Thursday, June 25, 2026

ಗೊಂಚಲು - ನಾಕ್ನೂರೆಂಬತ್ಯೋಳು.....

ಸಜ್ಜೆಮನೆಯ ಸಜ್ಜಿಗೆ ನುಡಿಗಳು.....

ಕೇಳೋ - 
ನಿರಂತರ ನೂರಾರು ಕೊಂಡಾಟಗಳಲಿ ಎಲ್ಲೋ ಒಂದ್ನಾಕು ಮಿಲನ ಕೂಟಗಳು ಅತಿಮಧುರ ಉತ್ಸವವಾಗುತ್ತವೇನೋ; ಒಳನಾಡಿಗಳು ಒಡನಾಡಿ ಮೈಯ್ಯಾದ ಮೈತ್ರಿಗಳೆರಡೂ ಒಟ್ಟೊಟ್ಟಿಗೇ ಸಂಪ್ರೀತ ಸಮೃದ್ಧಿಯಲಿ ಉನ್ಮಾದದುತ್ತುಂಗವ ಕಂಡು ಆ ಆಹಾಕಾರವು ನಿತ್ಯ ಸ್ಮರಣೀಯವೆನಿಸುತ್ತದೇನೋ... 
ಅಂತದೊಂದು
ಅಯಾಚಿತವೋ, ಆಕಸ್ಮಿಕವೋ ಎಂಬಂತೆ ಎಂದೋ ಒಂದೊಮ್ಮೆ ಸಂಭವಿಸಿಬಿಡುವ ಒಲವಿನುನ್ಮಾದದ ಸಮಾರೋಪವ ಮರಮರಳಿ ಹುಡುಕುತ್ತಾ, ಆ ಜೀವಾಭಾವದುನ್ಮೇಶದ ಮರು ಸೃಷ್ಟಿಗೆ ಚಡಪಡಿಸಿ ತಡಕಾಡುತ್ತಾ ಬದುಕಿಡೀ ಉಂಡಾಡುವುದು... 
ಉಳಿದಂತೆ
ಈ ಮುದ್ದಿನ ಗುದ್ದಾಟವೆಲ್ಲಾ ಹೊರಗಿನ ಜಂಜಾಟಗಳು ಹೊರೆಯುಳಿಸದಂತೆ, ಒಳಮನೆಯಲಿ ಪರಸ್ಪರ ಹೊಂದಾಣಿಕೆಯಲಿ ಹೊರಳಾಡುವ ಮೊಂಡಾಟವಷ್ಟೇ...
___ ಸಂಸಾರ ಮಿಥುನ ಕಾವ್ಯ... 
&&&

ಕವಿ ಮಹಾಶಯಾ, 
ಕಣ್ಣ ಮೇಲೊಂದು ಕವಿತೆ ಬರಿ ನೋಡೋಣ ಅಂತಂದು ಬಟ್ಟಲು ಕಂಗಳ ಅರಳಿಸಿ ನಿಂದಳು... 
ಸಗ್ಗದ ಕನಸಲಿ ತುಟಿಗಳ ಲೇಖನಿಯಾಗಿಸಿ ಅವಳ ಮೊಗವ ಬೊಗಸೆಗೆ ತುಂಬಿಕೊಂಡೆ... 
ಕೋತೀ ಅಂದು ರೆಪ್ಪೆ ಮುಚ್ಚಿಕೊಂಡವಳ ಬಿಗಿದೆದೆಯ ಬಡಿತವೀಗ ನನ್ನದೇ ನೂರು ಕವಿತೆಗಳ ವಾಚಿಸಿ ಕೇಳಿಸುತಿದೆ ಎನ್ನೆದೆಗೆ... 
___ ಕಣ್ಣಿಂದ ತುಟಿಗಳು ಕಾವ್ಯವ ಕದ್ದು ಮೈತುಂಬಾ ಹಂಚುವ ಸದ್ದಿನ ಸುದ್ದಿ ಕೇಳಬೇಡಿ... 
&&&

ಅಯ್ಯೋ ಯೆನ್ನ ಹೆಣ್ಕೋತೀ -
ಇಲ್ಲೆಲ್ಲೋ ಸುರಿದು ಸುರಿದು ಗುಪ್ಪೆ ಗುಪ್ಪೆ ಪ್ರೀತಿ ಪಡಿಯ ನಡುವೆ ಎನ್ನ ಕೂರಿಸಿ ಹೋಗಿ, ಅಲ್ಲೆಲ್ಲಿಂದಲೋ ನನ್ನ ನೆನಪಿಸಿಕೊಳ್ತೀಯಾ ಅಂತ ಕೇಳಿ ಕೇಳಿ ಕೆಣಕಿದರೆ ಏನೆಂದು ಉತ್ತರಿಸಲೇ... 
ಯೆದೆಯ ಧಾರೆಗೆ ಕಣ್ಣು ತೋಯದಂತೆ ಕಾಯ್ದುಕೊಂಡ ಭಂಡ ಗಡವ ನಾನು... 
___ ಪ್ರೀತಿ ಪಲ್ಲಂಗದ ಒಂಟಿ ಆಕಳಿಕೆಯಲಿ ಕಣ್ಣು ಕೂಡುವುದಿಲ್ಲ...
&&&

