂತವಾಗೋದು ಇಂಥ ಸಣ್ಣ ಸಣ್ಣ ಚಂದ ಚೆಂದ ಕೊಡುಕೊಳ್ಳುವ ಪ್ರೀತಿಯಲೇ ಇರಬಹುದಾ........!!
____ ಅಂಗಳದೆದೆ ಮೇಲೆ ಉರುಳುರುಳಿ ನಗತಾವೆ ನಂದಬಟ್ಟಲು...
&&&
ನಿನ್ನ ಕೂಡುವ ನೆನಹೂ ಛಳಿಯನೇ ಹಾಸಿ ಹೊದ್ದು ಕೂತ ಈ ಹೊತ್ತಲಿ...
ಅಗೋ ಆ ಗೂಡಲಿ ನಿನ್ನ ಕಣ್ಣಲಿ ಕಳೆದೋಗಬೇಕು...
___ ನಂಗೆ ನಾ ಮತ್ತೊಮ್ಮೆ ಸಿಗಬೇಕು...
&&&
ಅಗೋ ಆ ಹಸಿರು ಛಾವಣಿಯ ಹಳದಿ ಮೈಯ್ಯ ಮನೆಯೊಳಗಿನ ಛಳಿ ಛಳಿ ಇರುಳ ಮಗ್ಗುಲಲಿ ನಾನೆಂಬ ನಿನ್ನ ಹುಸಿ ಮುನಿಸಿನಂಥ ಜೀವವೊಂದು ಛಳಿ ಕಾಯಿಸಲು ನಿನ್ನ ಹಸಿ ಬಿಸಿ ಕನಸಿಗಾಗಿ ಕಾಯುತ್ತಿದೆ...
___ ಕನಸಲೂ ನಿನ್ನ ಬಿಸಿ ಉಸಿರ ಮೀಯಬೇಕು...
&&&
ಇಗೋ ಈ ಛಳಿಯ ಮೈಗೆ ಬಿಸಿ ಉಸಿರ ಶಾಖ ಕುಡಿವ ಕಮ್ಮನೆ ಬಯಕೆಯಾಗುವಾಗ -
ಎದೆಯ ಮೋಹದಿಂದ ಮೈಲಿಗಳಾಚೆಯ ಅಷ್ಟು ದೂರ ನಿಲ್ಲುವುದೂ ಕಷ್ಟ...
ಎದೆಗೆದೆ ಅವುಚಿದ ಮೋಹದ ತೋಳಲ್ಲಿ ಇಷ್ಟೇ ಸಾಕೆಂದು ಅಷ್ಟಕ್ಕೇ ನಿಲ್ಲುವುದೂ ಕಷ್ಟ...
____ ಇಷ್ಟಕೂಟದ ಅವಸರದ ಆಟ ಮತ್ತು ಸಾವಧಾನದ ಸವಿ ಕಾಟ...
&&&
ಚಂದಿರ ಸುಟ್ಟ ಎದೆಯ ಗಾಯಕ್ಕೆ ಮದ್ದು ನಿನ್ನ ಮುದ್ದು...
ನಿನ್ನಾ ತುಟಿ ಕಟಿಯ ತೇವ ಪೋಲಿ ಪಾಪಿಯ ವಿರಹದುರಿಯ ಪೊರೆಯ ತೊಳೆಯಲಿ...
ಸವಿ ಪಾಪದ ಸುಖ ನಿದ್ದೆ...
ನನ್ನದೀ ಮನ ಮೆರೆವ ಎಚ್ಚರ ಮತ್ತು ಮೈಮರೆವ ನಿದ್ದೆ ಎರಡೂ ನಿನ್ನ ತೋಳಲ್ಲೇ ಇರಲಿ...
ಸುಖ ಮತ್ತಾ ಮತ್ತಿನ ಸುಸ್ತು ಎಲ್ಲ ನಿನ್ನವೇ ಬಳಸು ತೋಳಿಂದ ನನ್ನೆದೆಯ ಹಾಯಲಿ, ತೀವ್ರದಲಿ ಕಾಡಿ ಕೂಡಿ ಕಾಯಲಿ...
ಸವಿ ಪಾಪದ ಸುಖ ನಿದ್ದೆಗಣ್ಣಲ್ಲಿ ನಗುವ ನನ್ನ ಅಧರಗಳಲಿ ನಿನ್ನ ತುಟಿ ಕಟಿಯ ತೇವ ಅಮರು...
ನಿನ್ನ ಆಳ್ಕೆಯ/ಯೇ ಸ್ವರ್ಗ...
ಶುಭರಾತ್ರಿ... 🙈😍
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Wednesday, May 1, 2024
ಗೊಂಚಲು - ನಾಕ್ನೂರ್ಮೂವತ್ತು.....
Subscribe to:
Post Comments (Atom)
No comments:
Post a Comment