Monday, February 1, 2016

ಗೊಂಚಲು - ನೂರೆಂಬತ್ತೆರಡು.....

ಮತ್ಕೆಲವು ಬಿಡಿ ಭಾವಗಳು.....

ಬಿಟ್ಟು ಬಂದೂರ ಕನವರಿಕೆಯಲಿ.....
ಸಾವು ಕೂಡಾ ಒಂದು ನಿಲ್ದಾಣ ಅಷ್ಟೇ ಎಂದು ನಂಬುವ ಹೊತ್ತಲ್ಲಿ ಬದುಕಿಗೆ ನಿರಂತರ ಚಲನೆ ಒಂದೇ ಅಂತಿಮ - ನಿಲ್ಲಬಾರದು ನಡಿಗೆ...
ಈ ಕ್ಷಣ ನಾ ಭಾವಿಸಿಕೊಂಡದ್ದು ಅಲ್ಲಲ್ಲ ಭಾವಿಸಿಕೊಂಡದ್ದಷ್ಟೇ ನನ್ನ ಬದುಕು - ಅಳುವೆಂದರೆ ಅಳು, ನಗುವೆಂದರೆ ನಗು...
ಮನದ ಭಾವ ಮತ್ತು ಪರಿಸ್ಥಿತಿಯ ಚಿತ್ರ ವಿಚಿತ್ರ ಗತಿಗೆ ತಕ್ಕಂತೆ ನಡಿಗೆ ನಿರ್ಧಾರ...
ಭಾವ ಮತ್ತು ಪರಿಸ್ಥಿತಿಯ ನಿಭಾವಣೆಯಷ್ಟೇ ವ್ಯಕ್ತಿ ವಿಶೇಷಣ...
ಹಾಗಿದ್ದಾಗ ಶ್ರೇಷ್ಠ ಅಥವಾ ನಿಕೃಷ್ಠ ಎಂಬ ಸಾಮಾನ್ಯ ವಿಭಜನೆ ಮತ್ತು ಸಾಧನೆಯ ಮಾನದಂಡವೇ ಗೊಂದಲಮಯ ಎನ್ನಿಸುತ್ತದೆ - ಹೆಚ್ಚಿನ ಸಲ ಅರ್ಥ ಕಳಕೊಳ್ಳುತ್ತದೆ...
ಚಿಗುರಿನ ಮುಖ ಆಗಸಕಿದ್ದರೂ ಮರ ಬೇರು ತಬ್ಬಿದ ನೆಲಕ್ಕೆ ಸ್ವಂತ...
ಅಷ್ಟಾಗಿಯೂ ನನ್ನ ಅನ್ನವಿದ್ದಲ್ಲೇ ನನ್ನ ನೆಲೆ; ಇಲ್ಲಿದ್ದು ಅಲ್ಲಿಗಾಗಿ ಬಿಕ್ಕಳಿಸೋದು, ಅಲ್ಲಿದ್ದು ಇಲ್ಲಿಗಾಗಿ ಹಂಬಲಿಸುವುದಕಿಂತ ಇದ್ದಲ್ಲೇ ನಗುವರಳಿಸಿಕೊಂಬುದು ಬದುಕಿನ ಜಟಿಲ ಆದರೆ ಅಷ್ಟೇ ಅನುಪಮ ಕಲೆ...
ಮೈಮುರಿದೇಳುವ ಕನಸಿನೆದುರು ಬಿಕ್ಕಳಿಸೋ ನೆನಪುಗಳು ಆಕಳಿಸಿದರೆ ಇದ್ದಲ್ಲೇ ಸಿದ್ಧ ಸಮೃದ್ಧ ನಗೆಯ ಹೋಳಿಗೆ - ಕ್ಷಣ ಕ್ಷಣದ ಹಸಿ ನಗುವೇ ಬದುಕ ಏಳಿಗೆ - ಅಂತರಂಗದ ಕಸುವಿನ ನಗು ಒಲಿಯಲಿ ಪ್ರತಿ ಬದುಕ ಪಾಲಿಗೆ...
***
ಕೊಬ್ಬಿದ ಹೋರೀನ ಹಿಡಿದು ಪಳಗಿಸ ಹೋದರೆ ಪ್ರಾಣಿ ಹಿಂಸೆ - ಅದನ್ನೇ ಕಡಿದು ತಿಂದರೆ ಆಹಾರ ಸಂಹಿತೆ...
