Tuesday, November 5, 2013

ಗೊಂಚಲು - ತೊಂಬತ್ತೆರಡು.....

ಏನೇನೋ.....

ನನಗೆಂದೇ ಹೊಯ್ದಾಡುವ ಕಪ್ಪು ಹುಡುಗಿಯ ಕಪ್ಪು ಮುಂಗುರುಳು... 
ಸದಾ ನನ್ನಡೆಗೇ ತುಡಿಯುವ ಅವಳ ಆ ಕಡುಗಪ್ಪು ಕಂಗಳು... 
ತುಟಿಯ ತಿರುವಲ್ಲಿ ನಗೋ ಸಂಗಾತಿ ಮಚ್ಚೆ... 
ಬೆರಳುಗಳ ಬೆಸೆದು ಸಂಜೆಗೊಂದು ಸುತ್ತಾಟ – ನಡುವೆ ಜಿನುಗಿದ ತಿಳಿ ಬೆವರೊಂದಿಗೆ ಹಸ್ತರೇಖೆಗಳೂ ಬೆರೆತ ಭರವಸೆಯ ಭಾವ... 
ತುಂಬ ಒಲವುಕ್ಕಿದಾಗ ಒಂದು ಬಿಗಿಯಾದ ತಬ್ಬುಗೆ – ಜಾತ್ರೇಲಿ ಕೊಂಡ ಗಾಜಿನ ಬಳೆಗಳಿಗೆ ಮೋಕ್ಷ... 
ಯಾವುದೋ ನಸುಗತ್ತಲ ತಿರುವಲ್ಲಿ ಕದ್ದು ಸವಿದ ಮುತ್ತಿನೂಟ – ಆರದ ತುಟಿಯ ತೇವದಲ್ಲಿ ಸದಾ ಹಸಿಯಾಗಿರುವ ಆಸೆಯ ಝೇಂಕಾರ... 
ಹುಸಿ ಮುನಿಸಿನಲಿ ಖುಷಿಯ ಆರೋಪದ ಪ್ರೀತಿಯ ಗುದ್ದು - ಮುಚ್ಚಿದ ಕಣ್ಣ ಕೊನೆಯಲ್ಲಿ ಒಲವ ತೀರ ಸೇರೋ ಪ್ರಣವ ನಾದ... 
ರಾತ್ರಿಯ ಒಂಟಿ ಹೊರಳಾಟದಲ್ಲಿ ನೆನಪಾಗಿ ಕಾಡಿ ನಶೆಯೇರಿಸೋ ಅವಳ ಬೆವರ ಘಮ... 
ಎಂದೋ ಕದ್ದೊಯ್ದ ನನ್ನ ಹಳೆಯ ಅಂಗಿಯಲ್ಲಿ ನಿತ್ಯ ರಾತ್ರಿಯಲ್ಲಿ ಅವಳಿಗೆ ನಾ ದಕ್ಕುವುದು - ಎದೆಗವಚ ಬಿಗಿಯಾದ ಸುದ್ದಿ ಅವಳ ಪೋಲಿ ಸಂದೇಶವಾಗಿ ಮಧ್ಯರಾತ್ರಿಯಲಿ ನನ್ನ ತಲುಪಿ ಕೆಣಕಿದ್ದು...  
ಆ ವಿರಹದುರಿಯಲಿ ನನ್ನ ಸಂತೈಸೋ ಅವಳ ಹಳೆಯ ಒಂಟಿ ಕಿವಿಯೋಲೆ... 
ಇನ್ನೂ ಸಂಸಾರವನೇ ಹೂಡಿಲ್ಲ ಆಗಲೇ ಮಗಳಿಗೆ ಹೆಸರ ಹುಡುಕಿ ಡೈರೀಲಿ ಬರೆದಿಟ್ಟದ್ದು... 
ಸುರಿವ ಸೋನೆಯಲಿ ನೆನೆಯುತ್ತ ಒಂದೇ ಐಸ್‌ಕ್ರೀಮನ್ನು ಇಬ್ಬರೂ ತಿಂದದ್ದು...
ಕನ್ನಡಿಯೂ ಕಂಡಿರದ ಅವಳ ಕತ್ತಲ ತಿರುವುಗಳು ನನ್ನ ಕಂಗಳಲ್ಲಿ ಇಂಗದ ಹಸಿವಾಗಿ ಭದ್ರವಾಗಿದ್ದು... 
ಆಹಾ..!!! 
ಎಷ್ಟೆಲ್ಲ ಹುಚ್ಚುಚ್ಚು ಭಾವದ ಖುಷಿಗಳ ನನ್ನಲ್ಲಿ ತುಂಬಿದ್ದು ಆ ಕಪ್ಪು ಹುಡುಗಿಯ ಕನಸು...
ಅದು ಬರೀ ಕನಸೇ ಆದರೂ ಎಂಥ ಸೊಬಗು ಆ ಕನಸಿಗೆ... 
ಹೌದು ತುಸು ಹೆಚ್ಚೇ ಅನ್ನುವಷ್ಟು ಪೋಲಿಕನಸುಗಳು ನನ್ನಲ್ಲಿ ಅವಳೆಡೆಗೆ... ಆದರದು ಹರೆಯದ ಉನ್ಮಾದ ಅನ್ನಿಸೊಲ್ಲ ಯಾಕೋ... ಸಂಯಮ ಮೀರಿದ ಕ್ಷಣ ಮತ್ತು ಕ್ರಿಯೆಯಾಗಿ ದಕ್ಕುತಿರುವ ಕ್ಷಣಗಳನು ಹೊರತುಪಡಿಸಿ, ಪ್ರೇಮದಿಂದೊಡಗೂಡಿದ ಬರೀ ಮನೋಭೂಮಿಕೆಯ ಕಲ್ಪನೆಯಲಿ ಅರಳುತಿರುವಲ್ಲಿ ಕಾಮ ಕೂಡ ಮಧುರ ಭಾವವೇ ಅಂತನ್ನಿಸುತ್ತೆ ನಂಗೆ...
ಅಂಥವಳೊಬ್ಬ ಕಪ್ಪು ಹುಡುಗಿಯ ನನ್ನ ಕನಸಿಗೆ ಕೊಟ್ಟ ಮತ್ತು ಆ ಕನಸ ಇಂದಿಗೂ ಜೀವಂತವಾಗಿಟ್ಟ ಬದುಕೇ ನಿನ್ನ ಮೇಲೆ ಮತ್ತೆ ಹುಚ್ಚು ಪ್ರೀತಿಯಾಗ್ತಿದೆ...

*****

ಸಾಗರವೇ -
ನಿನ್ನ ಅಗಾಧತೆಯೆಡೆಗೆ ಬೆರಗಿನ ಕಣ್ಣ ನೆಟ್ಟು – ನಿನ್ನ ನಿಗೂಢತೆಯ ಕಂಡು ನಿಟ್ಟುಸಿರ ಬಿಟ್ಟು – ಗರಬಡಿದು ಸುಸ್ತಾಗಿ ಕುಳಿತಿದ್ದೇನೆ...
ಅಲೆಯೊಂದು ಬಂದು ಪಾದ ಸೋಕಿತು... 
ತಾಕಿದ ತೇವ ಮನಸಿಗೂ ಆವರಿಸಿ - ಕಳೆದುಹೋಗಿದ್ದ ಹಳೆ ಕನಸುಗಳೆಲ್ಲ ಮತ್ತೆ ಒಳನುಗ್ಗಿ – ಹೊಸ ರಾಗದಲಿ ಹೊರಹೊಮ್ಮಿ – ನವ ರೋಮಾಂಚನ ಮೈಮನದಲಿ ಝೇಂಕರಿಸಿ ಜೀವ ಭಾವಕ್ಕೆ ರೆಕ್ಕೆ ಮೂಡಿದೆ...
ಬದುಕೇ ನೀನೂ ಸಾಗರದಂತೆಯೇ...
ನಿನ್ನ ಅಗಾಧತೆ, ನಿಗೂಢತೆಗಳಲಿ ಹಲ ಕನಸುಗಳ ಕೊಂದು ಹೂತು ಮತ್ತದೇ ಮಸಣದ ನಡುವಿಂದ ಹೊಸ ಕನಸುಗಳ ಹೊತ್ತು ತಂದು ನನ್ನದೇ ಶಾಶ್ವತ ಒಂಟಿತನದಲೂ ನಗುತಿರಬಲ್ಲ ಜಿಗುಟಾದ ಒರಟುತನವ ಕರುಣಿಸಿದ ಬದುಕೇ ನಿನ್ನ ಮೇಲೆ ಮತ್ತೆ ಪ್ರೀತಿಯಾಗುತಿದೆ...

*****

ಗೆಳತೀ -
ಇರುವಿಕೆಯಿಂದ ಈ ಕ್ಷಣಕೊಂದು ಉನ್ಮಾದ ತುಂಬುವ...
ಅದೇ ಇರುವಿಕೆಯಿಂದ ಅರಗಿಸಿಕೊಳ್ಳಲಾರದ ಭಯ ತುಂಬೋ...
ಅರಿವಿನ ಹರಿವಿಗೆ ದಕ್ಕದೇ – ಮರೆತು ಹಗುರಾಗಲಾಗದೇ ಅಡಿಗಡಿಗೆ ಕಾಡುವ ವಾಸ್ತವದ ಭಾವ - ಸಾವು...
ಅಗೋಚರವಾಗಿದ್ದಷ್ಟು ಕಾಲವೂ ಸ್ಪೂರ್ತಿಯನ್ನು ಮತ್ತು ಪ್ರಕಟವಾಗಿ ನೋವನ್ನೂ ತುಂಬುವ, ಏಕಕಾಲಕ್ಕೆ ಶಕ್ತಿಯೂ – ದೌರ್ಬಲ್ಯವೂ ಆಗಬಲ್ಲ ಭಾವ ಅದು...
ಬದುಕಿನೊಂದಿಗೆ ನನ್ನದು ಮತ್ತು ನನ್ನೊಂದಿಗೆ ನಿನ್ನದೂ ಸಾವಿನಂಥ ಗೆಳೆತನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

5 comments:

  1. 1. ಆ ಕೃಷ್ಣ ಸುಂದರಿಯ ಉಲ್ಲೇಖ ನನ್ನನ್ನು 25 ವರ್ಷ ಹಿಂದಕ್ಕೆ ಕೊಂಡೊಯ್ತು.
    2. ಕೆಡಲಿನ ಅಗಾಧತೆಯು ಎನ್ನವಳ ಕ್ಷಮಾ ಸಾಮರ್ಥ್ಯಕ್ಕೂ ಹೋಲಿಕೆಯೇ.
    3. ಗೆಳತಿಯ ಭಾವ ನವಿರಾಗಿ ಮನ ಮುಟ್ಟಿತು.

    ReplyDelete
  2. ಕಪ್ಪು ಹುಡುಗಿ ಮೂಡಿಸಿರುವ ಪ್ರಣವ ನಾದ
    ಚನ್ನಾಗಿದೆ.... (ಗಂ)ಮ್ಮತ್ತಾಗಿದೆ...
    ಕನಸುಗಳಿಗೆ ರೆಕ್ಕ ಮೂಡಿಸಿದ ಅವಳ್ಯಾರೋ....
    ..............................................

    ReplyDelete
  3. ಹೊಟ್ಟೆ ಕಿಚ್ಚಾಗುತ್ತದೆ ಕಣೋ ನಿನ್ನ ಕಪ್ಪು ಹುಡುಗಿಯ ಮೇಲೆ... ಬದುಕಿನ ಮೇಲೆ ಪ್ರೀತಿ ಹುಟ್ಟಿಸುವ ಸಾಗರದಂಥಹ ಹುಡುಗಿ ಗೆಳತಿಯಾಗಿ ಸಿಗಲಿ

    ReplyDelete
  4. wow!! idakkinta hechchige heLalu nanna baLi padagaLE illa
    :-)
    malathi S

    ReplyDelete
  5. ಆ ಕಪ್ಪು ಹುಡುಗಿ ಇನ್ನೂ ಅದೆಷ್ಟು ಭಾವಗಳಿಗೆ ಸ್ಪೂರ್ತಿಯಾಗ್ತಾಳೋ ಅರಿಯೆ ;)
    ನಿನ್ನಲ್ಲಿಷ್ಟು ಬದುಕ ಪ್ರೀತಿ ಕೊಟ್ಟ ಆ ಕನಸ ಹುಡುಗಿಯ ಬಗೆಗೆ ನಂಗೂ ಪ್ರೀತಿ ಆಯ್ತಂದ್ರೆ ನಂಬ್ಲೇ ಬೇಕು ನೀ :)
    ಹರಿಯಲಿ ಇನ್ನೊಂದಿಷ್ಟು ಭಾವಗಳು

    ReplyDelete