Friday, May 18, 2018

ಗೊಂಚಲು - ಎರಡ್ನೂರೈವತ್ತೆಂಟು.....

ಹುಚ್ಚು ಬಯಲಾಟ..... 

ತೀರಾ ತೀರಾ ಆಪ್ತ ಅಂತಾಗಿ ಸೊಂಪಾಗಿ ಅಂಟಿಕೊಂಡ ತಂಪು ತಂಪು ನಗೆಯ ಜೀವ ಭಾವಗಳು ಸರಕ್ಕನೆ ಕೃತಕ ಆಗಂತುಕತೆಯ ಆವಾಹಿಸಿಕೊಂಡು ಮುಖ ತಿರುವಿ ನಿಲ್ಲುವಾಗಲೆಲ್ಲ ನನ್ನ ನಗೆಯೇ ನಂಗೆ ಅಪರಿಚಿತ ಅನ್ನಿಸಿ ಎಲ್ಲೋ ಕಳೆದುಕೊಂಡದ್ದನ್ನು ಇನ್ನೆಲ್ಲೋ ಹುಡುಕುವ ಹುಚ್ಚಾಟದ ನಶೆಗೆ ಹೊರಳುತ್ತೇನೆ - ಗುರುತಿಲ್ಲದ ಗುರುತುಳಿಯದ ಬೀದಿಯ ಪಥಿಕನಾಗಲು ಹಾತೊರೆಯುತ್ತೇನೆ...
ಅಷ್ಟರಲ್ಲಾಗಲೇ - ಅರೆ - ಅಗೋ ಅಲ್ಲಿ - ಆಹಾ...
ಮೈ ತುಂಬಿಕೊಂಡು ಚಲಿಸುವ ಸಂತೆ ಮಾಳದ ಕಿರು ಹಾದಿಯ ಇಕ್ಕಟ್ಟಿನ ಸಂದಿಯ ಅಂಚಿನಲ್ಲಿ ಸಣ್ಣಗೆ ಬಿಚ್ಚಿಕೊಂಡ ಶುದ್ಧ ಅಪರಿಚಿತ ಅಬೋಧ ಮುಗುಳ್ನಗುವೊಂದು ಕಾಲಿಗೆ ನೇಹದ ಕೊಳ ಹಾಕಿ ನಿಲ್ಲಿಸಿಬಿಡುತ್ತೆ... 
ಅಯ್ಯೋ - ಆ ಅಯಾಚಿತ ಅಪರಿಚಿತ ಸ್ನಿಗ್ಧ ನಗೆಯ ಸ್ವಾಧವೇ - ಜನ್ಮಗಳ ಪ್ರೀತಿ ಹಸಿವೆಲ್ಲ ಮತ್ತೆ ಜಾಗೃತ...
ಚಪ್ಪರಿಸಿ ಮೆಲ್ಲುವಂತ ಹೊಸ ರುಚಿಗೆ ಮೈಮರೆಯುತ್ತೇನೆ...
#ಮತ್ತೊಂದು_ಪರಿಚಯ...
#ಹೊರಳಿ_ಮರಳಿ_ಅದದೇ_ಪುರಾತನ_ಭ್ರಾಂತಿಯ_ಸಿಂಗಾರದ_ಹಾದಿ...
↯↯↯↲↳↯↯↯

ಆ ದಾರಿಯ ತುಂಬಾ ಮುಳ್ಳೆಂದು ಹಳಹಳಿಸುತ್ತಿದ್ದರು - ಎನ್ನ ಹಾದಿಯ ಚಂದವ ಹಾಡಿದೆ - 'ನನ್ನ ಹಾದಿಯೇ ಸರಿ' ಅಂತಂದೆನೆಂಬ ಆರೋಪ ಬಂತು...
ಕೃಷ್ಣಾ,
ಜಗದ ಸಭ್ಯತೆಯ ಶಿಷ್ಟಾಚಾರಗಳ ಮುಸುಕಿನಿಂದ ಎನ್ನ ರಕ್ಷಿಸುವ ಹೊಣೆ ನಿನ್ನದು...
#ನಾನು...
↯↯↯↲↳↯↯↯

