ಎನ್ನ 'ಉಸಿರಿಗೆ'
ನಾ
ಬರೆದ ಒಂದು
ಒಲವಿನೋಲೆ...
"ಮನವೆಂಬ ಸರೋವರದಿ ಭಾವ ಕಮಲಗಳು ಅರಳಿ ನಳನಳಿಸುತಿವೆ...
ಗೆಳತೀ -
ಮಧುರ ಸ್ಮೃತಿಗಳ ಗಾನ
ನಿನ್ನ ನೆನಪಿನ ಯಾನ..."
ನಿಜಕ್ಕೂ ಇದೆಲ್ಲ ಆಶ್ಚರ್ಯಕರವಾಗಿದೆ. ಈಗಲೂ ಕನಸಿನಂತೆಯೇ ಭಾಸವಾಗ್ತಿದೆ.
"ಎನ್ನ ಬದುಕಿನ ಮರವ
ಬಳ್ಳಿಯಾಗಿ ಬಳಸಿ ಬೆಸೆದು
ಉಳಿದೆನ್ನ ಬದುಕ - ನಗುವ
ಶ್ರೀಮಂತಗೊಳಿಸ ಬರುವ
ಮುಗ್ಧ ಕಂಗಳ ಮುದ್ದು ಹುಡುಗೀ..."
ನಾ
ಬರೆದ ಒಂದು
ಒಲವಿನೋಲೆ...
ಇಂದು ಪ್ರೇಮಿಗಳ ದಿನ. ನಂಗೆ ಪ್ರೇಮದ ಬಗೆಗೆ ಅಂಥ ದೊಡ್ಡ ನಂಬಿಕೆಯೇನಿಲ್ಲ. ನಾನು ಯಾರದೇ ಪ್ರೇಮಿ ಕೂಡ ಅಲ್ಲ. ಆದರೂ ಆಗಾಗ ಎಲ್ಲೋ ಮನದಾಳದಲ್ಲಿ ಮೂಡಿ ಮರೆಯಾಗುವ ಪ್ರೇಮದ ಭಾವಗಳನ್ನೆಲ್ಲ ಒಟ್ಟುಗೂಡಿಸಿ - ಅವನ್ನೆಲ್ಲ ಒಂದು ಚೌಕಟ್ಟಿನಲ್ಲಿ ಒಂದೆಡೆ ಸೇರಿಸಿ ಈ ದಿನ ಇಲ್ಲಿ ಬರೆದಿದ್ದೇನೆ. ಇದು ಎಂದೂ ಬಾರದ,ಯಾರೆಂದು ತಿಳಿಯದ,ನನ್ನ ಕನಸಿನ ಕನ್ಯೆಗೆ - ನಾನು ಈ ಪ್ರೇಮಿಗಳ ದಿನದಂದು ಬರೆದಿಟ್ಟ ಪ್ರೇಮ ಪತ್ರವು...
ಗೆಳತೀ -
ಮಧುರ ಸ್ಮೃತಿಗಳ ಗಾನ
ನಿನ್ನ ನೆನಪಿನ ಯಾನ..."
ಕಳೆದ ಇಷ್ಟೆಲ್ಲ ವರ್ಷಗಳ ಕಾಲ ಕಂಡ ಕನಸುಗಳೆಲ್ಲ ಈಗ ನಿನ್ನ ಸನ್ನಿಧಿಯಲ್ಲಿ ನನಸಾಗುತ್ತಿರುವ ಈ ದಿವ್ಯ ಕಾಲದಲ್ಲಿ.... ಏನಂತ ಬರೆಯಲಿ. ಏನು ಬರೆದರೂ, ಹೇಗೆ ಬರೆದರೂ ಅದು ಅಪೂರ್ಣವೇ. ಯುಗಯುಗಾಂತರಗಳಿಂದ ಎಷ್ಟೆಲ್ಲ ಮಂದಿ ಕವಿಗಳು, ಲೇಖಕರು, ವಿಮರ್ಶಕರು ಎಲ್ಲರೂ ಪ್ರೇಮವೆಂಬ ಒಂದೇ ಶಬ್ದದ ಬಗ್ಗೆ ಎಷ್ಟೆಲ್ಲ ಬರೆದರು. ಏನೇನೆಲ್ಲ ಬರೆದರು. ಅವರೆಲ್ಲ ಅಷ್ಟೆಲ್ಲ ಬರೆದ ನಂತರವೂ ಆ ಬರವಣಿಗೆಗಳು ಅಪೂರ್ಣವೇ ಎಂಬುದು ನನ್ನ ಅನಿಸಿಕೆ. ಯಾಕೇಂದ್ರೆ ಅವರ್ಯಾರೂ ಇಂದು ನನಗೆ ನನ್ನ ಮನದ ಭಾವಗಳನ್ನು ಅಕ್ಷರಕ್ಕಿಳಿಸಲು ಸಹಾಯಕ್ಕೆ ಬರುತ್ತಿಲ್ಲ.
