Sunday, April 7, 2013

ಗೊಂಚಲು - ಅರವತ್ತೊಂಬತ್ತು.....

ಕಪ್ಪು ಮೋಡ - ನನ್ನ ಹುಡುಗಿ.....

ಅಮಾವಾಸ್ಯೆಯ ಕಪ್ಪು ಕತ್ತಲು
ಮೈಯ ಬಣ್ಣದಲ್ಲಿ...
ಕೋಟಿ ತಾರೆಗಳ ಸುಳಿ ಮಿಂಚಿದೆ
ಕಣ್ಣ ಬಯಲಲ್ಲಿ...

ನಿನ್ನ ಸ್ವಚ್ಛ ಒಲವ ಸೆಳವು

ಎನ್ನ ಬೆನ್ನ ಹುರಿಯ ಬಲವು...
ನೀ ಒಲಿದ ಘಳಿಗೆಯೆನ್ನ
ಬದುಕು ಪಡೆದ ಮೊದಲ ಗೆಲುವು...

ಕಪ್ಪೆಂದು ಹಳಿವುದದು

ಡೊಂಕು ಮನದ ಲೋಕದ ರೀತಿ...
ನಿನ್ನೆಡೆಗೆ ಸೆಳೆವುದೆನ್ನ
ಹುಳುಕಿಲ್ಲದ ನಿನ್ನ ಪ್ರೀತಿ...

ಕಪ್ಪಾದರೇನಂತೆ

ಸುಕ್ಕಾಗೋ ಮೈಯ ಬಣ್ಣ...
ನಮ್ಮೊಳಗೆ ಪಕ್ಕಾದ
ಒಲವಲಿದೆಯಲ್ಲ ನೂರು ಕನಸಿಗೀಗ ಮಳೆಬಿಲ್ಲ ಬಣ್ಣ...

ಬರಡಾದ ಎದೆ ನೆಲಕೆ

ಒಲವೊಂದೆ ಜೀವಜಲ ನೋಡ...
ಎನ್ನೆದೆಗೆ ಒಲವ ಸುರಿಸೋ
ನೀನೆನ್ನ ಕಪ್ಪು ಮೋಡ...

ಬೆಸೆಯದು ಬಂಧಗಳ

ಜಾತಿ, ಧರ್ಮ, ಬಣ್ಣಗಳ ಮಿತಿಯ ಭ್ರಾಂತಿ...
ಬದುಕ ಬೆಳಗುವುದೊಂದೆ ಅದು
ಒಲವ ಹೊಂಬೆಳಕ ಎದೆಯ ಕಾಂತಿ...

6 comments:

  1. ಚೆಂದ ಇದ್ದು :-)

    ReplyDelete
  2. 'ಬದುಕ ಬೆಳಗುವುದೊಂದೆ ಅದು' ಎನ್ನುವ೦ತೆ ಅದೇ ಒಲುಮೆಯ ಸಾಕ್ಷಾತ್ಕಾರ.

    ReplyDelete
  3. ಚೆನ್ನಾಗಿದೆ ಒಲವಿನ ಹಾಡು.. ಗೆಲುವಾಗಿ ಮುಂದುವರಿಯಲಿ ಬಾಳ ಪಯಣ..

    ReplyDelete
  4. ಕಪ್ಪು ಹುಡುಗಿ ತುಂಬಾ ಖುಷಿಯಾಗುತ್ತಾಳೆ.. ಒಮ್ಮೆ ತೋರಿಸು ಇದನ್ನು ಅವಳಿಗೆ..
    ಚೆನ್ನಾಗಿದೆ.. :)

    ReplyDelete
  5. ಕಪ್ಪು ಹುಡುಗಿಯ ಬಗೆಗಿನ ನಿಮ್ಮೀ ಪ್ರೀತಿ ತುಂಬಾ ಇಷ್ಟವಾಯ್ತು ....
    ಜಾರದಿರಲಿ ಈ ಒಲವು ...
    ಕಪ್ಪು ಹುಡುಗಿಯೊಟ್ಟಿಗಿನ ಬಾಳು ಬಣ್ಣದಿಂದ ಕೂಡಿರಲಿ ಗೆಳೆಯ :)

    ReplyDelete
  6. ಹೋಗುವಾಗ ಕತ್ತಲೆ ಬರುವಾಗ ಕತ್ತಲೆ ಬಂದು ಹೋಗುವ ನಡುವೆ ಕೂಡ ಕತ್ತಲೆ.. ಕತ್ತಲೆ ಕೂಡ ಕಪ್ಪು ಎಂದ ಮೇಲೆ ಹುಡುಗಿ ಕಪ್ಪಾದರೇನು. ಸುಂದರ ಕವನ ಶ್ರೀ

    ReplyDelete