Monday, December 23, 2024

ಗೊಂಚಲು - ನಾಕ್ನೂರಾ ಐವತ್ತು ಮತ್ತೆರಡು.....

ಜೀವೋತ್ಸವ ರಾಗ.....

ಬೆಳಕಿನ ಹಾಡಿಯಲಿ ಹೂಗಳರಳಿದಂತೆ
ನಗೆಯ ಜಾಡಿನಲಿ ನೇಹಗಳ ಆಹ್ಲಾದ ಹರಿಯುತ್ತದೆ...
ನಕ್ಕುಬಿಡು - ಸುತ್ತ ನಗು ನೆರೆಯಲಿ...
ಶುಭದಿನ... 🤝

ಕಳೆದಿರುಳ ಅದೇ ಸವಿಗುಂಜನ ಹೊಸತೇ ಕವಿಭಾವವಾಗಿ ಅರಳಿ ನಿಲ್ಲುವಲ್ಲಿಗೆ ಬೆಳಗು ಪ್ರೀತಿ ಪ್ರೀತಿ ಪ್ರೀತಿ ಅಷ್ಟೇ...
ಶುಭದಿನ... 🪻🍬🤝

ಮುಗಿಯದ ನಿದ್ದೆ ಮಂಪರು, 
ಬೆಳಕಿನ ಕೋಲ್ಗಳ ಉರಿ ಗಡಿಬಿಡಿ,
ಮೈಮನದ ಆಲಸ್ಯದ ಗೊಣಗಾಟ,
ನನ್ನಿಂದಲೇ ಬೈಸಿಕೊಂಡು ನನ್ನ ಕಾಯುವ ಬೆಳಗು...
ಶುಭದಿನ... 🤗

ಬೆಳಗಾಯಿತು - ಸಣ್ಣ ನಗೆಯೊಂದಿಗೆ ಎದೆಯ ನೇಹಗಳ ನೆನೆದೆ - ಬೆಳಕು ಬೆಳೆದಂತೆಲ್ಲಾ ನಗೆಯೂ ಬೆಳೆಯಬಹುದೀಗ...
ಬೆಳಕೆಂದರೆ ಪ್ರೀತಿ ಸಂವರ್ಧನೆ - ನಗುವೆಂದರೆ ಪ್ರೀತಿ ಸಂಭಾಷಣೆ...
ಶುಭದಿನ... 🤝🍫

ತಾನುರಿಯದೇ ಬೆಳಕಿಲ್ಲ...
ಬೆಳಕನುಣಿಸುವುದಾದರೂ, ಬೆಳಕಾಗಿ ಉಳಿವುದಾದರೂ ಉರಿದೇ ತೀರಬೇಕು - ನಿನ್ನೊಳಗೆ/ನಿನ್ನೊಳಗಿನ ಪ್ರೀತಿ, ನಗು...
ಮಿರಿ ಮಿರಿ ನಗು ಬೆಳಗು...
ಶುಭದಿನ... 🫂

ಮತ್ತದೇ ದಿವ್ಯ ಹಗಲು ಇರುಳ ದಾಂಟಿ ಬಂದು ಕೊರಳ ತಬ್ಬುವುದು...
ಅದೇ ಚಂದ ನಗೆಯ ಹರಡಬೇಕು ನಾನು ಎದೆಗಂಟಿದ ಅಳುವ ಕಳೆದು...
ಬೆಳಕಿನ ಬೆನ್ನ ಮೇಲೆ ನಗೆಮುಗುಳ ಕೂಸುಮರಿ...
ಶುಭದಿನ... 🤗

ಬೆಳಕಿನ ಕಡಲಿಗೆ ನಗುವಿನ ಬಾಗಿನ...
ಎದೆಯಿಂದ ಎದೆಗೆ ಪ್ರೀತಿ ಸಿಂಚನ...
ಭಾವ ಕುಸುರಿಯಲಿ ನೆಲ ಮುಗಿಲ ಬೆಸೆದ ಬೆಳಗು...
ಶುಭದಿನ... 🫂