ಅನುಭವಕ್ಕೂ ಅನುಭೂತಿಗೂ ತುಂಬಾ ವ್ಯತ್ಯಾಸವಿದೆ. ಅನುಭವವನ್ನು ವಿವರಿಸಬಹುದು. ಅನುಭೂತಿ ವಿವರಣೆಗೆ ದಕ್ಕದು. ಅನುಭವ ಲೌಕಿಕ. ಅನುಭೂತಿ ಅಲೌಕಿಕ. ಪ್ರೇಮ ಅನುಭವವಲ್ಲ ಅನುಭೂತಿ. ಅದಕ್ಕಾಗಿ ಅದನ್ನು ಕೇವಲ Feel ಮಾಡಬಹುದಷ್ಟೇ. ಗಾಳಿಯಂತೆ, ಆತ್ಮದಂತೆ. ಪ್ರೇಮದ ಭಾವಗಳನ್ನು ವಿವರಿಸಬಾರದಂತೆ. ನಮ್ಮಲ್ಲೇ ಅಡಗಿಸಿಕೊಂಡು ಆನಂದಿಸಬೇಕಂತೆ. ಹಾಗಂತ ಹೇಳದೇ ಇರಲೂ ಆಗದು. ಯಾಕೇಂದ್ರೆ - ಮನದ ಸರೋವರದಿ ಧುಮ್ಮಿಕ್ಕುವ ಪ್ರೇಮಧಾರೆಯನ್ನು ಎಷ್ಟು ಕಾಲ ಅಂತ ತಡೆದಿಡಲು ಸಾಧ್ಯ. ಎಷ್ಟೇ ಬೇಡ ಬೇಡವೆಂದರೂ - ಮಾತಿನಿಂದಲ್ಲದಿದ್ದರೆ ಕಣ್ಣಿನಿಂದಲಾದರೂ ಹೊರ ನುಸುಳಿಬಿಡುತ್ತೆ ಮನದಾಳದ ಪ್ರೇಮದ ಭಾವ ತರಂಗ...
ಬೆಳ್ಳಂಬೆಳಗ್ಗೆ ಸುಪ್ರಭಾತವ ಹಾಡುವ ಗೋಪಿ ಹಕ್ಕಿಯ ದನಿಯ ಇಂಪಿನಲ್ಲಿ, ಅಟ್ಟದ ಮೇಲೆ ಹರವಿದ ಅಡಿಕೆಯ ಮೇಲೆ ಬೀಳುವ ಮೊದಲ ರವಿ ಕಿರಣದಲ್ಲಿ, ತೆಳ್ಳವು ದೋಸೆ ತಿನ್ನಲು ಕರೆಯುವ ಆಯಿಯ ಆತುರದಲ್ಲಿ, ಹಾಲು ಕರೆವಾಗ ಪಾತ್ರೆ ತುಂಬಿ ಬರುವ ಹಾಲ ಬಿಳಿ ನೊರೆಯಲ್ಲಿ, ತಾಯ ಮೊಲೆಗಾಗಿ ಚಡಪಡಿಸುವ ಕರುವಿನ ಧಾವಂತದಲ್ಲಿ, ಮಧ್ಯಾಹ್ನದ ಸೆಖೆಯ ಒದ್ದಾಟದಲ್ಲಿ, ಸಂಜೆಯ ತಂಗಾಳಿಯೊಂದಿಗೆ ಬರುವ ಏನೋ ಅರಿಯದ ಮಧುರ ವೇದನೆಯಲ್ಲಿ, ರಾತ್ರಿಯ ಮೊದಲ ಭಾಗದ ಉದ್ವೇಗ-ಉನ್ಮಾದಗಳಲ್ಲಿ, ನಂತರದ ಗಾಢ ನಿದ್ರೆಯಲ್ಲಿ, ಬೆಳಗಿನ ಜಾವದ ಬೆಚ್ಚಗಿನ ಕನಸಿನಲ್ಲಿ, ಕುಳಿತಲ್ಲಿ, ನಿಂತಲ್ಲಿ, ಎಲ್ಲೆಂದರಲ್ಲಿ ನೀನೇ ಕಾಣುವ - ನಿನ್ನದೇ ನೆನಪಾಗುವ ಈ ಪರಿಯನ್ನು ಹೇಗೆ ವಿವರಿಸಲಿ. ನಿಂಗೆ ಹೇಗೆ ವರ್ಣಿಸಲಿ...
