Saturday, January 5, 2013

ಗೊಂಚಲು - ಐವತ್ತು + ಏಳು.....

ನೋವು ನಗುವಿನ ತೊಟ್ಟಿಲು.....
[ಒಂದಷ್ಟು ಅರ್ಧಸತ್ಯಗಳ ರವಾನಿಸಿದ್ದೇನೆ ಇಲ್ಲಿ]


ಸ್ನೇಹಿತೆಯೊಬ್ಬಳು ಮಾತನಾಡುತ್ತಾ 'ನಗುವ ಜತೆ ಜತೆಗೆ ನಮ್ಮೊಳಗಣ ನೋವನ್ನೂ ವಿನಿಮಯ ಮಾಡಿಕೊಂಡಾಗಲೇ ಗೆಳೆತನವೊಂದು ಗಟ್ಟಿಯಾಗಿ ಬೆಸೆಯಲು ಸಾಧ್ಯ ಕಣೋ' ಅಂತಿದ್ದಳು.
'ನೋವು ಒಳಗಿರುವಾಗ ಮೊಗದಲ್ಲಿ ನಗುತಿರುವುದು ಕೃತಕವೆನ್ನಿಸೊಲ್ಲವಾ.?' ಅಂತ ಪ್ರಶ್ನಿಸಿದ್ದ ಗೆಳೆಯನೊಬ್ಬ.
ಅವೆಲ್ಲ ಸೇರಿ ನನ್ನಲ್ಲಿ ನೋವಿನ ಬಗ್ಗೆ ಒಂದಿಷ್ಟು ಗಿರಗಿಟ್ಲೆ ಶುರುವಾಗಿತ್ತು.

ಹುಟ್ಟಿದ ತಕ್ಷಣ ಮಗುವೊಂದು ಅಳುವುದರ ಮೂಲಕ ತನ್ನ ಉಸಿರಾಟವನ್ನು ಸುಗಮಗೊಳಿಸಿಕೊಳ್ಳುತ್ತಂತೆ. ನಾವೆಲ್ಲ ಹಾಗೆ ಮಾಡಿಯೇ ಉಸಿರಾಡಿದ್ದು. 
ಬಹುಶಃ ಅಲ್ಲಿಂದಲೇ ಮನುಷ್ಯನ ಬದುಕಿಗಾಗಿ ಅಳುವ ಮತ್ತು ಅಳುವ ಪ್ರೀತಿಸುವ ಮೂಲ ಗುಣಕ್ಕೆ ಬೀಜಾಂಕುರ. ಅಳುವನ್ನು ಪ್ರೀತಿಸುವುದು ಮನಸ್ಸಿನ ಸ್ಥಾಯೀ ಭಾವವೇನೋ ಅನ್ನಿಸುತ್ತೆ. ಅದಕ್ಕೇ ಇರಬೇಕು ನೋವ ನುಂಗಿ ಬದುಕಿದ 'ಪಾರು'ವಿಗಿಂತ ಅಳುವ ಉಸಿರಾಡಿದ 'ದೇವದಾಸ್' ಹೆಚ್ಚು ಪ್ರಿಯನೆನ್ನಿಸಿದ್ದು. ನಗುವ ಪ್ರೇಮಕಾವ್ಯಕ್ಕಿಂತ ಭಗ್ನ ಪ್ರೇಮಕಾವ್ಯ ಹೆಚ್ಚು ಪ್ರಚಲಿತವಾದದ್ದು. (ನಮ್ಮ ಮಹಾಕಾವ್ಯಗಳೆಲ್ಲ ನೋವ ಕಾವ್ಯಗಳೇ) ನಮ್ಮ ಒಳಗನ್ನು ಬೇಕಾದರೂ ನೋಡಿ - ಕಣ್ಣೀರು ಹೆಪ್ಪುಗಟ್ಟಿದಾಗಲೇ ಮನಸು ಗಟ್ಟಿಯಾಗುವುದು. ನೋವ ನುಂಗಿ ನಗಬಲ್ಲವರೇ ಬದುಕಿಗೆ ಹೆಚ್ಚು ಪ್ರಾಮಾಣಿಕರೆನ್ನಿಸುವುದು. ಕೆಸರಲ್ಲಿ ಅರಳಿದ್ದಕ್ಕೆ ಕಮಲ, ಮುಳ್ಳ ನಡುವೆ ನಗುವ ಗುಲಾಬಿ ಅಷ್ಟೊಂದು ಪ್ರಿಯವೆನ್ನಿಸುವುದು. ಒಳಗೊಂದಿಷ್ಟು ನೋವಿಲ್ಲದಿದ್ದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ನಾವು ಹೆಚ್ಚು ಹೆಚ್ಚು ಪ್ರಾಮಾಣಿಕವಾಗಿ ಆಸ್ವಾದಿಸಲಾರದೇ ಹೋಗುತ್ತೇವೇನೋ. ನಗುವಿಗೆ ಅರ್ಥ ಬರೋದೇ ನೋವನ್ನು ಮೆಟ್ಟಿ ನಗು ಮೆರೆದಾಗ. ನೋವ ಹೀರಿ ನಗುವವರ ನಗು ಸ್ವಲ್ಪ ಕೃತಕ ಅನ್ನಿಸೀತು ಒಮ್ಮೊಮ್ಮೆ. ಆದರೂ ಆ ನಗು ಹೆಚ್ಚು ಪ್ರಾಮಾಣಿಕ ಅನ್ನಿಸುತ್ತೆ ನಂಗೆ. ಉಳಿದ ಮುಖವಾಡಗಳಿಗಿಂತ ಈ ಮುಖವಾಡ ಹೆಚ್ಚು ಪ್ರಿಯವೆನ್ನಿಸುತ್ತೆ ನಂಗೆ. 

