Friday, November 8, 2013

ಗೊಂಚಲು - ತೊಂಬತ್ತು ಮತ್ತು ಮೂರು.....

ಹೀಗೊಂದು ಪತ್ರ.....

ಸಾವೇ –
ಬದುಕು ಶುರುವಾಗೋ ಮುಂಚೆ ಕೂಡ ಬರಬಲ್ಲ ಅಥವಾ ಬದುಕಿನ ಯಾವುದೇ ತಿರುವಲ್ಲೂ ಪಕ್ಕನೆ ಎದುರಾಗಬಲ್ಲ ನಿನ್ನನು, ಕಣ್ಣಿಲ್ಲದವನೆಂದರು – ಕರುಣೆ ಸ್ವಲ್ಪವೂ ಇಲ್ಲವೇ ಇಲ್ಲವೆಂದರು – ಕರೆಯದೇ ಬರುವ ಏಕೈಕ ಅಥಿತಿ ಎಂದರು – ಕರೆದರೂ ಬಾರದೇ ಕಾಡುವ ಕಟುಕ ಎಂಬರು... ಎಲ್ಲವೂ ಸತ್ಯವೇ... ಅವರವರ ಪರಿಸ್ಥಿತಿಯ ಕಣ್ಣಲ್ಲಿ ನೀ ಅವರವರ ಭಾವದಂತೆ...

ಹೀಗಂತ ಗೊತ್ತಾಗಿರುತ್ತಿದ್ದಿದ್ದರೆ ಗರ್ಭದಿಂದಾಚೆಯೇ ದೂಡುತ್ತಿರಲಿಲ್ಲ ಅನ್ನುತ್ತಿದ್ದಳು ಆ ತಾಯಿ ನಿನ್ನ ಕ್ರೌರ್ಯಕ್ಕೆ ಶಪಿಸುತ್ತಾ...
ನಿನ್ನೆ ತಾನೆ ಹುಟ್ಟಿದ್ದಂತೆ ಕೂಸು – ಈಗಷ್ಟೇ ಮಣ್ಣು ಮಾಡಿ ಮನೆಗೆ ಬಂದಿದ್ದಾರೆ...

ಎಲ್ಲ ಇದ್ದೂ ಯಾರೂ ಇಲ್ಲದಂತಾಗಿ ಆ ಮೂಲೆಯಲ್ಲಿ ಕೂತು ದೀನತೆಯಿಂದ ನಿನ್ನ ಬರವಿಗಾಗಿ ಕಾತರಿಸುತ್ತಿದ್ದಾನೆ ಆ ತಾತ ಬಾಗಿಲೆಡೆಗೆ ಕಣ್ಣು ನೆಟ್ಟು – ನೀ ತಿರುಗಿಯೂ ನೋಡುತ್ತಿಲ್ಲ – ಜಾಣ ಕುರುಡನಂತೆ...