ನಿನ್ನ ನೆನಪಾದರೆ ಸಾಕು ಮನಸು ಏಕಾಂತವ ಬಯಸುತ್ತೆ. ಮಾತು ಮೌನದ ಮೊರೆ ಹೋಗುತ್ತೆ. ನಾನೇ ಸೃಷ್ಟಿಸಿಕೊಂಡ ಏಕಾಂತದ ಮೌನದಲ್ಲಿ ನಾನು ನಿನ್ನೊಂದಿಗೆ ಮಾತಿಗಿಳಿಯುತ್ತೇನೆ. ಏನೆಲ್ಲ ಮಾತುಗಳು - ಏನೆಲ್ಲ ಸ್ವಪ್ನಗಳು. ಆಗ ನಾ ನೋಡುವ ಪ್ರತಿ ವಸ್ತು - ಪ್ರತಿ ಜೀವ ಸೌಂದರ್ಯದ ಕಾಂತಿಯಿಂದ ಪ್ರಜ್ವಲಿಸುತ್ತಿರುತ್ತೆ. ಕಾರಣ ಅಲ್ಲೆಲ್ಲ ನಂಗೆ ನೀನೇ ಕಾಣ್ತಿರ್ತೀಯ. ಕಣ್ಣಲ್ಲಿ ನಿನ್ನ ಬಿಂಬ ಸ್ಥಿರವಾಗಿರುವಾಗ ಕಣ್ಣು ಬೇರೇನನ್ನೂ ನೋಡಲು ನಿರಾಕರಿಸುತ್ತೆ. ನೋಡಿದರೂ ಅಲ್ಲಿ ನೀನೇ ಕಾಣ್ತೀಯ. ಹಾಗಾಗಿ ಜಗವೆಲ್ಲ ಸುಂದರವೇ. ನಿನ್ನ ನೆನಪು ನನ್ನ ಮನವನ್ನಾಳುತ್ತಿರುವಾಗ ಕಾರ್ಗತ್ತಲು ಕೂಡ ಎಷ್ಟು ಸಹನೀಯವಾಗಿರತ್ತೆ ಗೊತ್ತಾ..! ಅವನ್ನೆಲ್ಲ ಅಕ್ಷರದಲ್ಲಿ ಹಿಡಿದಿಡೋಕಾಗತ್ತಾ. ಆ ಭಾವಗಳ ತೀವ್ರತೆ ಎಷ್ಟಿತ್ತೆಂದು ನಂತರ ವಿವರಿಸುತ್ತೇನೆ. ಅಕ್ಷರದಿಂದಲ್ಲ. ನೀನು ನನ್ನೆದುರಲ್ಲಿ ನನ್ನನ್ನೇ ಆ ನಿನ್ನ ಬೊಗಸೆ ಕಂಗಳಲ್ಲಿ ಕಂಡೂ ಕಾಣದ ನಾಚಿಕೆಯಿಂದ, ಹಿಡಿದಿಡಲಾಗದ ಪ್ರೇಮದಿಂದ ನೋಡುತ್ತಿರುವಾಗ ಆ ನಿನ್ನ ಕಂಗಳಿಗೆ ಮೃದುವಾಗಿ ಮುತ್ತಿಡುವ ಮೂಲಕ.