ರಕ್ತ ಸಂಬಂಧವಲ್ಲದ, ಭಾವನಾತ್ಮಕ ವಿನಿಮಯವನ್ನು ನೆಚ್ಚಿಕೊಂಡ ಎಲ್ಲ ಸಂಬಂಧಗಳೂ ಗಾಢವೆನ್ನಿಸುವುದು, ಇನ್ನಷ್ಟು ಬೇಕು ಅನ್ನಿಸುವುದು ಯಾವುದೋ ನೋವಿಂದ ಮನಸು ಮಗುಚಿ ಬಿದ್ದಾಗಲೇ. ನಾನಿಲ್ಲಿ ನಮ್ಮ ನೋವನ್ನು ಹೇಳಿಕೊಂಡು ಅನುಕಂಪಗಳಿಸಿಕೊಳ್ಳೋ ಮಾತು ಹೇಳ್ತಿಲ್ಲ. ನೋವನ್ನು ಹರವಿಕೊಂಡು ಹಗುರಾಗುವ ಮಾತಾಡುತ್ತಿದ್ದೇನೆ. ಎರಡಕ್ಕೂ ವ್ಯತ್ಯಾಸವಿದೆ. ಅನುಕಂಪ ಬಯಸಿ ಕೂತವನು ಕೂತಲ್ಲೇ ಕೊಳೆಯುತ್ತಾನೆ. ನೋವ ಹೊರಚೆಲ್ಲಿ ಹಗುರಾಗಿ ಎದ್ದು ಹೋದವನು ಬದುಕನ್ನು ಚೆಂದಗೆ ಆಳುತ್ತಾನೆ. 
ನೋವ ಮಾತಾಡಿದವರೆಲ್ಲ ನೋವನ್ನೇ ಬದುಕುತ್ತಾರೆಂದಲ್ಲ. 
ನೋವು ಬದುಕಿನ ಅಂಗವಷ್ಟೇ - ನೋವೇ ಬದುಕಲ್ಲ ಎಂಬುದು ಗೊತ್ತಿಲ್ಲದವರೆಂತಲೂ ಅಲ್ಲ. 
ಎರಡು ಹನಿ ಕಣ್ಣೀರು ಚೆಲ್ಲಿ, ಆ ಹನಿಗಳೊಂದಿಗೆ ಎದೆಯ ನೋವ ಇಳುಕಿ  ಹೊಸ ಭರವಸೆ - ಹೊಸ ಕನಸುಗಳ ಎತ್ತಿಕೊಳ್ಳಬಲ್ಲವರೂ, ಜತೆಗೇ ಎಲ್ಲ ಭರವಸೆ - ಕನಸುಗಳ ಮೇಲಿನ ನಂಬಿಕೆಯ ನಡುವೆಯೂ ವಾಸ್ತವಿಕತೆಯನ್ನು ಮರೆಯಲಾಗದವರೂ ಆಗಿರಬಹುದು. 
ಮನಸಿನ ನಗು ಅಂದ್ರೆ ಏನು - ನೋವ ನಡುವೆಯೂ ಹೊಸ ಕನಸಿಗೆ ಗೂಡು ಕಟ್ಟೋದೇ ಅಲ್ವಾ...
ಇದು ನಾ ಕಂಡ ಬದುಕು ನಂಗೆ ಕರುಣಿಸಿದ ಪಾಠ.