"ಹೊಡೆದರೆ ಹಿಂಸೆ - ಕಡಿದರೆ ಹಸಿವು" ಇದ್ಯಾವ ನ್ಯಾಯವೋ ಕಾಣೆ...
ಎತ್ತಿನ ಗಾಡೀನ ಓಡಿಸಿ ಗೆದ್ದರೆ ಪ್ರಾಣಿ ದಯೆಗೆ ಮಾರಕ - ಕುದುರೆ ಬಾಲಕ್ಕೆ ಕೋಟಿಗಳ ಸುರಿದು ಚಪ್ಪಾಳೆ ಹೊಡೆದರೆ ಮನರಂಜನೆ...
"ಗ್ರಾಮೀಣವಾದರೆ (ಬಹುತೇಕ ಬಡವರದ್ದು) ಹಿಂಸೆ - ನಗರದವರದ್ದು (ಬರೀ ಸಿರಿವಂತರದ್ದು) ಮನರಂಜನೆ" ಇದ್ಯಾವ ನೀತಿಯೊ ಅರಿಯೆ...
ಎಲ್ಲಾ ಪ್ರಾಣಿಗಳ ಜೀವಾನೂ ಒಂದೇ ಅಲ್ವಾ..??!!
ಈ ಬುದ್ಧಿಜೀವಿಗಳ ಬುದ್ಧಿಯ ಮರ್ಮ ಅರ್ಥವೇ ಆಗಲ್ಲಪ್ಪ...:(
(*** ಕ್ಷಮಿಸಿ ಬುದ್ಧಿಜೀವಿಗಳೇ ಹಿಂಗೆಲ್ಲಾ ಅಂದೆ ಅಂತ ಮನಸು ನೋಯಿಸಿದ ಕೇಸು ಝಡಿದು ಕೊಲ್ಬೇಡಿ ಆಯ್ತಾ...)
***
ಮನದೊಳಮನೆಯ ಪ್ರಶಾಂತಿಯಿಂದ ಬದುಕ ನಗೆಯ ಸಮೃದ್ಧಿಯಾ ಅಥವಾ ನಗೆಯ ಸಮೃದ್ಧಿಯಿಂದ ಶಾಂತಿಯಾ..? ಗೊಂದಲವಾಗುತ್ತೆ ಕಣೋ...
ಆದರೆ ಒಂದನೊಂದು ತಬ್ಬಿದ ಒಲವ ಕೂಸುಗಳಾದ ಶಾಂತಿ ಮತ್ತು ನಗುವಿಗಾಗಿ ಒಂದಿನಿತು ಕನಸುಗಳ ಬಿಟ್ಟು ಕೊಟ್ಟುದಾದರೆ ಅದಕೆ ತ್ಯಾಗದ ಗಾಢ ಬಣ್ಣ ಬಳಿಯಲಾರೆ...
ಒಲವ ಮಂದಾಕಿನಿಯಂತೆ ಬದುಕ ಬಿಂದಿಗೆಯ ತುಂಬಿದವ ನೀನು - ನಿನ್ನಿಂದಲೇ ಅಲ್ಲವಾ ಈ ಶಾಂತಿ, ಈ ನಗೆಯ ಸಮೃದ್ಧಿ ಈ ಬದುಕಿಗೆ...
ನಿನ್ನೊಲವ ಋಣಕೆ ನಿನ್ನ ನಾಳೆಯ ಖುಷಿಗೆ ನಿನ್ನನೇ ಬಿಟ್ಟು ಕೊಡುವ ನೋವಿಗೂ ತ್ಯಾಗದ ಹೆಸರಿಡಲಾರೆ...
ಆದರೆ ನನ್ನ ಬದುಕಿನ ಲಭ್ಯತೆ ಇಷ್ಟೇ ಎಂಬುದ ನೆನೆವಾಗ ಹನಿಯೆರಡು ಜಾರಿದರೆ ನೀ ನೋಯದಿರು ಅಷ್ಟೇ...
ಪ್ರೀತಿಯಿಂದ - ನಿನ್ನವಳು...
***
ಹಿಮ ಮೌನ:
ಹಿಮ ಕರಗಿದರೆ ಜೀವ ನದಿ - ನಾಗರಿಕತೆಗಳೇ ಬೆಳೆದಾವು...