ಬೆಳಕಿನ ಕುಡಿಯೊಂದು ಎನ್ನೆದೆಯ ನಗೆಯ ಮರಿಯ ಕೈಕುಲುಕಿದಾಗ ಕಣ್ಣಂಗಳದಲಿ ನನ್ನೆಲ್ಲಾ ನೇಹಗಳ ಒಡಲ ಪ್ರೀತಿಯ ಬಣ್ಣದ ಪರಿಷೆ ನಡೆಯಿತು...
ಬೆಳಗೆಂದರೆ ಪ್ರೀತಿಗೆ ಪ್ರೀತಿಯಿಂದ ಪ್ರೀತಿ ವಿನಿಮಯ...
ಶುಭದಿನ... 🤝🫂

ಹೂವು ಮನಸಾರೆ ಮೈನೆರೆಯುವ ಹೊತ್ತು...
ಜೀವೋತ್ಸವ ರಾಗ ಬೆಳಗು...
ಶುಭದಿನ... 👣

ಬೆಳಕನೂ ನಗುವನೂ ಬೆರೆಸುವ ಕೌಶಲ್ಯವ ಕಲಿತು ಬೆಳಗು ನೀ ಜಗದ ಸಂತೆಯಲಿ ಎಂದ ಮಳೆ ಬೆಳಗು...
ಶುಭದಿನವಾಗಲಿ... 🧘

ಎನ್ನೆದೆಗೊರಳಲ್ಲಿ ನಗೆಯ ಹೊಸ ಹಾಡು ಹುಟ್ಟಲೀ ಬಿಡಲಿ ಬೆಳಗಾಗುವ ಹೊತ್ತಿಗೆ ಹೊಸತೇ ಎಂಬಂತೆ ಬೆಳಕರಳದೇ ಇರದು...
ಬೆಳಕು ಶುಭವೇ ಅಹುದು - ನಾನೇ ಎನ್ನೆದೆಯ ಶುಭ್ರವಾಗಿಸಿಕೊಳ್ಳಬೇಕೆಂಬುದೂ ಹೌದು...
ಶುಭದಿನ... 🧘

ಬೆಳಕೆಂದರೆ ಪ್ರೀತಿ ಹಾರೈಕೆ - ಹೂ ದುಂಬಿಗಳ ಕನಸ ಆರೈಕೆ...
ಬೆಳಗೆಂದರೆ ಒಲವ ಸಂಭ್ರಮ...
ಶುಭದಿನ... 🪻🦋

ಹೆಜ್ಜೆಯ ಗುರುತುಗಳಿಲ್ಲದ ಕತ್ತಲೂ, ಬೆಳಕೂ ಈ ಎದೆ ನೆಲದ ಮೇಲೆ ನಾನಾ ವಿಧ ಮೊಹರುಳಿಸುವ ಪರಿಯೇನು - ಜಗ ಮರೆತು ಕುಂತ ಈ ಗಾಂಪನ ಬೆರಗು ಬೆಳಗು...
ಶುಭದಿನ... 🫂

ಕಳೆದಿರುಳ ಹಾಡಿನ ತರಾನಾದ ತರಂಗಗಳಿನ್ನೂ ಎದೆಯಲ್ಲಿ ಮಿಡಿಯುತ್ತಲೇ ಇರುತ್ತವೆ...
ಬೆಳಗು ಇರುಳ ಮಿಂದ ಅದೇ ಮೊಗವನ್ನು ಬೆಳಕ ಕನ್ನಡಿಯಲಿ ತೋರುತ್ತದೆ...
ಅದೇ ನಿನ್ನೆಗಳನೇ ತೊಳೆದು ಜಗದೆದುರಿಗಿಟ್ಟು ಹೊಸ ದಿನವೆನ್ನುತ್ತೇನೆ - ನಿನ್ನೆಯ ಅಳುವಿಗೂ ನಗೆಯದೇ ಬಣ್ಣ ಮೆತ್ತಿದೆನಾದರೆ ಅದೇ ಏನೋ ಸಮಾಧಾನ ಹೊಸ ಹಗಲಿಗೆ...
ಶುಭದಿನ... 🤝🫂