ಏನ್ಗೊತ್ತಾ -
ಬದುಕು, ಭಾವ, ಬಂಧಗಳೆಲ್ಲ ತಮ್ಮ ತಮ್ಮ ಪಾಳಿಯಲ್ಲಿ ಎನ್ನೆದೆಯ ಹೆಡೆಮುರಿಕಟ್ಟಿ ಬಡಿದು ಬೀಳಿಸಿ ನಕ್ಕಾಗಲೆಲ್ಲ ಶರಣಾಗದೇ ಸೆಟೆದೆದ್ದು ನಿಲ್ಲುವ ಇರಾದೆ ತುಂಬಿದ್ದು ನನ್ನೊಳಗಿನ 'ನಾನು' ಎಂಬ ಸೊಕ್ಕಿನ ಇಷಾರೆಯೇ...
ಕೆಲವನ್ನು ಕೊಂದದ್ದು, ಹಲವನ್ನು ಬೆಸೆದದ್ದು, ಒಟ್ಟಾರೆ ನನ್ನನ್ನು ಉಳಿಸಿದ್ದು - 'ನಾನು...'
ಇರಲಿ ಬಿಡಿ ಎದುರ ಹಳಿಯದೇ ನನ್ನೊಳಗೆ ನನ್ನ ಘನತೆ ಕಾಯುವಷ್ಟು 'ನಾನು...'
↯↯↯↲↳↯↯↯

ಸ್ಮಶಾನ ಕಾಯಲು ಕೂತವನು ಸಾವಿಗಂಜಬಹುದೇ............ ಸತ್ತದ್ದನ್ನು ಕೊಳೆಯುವ ಮೊದಲು ಹೂತುಬಿಡಬೇಕು....... ಅಷ್ಟೇ....... ತುಂಬಾ ಎದೆ ಹಿಂಡಿದರೆ ಎರಡು ಹನಿ ಅಶ್ರು ತರ್ಪಣ...... ಭಾವಪೂರ್ಣ ಶ್ರದ್ಧಾಂಜಲಿ - ಪದೇ ಪದೇ ಕೊಲ್ಲಲ್ಪಡುವ ಐನಾತಿ ಭಾವಗಳಿಗೆ...... ಅದಕ್ಕೆ ಅದಷ್ಟೇ.........
ಪ್ರೀತಿಯಾದರೂ ದೌರ್ಬಲ್ಯವಾಗಿ ನಿಂತನೀರಾದರೆ ಬದುಕು ರಸ ಹೀನವೇ - ಉಸಿರ ಕದಡದ ನಶೆ ಯಾವುದಿದೆ ಹೇಳಿ...
ಥತ್....
ಎಲ್ಲವೂ ಗೊತ್ತಿದ್ದೇನು ಬಂತು ಮಣ್ಣು - ಎದೆಯ ಹುಣ್ಣಿಗೆ ಮದ್ದು ಮಾಡದೇ ಅಲ್ಲೇ ಕೆರೆಕೆರೆದು ಮುದ್ದು ಮಾಡುತ್ತೇನೆ - ಎಷ್ಟೆಂದರೂ ಮಂಗನ ಸಂತತಿ ಅಲ್ಲವಾ...
#ನಾನು...
↯↯↯↲↳↯↯↯

ಹುಡಕ್ತಾ ಇದೀನಿ -
ಅಷ್ಟೆಲ್ಲ ಹತ್ತಿರ ತಂದು ನಿಲ್ಲಿಸಿದ್ದ "ಹುಷಾರು ಕಣೋ" ಎಂಬ ಒಂದೇ ಒಂದು ಕಾಳಜಿಯ ಮಾತು; ಅದೇ ಆ ಶುದ್ಧ ಅಕ್ಕರೆಯ ಮಾತೂ ಉಸಿರುಗಟ್ಟುವಂತಾದ ಹಳಸಲು ತಿರುವ್ಯಾವುದು...??
ಹುಡುಕುತ್ತಲೇ ಇದ್ದೇನೆ....
ಬಿಡಿ - ನಂಬಿಕೆಯ ಅರ್ಥ ಸತ್ಯ ಅಂತ ಅಲ್ಲ...
#ಸಂಬಂಧ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment