Friday, January 11, 2013

ಗೊಂಚಲು - ಐವತ್ತೆಂಟು.....

ಕನಸೇ.....

ಬದುಕು ಕಸಿದುಕೊಂಡ ಸಾವಿರಾರು ಖುಷಿಗಳಲ್ಲಿ 
ನೀನೂ ಒಂದು ಖುಷಿ ಎಂದುಕೊಂಡು 
ನಿನ್ನ ಮರೆಯಲೆತ್ನಿಸಿದೆ....
ಆದರೆ -
ಜೀವ ಭಾವಗಳಲ್ಲಿ ಬೆರೆತುಹೋಗಿ 
ಚಿತ್ತ ಭಿತ್ತಿಯಲಿ ಕನಸುಗಳಿಗೆ 
ಉಸಿರನಿತ್ತವಳು ನೀನು...
ಖುಷಿಯಿಲ್ಲದೇ ಬದುಕಿಯೇನು...
ಕನಸೇ ಇಲ್ಲದೆ ಹೇಗೆ ಬದುಕಿಯೇನು..???

ನಿಚ್ಛಳ ಬೆಳದಿಂಗಳು...
ಮಂದ ಮಾರುತ...
ರಾತ್ರಿ ರಾಣಿಯ ಗಂಧ...
ಮುಂಜಾನೆ ಅಂಗಳದಲಿ ಇಬ್ಬನಿ ತಬ್ಬಿದ 
ಪಾರಿಜಾತದ ರಂಗೋಲಿ...
ಇವೆಲ್ಲ ನಿನ್ನ ಕೆನ್ನೆ ಗುಳಿಯ ಒನಪು 
ಮತ್ತು 
ನಿನ್ನ ಹರಡಿದ ಹೆರಳ ಕಂಪ 
ನೆನಪ ಹೊತ್ತು ತಂದು ಈಗಲೂ ಕಾಡುತ್ತವೆ.
ರಾತ್ರಿಯ ನೀರವ ಮೌನದಲ್ಲಿ ಅರಚುವ 
ಜೇಡರ ಹುಳದ ಗಿಜಿಗಿಜಿ ಸದ್ದು 
ನಿನ್ನ ಗೆಜ್ಜೆ ನಾದದಂತೆ ಕೇಳಿ 
ಈಗಲೂ ನನ್ನೆದೆ ಡಮರುಗವಾಗುತ್ತೆ.

ನಿನ್ನ ಜೊತೆ ನಡೆವಾಗ
ಮೌನ ಗುನುಗುವ ಪಿಸುಮಾತು...
ಅಮಾವಾಸ್ಯೆಯ ಕತ್ತಲಲೂ
ಹೊಳೆವ ನಿನ್ನ ಮುಗುಳ್ನಗು...
ನನ್ನ ಕಾಡಲೆಂದೇ
ಹೊಯ್ದಾಡುವ ನಿನ್ನ ಮುಂಗುರುಳು...
ಕಟ್ಟಿ ಕೊಡುತಿದ್ದ 
ಸಾವಿರ ಹೊಂಗನಸುಗಳು...
ಎಲ್ಲ ನಲುಗಿ ಹೋದವು...
ಸಮಾಜದ
ಅರಿವಿಗೆ ಕುರುಡಾದ - ಪರಂಪರೆಯ 
ಕೆಂಗಣ್ಣಿಗೆ ಸಿಲುಕಿ...

ನಿನ್ನ ನೋವಿನ ನಿಟ್ಟುಸಿರು...
ಸಮಾಜವ ಜಯಿಸಲಾರದ ನನ್ನ ಹೇಡಿತನ...
ಸಂತೆ ನೆರೆದ ಸಂಸಾರದಲೂ
ಇಬ್ಬರದೂ
ಏಕಾಂಗಿ ಬಾಳು...
ನಮ್ಮನ್ನು ನಾವೂ ಪ್ರೀತಿಸಿಕೊಳ್ಳಲಾಗದ
ನಮ್ಮೊಳಗಿನ ಗೋಳು...

ಕೊಟ್ಟ ಕೊನೆಯಲಿ ನೀ ಆಡಿದ ಮಾತು :
ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ 
ನನ್ನ ಕಿರುಬೆರಳ ಮಚ್ಚೆಯಲಿ 
ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...

3 comments:

  1. ನನ್ನ ಕಾಡಲೆಂದೇ
    ಹೊಯ್ದಾಡುವ ನಿನ್ನ ಮುಂಗುರುಳು...

    ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ
    ನನ್ನ ಕಿರುಬೆರಳ ಮಚ್ಚೆಯಲಿ
    ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
    ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...

    ಸುಂದರ ಕಲ್ಪನೆ....
    ಚಂದದ ಕವನ...

    ReplyDelete
  2. ಏಕೋ ನೆನಪಾದಳು 'ಅವಳು' ನನಗೂ.

    ಕೆಲ ಸಾಲುಗಳು ಅಪ್ರತಿಮ:
    1. ಕನಸೇ ಇಲ್ಲದೆ ಹೇಗೆ ಬದುಕಿಯೇನು..???
    2. ಈಗಲೂ ನನ್ನೆದೆ ಡಮರುಗವಾಗುತ್ತೆ.

    ReplyDelete
  3. ಸಂತೆ ನೆರೆದ ಸಂಸಾರದಲೂ
    ಇಬ್ಬರದೂ
    ಏಕಾಂಗಿ ಬಾಳು...
    ಇಷ್ಟವಾಯ್ತು :)

    ReplyDelete