ಒಂದಿನ ರವಿರಾಯ ಕಂತುವ ಹೊತ್ತಲ್ಲಿ, ಮಳೆ ಕಾಡ / ಮಲೆನಾಡ ಘಾಟಿಗಳ ತಿರುವುಗಳಲಿ ಸಾವಧಾನದಲಿ ಬೈಕಿನ ಕಿವಿ ಹಿಂಡಿ ಅಂಡಲೆಯುವಾಗ ಜೊತೆಗೆ ನೀನಿರಬೇಕು - ಬೆನ್ನನವುಚಿ ಕೂತ ನಿನ್ನ ತೊಡೆ ಚಿವುಟಿ ನಾ ಬೆಳುದಿಂಗಳ ಕೂಟದ ಲಲ್ಲೆ ನುಡಿಯನಾಡುವಾಗ ನಿನ್ನಲಿ ಹುಟ್ಟುವ ಕಿಬ್ಬೊಟ್ಟೆಯ ತಟವಟವು ಕೆನ್ನೆಯ ನಾಚಿಕೆಯ ರಂಗಾಗಿ ಎನ್ನ ಹೆಗಲಲಿ ಹಲ್ಲೂಡಬೇಕು...
ಹಂಗಾಗುವಾಗ,
ಹೆಂಗೆಂಗೋ ಹಸಿವೇರುವ ಮನಸಲಿ ಮರು ಸೂರ್ಯೋದಯಕೊಂದು ಮರಿ ಕನಸ ನೇಯುವ ಕನಸು... 
___ ಆ ಕನಸು ಈ ಹೊತ್ತಿನ ಸೊಗಸು... 

ಬೆನ್ನಿಗವುಚಿ ಕೂತು, 
ಧೂಳೆಬ್ಬಿಸಿ, ಕರ್ಣಕಠೋರ ದನಿಯಲಿ ಅರಚುತ್ತಾ, ಹಾದಿಯ ಎದೆಮೇಲೆ ಓಡಾಡೋ ಚಕ್ರಗಳ ದಟ್ಟಣೆಯನು ಬಾಲಿಶವೆಂಬಂತೆ ಬೈಯ್ಯುತ್ತಾ, ನನ್ನೆಲ್ಲಾ ಹುಚ್ಚಾಟಗಳಿಗೆ ಮ(ಮು)ದ್ದಾಗೋ ನೀನಿಲ್ಲದೇ ಹೋಗಿದ್ದರೆ, ನಾ ಮಹಾನಗರಿಯ ಈ ರಸ್ತೆಗಳಿಗೆ ಜೀವವೇ ಇಲ್ಲ ಎಂದುಬಿಡುತ್ತಿದ್ದೆ... 
___ ಎನ್ನೆದೆಯ ಕನಸೆಲ್ಲ ಉಸಿರಾಡೋ ಜೀವಂತ ಕಾವ್ಯ ನೀನು...

ಬೀದಿ ದೀಪಗಳ ಝಗಮಗದಲಿ ಕಲೆಸಿ ಕಳೆದುಹೋದ ಬೆಳದಿಂಗಳನು ನಿನ್ನ ಬೊಮ್ಮಟೆ ಬೆತ್ತಲಿಗೆ ಕಚಗುಳಿ ಇಟ್ಟಾಗ ಹುಟ್ಟುವ ಗಲಗಲ ನಗೆಯಲಿ ಹುಡುಕುತ್ತೇನೆ, ಹುಡುಕಿ ತಾಕಿ ತಬ್ಬಿ ಸವಿಯುತ್ತೇನೆ... 
ಚಂದಿರನೂ ಏಕಾಂಗಿ ಅನ್ನಿಸೋ ಈ ನಗರದಲಿ ನಿನ್ನೊಡನಾಡುವ ಆ ಉನ್ಮತ್ತ ಸಂಯೋಗದ ಕುದಿಯೇ/ಕನಸೇ ನನ್ನ ಉಸಿರ ಕಸುವು... 
____ ಸೋಲುವ ಸುಖಕ್ಕೆ ಸೋಲಬೇಕು ಮತ್ತೆ ಮತ್ತೆ ನಿನ್ನ ಸಹಚಾರದಲಿ... 

