Saturday, February 5, 2011

ಗೊಂಚಲು - ನಾಕು...


ಪ್ರತೀ ವ್ಯಕ್ತಿಯ ಆಸೆಯೂ ತನ್ನ ಬದುಕು ವೈವಿಧ್ಯತೆಗಳಿಂದ,ವಿಧವಿಧದ ಬಣ್ಣಗಳಿಂದ ತುಂಬಿರಬೇಕೆನ್ನುವುದಾಗಿರುತ್ತೆ. ನಿತ್ಯವೂ ಹೊಸಹೊಸ ಅನುಭವಗಳು,ನವನವೀನ ಅನುಭೂತಿಗಳು ತನ್ನದಾಗಬೇಕೆಂದು ಬಯಸುತ್ತಾನೆ.ಆ ಕಾಲಕ್ಕೆ ಆ ಕ್ಷಣಕ್ಕೆ ತನ್ನಲ್ಲಿ ಏನೇನು ಕನಸುಗಳು,ಆಸೆಗಳು ಮೂಡುತ್ವೋ ಅವೆಲ್ಲ ಈಡೇರಬೇಕೆಂದು ಹಂಬಲಿಸ್ತಾನೆ. ಆದರೆ ಬಯಕೆಗಳೇ ಬೇರೆ ಬದುಕೇ ಬೇರೆ ಅಲ್ವಾ..! ನಾವು ಬಯಸಿದ್ದೆಲ್ಲಾ ನಮಗೆ ಸಿಗೋಹಂಗಿದ್ರೆ ನಾವೆಲ್ಲ ಹಿಂಗಿರ್ತಿದ್ವಾ..?



'ಬದುಕು ಬಿಳಿಯ ಕ್ಯಾನ್ವಾಸಿದ್ದ ಹಾಗೆ.ಅದರ ಮೇಲೆ ಚಿತ್ರಾನ ನಾವೇ ಬಿಡಿಸಿಕೊಳ್ಳಬೇಕು'ಅಂತ ಎಲ್ಲೋ ಓದಿದ್ದೆ.ಮಾತು ಸತ್ಯವಾದದ್ದೇ.ಆದ್ರೆ ಎಲ್ರಿಗೂ ಚಿತ್ರ ಬಿಡಿಸೋ ಸಾಮರ್ಥ್ಯ ಇರಲ್ವಲ್ಲಾ. ಗೆರೆ ಎಳೆದು, ಚಿತ್ರಕ್ಕೆ ರೂಪ ಕೊಟ್ಟು, ಬಣ್ಣಗಳ ಕಾಂಬಿನೇಷನ್ ತಿಳ್ಕೊಂಡು,ಒಂದು ಚಂದನೆಯ ಬಣ್ಣದ 
ಚಿತ್ರಾನ ಬಿಡಿಸಿಕೊಳ್ಳೋ ಕಲೆ ಎಲ್ರಿಗೂ ಸಿದ್ಧಿಸಿರೊಲ್ಲವಲ್ಲಾ. ಹಾಗೆ ತನ್ನ ಬದುಕಿನ ಚಿತ್ರವನ್ನು ತಾನೇ ಬಿಡಿಸ್ಕೊಳ್ಳೋ ತಿಳುವಳಿಕೆ,ಸಾಮರ್ಥ್ಯಗಳಿಲ್ಲದವನು ಏನ್ಮಾಡ್ಬೇಕು.?




ಸ್ವಂತವಾಗಿ ಬದುಕು ರೂಪಿಸಿಕೊಳ್ಳೋ ಸಾಮರ್ಥ್ಯ ಇಲ್ಲ ಅಂತ - ಮನದಲ್ಲಿ ಮೂಡೋ ಆಸೆಗಳನ್ನ ಹತ್ತಿಕ್ಕಲಾಗುತ್ತಾ.? ಇಲ್ಲ ಅಲ್ವಾ..! ನಿಜದಲ್ಲಿ ಅರಮನೆ ಕಟ್ಟಲಾಗದವರು ಕನಸಲ್ಲೂ ಅರಮನೇನ ಕಾಣಬಾರದೆಂದೇನೂ ಇಲ್ವಲ್ಲಾ. ಕನಸು ಕಾಣೋಕೇನು ಕಾಸು ಕೊಡ್ಬೇಕಾ..? ತನ್ನ ಕನಸನ್ನು ನನಸು ಮಾಡ್ಕೊಳ್ಳೋ ತಾಕತ್ತಿರೋನು ತನ್ನ ಬದುಕನ್ನು ತಾನೇ ರೂಪಿಸಿಕೊಂಡು ಆನಂದದ ಮಹಲನ್ನು ಕಟ್ಟಿಕೊಂಡು ಅಲ್ಲಿ ಸುಖವಾಗಿ ಜೀವಿಸ್ತಾನೆ. ಆ ಶಕ್ತಿ ಇಲ್ದೋನು ಸುಳ್ಳೇ ಕನಸನ್ನು ಕಾಣ್ತಾ, ಭಾವಗಳನ್ನು ಅದೇ ಭಾವಕೋಶಗಳಲ್ಲಿ ಹೂತು ಸಮಾಧಿ ಮಾಡ್ಕೊಂಡು, ತನ್ನ ಮಿತಿ ಇಷ್ಟೇ ಅಂದ್ಕೊಂಡು, ಮೊಗದಲ್ಲಿ ಸುಳ್ಳೇ ನಗು ಮೂಡಿಸ್ಕೊಂಡು (ಸಮಾಜಕ್ಕೆ ತಾನು ಖುಷಿಯಾಗಿದೀನಿ ಅಂತ ತೋರಿಸ್ಕೋಬೇಕಲ್ಲಾ...) ಭ್ರಮೆಗಳಲ್ಲಿ ಬದುಕ್ತಿರುತ್ತಾನೆ. ಅವನಾದ್ರೂ ಇನ್ನೇನ್ಮಾಡೋಕಾಗುತ್ತೆ? ಆತ ಸಾಮಾನ್ಯ...


