Sunday, September 22, 2013

ಗೊಂಚಲು - ಎಂಬತ್ತು ಮತ್ತೇಳು.....

ಎರಡು ವಿರುದ್ಧ ಭಾವಗಳು.....

ನನ್ನೆಲ್ಲ ಹಗಲುಗನಸುಗಳಲ್ಲಿ - ಮುಸ್ಸಂಜೆಯ ಯಾವುದೋ ಮೌನ ವಿಷಾದದಲ್ಲಿ - ಸರಿ ರಾತ್ರಿ ಜಿನುಗೋ ಬೆವರಲ್ಲಿ - ಮುಂಬೆಳಗಿನ ಸವಿಗನಸಲ್ಲಿ - ಅಲ್ಲೆಲ್ಲ ಮನೆಮಾಡಿ ಸುಮ್ಮನೇ ಬೆಳದಿಂಗಳಂತೆ ನಕ್ಕು ಕಾಡುವ ಗುಳಿ ಕೆನ್ನೆಯ ಚೆಲುವಿನ ಅಮೂರ್ತ ಛಾಯೆಗೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."
ಎದುರಾ ಎದುರು ಕಣ್ಣಲ್ಲಿ ಕಣ್ಣಿಡದೆಯೇ ನನ್ನ ಕಣ್ಣಲ್ಲಿ ಕನಸ ತುಂಬಿದವಳು - ಮೈಯಾಗಿ ದಕ್ಕದೆಯೇ ಎದೆಯ ಬೆವರಾಗುವಾಕೆ - ಪಕ್ಕ ಕೂತು ಹೆಗಲುತಬ್ಬದೆಯೇ ನನ್ನ ನಿಟ್ಟುಸಿರುಗಳಿಗೆ ಸಾಂತ್ವನವಾಗಬಲ್ಲವಳು - ಮೂರ್ತವಾಗಿ ಬೆರಳಲಿ ಬೆರಳ ಬೆಸೆದು ಹೆಜ್ಜೆಗೆ ಹೆಜ್ಜೆ ಜೋಡಿಸದೆಯೇ ಬದುಕ ದಾರಿಗೆ ಭರವಸೆಯ ಬೆಳಕನೀಯುವವಳು ನನ್ನ ಒಲವಿನ ಕಲ್ಪನಾ ಛಾಯೆ...
ಬುದ್ಧಿಯ ಮಾತ ಮೀರಿ ಮನಸೆಂಬುದು ಆ ನನ್ನ ಛಾಯೆಗೆ ಸುತ್ತಲಿನ ಯಾವುದೋ ಮೂರ್ತಿಯ ರೂಪವ ಆರೋಪಿಸಿ, ಚಿತ್ರಕ್ಕೆ ಬಣ್ಣ ತುಂಬಿ, ಛಾಯೆಗೆ ಮತ್ತು ಅದರೊಂದಿಗಿನ ನನ್ನ ಬಂಧಕ್ಕೆ ಹೊಸ ಹೆಸರ ನೀಡ ಬಯಸಿದರೆ - ಆ ನಾಮಕರಣ ಶಾಸ್ತ್ರದ ಮುಂಚಿನ ದಿನವೇ ನನ್ನ ಉಸಿರು ನಿಲ್ಲಲಿ...
ಪ್ರೇಮ ಮೂರ್ತರೂಪದಲ್ಲಿ ದಕ್ಕದಿರುವುದರಲ್ಲಿಯೇ `ಈ' ಬದುಕಿಗೆ ಒಳಿತಿದೆ ಅನ್ನಿಸ್ತಿದೆ...

*****

ಕಪ್ಪು ಕಲ್ಯಾಣೀ -
ಕಾಲನ ಕತ್ತಿ ನನ್ನ ಕತ್ತ ಕತ್ತರಿಸುವುದರ ಬಗೆಗೆ ಭಯವಿಲ್ಲ ನನ್ನಲ್ಲಿ... 
ಅದು ಎಲ್ಲದರ ಅಂತಿಮ ಸತ್ಯ... 
ಅದನ್ನ ಒಪ್ಪಿಕೊಂಡಾಗಿದೆ...
ಆದರೂ - 
ನಿನಗೊಂದು ಹಾಯನ್ನೂ ಹೇಳಲಾಗದೇ - ನಿನ್ನದೊಂದು ಹೂನಗೆಯನ್ನೂ ಕಾಣದೇ ಥಟ್ ಅಂತ ಅಳಿದು ಹೋಗಿಬಿಟ್ಟರೆ... 
ಅನುಕ್ಷಣವೂ ಕಾಡುವ ಭಯ ಅದೊಂದೇ...  

5 comments:

  1. ಕೃಿಷ್ಣಸುಂದರಿಯ ಅಮಲು ಸಾಂಧರ್ಬಿಕವಾಗಿದೆ, ಅವಳು ಹಾಗೆಯೇ ಎಲ್ಲೆಲ್ಲಿಯೋ ನುಸುಳಿ; ಇನ್ನೇಲ್ಲಿಯೋ ಬಂದು ಕಾಡುವ ಪರಿ ನಿದ್ದೆಗಣ್ಣಲ್ಲೂ ಎಚ್ಚರವಿರ ಬೇಕಷ್ಟೆ.

    ReplyDelete
  2. ಆ ನಿನ್ನ ಕಪ್ಪು ಹುಡುಗಿಯ ಮೇಲೆ ಅದೆಷ್ಟು ಬೇರೆ ಬೇರೆ ಭಾವಗಳ ಬರೀತೀಯಾ .ಎಲ್ಲಾ ಭಾವಗಳಲೂ ಏನೋ ಹೊಸದು ಕಾಣಿಸುತ್ತೆ .

    ಮೊಗೆ ಮೊಗೆದು ಕೊಡೋ ಅಷ್ಟಿರೋ ಒಲವ ಪಡೆಯೋಕಾದ್ರೂ ಒಮ್ಮೆ ಸಿಕ್ಕಾಳು ಬಿಡು ..
    ಇಷ್ಟೇ ಹೇಳೋಕಾಗೋದು ನಂಗಿಲ್ಲಿ .

    ReplyDelete