ಮೌನ ಕರಗಿದರೆ ಭಾವ ಹುಚ್ಚು ಹೊಳೆ - ಬದುಕ ಕೈತೋಟದ ತುಂಬಾ ನೇಹದ ಹೂಗಳ ಸಮೃದ್ಧ ಬೆಳೆ...
ಕರಗದೆ ನಿಂತರೆ.........
ಮೌನದ ಭಾರಕ್ಕೆ ಮಾತು ಹರಳುಗಟ್ಟುವಲ್ಲಿ, ಒಳಗಿನಳಲಿಗೆ ಸ್ವಚ್ಛ ಹೊರ ಹರಿವಿನ ಸೆಳವಿಲ್ಲದಲ್ಲಿ ಕರುಳ ಜೋಗುಳವೂ ತಪ್ತ ಗುಪ್ತ ಗಾಮಿನಿ...
***
ಅಲ್ಲಿ ನಿನ್ನ ಕಾಲ್ಗೆಜ್ಜೆಗಳೊಂದಿಗೆ ಅಲೆಗಳು ಮಾತಿಗಿಳಿದಿವೆಯಂತೆ...
ನಿನ್ನೆದೆಯ ಬಿರು ಮೌನವ ನಿನ್ನ ಆ ಗೆಜ್ಜೆಗಳಿಗೂ ಕಲಿಸುವಲ್ಲಿ ನೀ ಸೋತ ಸುದ್ದಿಯ ಚಂದಮ ನನಗೆ ಕೇಳುವಂತೆ ತಾರೆಗಳಿಗೆ ಹೇಳಿ ಪುಳಕಗೊಳ್ಳುತಿದ್ದ...
ನಿತ್ಯವೂ ಒಂಟಿ ಅಲೆಯುವ ಬೀದಿ ಕೊನೆಯ ತಿರುವಿನ ಪಾರಿಜಾತದ ಕೊಂಬೆ ತುದಿಯಲ್ಲಿ ಈಗಷ್ಟೇ ಅರಳಿದ ಮೊಗ್ಗೊಂದ ಹಿತವಾಗಿ ಚುಂಬಿಸಿದೆ ನಾನಿಲ್ಲಿ...
ಇದಕೆಲ್ಲ ಪ್ರತ್ಯಕ್ಷ ಸಾಕ್ಷಿಯಾದ ಗಾಳಿಯ ರೋಮಾಂಚಿತ ಮೃದು ಮೊರೆತಕ್ಕೆ ನಿನ್ನೆದೆ ನಸುಗಂಪಿಸುವಾಗ ನನ್ನ ನೆನಪಾಗಿಲ್ಲವೆಂದು ಹುಸಿನುಡಿಯಬೇಡ...
ಕಪ್ಪು ಹುಡುಗೀ -
ಮುಚ್ಚಿಡಲು ಒಲವು ಕಳ್ಳ ಬಸಿರಲ್ಲ - ಒಲವೆಂದರದು ತಾಯ್ಗರುಳ ತೊಟ್ಟಿಲ ಸಂಗೀತ - ನೀ ಹೇಳದೆಯೂ ನಾ ಕಾಣಬಲ್ಲ ಆರ್ದ್ರ ಭಾವದ ಕಣ್ಣಿನ ಆರದ ದೀಪ...
ಏಳು ಏಳೇಳು ಎಂಬೆಲ್ಲ ಲೆಕ್ಕಗಳು ತಪ್ಪುವಷ್ಟು ಜನ್ಮಗಳ ಮರು ಹುಟ್ಟಿನ ಅತಿ ಹುಚ್ಚು ಅಭಿಲಾಶೆ ಈಗ; "ನಿನ್ನೆದೆಯ ಒಲವ ಅನುಭಾವದ ಸನ್ನಿಧಿಯೆಡೆಗಿನ ನನ್ನೊಳಗಿನ ಹಸಿವಿಗೆ..."

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ತುಂಡು ಭಾವಗಳು, ತುಂಡು ಮೋಡಗಳಷ್ಟೇ ಸರ್ವ ಸ್ವಾತಂತ್ರ್ಯ ಉಳ್ಳವು...

    ReplyDelete