ಹೇಯ್ ! ಯಾಕೆ ಈಗ್ಲೇ ಕೆನ್ನೆ ಕೆಂಪಾಯ್ತು. ಕಂಗಳೇಕೆ ಮುಚ್ಕೋತಿವೆ.? ನಾನು ಈಗಿನ್ನೂ ನಿನ್ನ ಮುತ್ತಿಟ್ಟಿಲ್ಲ ಕಣೇ. ಅದೆಲ್ಲ ಆಮೇಲಿನ ಮಾತು. ಆದರೂ ಈ ನಾಚಿಕೇನೂ ತುಂಬಾ ಚೆನ್ನಾಗೇ ಇದೆ ಬಿಡು.
"ಎನ್ನ ಬದುಕಿನ ಮರವ
ಬಳ್ಳಿಯಾಗಿ ಬಳಸಿ ಬೆಸೆದು
ಉಳಿದೆನ್ನ ಬದುಕ - ನಗುವ
ಶ್ರೀಮಂತಗೊಳಿಸ ಬರುವ
ಮುಗ್ಧ ಕಂಗಳ ಮುದ್ದು ಹುಡುಗೀ..."
ನಿನ್ನ ಪುಟ್ಟ ಹೃದಯದ ಗೂಡಲ್ಲಿ ನಂಗೊಂದು ವಿಶೇಷ ಸ್ಥಾನವಿದೆ. ನಿನ್ನ ಭವಿಷ್ಯದ ಬಗೆಗಿನ ಕನಸುಗಳಲ್ಲಿನ್ನು ನಾನು ಸಂಮಿಳಿತಗೊಂಡಿರುತ್ತೇನೆ ಎಂಬ ಭಾವಗಳೇ ಎಂಥ ಸಂತೋಷ ಕೊಡುತ್ತವೆ ಗೊತ್ತಾ..! ಇನ್ನು ಮುಂದೆ ನನ್ನ ಮನಸಿನ ಜೊತೆಗೆ ಮಾತಾಡಲೊಂದು ಮನಸು ಜೊತೆಗಿರುತ್ತೆ - ನನ್ನ ಕನಸುಗಳನ್ನು ಹಂಚಿಕೊಳ್ಳಲು - ಹೊಸ ಕನಸುಗಳನ್ನು ಕಟ್ಟಿ ಕೊಡಲು - ಪುಟ್ಟ ಕನಸೊಂದು ನನಸಾದಾಗ ನನ್ನೊಂದಿಗೆ ಸಂಭ್ರಮಿಸಲು - ನನ್ನ ಗೆಲುವಿಗೆ, ನನ್ನ ನಗುವಿಗೆ ಸ್ಫೂರ್ತಿಯಾಗಿ - ನನ್ನ ಸೋಲಿಗೆ, ನನ್ನ ನೋವಿಗೆ ಸಾಂತ್ವನವಾಗಿ - ಮಧ್ಯಾಹ್ನದ ಸುಡು ಬಿಸಿಲಿಗೆ ಹೊಂಗೆಯ ನೆರಳಂತೆ - ರಾತ್ರಿಯ ಕಾರ್ಗತ್ತಲಲ್ಲಿ ಹೆಜ್ಜೆ ಎಡವದಂತಿರಲು ಬೆಳದಿಂಗಳಂತೆ - ನನ್ನ ಹೆಗಲಿಗೆ ಹೆಗಲಾಗಿ - ಬದುಕಿನ ಶಕ್ತಿಯ ಸೆಲೆಯಾಗಿ ನನ್ನೊಂದಿಗೆ ನನ್ನ ಬಾಳ ಪಯಣದಲ್ಲಿ ಕೊನೆ ತನಕ ಒಂದು ಹೆಣ್ಣು ಜೀವ ಜೊತೆಗಿರುತ್ತೆ ಎಂಬ ಭಾವದ ಕಲ್ಪನೆಯೇ ಎಂಥ ಚೈತನ್ಯವನ್ನು ತುಂಬುತ್ತೆ ಗೊತ್ತಾ..!
ಗಣಿತದಲ್ಲಿ ಒಂದು ಒಂದು ಸೇರಿದರೆ ಮೊತ್ತ ಎರಡಾಗುತ್ತೆ. ಆದರೆ ಪ್ರೇಮದಲ್ಲಿ ಒಂದು ಒಂದು ಸೇರಿದರೆ ಮೊತ್ತವೂ ಒಂದೇ ಆಗುತ್ತೆ ಅಂತ ಎಲ್ಲೋ ಓದಿದ ಮಾತು ಎಷ್ಟು ಸತ್ಯ ಎಂದು ಇಂದು ಗೊತ್ತಾಗ್ತಿದೆ. ನನ್ನ ಮನಸು ನನ್ನನ್ನೇ ಮರೆತು ನಿನ್ನಲ್ಲಿ ಲೀನವಾಗಿ ನೀನೇ ಆಗಿ ಹೋದ ಈ ಘಳಿಗೆಯಲ್ಲಿ...