ನೋವ ಹರವಿಕೊಳ್ಳಲು ಮತ್ತೊಂದು ಮನಸಿನ ಅಗತ್ಯ ಇಲ್ಲದಂತ ಮನೋ ಸಾಮರ್ಥ್ಯ ಹೊಂದಿದವರೆಡೆಗೆ ನಂಗೆ ಮಧುರ ಹೊಟ್ಟೆಕಿಚ್ಚಿದೆ. 

ದೊಡ್ಡ ದೊಡ್ಡ ಕನಸುಗಳ ಸಾಕಾರಗೊಳಿಸಿಕೊಳ್ಳಲಾಗದ ನೋವು - ಪುಟ್ಟ ಪುಟ್ಟ ಕನಸುಗಳನು ಪ್ರೀತಿಸುವ ಮತ್ತು ಜಯಿಸಿ ಆಸ್ವಾದಿಸುವ ಭವ್ಯ ಸುಖದ ಘಳಿಗೆಗಳನ್ನು ಒದಗಿಸಿಕೊಟ್ಟಿದ್ದಕ್ಕೆ ಯಾವುದೋ ದೊಡ್ಡ ನೋವಿಗೆ [ನನ್ನ ಮಟ್ಟಿಗೆ ದೊಡ್ಡದು..:)] ನಾನು ಬದುಕು ಪೂರ್ತಿ ಋಣಿಯಾಗಿರುವಂತೆ ಮಾಡಿದೆ. ಮನಸು ದ್ವಂದ್ವಗಳಲಿ - ನೋವಿನಲಿ - ಗೊಂದಲಗಳ ಸಂತೆಯಲಿದ್ದಾಗಲೂ ಬದುಕು ಬರೀ ನಗುವಿನಿಂದ ಕೂಡಿರುವಂತೆ ನೋಡಿಕೊಂಬ ಶಕ್ತಿ ಒಂದಿಷ್ಟಾದರೂ ಮೈಗೂಡಿದೆ. ಮನಸಿನ ನೋವು ಭಾವ ಕೋಶಕ್ಕೆ ಮಾತ್ರ ಸೀಮಿತವಾಗಿದ್ದು ಬದುಕು ಬುದ್ಧಿಯ ಕೈಲಿದ್ರೆ ಚೆನ್ನ ಅಂದ್ಕೋತೀನಿ. ನಾನು ಈವರೆಗೆ ಬರೆದಿದ್ದೆಲ್ಲ ಹೆಚ್ಚಿನದು ನೋವ ಕಥಾನಕವೇ. ಬದುಕಿದ್ದು ಈವರೆಗೂ ನಗುವ ತೊಟ್ಟಿಲಲ್ಲೇ.
ಮನಸಿಗೆ ಖುಷಿ ಎಲ್ಲಿಂದಲೋ ಬರಲ್ಲ. ನಾವೇ ಕೊಡಬೇಕು. 
ನಮ್ಮೊಳಗಿನ ನೋವು, ಸಂಕಟಗಳ ನಡುವಿನಿಂದಲೇ ಹೆಕ್ಕಿ ಹೆಕ್ಕಿ. ನಮ್ಮ ಬದುಕನ್ನು ಶೃಂಗರಿಸಿಕೊಳ್ಳಬೇಕಾದ್ದು ನಾವೇ ಅಂದ್ಕೋತೀನಿ. 
ಯಾವ ಭಾಗ್ಯವೂ ಯಾರನ್ನೂ ಮುನ್ನಡೆಸಿದ ಉದಾಹರಣೆ ಇಲ್ಲ - ನಮಗೆ ನಡೆವ ಮನಸಿಲ್ಲದಿದ್ದರೆ. 
ಯಾವ ನೋವೂ ಸಂಪೂರ್ಣ ಶಾಶ್ವತ ಅಲ್ಲ - ನಾವಾಗಿ ಗೊಬ್ಬರ ಹಾಕಿ ಬೆಳೆಸಿ ಕಾಯ್ದಿಟ್ಟುಕೊಳ್ಳದಿದ್ದರೆ.
ಯಾರೋ ತಂದುಕೊಟ್ಟಾರೆಂಬ ಖುಷಿಗಿಂತ - ನನ್ನದೇ ಬದುಕು ಕರುಣಿಸಿದ ನೋವುಗಳನು ಕಣ್ಣ ಹನಿಗಳೊಂದಿಗೆ ಕಳೆದುಕೊಂಡಾಗ ಒಂಥರಾ ಹಾಯೆನಿಸುತ್ತಲ್ಲ ಮತ್ತು ಮುಂದಿನ ಬದುಕನ್ನು ಎದುರುಗೊಳ್ಳೋಕೆ ಒಂದು ಹೊಸ ಚೈತನ್ಯ ಮೂಡಿ ನಿಂತಾಗ ಉಕ್ಕುತ್ತಲ್ಲ ಖುಷಿ - ಆ ಖುಷಿಯನ್ನ, ಕೇವಲ ನನ್ನದು ಮಾತ್ರ ಎನ್ನಿಸುವ ಆ ಆನಂದವನ್ನು ನಾನು ತುಂಬಾನೇ ಪ್ರೀತಿಸುತ್ತೇನೆ.

ನಾಳೆ ಬಂದೀತೆಂಬ ಬೆಳಕಿನ ನಿರೀಕ್ಷೆಗಿಂತ ನಂಗೆ ಈ ಕ್ಷಣ ನನ್ನದೇ ನೋವಿನ ಎಣ್ಣೆ ಸುರಿದು ನಾನೇ ಹಚ್ಚಿಟ್ಟುಕೊಂಡ ಸಣ್ಣ ನಗುವಿನ ದೀಪದ ಮೇಲೆ ಹೆಚ್ಚು ನಂಬಿಕೆ...

ಭಾವಗಳಿಗೆ ಮನಸ್ಸು - ಬದುಕಿಗೆ ಬುದ್ಧಿ.
ಬರಹ ಎದೆಯ ಭಾವ - ಅಲ್ಲೊಂದಿಷ್ಟು ನೋವು ಮತ್ತು ಪುಟ್ಟ ಪುಟ್ಟ ಸಂತಸಗಳಿವೆ.
ಬದುಕು ಬುದ್ಧಿಯ ಬರಹ - ಅಲ್ಲಿ ಬರೀ ನಗುವಿದೆ. 

ಮನಸಲ್ಲಿ ಇಂಗಿ ಹೆಪ್ಪಾದ ನೋವು ಬದುಕ ಕಟ್ಟಲು ಬುದ್ಧಿಗೆ ಗೊಬ್ಬರವಾಗಿ ನಗುವ ಬೆಳೆಯ ಬೆಳೆಸಲಿ ಬದುಕಲ್ಲಿ ಅಂತ ಬಯಸುತ್ತೇನೆ.

ಎಲ್ಲ ಜಂಜಡಗಳ ನಡುವೆಯೂ ಒಂದಿಷ್ಟು ಖುಷಿಯಾಗಿರೋಣ. 
ಬರಹ - ಭಾವ - ಬಂಧಗಳಲಿ...
ಏನಂತೀರಾ...

7 comments:

 1. ನೋವಿನಲ್ಲಿ ಬೆಳೆದ ಬಾಂಧವ್ಯಕ್ಕೆ ಹೆಚ್ಚು ಆತ್ಮೀಯತೆಯಿದೆ...
  ಎಂಬುದಕ್ಕೆ ಕೊಟ್ಟ ಉದಾಹರಣೆಗಳು ಅದ್ಭುತ... ಮುಳ್ಳುಗಳ ನಡುವೆ ಅರಳಿದ ಗುಲಾಬಿ....
  ಕೆಸರಿನಲ್ಲಿ ಬೆಳೆದ ಕಮಲ...
  ದುಃಖ ನುಂಗಿದ ಪಾರುವಿಗಿಂತ ಪಾನಮತ್ತ ದೇವದಾಸ್.....

  ನಿಜವಾಗಿಯೂ ಆತ್ಮೀಯರಿರಬೇಕೆನಿಸೋದು ದೂಃಖದ ಸಮಯದಲ್ಲೇ....