ನಾನೂ ಕರೆದಿರಲಿಲ್ಲ ನಿನ್ನ – ಆದರೂ ಬರುತ್ತಿರುವ ಸಂದೇಶ ನನ್ನ ತಲುಪಿತು... ಮೊದ ಮೊದಲು ಸುಳ್ಳೇ ಭ್ರಮೆ ಅಂದುಕೊಂಡೆ... ಇಲ್ಲ ಸತ್ಯವೇ ಅದು ಅಂತಂದರು ಸದಾ ನಿನ್ನಿಂದ ನಮ್ಮಗಳ ದೂರವಿಡಲು ದುಡಿವ ನರನಾರಾಯಣರು... ಸ್ವಲ್ಪ ಕಹಿ ಕಹಿ ಅನ್ನಿಸಿತು... ಆದರೂ ಎಂದಾದರೂ ನಿನ್ನ ಸೇರಲೇಬೇಕಲ್ಲ ಎಂಬ ಅರಿವಿತ್ತಲ್ಲ ಅದಕ್ಕೇ ಸರಿ ಬಂದುಬಿಡು ಅಂತಂದು ಬಾಗಿಲು ತರೆದಿಟ್ಟೆ... ನೀನೋ ಬಲೇ ಕಿಲಾಡಿ, ಬಾಗಿಲಿಗೆ ಬಂದು ನಿಂತು ಒಳಗಡಿಯಿಡದೇ ಮಜ ನೋಡುತ್ತ ನಿಂತುಬಿಟ್ಟೆ... ಆಗಲೇ ಶುರುವಾದದ್ದು ನಿಜವಾದ ಒದ್ದಾಟ – ಯಾವ ಅರಿವೂ ತಣಿಸಲಾರದ, ಮಣಿಸಲಾಗದ ಮನದ ಗುದ್ದಾಟ... 
ನನಗೆ ನೀನಿಲ್ಲ ಅಥವಾ ಎಲ್ಲೋ ದೂರದಲ್ಲಿದ್ದೀಯಾ ಅನ್ನೋ ಭಾವದಲ್ಲಲ್ಲವಾ ಎಳೆಯರ ನಾಳೆಗಳಿಗೆ ಬಲ - ಉಲ್ಲಾಸ, ಉನ್ಮಾದಗಳಿಗೆ ಜೀವ ಬಂದು ಮನದೊಳಗೆ ರಂಗುರಂಗಿನ ಕನಸುಗಳ ಜಾಲ... ಎಲ್ಲೋ ಇದ್ದು ಧೈರ್ಯ ತುಂಬಬೇಕಾದೋನು ಕಣ್ಣೆದುರೇ ದುಃಸ್ವಪ್ನದಂತೆ ನಿಂತುಬಿಟ್ಟರೆ ಕ್ಷಣ ಕ್ಷಣವೂ ___________ ... 

ಪ್ರಜ್ಞಾಪೂರ್ವಕವಾಗಿ ನಾಳೆಗಳಿಗೋಸ್ಕರ ಕನಸುಗಳ ಒಳಗೆಳೆದುಕೊಂಡರೆ, ಬಾಗಿಲಲ್ಲಿರುವ ನಿನ್ನ ಹಾದೇ ಒಳ ಬಂದ ಕನಸುಗಳಲೂ ನಿನ್ನದೇ ಕರಕಲು ವಾಸನೆ... 

ನಿನ್ನ ಅಸ್ಪಷ್ಟವಾಗಿ ಕಂಡ ಭಯದಲ್ಲಿ ಕೈಯಾರೆ ದೂಡಿ ದೂರವಿಟ್ಟ ಮಧುರ ಖುಷಿಯ ಭಾವಗಳು – ಕೈ ಕೊಡವಿ ಎದ್ದು ಬಂದ ಕೈ ಹಿಡಿದು ಆ ತೀರದವರೆಗೂ ನಡೆಯಬಹುದಾಗಿದ್ದ ಬಂಧಗಳೆಲ್ಲ ರಾತ್ರಿ ಕನಸಲ್ಲಿ ಪ್ರೇತಗಳಂತೆ ಕುಣಿಯುವಾಗ, ನೋವು ಎನ್ನಲಾಗದ – ಆದರೆ ಖುಷಿಯೂ ಇಲ್ಲದ ಒಂಥರಾ ಸ್ತಬ್ದತೆ ಸದಾ ಕಾಡುವಾಗ, ಜಂಗುಳಿಯ ನಡುವೆ ಸೂರು ಹಾರುವಂತೆ ನಗುತಿರುವಾಗಲೂ ಯಾವುದೋ ಮೂಲೆಯಲಿ ಒಂಟಿ ಒಂಟಿ ಅನ್ನಿಸೋ ಶಾಶ್ವತ ಖಾಲಿತನ ಹಿಂಡುವಾಗ, ಬಿಟ್ಟು ಬದುಕಲಾರೆನೆನ್ನಿಸೋ ಯಾರೂ ಸಹಿಸಲಾಗದ ಒರಟುತನ – ತೊಟ್ಟು ಉಳಿಯಲಾಗದ ಬಂಧ ಬೆಸೆಯಲು ಬೇಕೇ ಬೇಕಿದ್ದ ಮೃದುತನಗಳ ನಡುವೆ ಮನಸು ಹಾಗೂ ಮನಸ ಸಂತೈಸಬೇಕಿದ್ದ ಬುದ್ಧಿಯೂ ಕಂಗಾಲಾದಾಗ, ಕೈ ಮೀರಿ ನಿಶ್ಯಕ್ತನೆನಿಸೋ ಮುಂಚೆಯೇ ಮುಗಿದುಹೋಗಲಿ ಅಂದುಕೊಂಡ ಬದುಕ ದಾರಿ ಅಂದುಕೊಂಡದ್ದಕ್ಕಿಂತ ದೀರ್ಘವಾಯಿತು ಅಂತನ್ನಿಸಿದಾಗಲೆಲ್ಲ... ಆಗೆಲ್ಲ ಒಮ್ಮೊಮ್ಮೆ ಅನ್ನಿಸಿಬಿಡುತ್ತೆ – ಒಳಗೂ ಅಡಿಯಿಡದೇ, ಕಣ್ಣ ಹರಹಿನಿಂದಾಚೆಯೂ ಹೋಗದೇ, ನನ್ನ ಕನಸ ರಂಗೋಲಿಯನೆಲ್ಲ ತುಳಿಯುತ್ತ ನೀ ನಿಂತ ಮುಂಬಾಗಿಲಿಂದಾಚೆ ನಿನ್ನೆಡೆಗೆ ನಾನೇ ಅಡಿಯಿಟ್ಟುಬಿಡಲಾ...!!!

ಮರುಕ್ಷಣ ಅನ್ನಿಸುತ್ತೆ - ಸೋಲು ಸಹನೀಯ ಆದರೆ ಶರಣಾಗತಿ ಕಲ್ಪನೆಗೂ ನಿಲುಕದ್ದು... ಉಹುಂ – ಆಗದ ಮಾತು ಅದು; ನಾನಾಗಿ ನಾನು ನಿನ್ನೆಡೆಗೆ ಬರಲಾರೆ... ಗೊತ್ತು ನಿನ್ನ ಗೆಲ್ಲಲಾಗದು ಅಂತ – ಆದರೆ ಬದುಕ ಅಪ್ಪದೆಯೂ ಇರಲಾಗದು... ಅಲ್ಲಿ ಅವಳಿದ್ದಾಳೆ – ಮೊನ್ನೆ ಮೊನ್ನೆಯಷ್ಟೇ ಒಡೆದ ಕಿಟಕಿ ಮರೆಯಿಂದ ಅವಳು ಇಣುಕಿ ನೋಡಿಬಿಟ್ಟಿದ್ದಾಳೆ; ಸಣ್ಣಗೆ ನಗುತ್ತಾ... ಅವಳು ಕಪ್ಪಗಿದ್ದರೂ ಅವಳ ನಗು ತುಂಬ ಬೆಳ್ಳಗಿದೆ... ಆ ಒಂದು ನಗೆಯ ನೆನಪು ಸಾಕು ಈ ಕತ್ತಲ ಕೋಣೆಯ ಒಳಗೂ ನಗುತ್ತ ನಿನ್ನ ಎದುರಿಸಲು...

ಆದರೂ ನಿನ್ನ ಕೋರಿಕೊಳ್ಳದಿರಲಾರೆ – ಕರುಣೆ ತೋರಿ ನೀನೇ ಬೇಗ ಒಳಬಂದು ಎಳೆದೊಯ್ದುಬಿಡು – ಇಷ್ಟಾದರೂ ನಗು ನನ್ನಲ್ಲಿ ಬದುಕಿರುವಾಗಲೇ... ನಿನ್ನೆದುರು ಅಳಲು ಮನಸಿಲ್ಲ ನಂಗೆ...

ಇಂತಿ –
ಕನಸುಗಳ ಹೆಣಗಳ ನಡುವೆ ತೇಕುತ್ತಿರುವ ಉಸಿರು. 

2 comments:

  1. ಸಾವು ಅನ್ನುವುದು ಯಾರು ಅರಿಯದ ಮತ್ತು ವಿಚಿತ್ರ ಎದುರಾಳಿ....
    ಕೈ ಬೀಸಿ ಬಂದುಬಿಡು ಅಂತ ಕರೆವವರ ಮುಂದದು ನಿಲ್ಲೋದೇ ಕಮ್ಮಿ.....

    ಮಹತ್ವ ಕೊಟ್ಟಷ್ಟು ಎದುರು ಬಂದು ನಿಲ್ಲುವುದು... ಭಯ ಹುಟ್ಟಿಸುವುದು.....
    ಇದೊಂದೇ...

    ಚಂದದ ಬರಹ.......

    ReplyDelete