ನಿದ್ದಂಡಿಯಾದ ಆಳಸಿ ಹುಳು ನಾನು - ಅಲಾರಾಂನ ತಲೆ ಮೊಟಕಿ ಮತ್ತೆ ಮುಸುಕೆಳೆದುಕೊಳ್ತೇನೆ...
ಯಾವ ಗಡಿಬಿಡಿ, ಯಾವ ಆಲಸ್ಯವೂ ಇಲ್ಲದೇ ಸಾವಧಾನದ ಸಾರಥ್ಯದಲ್ಲಿ ಬಾನಿಂದ ಬೆಳಕಿಳಿಯುತ್ತದೆ ಮತ್ತು ವಸುದೆ ಬೆಳಕಾಗುತ್ತಾಳೆ / ಪ್ರೀತಿಯ ಬೆಳಕೇ ಆಗುತ್ತಾಳೆ...
ಶುಭದ ಹಾರೈಕೆ, ಆರೈಕೆಯ ಬೆಳಕಾಗಲಿ ಬೆಳಗು... 🤗

ನಗೆಯ ಮೂಲ ಶಕ್ತಿ ಎದೆಯ ಬೆಳಕೇ ಇರಬೇಕು...
ಪ್ರೀತಿಗೆ ಪ್ರೀತಿಯಿಂದ ಬಾಗುವ ವಿನೀತ ಬೆಳಗು...
ಶುಭದಿನ...🤝🫂

ಇಲ್ಲೇ ಎಲ್ಲೋ ಕಳೆದುಕೊಂಡ ನಗೆಯ ಸೂಜಿಯ ಹುಡುಕಲು ಎದೆಯಲಿಷ್ಟು ಪ್ರೀತಿ ಬೆಳಕು ಬೆಳಗಬೇಕು...
ಬೆಳಗಿದು  ಧಾರೆ ಧಾರೆ ಪ್ರೀತಿ ಸೊಬಗ ಸುರಿಯಲಿ ಎದೆಯಿಂದ ಎದೆಗೆ - ಹೊಲಿಯಬೇಕಿದೆ ಬದುಕನು...
ಶುಭದಿನ... 🤝🫂

ಇರುಳು, ಹಗಲೆಂಬೋ ಕಾಲನ ನಡಿಗೆಯ ಕವಿತೆಯಲ್ಲಿ ನಮ್ಮೆಲ್ಲ ಹೆಸರಿನಲೂ ಒಂದೊಂದು ಸಾಲಿದೆ - ಆಹಾ! ಎನಿತು ಸೌಭಾಗ್ಯ, ಏನೀ ನಿರ್ಮಮ ನಿರ್ಮಲ ಕಾರುಣ್ಯ...
ಶುಭದಿನ... 🤝🫂

ಜಗದ ಜಾಡ್ಯವ ತೊಳೆವ ಬೆಳಕ ಹೊಳೆ ಧಾರೆಗೆ ಎದೆಯ ಮೊರದಲಿಟ್ಟು ನನ್ನದಿಷ್ಟು ನಿನ್ನದಿನ್ನಿಷ್ಟು ನಗೆಯ ಪದ್ಯದ ಬಾಗಿನವ ಕೊಡಲಾದರೆ...
ಅಲ್ಲಿಗದು ಶುಭದಿನವೇ ಸರಿ...🤝🫂

ಮುಗುಳ್ನಗುವಿರಲಿ, ಮಳ್ಳು ನಗುವೇ ಇರಲಿ, ಹಂಚಿಕೊಂಡ ಎರಡೂ ರುದಯಗಳನು ಅಯಾಚಿತವಾಗಿ ಒಂದು ಹದದಲ್ಲಿ ಸಂತೈಸುತ್ತದಲ್ಲ...
ಬೆಳಕೆಂದರೆ ಅದೇ - ಕಣ್ಣಲಿಷ್ಟು ನಗೆಯ ಹನಿಗಳ ತೇವವ ಕಾದುಕೊಳ್ಳಬಲ್ಲ ಧ್ಯಾನ...
ಶುಭದಿನವೇ ನೇಹೀ ನಗೆ ನಾಲೆಯೇ... 🤝🫂