ಮಾಯಾವೀ -
ಇಷ್ಟೆಲ್ಲ ವರ್ಷಗಳ ಕಾಲ ಯಾರ ಕೈಗೂ ಸಿಗದಂತೆ ನನ್ನೆದೆಯ ಗೂಡಲ್ಲಿ ಬಚ್ಚಿಟ್ಟುಕೊಂಡಿದ್ದ ನನ್ನ ಮನವನ್ನು ಕೇವಲ ಒಂದೇ ಒಂದು ಕ್ಷಣದಲ್ಲಿ, ಕಡೆಗಣ್ಣ ಕುಡಿನೋಟವೊಂದರಿಂದಲೇ ಎಷ್ಟು ಸಲೀಸಾಗಿ ಅಪಹರಿಸಿಬಿಟ್ಟೆಯಲ್ಲೇ... ನಿಂಗಿದು ಹೇಗೆ ಸಾಧ್ಯವಾಯ್ತು.? ನಿನ್ನನ್ನು ಮಾಯಾವಿ ಅಂದದ್ದು ತಪ್ಪಾ.? ಮೀಸೆ ಚಿಗುರಿದ್ದು ಗೊತ್ತಾದ ಮೊದಲ ದಿನದಿಂದ ಕಟ್ಟಿಕೊಳ್ಳುತ್ತ ಬಂದ ಕನಸುಗಳು ನಿನ್ನ ರೂಪದಲ್ಲಿಂದು ನನಸಾಗುತ್ತಿವೆ.ಚಂದ್ರನನ್ನೂ ಅಣಕಿಸುವಂಥ ನಿನ್ನ ಸಹಜ ಸುಂದರ ನಗುವಿನ್ನು ನನಗೆ ಸ್ವಂತ ಎಂಬ ಭಾವ ಮನದಿ ಮೂಡುತಿರೆ ಎಂಥ ರೋಮಾಂಚನ ಗೊತ್ತಾ..! ಬದುಕಿನ ಮರ ಹೊಸ ರೆಂಬೆಗೆ ಜನ್ಮವೀಯುವ ಕಾಲ. ಬದುಕಿಗೆ ಹೊಸ ಅರ್ಥ ಸ್ಫುರಿಸುವ ಕಾಲ ಇದಲ್ಲವೇನೇ ಗೆಳತೀ. ಏನಂತೀಯಾ..?
ಇನ್ನಷ್ಟು ವಿಚಾರಗಳನ್ನು ಇನ್ನೊಂದು ಪತ್ರದಲ್ಲಿ ಬರೀತೀನಿ. ನಿಂಗೇನನ್ನಿಸ್ತಾ ಇದೆ. ಪತ್ರ ಓದಿ ಖುಷಿಯ ಝಲಕೊಂದು ನಿನ್ನ ಕಣ್ಣಂಚಲ್ಲಿ ಮಿಂಚಿದರೆ ನಂಗಷ್ಟೇ ಸಮಾಧಾನ. ಈ ಪತ್ರಕ್ಕಷ್ಟೇ ಸಾರ್ಥಕ್ಯ.....
ಮತ್ತೊಮ್ಮೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.....
ಬರೆದ ಒಲವಿನ ಓಲೆ ನಿನ್ನುಸಿರೇ ಆದರೂ......
ReplyDeleteನಮ್ಮ ಹ್ರದಯವನ್ನೂ ತಟ್ಟಿದೆ.. ಚಂದ್ ಬೈಂದು....
ಉಸಿರಿಗೆ ಉಸಿರು ಬೆಸೆಯುವಂತಹ ಅದ್ಭುತ ಅಕ್ಷರ ಮಾಲೆ.. ನಿಮ್ಮ ಒಲವಿನ ಓಲೆ..
ReplyDelete-
ಒಲವಿನ ಓಲೆ ಸೂಪರ್
ReplyDelete