  "ಯಾವ ನೋವೂ ಸಂಪೂರ್ಣ ಶಾಶ್ವತ ಅಲ್ಲ - ನಾವಾಗಿ ಗೊಬ್ಬರ ಹಾಕಿ ಬೆಳೆಸಿ ಕಾಯ್ದಿಟ್ಟುಕೊಳ್ಳದಿದ್ದರೆ."
  ಯಾವಾಗಲೂ ನೆನಪಿಟ್ಟುಕೊಳ್ಳೋವಂತಹ ಸಾಲು......

  ಅದ್ಭುತ ಬರಹ....
  ಅದರಲ್ಲಿನ ಅರ್ಥಗಳಿಗೆ..... ಒಳಗಿನ ಭಾವಗಳಿಗೆ
  ಮಾತಾಡೋಕೆ ಏನಿದೆ ದೊರೆಯೇ,,,,


  ReplyDelete
 2. baraha chendaa iddu.... kavite odida haage....innomme nanna manassanne yaaroo kaddu odida haage.huguchchave saalagideyeno...... magadomme sunadara shabda g embante....super

  ReplyDelete
 3. ಚೆನ್ನಾಗಿದೆ
  ಹೌದು, ಜಗತ್ತು ದೇವದಾಸನಿಗಾಗಿ ಮಿಡಿಯಿತೆ ಹೊರತು ಪಾರೂಗಾಗಿ ಅಲ್ಲ
  ಸೀತೆಯ ವನವಾಸದ ಕಥೆ ಇದೆಯೇ ಹೊರತು ಉರ್ಮಿಳೆಯ ರಾಣಿವಾಸದ ಕಥೆ ಇಲ್ಲ
  ನುಂಗುವ ನೋವು ಕೆಲವೊಮ್ಮೆ ಹಾಡೂ ಆಗದು

  ReplyDelete
 4. ಚೆನ್ನಾಗಿದೆ..

  ನೋವಿನಲ್ಲಿರುವಾಗಲೇ ನಮಗೆ ಭಾಂದವ್ಯಗಳ ಬಗ್ಗೆ ಸ್ಪಷ್ಟ ಅರಿವಾಗುವುದು.

  ReplyDelete
 5. ನಗು -ಅಳು ಎರಡೂ ಹುಟ್ಟಿನ ಮೂಲಗಳೇ. ಹುಟ್ಟಿದ ಮಗು ಅತ್ತರೆ ಮನೆಯಲ್ಲೆಲ್ಲ ನಗುವಿನ ಬೆಳಕು. ನಕ್ಕು ನಕ್ಕು ಕಣ್ಣಲ್ಲಿ ನೀರು ತುಂಬುತ್ತದೆ. ಎಲ್ಲೋ ಅಳುವಿನಲ್ಲೊಂದು ನಗು ಸುಳಿದು ಹೋಗುತ್ತದೆ. ಇದೆರಡು ಜೀವನದ ಅತ್ಯುತ್ತಮ ಕ್ಷಣಗಳಂತೆ... ಒಂದೆರಡಲ್ಲ ತುಂಬಾ ನೆನಪಿನಲ್ಲಿರುವ ಸಾಲುಗಳನ್ನು ಪೋಣಿಸಿ ಇಟ್ಟಿದ್ದೆ ಶ್ರೀ ...

  ತುಂಬಾ ಚಂದ ...

  ReplyDelete
 6. ಹೌದು ಗೆಳೆಯಾ ... ನೋವ ಕಥಾನಕವೇ ನಮಗೆ ಹೆಚ್ಚು ಆಪ್ತವಾಗುತ್ತದೆ. ನಾವು ನೋವಿಗೆ ಕೊಡುವ "ಬೆಲೆ" ಅದಕ್ಕೆ ಕಾರಣವೇನೋ ...? .
  ಮನಸ್ಸಿನ ದ್ವಂದ್ವಗಳನ್ನು ಅಕ್ಷರೀಕರಿಸುವ ತಮ್ಮ ಪ್ರತಿಭೆ ಹಲವಾರು ಬಾರಿ ನನ್ನನ್ನು ಮಂತ್ರ ಮುಗ್ದನನ್ನಾಗಿಸಿದೆ.

  ReplyDelete