ಇರುಳಿಡೀ ತಾನಾಳಿದ ಜಗವನು ಬೆಳಕಿಗೆ ಆಡಲು ಬಿಟ್ಟು ತನ್ನಿರವನೆ ಮರೆತು ನೆರಳಾಗಿ ನಿಲ್ಲುವ ಕತ್ತಲ ಔದಾರ್ಯ ಈ ಹಗಲು...
ಶುಭದಿನ... 🤝

ಪ್ರೀತಿಯ ನಿತ್ಯಾರಾಧನೆ... 
ತಬ್ಬಿದ್ದು ನೇಹವಾದರೆ, ಪ್ರೀತಿಯಾದರೆ ಕೊಟ್ಟುಬಿಡಬೇಕು ಸುಮ್ಮನೆ, ಕೊಟ್ಟು 'ಬಿಡಬೇಕು' ಸುಮ್ಮನೇ; ಅರ್ಥಾರ್ಥಗಳ ಗೊಂದಲವಿಲ್ಲದೇ, ಪರಿಣಾಮದ ಹಿರಿಮೆ ಗರಿಮೆಗಳ ಕೊಂಬಿಲ್ಲದೇ, ಸಾಂತ್ವನದ ಸಾನ್ನಿಧ್ಯದ ಸವಿಭಾವ ಎದೆ ತುಂಬಿ ನೆನಪುಳಿವ ಹಾಗೆ ಸುಮ್ಮನೆ - ಬೆಳಕು ಬಯಲ ಹಬ್ಬಿ ತಬ್ಬಿ ಹಸಿರ ಹರಸಿದ ಹಾಗೆ ಸದ್ದಿಲ್ಲದೆ ಸುಮ್ಮನೆ...
ಶುಭದಿನ... 🤝

ಬೆಳಕೆಂದರೆ ಅರಿವಿನ ಯಜ್ಞ - ಬೆಳಗು ಅದರ ನಾಂದೀ ಮಂತ್ರ...
ಶುಭದಿನ... 🧘

ನಾಳೆಗೆಂದು ಬೊಗಸೆಯಲಿ ಉಳಿಸಲಾಗದು
ಇಂದು ಎದೆಗೆ ತಾಕಿದ್ದನು ಅಳಿಸಲಾಗದು
ಈಗ ಈ ಕ್ಷಣ ಸೋಕಿದಷ್ಟನೂ ಆಗಿಂದಾಗಲೇ ಸವಿದಷ್ಟೂ ಸೊಗಸು...
ಬೆಳಕು - ಪ್ರೀತಿ - ಬದುಕು...
ಶುಭದಿನ... 🤝

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಐವತ್ತು ಮತ್ತೊಂದು.....

ಬೆಳಗೆಂಬ ಬಹುವಿಧ ವಾರ್ತಾಲಾಪ.....   

ಎಲ್ಲದರಲ್ಲೂ ಶುಭವನ್ನೇ ಬಯಸುವ ಮನಸಿಗೆ - ಎಲ್ಲದರಲ್ಲೂ ಒಂದಿಲ್ಲೊಂದು ಬೆಳಕೇ
ತುಂಬಿದೆ - ಎಲ್ಲದರಲ್ಲೂ ಒಳಿತನ್ನೇ ಹುಡುಕಯ್ಯಾ ಮರುಳೇ ಎಂದು ಹಿತವಾಗಿ ತಿವಿದ ಸಂತ ಬೆಳಗು...
ಶುಭದಿನ... 🧘

ನಿನ್ನೆಯ ಬೇಗುದಿಗಳೆಲ್ಲ ಇಂದಿನ ಈ ಬೆಳಕಲ್ಲಿ ಬಳಿದು ಹೋಗಲಿ...
ಇರುಳ ಕಾಡಿದ ಕಣ್ಣ ಹನಿಗಳಲಿ ಹೊಸತೇ ನಗೆಯ ಕಾಮನಬಿಲ್ಲು ಕಟ್ಟಲಿ...
ನೂರು ಸದಾಶಯಗಳಾಸೆಯ ಒಂದು ಹೊಸ ಬೆಳಗು...
ಶುಭದಿನ... 🧚