 ವ್ಯತ್ಯಾಸ ಇಷ್ಟೇ...
 ಒಬ್ಬ ಮನಸಾರೆ ನಗ್ತಾನೆ. ಮತ್ತೊಬ್ಬ ಮುಖದ ತುಂಬ   ನಗ್ತಾನೆ...

1 comment:

  1. ಚಿತ್ರ ನಾವೇ ಬರೆದುಕೊಳ್ಳಲೇಬೇಕುಂತನೇ ಇಲ್ಲ ಶ್ರೀವತ್ಸ. ಆ ಸಾಮರ್ಥ್ಯ ಇದ್ದವನು ಬರ್ಕೊಳ್ತಾನೆ, ಇಲ್ಲದಿದ್ರೆ ಬದುಕು ನಮ್ಮ ಜಾಯಮಾನಕ್ಕೆ ತಕ್ಕಂತೆ ಗೆರೆಗಳು, ವೃತ್ತಗಳು, ಬಿಂದುಗಳು ಎಲ್ಲವನ್ನೂ ಕಲೆಹಾಕಿ ಕ್ಷಣಕ್ಕೊಂದು ಚಿತ್ರ ಮುಂದಿಡುತ್ತಾ ಸಾಗುತ್ತದೆ. ನಾವದರೊಳಗೆ ಸಂಪೂರ್ಣ ನಂಬಿಕೆಯಿಂದ ತೂರಿಕೊಂಡರೆ, ಒಳಗೊಳ್ಳುವಂತೆ ನಡಕೊಂಡರೆ ಸಾಕು.. ತಾನು ಬರೆದ ಚಿತ್ರವೇ ಆಗ್ಲಿ, ಬದುಕು ಮುಂದಿಟ್ಟ ಚಿತ್ರವೇ ಆಗ್ಲಿ.. ಅಲ್ಲಲ್ಲಿ ಇಕ್ಕಟ್ಟು ಅನ್ನಿಸಬಹುದು, ಅಲ್ಲಲ್ಲಿ ಇರಿಸಿಮುರುಸಾಗಬಹುದು. ಹಾಗಂತ ಅದೇ ಶಾಶ್ವತವಲ್ಲವಲ್ಲಾ.. ಚಿತ್ರದ ಸ್ವರೂಪವೂ ಕಾಲದೊಂದಿಗೆ ಬದಲಾಗ್ತಾ ಹೋಗ್ತದೆ, ನಮ್ಮ ಅವಕಾಶಗಳೂ ಸಹ.. ಹಾಗಾಗಿ ಬದುಕ್ತಾ ಹೋಗುವಾಗ ಬಯಸುವುದು, ಕನಸು ಕಟ್ಟುವುದು ಇವೆಲ್ಲಾ ತುಂಬಾ ಮುಖ್ಯ.. ಮತ್ತೆ ಏನೂ ಸರಿಯಿಲ್ಲ ಅನಿಸುವಾಗ ಎಲ್ಲಾ ಸರಿಹೋಗುವ ಭರವಸೆಯಂತೂ ತುಂಬಾನೇ ಮುಖ್ಯ. ಇದು ನನ್ನ ಅಭಿಪ್ರಾಯ. ನಗು ಮುಖದ ತುಂಬಾನೇ ಇರಲಿ, ಕಂಡೂ ಕಾಣದಂತೆಯೇ ಇರಲಿ.. ಅದು ನಗುವೇ ಹೌದು. ಇವರಡರಲ್ಲೊಂದು ರೀತಿ ನಗುವುದು ಬಿಡು.. ನಕ್ಕಂತೆ ನಟಿಸುವುದಕ್ಕೂ ತಾಕತ್ತು ಬೇಕು ಶ್ರೀವತ್ಸ. ನಾವು ನಗಬಲ್ಲೆವಾದರೆ ಅದು ನೋಡುವವರ ಕಣ್ಣಿಗೆ ಹೇಗೇ ಕಾಣಲಿ, ನಾವು ಭಾಗ್ಯವಂತರೇ ಹೌದು.

    ReplyDelete