Wednesday, October 23, 2013

ಗೊಂಚಲು - ತೊಂಬತ್ತು ಮತ್ತು ಒಂದು.....

ಭಾವ ಬಂಧಕ್ಕೆ ಹೆಸರಿಡುವ ಕುರಿತು.....

ಮೊದಲೇ ಹೇಳಿಬಿಡುತ್ತೇನೆ – ನಾನಿಲ್ಲಿ ಹೇಳಿರೋ ವಿಚಾರ ಮತ್ತು ಭಾವ ಕೇವಲ ನನ್ನ ಪ್ರಾಮಾಣಿಕ ಭಾವ ಮತ್ತು ನಂಬಿಕೆ ಅಷ್ಟೇ... ಇನ್ಯಾರದೇ ಭಾವಗಳ – ಬೆಸೆದ ಬಂಧಗಳ ಅವಹೇಳನೆ ಖಂಡಿತಾ ಅಲ್ಲ... ಯಾಕೆ ಇದನ್ನ ಹೇಳುತ್ತಿದ್ದೇನಂದ್ರೆ ನಾನಿಲ್ಲಿ ಈಗ ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಸ್ನೇಹದ ಬಗ್ಗೆ ಮಾತಾಡುತ್ತಿದ್ದೇನೆ... ಅದರಲ್ಲೂ ಗಂಡು ಪ್ರಾಣಿಯ ಕಣ್ಣಿಂದ ಹೆಚ್ಚು ನೋಡುತ್ತಿದ್ದೇನೆ... ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧವೊಂದಕ್ಕೆ ರಕ್ತ ಸಂಬಂಧೀ ಹೆಸರಿಡುವುದು ಸ್ವಲ್ಪ ಕಷ್ಟ ನನಗೆ... ಬಂಧವೊಂದು ಬೆಳೆಯುತ್ತ ಬೆಳೆಯುತ್ತ ಸಹೋದರ ಭಾವಕ್ಕೆ ತಿರುಗುವುದು ಬೇರೆ ಮತ್ತು ಪರಿಚಯದ ಮೊದಲ ಹಂತದಲ್ಲಿಯೇ ಹಾಗಂತ ಕೂಗುವುದು ಬೇರೆ... ನಡುವೆ ತುಂಬ ವ್ಯತ್ಯಾಸ ಇದೆ ಅನ್ಸುತ್ತೆ ನಂಗೆ...

ರಕ್ತ ಸಂಬಂಧಗಳಲ್ಲಿ ಪ್ರತೀ ಸಂಬಂಧಕ್ಕೂ ಒಂದು ಸ್ಪಷ್ಟ ಹೆಸರಿದೆ... ಮತ್ತೆ ನಾವದನ್ನು ಹಾಗೆಯೇ ಗುರುತಿಸಿ ಕರೆಯುತ್ತೇವೆ ಕೂಡ... ಅಮ್ಮ, ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮ, ಅತ್ತೆ, ಮಾವ ಹೀಗೆ ಆ ಆ ಸಂಬಂಧಗಳಿಗೆ ಅದದೇ ಹೆಸರಿಂದ ಕರೆಯುವ ನಾವು ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧಕ್ಕಿರುವ ಹೆಸರು ‘ಸ್ನೇಹ’ವನ್ನು ಮಾತ್ರ ಬರೀ ಸ್ನೇಹ ಅಂತ ಒಪ್ಪಿಕೊಂಡು ಕರೆಯುವಲ್ಲಿ ಯಾಕೆ ಸೋಲುತ್ತೇವೆ..? ಅದರಲ್ಲೂ ಮುಖ್ಯವಾಗಿ ಭಿನ್ನ ಲಿಂಗದ ಸ್ನೇಹದಲ್ಲಿ.!! ಹೆಚ್ಚಿನ ಸಂದರ್ಭದಲ್ಲಿ ಭಿನ್ನ ಲಿಂಗದ ಸ್ನೇಹವನ್ನು ಸ್ನೇಹ ಅಂತಲೇ ಗುರುತಿಸದೇ ಅದಕ್ಕೂ ರಕ್ತ ಸಂಬಂಧೀ ಅಕ್ಕ, ತಂಗಿ, ಅಣ್ಣ, ತಮ್ಮ ಎಂಬ ಹೆಸರಿಡಲು ಹೋಗುತ್ತೇವೆ... ಅದಲ್ಲದಿದ್ದರೆ ಸ್ನೇಹವನ್ನು ಪ್ರೇಮವಾಗಿಸಲು ಹೊರಟುಬಿಡುತ್ತೇವೆ ಏಕೆ..?? ಭಿನ್ನ ಲಿಂಗದ ಗೆಳೆತನವೊಂದು ಇದು ಬರೀ ಗೆಳೆತನ ಅಂತ ಪ್ರತೀ ಕ್ಷಣ ಕೂಗಿ ಕೂಗಿ ಹೇಳಬೇಕಾದ ಅನಿವಾರ್ಯತೆ ಯಾಕಿದೆ..???