ನೂರು ಹಡಾಹುಡಿಗಳ ದಾಟಿ ಅದ್ಯಾವುದೋ ಗಮ್ಯ ತಲುಪೋಕಾದರೆ ನಂಗೆ ನಾನು ಸಾಕೇ ಸಾಕು... 
ನಗೆಯೊಂದ ಮೆಲ್ಲುತ್ತಾ ಈ ಹಸಿರು ಹಾಡಿಗಳಲಿ ಸುಮ್ಮನೇ ಅಲೆಯೋವಾಗ ನಿನ್ನ ಸಜೀವ ಸಾಂಗತ್ಯದ ಸವಿ ಸಿಕ್ಕರೆ ಬೇಕು ಬೇಕು... 
___ ಮನ್ಸು ಹಾಡು ಮೆಟ್ಕೊಂಡ ಕಾಡು ಹಾದಿ...
&&&

ಬದುಕಿದ್ದೂ ಸ್ವರ್ಗ ಕಾಣುವ ನನ್ನ ಏಕೈಕ ಹಾದಿ - ನಿನ್ನ ಬೆತ್ತಲೆ ತೋಳಲ್ಲಿ ಕರಗಿ ಬೆವರಾಗಿ ಕಳೆದೋಗುವ ಜೀವಾಭಾವ ಸಮಾಧಿ ಸ್ಥಿತಿ ಕಣೇ... 
___ ನಿನ್ನ ಮೋಹದ ಕಪಿ ಮುಷ್ಟಿ... 
&&&

ಸ್ವಪ್ನ ಮಂಜರೀ -
ಇಲ್ಲಿನ ಯಾವ ನಶೆಯೂ ತಣಿಸದ ಮೋಹದ ತೃಷೆ ನೀನು... 
ಎಲ್ಲಿಂದಲೋ ಸುಳಿವ ತಂಪು ಗಾಳಿ - ಒಳಮನೆಯಲಿ ಧಗಧಗಿಸೋ ನಾಭಿ ಕುಂಡ... 
ಆ ಧಗೆಗೆ ಉಸಿರು ದಿಕ್ಕು ತಪ್ಪುವಾಗ -
ಬೆಳಕೂ ನಾಚಿ ಅಡಗುವ ನಿನ್ನಾ ಬೆತ್ತಾಲೆ ಕತ್ತಲ ತಿರುವುಗಳಲಿ ಎನ್ನ ಬೆಮರು ಮಿಥುನ ಯಜ್ಞದ ಹವಿಸ್ಸಾಗಬೇಕು... 
ಆ ಸಾಹಚರ್ಯಕ್ಕೆ, ಈ ಇಂಥ ಆಡ್ಮಳೆಯ ಇರುಳ ಎಣೆಯಾಟಕೆ ನೀ ಜೊತೆಯಾಗಬೇಕು... 
___ ಕಾಯುವ ಕಾವಿಗೆ ಹರೆಯ ಕರಗುತಿದೆ... 
&&&

ಹೇ! ಕರಿಕಾನಿನಂದದ ಕಣ್ಣ ಕುವರೀ -
ಚಂದಕೊಂದು ಬಲು ಚೆಂದ ಹೆಸರು ನೀನು... 
ನಿನ್ನಾ ವದನ
ಜೊನ್ನ ಸರಸಿಯಲಿ ಮಿಂದ ಕರಿ ಮೋಡದ ತುಂಡು ಬೆವರಿದಂತಿದೆ - ನನ್ನ ತುಟಿ ತಾಕಿ ಬಿಸಿಯೇರಿ ಕಿವಿಹಾಲೆಯ ಮರೆಯಿಂದ ಹನಿವಾಗ ಸ್ವೇದ ಬಿಂದು... 
ಪ್ರಣಯ ಸ್ಫುರಣ ತೇವ ತೇವ ಭುಜದ ತಿರುವಲ್ಲಾಗ ಪುನ್ನಾಗ ಪುಷ್ಪ ಗಂಧ... 
ಉಸಿರ ಹೋರಿಗೆ ನಲುಗೋ ಮುಂಗುರುಳು ಉಸುರೋ ನನ್ಹೆಸರ ಕೇಳಿದ ಗಾಳಿಯಲೂ ಬಿಸಿ ಕಂಪನ... 
ಬಾ
ಬೆತ್ತಲ ಮಡಿಯನುಡು...
ಕತ್ತಲು ಕಂತುವ ಮುನ್ನ
ಹಿಂಗೇ, ಹಿಂಗಿಂಗೇ
ಇಷ್ಟು, ಇನ್ನಷ್ಟು 
ಕೂಡಿ ಕೊಂಡಾಟವಾಡಿ
ಕುಡಿದು ಬರುವ 
ಸ್ವರ್ಗ ಸೀಮೆಯ ಜೇನ... 
ಗ್ರೀಷ್ಮವಿನ್ನೂ ಪೂರಾ ಪಾದವೂರಿಲ್ಲ
ಇರುಳ ತೋಳ ತಿಳಿ ಕಾವಲ್ಲಿ 
ಕಾವೇರಿ 
ಸೂರೆಗೊಳ್ಳುವ ಸುರ ಸುಖವ
ಇಟ್ಟು ಇಟ್ಟು 
ಪ್ರೀತಿ ದುಖಾನಿಗೆ ಕನ್ನ... 
___ ಸಜ್ಜೆಮನೆಯ ಸಜ್ಜಿಗೆ ನುಡಿಗಳು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment