ಕಳಚಿ ಹೋದದ್ದು ಉಸಿರ ನಾವೆಗೆ ಕಟ್ಟಿದ ಹಾಯಿ.....
(ಕತ್ತಲನು ಪ್ರೀತಿಸುವವನ ಎದೆಯಲೀಗ ಇರುಳೆಂದರೆ ಯಮ ಭೀತಿ...)
"ಸೂರ್ಯ ಕುಂಡೆಗ್ ಬಡದ್ರೂ ಬಿದ್ಕಂಡ್ ಇದ್ದಾ ಇನ್ನೂವಾ, ಆಳ್ಶಾ ಪಾಂಡು, ಎದ್ಕ ಬ್ಯಾಗ, ಎಷ್ಟ್ ಕೆಲ್ಸಿದ್ದು ನೆನ್ಪಿದ್ದಾ..." ಆಯಿ ಇಲ್ಲೇ ಹಸೆ ಅಂಚಲ್ಲೇ ನಿಂತು ಬೈಯ್ದು ಎಬ್ಬಿಸ್ತಿದ್ದ ಹಸಿ ಹಸಿ ನೆನಪು - ಅಮ್ಮ ಅಮ್ಮ ಬೆಳಗು... 🤱
⚡⚡⚡
ಇದು ನಿನ್ನ ಸಾವಿನ ವಾಸನೆ ಅಂಟಿದ ಸೂತಕದ ತಿಂಗಳು...
ನೀ ಎದ್ದು ಹೋದ ತಿಥಿಗೆ ಎಡೆ ಇಟ್ಟು ಉದ್ದಂಡ ಬೀಳುತ್ತೇನೆ - ಕೋಗಿಲೆ ಮರಿಗೂ ತುತ್ತನಿತ್ತ ಕಾಕೆಯೆದುರು ಬಲಿ ಬಾಳೆಯನಿಟ್ಟು 'ಹೋ' ಕರೆಯುವಾಗ ಎದೆ ಕನಲಿದರೆ ನೀನೆಲ್ಲೋ ತೇಗಿದಂತೆನಿಸಿ ನಿಟ್ಟುಸಿರು...
ಮರೆತು ಮುನ್ನಡೆಯುವ ವ್ಯರ್ಥಾಲಾಪವ ಕೈಬಿಟ್ಟು, ಜೊತೆ ಬರುವ ನೆನಪುಗಳಿಗೆ ಶರಣಾಗಿ, ಅಳಲರಿಯದವನ ಅಳಲಿಗೆ ಪದಗಳು ಪಾಚಿ(ತಿ)ಗಟ್ಟುತ್ತವೆ...
ಹೆಕ್ಕಿಕೊಂಡು ಪೂಸಿಕೊಂಡ ನೂರು ಘಮಗಳನೂ ಮೀರಿ ನಿಲುವ ಬೆರಳಿಗಂಟಿದ ಮೃತ್ಯು ಗಂಧ ನಿತ್ಯ ಅನ್ನದಗುಳ ಗುಂಟ ಕರುಳ ಸೇರಿ ಜೀವನ್ಮೋಹಕ್ಕಿಷ್ಟು ಕೊಳ್ಳಿ ಇಡುತ್ತದೆ...
ನಾನಿಲ್ಲಿಂದ ನೂರು ಬಾರಿ ನಿನ್ನ ಕೂಗಿದರೂ ಸಿಗದ ಸಮಾಧಾನ ನೀನಲ್ಲಿಂದ ನನ್ನ ಸುಮ್ಮನೇ ಕರೆದರೂ ಸಿಗಬಹುದು - ಕರೆದು ಬಿಡು ಒಮ್ಮೆ...
___ ಬರಿಗಣ್ಣಿಗೆ ಕಾಣದ ಎದೆಯ ಗಾಯ ಬಲು ಹಿಂಸೆ ಕೊಡುತ್ತೆ ಕಣೇ...
⚡⚡⚡
ಉಸಿರೇ ಇರಿದಂತೆ ಕೊರಳ
ನೆನಪು ಕಾಡುವುದು ಇರುಳ...!!
ಗುರುತೇ ಇರದ ತಾರೆಗಳಾ
ನಿನ್ನ ಹೆಸರಿಟ್ಟು ಕರೆದರೆ ಮರುಳಾ...!!
ಹೇಳದೇ ಕೇಳದೇ ಜೀವ ಕೈಕೊಡವಿ ಎದ್ದು ಹೋದದ್ದು ಖರೆಯಾ...!!
ರಕ್ತ ಚಲಿಸಿದಂಗೇ ಭಾವ ಈಗಿದ್ದು ಈಗಿಲ್ಲದಂಗೆ ಎದೆಯ ಗುದ್ದುವುದು ಸರಿಯಾ...!!
____ ನೀನು ನೀನಷ್ಟೇ ಅಲ್ಲ ಎಂಬುದು ನಿಂಗ್ಯಾಕೆ ಆ ಹೊತ್ತು ನೆನಪಾಗಲಿಲ್ಲ...!!
⚡⚡⚡
ಈ ಬದುಕೇ ಪುಟಾಣಿ ವೃತ್ತ ಅಂದುಕೊಂಡರೆ -
ದಿನಗಳ ಎಣಿಸಿ ಸಾವಿನಲ್ಲಿ ಕಳೆದಾಗ, ಬರೀ ಶಾಂತಿಯನೇ/ಶಾಂತಿಯನಷ್ಟೇ ತುಂಬಿಕೊಡುವ ನಿನ್ನ ದಿವ್ಯ ಮಡಿಲು ಎನಗೊಲಿದ ಕಾಲವದೆಷ್ಟು ಚಿಕ್ಕದ್ದು ಮಾರಾಯ್ತೀ...
___ ಎಷ್ಟೇ ಉಂಡರೂ ಇಂಗದ ಹಸಿವು - ನಿನ್ನ ನಿಶಾಂತ ಒಲವು...
⚡⚡⚡
ಕೇಳೇ -
ಚಿತ್ರಗುಪ್ತ ನನ್ನನ್ನು ಮರೆತದ್ದು ಹೇಗೆ ಅಥವಾ ನಾನು ಸಾವನ್ನು ಕಡೆಗಣಿಸಿದ್ದಾ ಹೇಗೆ - ಅಂತೂ ಬದುಕು ಜಾರಿಯಲ್ಲಿದೆ...!!
___ ನೀ ನಡೆದ ದಾರಿಯಲಿ ಹಿಂದೆ ಬರದಿರಲು ನನ್ನದದೆಂತ ರಗಳೆ ನೋಡು...
⚡⚡⚡
ಭಾವ ಬತ್ತಿದ ಕಣ್ಣಲ್ಲಿ
ಸಾವಿಗಾಗಿ ಕಾಯುತ್ತಾ
ಸಾವಿನಂಥ ಇರುಳ ಹಾಯುತ್ತಾ
ನಾಳಿನ ಯುದ್ಧಕೆ ಹಿಡಿಕೆ ಒಡೆದ ಉಸಿರ ಕತ್ತಿಯ ಮಸೆಯುತ್ತಿರುತ್ತೇನೆ...
___ ನನ್ನ ಪಾಲಿಗೂ(ಗೇ) ಕನಸ ಹೆಣೆಯುತ್ತಾ ಕಾಲವ ದಾಟಿದ ಒಡಲೇ - ನೀನಿಲ್ಲದ ನಾನೊಂದು ಬೇವರ್ಸಿ ಕವಿತೆ...
⚡⚡⚡
ಸಾವಿನ ಮೌನ ಮಾತಾಡಿದಷ್ಟೂ ಬದುಕಿನ ನಾಲಿಗೆ ತಡವರಿಸುತ್ತೆ...
___ ಏನೆಂದು ಸಂತೈಸುವುದು ಯಾರದೇ ನಾಳೆಗಳಾ...
⚡⚡⚡
ನೀನಿಲ್ಲ ಎಂಬ ವಾಸ್ತವದ ಖಾಲಿತನದ್ದೊಂದು ದಡೆಯಾದರೆ - ಬಿಡಿಸಿಕೊಳ್ಳಲಾಗದ ನಿನ್ನ ನೆನಪುಗಳ ಅಕ್ಷಯ ಭಾವಗಳದ್ದೊಂದು ತೂಕ...
ಜಗದ ಕಣ್ಣಿಗೆ ರಾಚುವ ಹಾಗೆ ನಿತ್ಯ ನೈಮಿತ್ಯಗಳೆಲ್ಲ ಹಾಗೆ ಹಾಗೇ ಇವೆ, ಯಾವಾಗೂ ಇರತ್ತೆ ಕೂಡಾ - ಭಾವದೆಳೆ ಸೀಳಿ ನಿರುಕಿಸಿ ನೋಡಿದರೆ ದೊಡ್ಡ ನಗುವಿನಲ್ಲಿ ಸಣ್ಣ ಜೀವಂತಿಕೆಯೂ ಇಲ್ಲ ಅಷ್ಟೇ...
ಚೆನ್ನಾಗಿದೀಯಾ ಎಂಬ ಅಕ್ಕರೆಯ ಪ್ರಶ್ನೆಗೂ 'ಎಂದಿನಂತೆ ಅದ್ಭುತ' ಎಂಬುದು ಒಣ ಒಣ ಸಿದ್ಧ ಉತ್ತರ - ಎಂದಿನಂತೆ...
ಇಷ್ಟಿಷ್ಟೇ ಇಷ್ಟಿಷ್ಟೇ ನಿಶ್ಯಕ್ತಿ, ನಿರಾಸಕ್ತಿಗಳಲಿ ಒಡಲ ಭಾವಾಗ್ನಿ ನಂದಿಹೋಗುತ್ತಾ ಹಗಲೂ, ಇರುಳೂ ನಿಸ್ಸಾರ ಮರುಳು...
___ ಇತ್ತಿತ್ಲಾಗೆ...
⚡⚡⚡
ಧೋ ಸುರಿವ ಮಳೆ, ಭೋರಿಡುವ ಅಲೆ, ಒಂಟಿ ಪಥಿಕನ ಕಣಕು ಮೌನ, ಎಲ್ಲವನೂ ತನ್ನೆದೆ ಮೇಲೆ ಆಡಲು ಬಿಟ್ಟು ಧ್ಯಾನಕೆ ಕೂತ ದಂಡೆ...
ನೂರು ದೂರಗಳ ಪರಿಚಯಿಸಿದ ಒಂದು ಅಣಕು ಸಂಜೆ; ನನಗೆ ನಾನು ಸಿಗುವವನಿದ್ದೆ - ಪಾದ ತೊಳೆದ ಅಲೆ, ನೆತ್ತಿ ಮೀಯಿಸಿದ ಮಳೆ, ಊರಿ ನಿಂತ ಹೆಜ್ಜೆಯಡಿಯ ಮರಳು ಎಲ್ಲಾ ಶರಧಿ ಒಡಲಲಿ ಮುಳುಗಿ ಹೋದವು...
____ ಉಳಿದ ರೂಹೆಂದರೆ ನಿನ್ನ ನೆನಹು...
⚡⚡⚡
ಮುಳ್ಳು ಹಾದಿಯಲಿ ಮುಂದಾಗಿ ನಡೆದು ಕಾಡಂತೆ ಪೊರೆದವಳು ಮೊದಲಾಗಿ ಕಾಡಿನಿಷ್ಟು ಗಿಡ, ಗರಿಕೆಗಳಿಗೆ ಸುಡು ಮಣ್ಣಾಗಿ ಮಲಗಿ ದಿನವೆಷ್ಟಾತು...
ತಾರೀಖುಗಳ ಮರೆವಿನ ಹಳೇ ರೋಗಿ ನಾನು, ಈ ತಿಥಿಯ ಮರೆಯಲು ಹೆಣಗುತ್ತಿದ್ದೇನೆ...
___ 07/02/1948 - 07/07/2022ಆಯಿ ಜೊತೆಯ ಮೊದಲ ಮತ್ತು ಕೊನೆಯ ಚಾರಣ...
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Sunday, July 7, 2024
ಗೊಂಚಲು - ನಾಕ್ನೂರ್ಮೂವತ್ಮೂರು.....
Subscribe to:
Post Comments (Atom)
No comments:
Post a Comment