ಬಹುಶಃ ಸಹಜ ಮಧುರ ಬಂಧವೊಂದಕ್ಕೆ ಅನಗತ್ಯ ರೂಪ, ಬಣ್ಣಗಳ ಆರೋಪಿಸಿ ಬಾಯಿ ಚಪಲ ತೀರಿಸಿಕೊಳ್ಳೋ ಸಮಾಜ ನಮ್ಮ ಸುತ್ತ ಇರೋವರೆಗೂ (ಇಂಥ ಸಮಾಜ ಸೃಷ್ಟಿಯಲ್ಲಿ ನಾವೂ ಭಾಗಿಗಳೇ ಆಗಿರಬಹುದು) ಬಂಧವೊಂದಕ್ಕೆ ಸಂಬಂಧದ ಮುಖವಾಡದ ಹೆಸರಿಡುವ ಅನಿವಾರ್ಯತೆ ಚಾಲ್ತಿಯಿದ್ದೇ ಇರುತ್ತೇನೋ... ಅಲ್ಲೊಬ್ಬರು – ಇಲ್ಲೊಬ್ಬರು ಬೆಸೆದ ಎಲ್ಲ ಬಂಧಗಳಲ್ಲೂ ಗೆಳೆತನವನೇ ಕಾಣಹೊರಟು, ಸಮಾಜದ ಮಿತಿಯ ಮೀರಬಯಸಿದರೆ ಅದಷ್ಟು ಸುಲಭ ಸಾಧ್ಯವಲ್ಲ ಅನ್ನೋದು ನನ್ನ ಅನುಭವ... ಯಾಕೇಂದ್ರೆ ನಾವೂ ಇದೇ ಸಮಾಜದ ಒಂದು ಭಾಗ ತಾನೆ...

ಭಿನ್ನ ಲಿಂಗದ ಸ್ನೇಹಕ್ಕೆ ಅನೈತಿಕ ಭಾವದ ಆರೋಪ ತುಂಬುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದಾದ ತಾನು ನಿಭಾಯಿಸಲಾಗದ್ದನ್ನು ಇನ್ಯಾರೋ ನಿಭಾಯಿಸಿದಾಗ ಉಂಟಾಗೋ ಮಾತ್ಸರ್ಯದಿಂದಿರಬಹುದಾ.? ಸಮಾನ ಲಿಂಗದ ಸ್ನೇಹದಲ್ಲಾದರೆ ಅನೈತಿಕತೆಯ ಆರೋಪ ಇಲ್ಲದಿದ್ದರೂ ಅಲ್ಲೂ ಮಾತ್ಸರ್ಯ ಮತ್ತು ಇಗೋಗಳು ಆ ಸ್ನೇಹದ ಬಗೆಗೂ ಕೀಳಾಗಿ ಮಾತಾಡುವಂತೆ ಪ್ರೇರೇಪಿಸುತ್ತಾ.?? ಕಷ್ಟ ಕಷ್ಟ...

ಬಂಧವೊಂದನ್ನು ನಿಭಾಯಿಸೋ ತಾಕತ್ತು ನಮ್ಮ ಮನಸಿನ ಸಂಸ್ಕಾರದಿಂದ ಬರೋದು... ಪ್ರತೀ ಸಂಬಂಧಕ್ಕೂ ಅದರದೇ ಆದ ಭಾವನಾತ್ಮಕತೆ ಮತ್ತು ಜವಾಬ್ದಾರಿಗಳಿರುತ್ತವೆ... ಅಣ್ಣ, ತಮ್ಮ ಅಂತ ಕರೆಸಿಕೊಂಡವರೆಲ್ಲ ಆ ಸಂಬಂಧದ ಜವಾಬ್ದಾರೀನ ನಿಭಾಯಿಸೊಲ್ಲ... ನಿಭಾಯಿಸಬಲ್ಲವನು ತಂಗಿಯಲ್ಲೂ ಗೆಳತಿಯನ್ನು ಕಾಣಬಲ್ಲ... ನಿಭಾಯಿಸುವ ಸಂಸ್ಕಾರ ಇಲ್ಲದೇ, ಮನಸಿನ ವಿಕಾರ ಇದ್ದವನು ಎಂಥ ಸಂಬಂಧಕ್ಕೂ ಅಸಹ್ಯವನ್ನು ಮೆತ್ತಬಲ್ಲ... ತಂದೆಯೇ ಮಗಳನ್ನು ಭೋಗವಸ್ತುವಾಗಿಸಿಕೊಂಡ ಮನುಷ್ಯ ಸಮಾಜ ನಮ್ಮದು... ಅದು ಮನೋವಿಕಾರದ, ಕ್ರೌರ್ಯದ ಉತ್ತುಂಗ... ಸ್ವಸ್ಥ ಮನಸಿನ ಪ್ರಜ್ಞಾವಂತರಾದರೆ ಭಾವ ಬಂಧಕ್ಕೆ ಯಾವುದೇ ಹೆಸರಿಡದೆಯೂ ಸ್ನೇಹವಾಗಿಯೇ ಗೌರವಯುತವಾಗಿ ನಡಕೊಳ್ಳಬಲ್ಲ... ಗೆಳತಿ ವೇಶ್ಯೆಯೇ ಆದರೂ ಅವಳನ್ನು ಬರೀ ಗೆಳತಿ ಮಾತ್ರವಾಗಿಯೇ ನಡೆಸಿಕೊಳ್ಳಬಲ್ಲ... ಒಪ್ಪುತ್ತೇನೆ ಅಂಥವರು ಅಪರೂಪ ಮತ್ತು ಮೊದಲಲ್ಲೇ ಅಂಥ ಪ್ರಜ್ಞಾವಂತರನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ...

ನಾನಿಲ್ಲಿ ಪ್ರಾಮಾಣಿಕ ಭಾವನಾತ್ಮಕತೆಯಿಂದ ಅಣ್ಣ, ತಮ್ಮ, ಅಕ್ಕ, ತಂಗಿ ಅಂತ ಪರಿಭಾವಿಸಿ ಬಾಂಧವ್ಯ ಬೆಸೆದುಕೊಂಡವರನ್ನು ಅವಮಾನಿಸಿ ಅವಹೇಳನ ಮಾಡುತ್ತಿಲ್ಲ... ನನಗೂ ಅಂಥ ಎಷ್ಟೋ ಅಕ್ಕ, ತಂಗಿಯರಿದ್ದಾರೆ... ಮತ್ತು ನಾನವರನ್ನು ತುಂಬ ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಕೂಡ...  ಆದರೆ ಅಪರಿಚಿತ ಭಿನ್ನಲಿಂಗಿಯೊಬ್ಬ ಎದುರಾಗಿ ಹಾಯ್ ಅಂದ ತಕ್ಷಣವೇ ಅದಕ್ಕೆ ರಕ್ತಸಂಬಂಧೀ ಸಂಬಂಧಗಳ ಹೆಸರಿಡುವುದನ್ನು ಪ್ರಶ್ನಿಸುತ್ತಿದ್ದೇನೆ... ಪರಿಚಯ ಹಳೆಯದಾಗಿ, ಅಭಿರುಚಿಗಳು, ಭಾವಗಳು ಬೆಸೆದುಕೊಂಡು ಇಂಥ ಅಣ್ಣನೋ, ತಮ್ಮನೋ, ಅಕ್ಕ – ತಂಗಿಯರೋ ನನಗೂ ಇದ್ದಿದ್ದರೆ ಚೆನ್ನಿತ್ತು ಎಂಬ ಭಾವ ಪ್ರಾಮಾಣಿಕವಾಗಿ ಮೂಡಿ ಆಗ ಸ್ನೇಹಕ್ಕೆ ರಕ್ತ ಸಂಬಂಧದ ನಾಮಕರಣ ಮಾಡಿದರೆ ಅದನ್ನು ಖಂಡಿತಾ ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ... ಅದಿಲ್ಲದೇ ಎದುರಾದ ತಕ್ಷಣ ಒಬ್ಬ ಹೆಣ್ಣು ಅಣ್ಣನೋ ತಮ್ಮನೋ ಅಂತ ಕರೆದರೆ ನಂಗಲ್ಲಿ ಅವರ ಅಭದ್ರತಾ ಭಾವವೇ ಹೆಚ್ಚು ಕಾಣುತ್ತೆ... ಸಮಾಜಕ್ಕೆ ಉತ್ತರಿಸಬೇಕಾದ ಮತ್ತು ಎದುರಿನ ವ್ಯಕ್ತಿಯ ಅಪರಿಚಿತತೆಯ ಭಯದಿಂದ ಮೂಡಿದ ಅಭದ್ರತಾಭಾವದಿಂದ ತನ್ನನ್ನ ತಾನು ರಕ್ಷಿಸಿಕೊಳ್ಳಲು ಪಕ್ಕನೆ ಒಂದು ರಕ್ತಸಂಬಂಧೀ ಹೆಸರಿಟ್ಟುಬಿಡುವುದು... ಇಂದಿನ ಸಾಮಾಜಿಕ ಪರಿಸ್ಥಿತೀಲಿ ಅದು ಒಂದಷ್ಟು ಮಟ್ಟಿಗೆ ಅಗತ್ಯವೂ ಹೌದೇನೋ... ಆದರೆ ಪ್ರತೀ ಸಂಬಂಧದಲ್ಲೂ ಒಂದು ಶುದ್ಧ ಸ್ನೇಹಭಾವವನ್ನು ಹುಡುಕೋ ನಂಗದು ಆತ್ಮವಂಚನೆಯಂತೆ ಗೋಚರಿಸುತ್ತೆ... 

ಬೀದಿ ತಿರುವಿನಲ್ಲಿ ನಿಂತು ಎದುರಿಂದ ಬರ್ತಿರೋ ಹುಡುಗೀನ ವಯೋಸಹಜವಾದ ಆಸೆಗಣ್ಣಿಂದ ನೋಡ್ತಿರ್ತೇನೆ... ಆಕೆ ಎದುರು ಬಂದು ತಕ್ಷಣ ತನ್ನ ಸರಳ ರಕ್ಷಣಾ ತಂತ್ರ ಬಳಸಿ ಅಣ್ಣ ಅಂತ ಕೂಗ್ತಾಳೆ... ನಾನು ಅಪ್ರಯತ್ನವಾಗಿ ನಗ್ತೇನೆ... ನಾನೂ ಬಾಯ್ತುಂಬ ತಂಗೀ ಅಂತೀನಿ... ಹಾಗೆ ತಂಗಿ ಅಂದ ತಕ್ಷಣವೇ ಅವಳ ಹೆಣ್ತನದೆದುರಿನ ಆಸೆ ಕಮ್ಮಿ ಆಗಿಬಿಡುತ್ತಾ..? ಅಣ್ಣ ಅಂದ ಹುಡುಗಿಗೂ ತಕ್ಷಣದಿಂದಲೇ ಬೆನ್ನಿಗೆ ಬಿದ್ದ ಅಣ್ಣನೊಂದಿಗೆ ವರ್ತಿಸಿದಂತೆಯೇ ವರ್ತಿಸೋಕೆ ಸಾಧ್ಯವಾಗುತ್ತಾ..? ಹಾಗೆ ಆಗಲ್ಲ ಅಂದಾಗ ಅಣ್ಣ ತಂಗಿ ಎಂಬ ಸಂಬಂಧಕ್ಕೆ ಅಪಚಾರ ಮಾಡಿದಂತಲ್ಲವಾ..? ಭೌತಿಕವಾಗಿ ಅನಿವಾರ್ಯವೆನಿಸಿದರೂ ಭಾವನಾತ್ಮಕವಾಗಿ ಆತ್ಮವಂಚನೆಯ ಭಾವ ಕಾಡಲಾರದಾ..? ಮುಖವಾಡ ಅನ್ನಿಸದಾ..? 

ಒಬ್ಬ ಗೆಳೆಯ ಅಥವಾ ಗೆಳತಿ ಜೊತೆಗಿರ್ತಾ ಇರ್ತಾ ಒಡನಾಟದಲ್ಲಿ ಭಾವಗಳ ಬೆಸೆದುಕೊಳ್ತಾ ಅಣ್ಣ, ತಂಗಿ, ಅಕ್ಕ, ತಮ್ಮರಿಗಿಂತ ಆತ್ಮೀಯರಾಗಬಹುದು... ಒಬ್ಬ ಗೆಳತಿ ಒಮ್ಮೆ ತುಂಟ ತಂಗಿ, ಒಮ್ಮೆ ಕಣ್ಣೀರೊರೆಸೋ ಅಮ್ಮ, ಒಮ್ಮೆ ಕಿವಿ ಹಿಂಡೋ ಅಕ್ಕ ಎಲ್ಲ ಆಗಬಲ್ಲಳು... ಅಂತೆಯೇ ಗೆಳೆಯ ಕೂಡಾ ತಮ್ಮ, ಅಣ್ಣ, ಅಮ್ಮ ಎಲ್ಲ ಆಗಬಲ್ಲ... ಅದು ಸ್ನೇಹದ ತಾಕತ್ತು... ಸ್ನೇಹಭಾವಕ್ಕೊಂದು ವಿಶೇಷ ಬಲವಿದೆ... ಎಲ್ಲ ಹರವಿ ಹಗುರಾಗಬಹುದಾದ ಬಲ... ಅಮ್ಮನೆದುರು ಕೂಡ ಸ್ನೇಹಭಾವ ಮೇಳೈಸದೇ ಹೋದರೆ ಕೆಲವನ್ನು ಹಂಚಿಕೊಳ್ಳಲಾಗದೇನೋ... ಒಮ್ಮೆ ಪ್ರಾಮಾಣಿಕ ಸ್ನೇಹಭಾವ ಮೈಗೂಡಿದರೆ ನಮ್ಮ ತಪ್ಪುಗಳನ್ನು ಕೂಡ ಸುಲಭವಾಗಿಯೇ ಒಪ್ಪಿಕೊಂಡು ತಿದ್ದಿಕೊಳ್ಳಬಹುದು... ಅದಕ್ಕೇ ಎಲ್ಲ ಬಂಧಗಳಲ್ಲೂ ಸ್ನೇಹಭಾವದ ಪಾಲು ಜಾಸ್ತಿ ಇರ್ಲಿ ಅಂತೀನಿ ನಾನು... ರಕ್ತ ಸಂಬಂಧದಲ್ಲಿ ಕೂಡ ಸ್ನೇಹಭಾವದ ಪಾಲಿರ್ಲಿ ಅಂತೀನಿ... ಅದಕ್ಕೇ ಸ್ನೇಹವನ್ನು ಸ್ನೇಹವೆಂದೇ ಗುರುತಿಸಲು ಬಯಸ್ತೀನಿ... ಗೆಳೆತನಾನ ಗೆಳೆತನ ಅಂತಲೇ ಗುರುತಿಸಿದಾಗ ಹೆಚ್ಚು ಸಂತೋಷಪಡ್ತೇನೆ...

ಹಾಗೆಯೇ ನಮ್ಮದು ಪುರುಷ ಪ್ರಧಾನ ಸಮಾಜ ವ್ಯವಸ್ಥೆ... ಸಹಜವಾಗಿಯೇ ಎಲ್ಲ ಭೌತಿಕ ಸಂಬಂಧಗಳಲ್ಲೂ ಗಂಡು ಹಿರಿಯನಾಗಿರೋದು ವಾಡಿಕೆ... ಮನಸ್ಥಿತಿ ಕೂಡ ಹಾಗೆಯೇ ರೂಪುಗೊಂಡಿದೆ... ಹಾಗಾಗಿ ಎದುರಿನ ಹೆಣ್ಣು ಜೀವ ಹಿರಿಯಳು ಅಂತಾದ ಕೂಡಲೇ ಭಾವನಾತ್ಮಕ ಸಂಬಂಧದಲ್ಲಿ ಕೂಡ ಆಕೆ ತಮ್ಮ ಅಂತ ಕೂಗಿದಾಗ ಗಂಡಿಗೆ ಒಪ್ಪಿಕೊಳ್ಳೋದು ಸುಲಭ... ಯಾಕೇಂದ್ರೆ ಆಕೆಯ ಹಿರಿತನ ಹುಡುಗನಲ್ಲಿ ಆಕೆ ತನಗಿಂತ ಪ್ರಬುದ್ಧಳು, ಹೆಚ್ಚು ಬದುಕ ಕಂಡವಳು, ಬಂಧಗಳ ದೃಢವಾಗಿ ಸಲಹಬಲ್ಲವಳು, ತನಗೆ ಮಾರ್ಗದರ್ಶಕವಾಗಬಲ್ಲವಳು ಎಂಬ ಗೌರವ ಭಾವ ಮೂಡಿಸಿ ತಮ್ಮ ಅನ್ನಿಸಿಕೊಳ್ಳಲು ಸುಲಭವಾಗುತ್ತೆ ಕೂಡ... 

ಅದೇ ಹೆಣ್ಣು ತನಗಿಂತ ಚಿಕ್ಕವಳು ಎಂದಾಕ್ಷಣ ಮೊದ ಮೊದಲ ಪರಿಚಯದಲ್ಲಿ ಆಕೆ ಬರೀ ಹೆಣ್ಣಾಗಿ ಗೋಚರಿಸುವ ಸಂದರ್ಭವೇ ಹೆಚ್ಚು... ಬರೀ ಹೆಣ್ಣು ತಾನು ಗಂಡಿನ ಕಣ್ಣನ್ನು ಮಾತ್ರ ತುಂಬಬಲ್ಲಳು... 

ಇಲ್ಲಿ ಕಿರಿಯ ಹೆಣ್ಣು ಜೀವಗಳಿಗೆ ಇನ್ನೂ ಒಂದು ಸಮಸ್ಯೆ ಇದೆ... ಸ್ನೇಹವ ನಿಭಾಯಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಕಳಕೊಂಡ ಗಂಡು ಪ್ರಾಣಿಗಳು ಒಂದು ಚಂದದ ಗೆಳೆತನದ ನಡುವೆ ಅವಸರವಸರವಾಗಿ ಪ್ರೇಮದ ಪ್ರವೇಶ ಮಾಡಿಸಿಬಿಡೋದು... ಗೆಳತಿ ತಾನು ಸ್ತ್ರೀಸಹಜವಾದ ಅಮ್ಮನ ಮನಸಿನ ಮೃದುಮಾತಿನಿಂದ ಆತ್ಮೀಯತೆ, ಕಾಳಜಿ ತೋರಿದ ಕೂಡಲೇ ಅದನ್ನು ಅವಳ ಪ್ರೇಮ ಅಂದುಕೊಂಡು, ಕಾಯ್ದುಕೊಳ್ಳಬೇಕಿದ್ದ ಸ್ನೇಹಕ್ಕೆ ಪ್ರೇಮದ ಹೆಸರಿಟ್ಟು ನಿವೇದನೆ ಮಾಡಿಕೊಳ್ಳೋದು... ಒಬ್ಬ ಹುಡುಗಿಯ ಬದುಕಲ್ಲಿ ಒಂದೆರಡಾದರೂ ಇಂಥ ಸಂದರ್ಭಗಳಿದ್ದೇ ಇರುತ್ತೇನೋ... ಅಲ್ಲಿಗೆ ಹುಡುಗರೊಂದಿಗಿನ ಗೆಳೆತನದಲ್ಲಿ ಒಂದು ಸಣ್ಣ ಭಯ, ಅಭದ್ರತೆ ಸದಾ ಇರೋದು ಸಹಜ ಹೆಣ್ಣಿಗೆ... ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಮೊದಲಿಗೇ ಅಣ್ಣ - ತಮ್ಮ ಅಂತ ಕರೆದುಬಿಡೋದು ಉತ್ತಮ ಎಂಬ ಮನಸ್ಥಿತಿಗೆ ಹೆಣ್ಣು ಬಂದಿದ್ರೆ ಅದೂ ತಪ್ಪೆನ್ನಲಾಗದು ಇಂದಿನ ಸಾಮಾಜಿಕ ಪರಿಸ್ಥಿತೀಲಿ...

ಮನದಲ್ಲಿ ಪ್ರಾಮಾಣಿಕವಾಗಿ ಈತ/ಈಕೆ ಚಂದದ ಸ್ನೇಹಿತ/ಸ್ನೇಹಿತೆ ಅಂತ ಪರಿಭಾವಿಸಿಕೊಂಡು ಅಂತ ಸ್ನೇಹದ ಬಗ್ಗೆ ತುಂಬ ಗೌರವ ಇಟ್ಟುಕೊಂಡ ಹುಡುಗ/ಹುಡುಗಿ ಕೂಡ ಸಮಾಜದ ಯಾರೋ ಮೂರನೇ ವ್ಯಕ್ತಿಯೆದುರು ಆ ಸ್ನೇಹವನ್ನು ಪರಿಚಯಿಸಬೇಕಾಗಿ ಬಂದಾಗ ಸ್ನೇಹ ಅಂತಲೇ ಪರಿಚಯಿಸಲು ಇರುಸುಮುರುಸು ಅನುಭವಿಸುವುದನ್ನು, ಅವ್ಯಕ್ತ ಭಯದಿಂದ ವರ್ತಿಸುವುದನ್ನು ಕಂಡಿದ್ದೇನೆ... ಎಷ್ಟೋ ಬಾರಿ ನಾನೇ ಅನುಭವಿಸಿದ್ದೇನೆ... (ನನ್ನ ಬಗ್ಗೆ ಭಯವಿಲ್ಲದಿದ್ದರೂ ನನ್ನಿಂದಾಗಿ ಹೆಣ್ಣು ಜೀವಕ್ಕಾಗುವ ಇರುಸುಮುರುಸಿನ ಭಯ ನನ್ನನೂ ಕಾಡಿದ್ದಿದೆ)... ಭಯ ತಮ್ಮ ನಡುವಿನ ಸ್ನೇಹದ ಬಗೆಗಿನ ಅಪನಂಬಿಕೆಯಿಂದ ಮೂಡಿದ್ದಲ್ಲ... ಆ ಮೂರನೇ ವ್ಯಕ್ತಿ ತಮ್ಮದು ಗೆಳೆತನ ಅಂದಾಕ್ಷಣ ತಮ್ಮೆಡೆಗೆ ನೋಡುವ ನೋಟದ ಬಗ್ಗೆ... ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿದರೆ ಎದುರಿನ ವ್ಯಕ್ತಿ ಎದುರಲ್ಲಿ ಏನೆನ್ನದಿದ್ದರೂ ಆಚೆ ಇನ್ನೆಲ್ಲೋ ಈ ಭಾವಬಂಧಕ್ಕೆ ಇನ್ಯಾವುದೋ ಅನುಮಾನದ ಸಂಬಂಧದ ಹೆಸರಿಟ್ಟುಬಿಟ್ಟರೆ ಎಂಬ ಭಯ... ಅದವನ ಮನೋವಿಕಾರವೇ ಇರಬಹುದು ಅಥವಾ ಮಾತ್ಸರ್ಯದ ಪ್ರಭಾವವೇ ಇರಬಹುದು... ಆತ ಏನೋ ಅಂದದ್ದರಿಂದ ನೇರವಾಗಿ ಇವರ ಸ್ನೇಹಕ್ಕೆ ಯಾವುದೇ ತೊಂದರೆ ಬರದೆ ಕೂಡ ಇರಬಹುದು... ಆದರೆ ಆತ ಕುಟುಂಬ ವಲಯ ಅಥವಾ ಸುತ್ತಮುತ್ತಲ ವಲಯದಲ್ಲಿ ಒಂದು ಅಸಹನೀಯ ವಾತಾವರಣವನ್ನಂತೂ ಸೃಷ್ಟಿಸಿಡುತ್ತಾನೆ... ಅಂತ ಅಸಹನೀಯತೆಯನ್ನು ಎದುರಿಸಿಯೂ ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿಕೊಂಡು ಮುನ್ನಡೆಯೋಕೆ ಆ ಇಬ್ಬರು ಸ್ನೇಹಿತರಲ್ಲೂ ತುಂಬ ಗಟ್ಟಿಯಾದ ವ್ಯಕ್ತಿತ್ವ ಮೈಗೂಡಿರಬೇಕು... ಸಮಾಜದ ಕ್ಷುದ್ರತೆಯನ್ನು ಎದುರಿಸಿಕೊಂಡು ಬಂಧ ಬೆಸೆದುಕೊಂಡಿರಬಲ್ಲ ಸಾಮರ್ಥ್ಯ, ತಮ್ಮ ನಡುವಿನ ಸ್ನೇಹದ ಬಗ್ಗೆ ಅಪರಿಮಿತ ನಂಬಿಕೆ, ಸ್ನೇಹವನ್ನು ಸದಾಕಾಲ ಸ್ನೇಹವಾಗಿಯೇ ಕಾಯ್ದುಕೊಳ್ಳಬಲ್ಲ ಮನೋ ಸ್ಥಿರತೆ ಎಲ್ಲ ಮೇಳೈಸಿರಬೇಕು... ಅದನ್ನೆಲ್ಲ ಸಾಧಿಸೋದು ಅಷ್ಟು ಸುಲಭವಲ್ಲ ಕೂಡ...

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ... ಸ್ನೇಹವು ಆತ್ಮೀಕತೆಯ ಉತ್ತುಂಗದಲ್ಲಿ ಪ್ರೇಮದಂತೆ ಕಾಣುವ ಅಪಾಯ ಕೂಡ ಇದೆ... ಅಲ್ಲದೇ ಸ್ನೇಹವೇ ಪ್ರೇಮದ ಮೂಲ ಮೆಟ್ಟಿಲು ಎಂಬ ಮಾತಿದೆ... ಮತ್ತದು ಸತ್ಯ ಕೂಡ... ಹಾಗಾಗಿ ಸ್ನೇಹವನ್ನು ಸ್ನೇಹವಾಗಿಯೇ ಸಲಹಿಕೊಳ್ಳೋದು ಸುಲಭವೇನೂ ಅಲ್ಲ... ಸಮಾಜದ ಕುಹಕವೊಂದೇ ಅಲ್ಲದೇ ನಮ್ಮದೇ ಮರ್ಕಟ ಮನಸಿನ ಭಾವಗಳಿಂದಲೂ ಸ್ನೇಹವನ್ನು ಸಲಹಿಕೊಳ್ಳಬೇಕಿರುತ್ತೆ... ಸ್ನೇಹ ಪ್ರೇಮದ ಮೆಟ್ಟಿಲಿರಬಹುದು ಆದರೆ ಸ್ನೇಹವೇ ಪ್ರೇಮವಲ್ಲ... ಆದರೆ ಸ್ನೇಹವೊಂದು ಕಾಲದ ಮತ್ತು ಒಡನಾಟದ ಸಂಘರ್ಷಗಳಲ್ಲಿ ಮಿಂದು ಪಕ್ವಗೊಂಡ ಮೇಲೆ ಆ ಎರಡೂ ಜೀವಿಗಳು ಬಯಸಿ ಸ್ನೇಹಕ್ಕೆ ಏನೇ ಹೆಸರಿಟ್ಟರೂ ಕೊನೆಗೆ ಪ್ರೇಮವೆಂತಲೇ ಅಂದರೂ ಅದು ಚಂದವೇ... ಯಾಕಂದ್ರೆ ಪಕ್ವಗೊಂಡ ಸ್ನೇಹದಲ್ಲಿ ಆ ಹೆಸರುಗಳು ಸ್ನೇಹದ ಆತ್ಮೀಯ ನಾಮಗಳಂತಾಗಿ (ನಿಕ್‌ನೇಮ್) ಸ್ನೇಹದ ವಿಸ್ತಾರದಂತೆನಿಸುತ್ತೆ... ಆಗ ಅಕ್ಕ, ತಂಗಿ, ಅಣ್ಣ, ತಮ್ಮ, ಪ್ರೇಮಿ – ಹೆಸರೇನೇ ಇರಬಹುದು ಅದರ ಮೂಲ ಭಾವ ಹಾಗೂ ಮೂಲ ಸೆಲೆ ಮಧುರವಾದ ಪಕ್ವ ಸ್ನೇಹವೇ ಆಗಿರುತ್ತೆ... ಅಂಥ ಬಾಂಧವ್ಯಗಳಲ್ಲಿ ಬದುಕು ಚಂದ ಕೂಡ...

ಯಾಕೆ ಹುಡುಗರು ಬರೀ ಗೆಳೆಯರಾಗಿ ಸಿಕ್ಕಲ್ಲ ಅಂತ ಮಧುರ ಸ್ನೇಹವನ್ನು ಪ್ರೇಮವಾಗಿಸಹೊರಟ ನಿಯಂತ್ರಣ ತಪ್ಪಿದ ಅಪಕ್ವ ಮನಸಿನ ಹುಡುಗರ ಪ್ರೇಮ ನಿವೇದನೆಗಳಿಂದ ಕಂಗಾಲಾದ ಕಿರಿಯ ಹೆಣ್ಣು ಜೀವಗಳು ಕೇಳಿದಾಗ ಅಯ್ಯೋ ಅನ್ನಿಸಿದ್ದಿದೆ ಎಷ್ಟೋ ಬಾರಿ...

ಅಂತೆಯೇ ಇದುವರೆಗೂ ರಕ್ತ ಸಂಬಂಧದಾಚೆಯ ಯಾವ ಭಾವ ಬಂಧಕ್ಕೂ ಒಂದುಮಟ್ಟಿನ ಒಡನಾಟ, ಅಭಿರುಚಿಯ ಇಲ್ಲವೇ ವ್ಯಕ್ತಿತ್ವದ ಕನಿಷ್ಠ ಅವಗಾಹನೆ ದಕ್ಕುವ ಮುನ್ನವೇ ಅಕ್ಕ, ತಂಗಿ ಅಂದದ್ದಿಲ್ಲದ, ಯಾವ ಹೆಣ್ಣು ಜೀವದೆದುರೂ ಪ್ರೇಮನಿವೇದನೆಗಿಳಿದಿದ್ದಿಲ್ಲದ, ಗೆಳತಿಯರನ್ನು ಕೇವಲ ಗೆಳತಿಯರಾಗಿ ಕಂಡು ಗೌರವಿಸುತ್ತಲಿದ್ದೂ (ಕೀಟಲೆಗಳಿಗಾಗಿ ಪ್ರತಿ ಗೆಳತಿಯನ್ನೂ ಕಾಲೆಳೆದು ಕಿಚಾಯಿಸುತ್ತೇನೆ ಆ ಮಾತು ಬೇರೆ), ಆತ್ಮೀಯ ಸ್ನೇಹಾನ ಅತಿಯಾಗಿ ಪ್ರೀತಿಸೋ ನನ್ನನ್ನು ಯಾವ ಹುಡುಗಿಯೂ - ನಾನೇನು ಎಂಬುದು ಸ್ಪಷ್ಟವಾಗಿ ಅರಿವಾದ ಮೇಲೂ, ಎಲ್ಲರೆದುರೂ ಧೈರ್ಯವಾಗಿ ಗೆಳೆಯ ಅಂತಲೇ ಪರಿಚಯಿಸಿದ್ದೂ ಇಲ್ಲ ಯಾಕೆ ಅನ್ನೋ ಪ್ರಶ್ನೆ ಕೂಡ ಮೂಡುತ್ತೆ...

ಎರಡಕ್ಕೂ ನಂಗೆ ಗೋಚರಿಸಿದ ಕಾರಣ ಒಂದೇ – ಹೆಣ್ಣು ಜೀವಗಳಲ್ಲಿ ಅಂತರ್ಗತವಾಗಿ ಅಚ್ಚೊತ್ತಿರುವ ವಿಕಾರ ಮನಸಿನ ಸಮಾಜದ ಭಯ... ಮತ್ತು ಇಬ್ಬರಲ್ಲೂ ಇರಬಹುದಾದ ತಮ್ಮದೇ ಮನಸು ಮರ್ಕಟವಾಗಿ ಸ್ನೇಹ ಪ್ರೇಮವಾಗಿಬಿಡಬಹುದಾದ ಭಯ... ನಂಗೆ ಈ ಎರಡೂ ಭಯಗಳಿಲ್ಲ... ಆದ್ದರಿಂದ ಸ್ನೇಹವನ್ನು ಸ್ನೇಹ ಎಂದೇ ಹೇಳಿ ಪರಿಚಯಿಸಬಹುದಾದ, ಹಾಗೆಯೇ ಗೌರವಿಸಬಹುದಾದ ಸಮಾಜದ ನಿರೀಕ್ಷೆ ಇದೆ ನನ್ನಲ್ಲಿ...

ಕೊನೆಯಲ್ಲಿ ಮತ್ತೆ ಹೇಳ್ತೇನೆ – ಇಲ್ಲಿರೋದು ಕೇವಲ ನಾ ನಂಬಿದ, ನನ್ನ ಮನದ ಪ್ರಾಮಾಣಿಕ ಭಾವ ಅಷ್ಟೇ.. ಈ ಭಾವದ ಭಾಷಣ ಬಿಗಿದು ಎಷ್ಟೋ ಬಂಧಗಳನ್ನು ಚಿಗುರೋ ಮೊದಲೇ ಕಳಕೊಂಡದ್ದೂ ಇದೆ... ಮುಂದೆಯೂ ಕಳಕೊಂಡೇನು... ಆದರೆ ಆ ಬಗ್ಗೆ ನಂಗೆ ಬೇಸರವಿಲ್ಲ... ನಿಜವೆಂದರೆ ನನ್ನ ಭಾವದಾಚೆ ನಾನು ನಿಮ್ಮ ಭಾವಗಳನ್ನೂ ಗೌರವಿಸುತ್ತೇನೆ... ಯಾರೋ ನಂಗೆ ಬಂಧ ಬೆಸೆಯೋ ಮುನ್ನವೇ ಅದಕೊಂದು ಸಂಬಂಧ ರೂಪದ ಹೆಸರಿಡುವುದರಲ್ಲೇ ಖುಷಿಯಿದೆ ಮತ್ತು ಭದ್ರತಾ ಭಾವವಿದೆ ಅಂದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ... ಆದರೆ ನನ್ನಿಂದಲೂ ಅದನ್ನೇ ಬಯಸದಿದ್ದರಾಯ್ತು... ಕೂಗಿದ್ದು ಹೇಗೆಂಬುದಕಿಂತ ಕೂಗುವಾಗಿನ ಭಾವವೇ ಹೆಚ್ಚು ಮುಖ್ಯವೆನ್ನಿಸುತ್ತೆ ನಂಗೆ... ಬಂಧದ ಆಯಸ್ಸು ಮತ್ತು ವಿಸ್ತಾರ ಅದರಿಂದಲೇ ನಿರ್ಧಾರವಾಗುತ್ತೆ ನನ್ನಲ್ಲಿ... ಇನ್ನೇನಿಲ್ಲ... 

ಸ್ನೇಹ ಹಾಡಲಿ ಎಲ್ಲೆಲ್ಲೂ...

6 comments:

  1. ಸ್ನೇಹ ಸ್ನೇಹವಾಗಿ ಮತ್ತೂ ಸ್ನೇಹವಾಗಿಯೇ ಇರಲೆಂಬ ಭಾವ ಇಷ್ಟವಾಯ್ತು..
    ಹೆಸರಿಲ್ಲದೆ ಸ್ನೇಹವೊಂದು ಹಾಡಾಗಲಿ... ಸಮಾಜವೆಂಬ ಅಪಸ್ವರ ಚಂದದೊಂದು ಹಾಡಿನ ತಾಳ ತಪ್ಪಿಸದಿರಲಿ ...

    ReplyDelete
  2. ನಿಜ....ಸ್ನೇಹದ ಭಾವನೆಗಳು ಎಂದಿಗೂ ಸ್ನೇಹವಾಗಿರಲಿ...ಆ ಸಂಬಂಧದ ಮುಂದೆ ಬೇರೆಲ್ಲವೂ ಚಿಕ್ಕದೇನೋ ಎಂದೆನಿಸುತ್ತದೆ...ಚಂದ ಬರೀದೆ...

    ReplyDelete
  3. ನಿಮ್ಮ ಸ್ನೇಹದ ಭಾವ ಇಷ್ಟವಾಯ್ತು ..ಪ್ರಶ್ನೆ ಅದಕ್ಕೆ ಉತ್ತರ ಎರಡೂ ನಿಮ್ಮಲ್ಲೇ ಇದೆ...

    ReplyDelete
  4. ಗೊಂದಲಗಳಿಲ್ಲದ ಆತ್ಮೀಯ ಸ್ನೇಹ ಯಾವಾಗಲು ಚಿರಂಜೀವಿಯಾಗಲಿ...... :-)

    ReplyDelete
  5. ಸ್ನೇಹ ಮತ್ತು ಪ್ರೀತಿಗಳೆನ್ನುವುದು ವೈರುಧ್ಯಗಳಲ್ಲ... ಏಕಸ್ಥಾಯಿಯ ಎರಡು ಬೇರೆ ಬೇರೆ ಭಾವಗಳು ಅಷ್ಟೇ.
    ಸ್ನೇಹವಿರುವಲ್ಲೇ ಪ್ರೀತಿಯೂ ಕೂಡಾ ಇರೋದು.. ನಿಜವಾದ ಪ್ರೀತಿಯನ್ನು ಹೇಳಿಕೊಳ್ಳೋದು... ಹೇಳದೇ ಕೊರಗುವುದಕ್ಕಿಂತ ತಪ್ಪೇನು ಆಗಿರಲಿಕ್ಕಿಲ್ಲ...
    ಹೆಣ್ಣು ಜೀವವೊಂದು ಅಭದ್ರತೆಗೋ.. ರಕ್ಷಣಾ ತಂತ್ರಕ್ಕೋ ಅಣ್ಣ ತಮ್ಮ ಹೇಳಿಕೊಳ್ಗಳೋದು ನಮಗೆ ಎಷ್ಟು ಅಸಹಜ ಅನ್ಸುತ್ತೋ ಹಾಗೆ ಹೃದಯದ ತುಂಬಾ ಪ್ರೀತಿಯಿಟ್ಟುಕೊಂಡು ತೋರಿಕೆಗೆ ನೀನು ಕೇವಲ ಸ್ನೇಹಿತ/ಸ್ನೇಹಿತೆ ಅಂತ ಹೇಳಿಕೊಳ್ಳೋದೂ ಕೂಡಾ ಅಷ್ಟೇ ಅಸಹಜತೆ ಅಲ್ವಾ...?
    ಇನ್ನು ಭಾವವೇ ವಿಕೃತವಾದರೆ ಅದರಲ್ಲಿ ಸ್ನೇಹ ಪ್ರೀತಿ ಎನ್ನೋ ಭೇಧವಿಲ್ಲ... ಎರಡರಲ್ಲೂ ಒಂದೇ ಪರಿಣಾಮ.. ಎಲ್ಲ ಸ್ನೇಹಗಳ್ಲಿ ಪ್ರೀತಿ ಒಳನುಸುಳೋಲ್ಲಾ.... ಆದರೆ ಸಾರಾಸಗಟಾಗಿ 90% ಪ್ರೇಮಗಳಲ್ಲಿ ಸ್ನೇಹವಿದ್ದೇ ಇರುತ್ತೆ...
    ಹೇಳುತ್ತಾ ಹೋದರೆ ತುಂಬಾ ಇದೆ... ಏಕೆಂದರೆ ಕಾಲೇಜಿನ ದಿನಗಳಲ್ಲಿ ತುಂಬಾ ಕಾಡಿದ ವಿಷಯ ಇದು..
    ದೋಸ್ತ್ ಒಳ್ಳೆಯ ವಿಷಯ ಹಾಗೇ ಬರಹವೂ ಚನ್ನಾಗಿದೆ.... very nice... ಶುಕ್ರಿಯಾ....

    ReplyDelete