ಎಷ್ಟೊಂದು ಗಡಿಬಿಡಿ ನೋಡೀ ಬೆಳಕಿಗೆ - ತೂಕಡಿಸುವ ಕಂಗಳ ಕ್ಷಣದ ಖುಷಿಗೆಂದು ಒಂದಿನವೂ ತುಸು ಸಾವಧಾನದಲಿ ಓಡುವಾ ಎಂಬುದಿಲ್ಲ... 
ಕಾಲನ ಊಳಿಗದಲಿ ಅದೇನು ಒಪ್ಪಂದವೋ...
ಬೆಳಗಾಯಿತು - ಕಣ್ಣುಜ್ಜಿ ಬೆಳಕ ದರ್ಶನಕೆ ಅಣಿಯಾಗಬೇಕು... 
ಶುಭದಿನ... 🤗

ಬೆಳಕು ನಮ್ಮನ್ನು ದುಡಿಸಿಕೊಳ್ಳುತ್ತದಾ...
ಬೆಳಕನ್ನೇ ನಾವು ದುಡಿಸಿಕೊಳ್ತೇವಾ...
ಗೊಂದಲದ ನಡುವೆಯೇ ಒಟ್ನಲ್ಲಿ, 
ಬದುಕಿಗಾಗಿ ಬೆಳಕನ್ನು ದುಡಿದುಕೊಳ್ಳಲು ಬೆಳಕಿನ ಬೆನ್ನು ಬಿದ್ದಿರ್ತೇವೆ...
ಬೆಳಗೆಂಬ ಗರಡಿಮನೆ...
ಶುಭದಿನ... 🧚

ಕತ್ತಲ ಕುಡಿಯದೇ ಬೆಳಕು ಜೀರ್ಣವಾಗಲಿಕ್ಕಿಲ್ಲ - ಪ್ರಖರ ಬೆಳಕಲ್ಲಿ ನೆರಳ‌ ಹುಡುಕುತ್ತೇವೆ...
ಕತ್ತಲ ಪರಿಚಯ ಇಲ್ಲದಿದ್ದರೆ ಹಗಲಲ್ಲೂ ಬೆಳಕು ಕಾಣುವುದು ದುಸ್ತರ - ಕಣ್ಣ ಮುಚ್ಚಿ ಕೂತಾಗಲೇ ಹೆಚ್ಹೆಚ್ಚು ಕಾಣುವುದಂತೆ...
ಕತ್ತಲ ನೆಂಚಿಕೊಂಡೇ ಕುಡಿಯುವಲ್ಲಿ ಬೆಳಕೂ ಒಂದು ಹಿತವಾದ ನಶೆಯೇ ಇರಬಹುದು...
ಶುಭದಿನ... 🪴

ಪ್ರೀತಿಯ ಎಣ್ಣೆ ಎರೆದುಕೊಂಡಿರೋ ವಸುಧೆ...
ಮಂಜಿನ ಮಡಿಲಲಿ ಅಡಗಿ ಕೂತಿದೆ ಬೆಳಗು...
ಶುಭದಿನ... 🍫🍬

ದಂಡೆಯಾ ಮೌನಕೇ 
ಶರಧಿಯಾ ಅಲೆಗಳಾ
ಬಾಹು ತೋರಣ...
ಸುರ ಸಂಭಾಷಣೆಯಾ ಧ್ಯಾನ ಬೆಳಗು...
ಶುಭದಿನ... 🏝️

ದೂರ ದಾರಿಯ ಧೂಳಿನಲ್ಲಿ ಬೆಳಕು ಕತ್ತಲ ಬೇಲಿಯ ದಾಟಿತು - ಬೆಳಗಾಯಿತು...
ಶುಭದಿನ... 🍬

ಎದೆಯು ಬರೆದ ಭಾವಗಳಿಗೆಲ್ಲ ಬೆಳಗೆಂಬೋ ಬೆಳಕಿನ ಶುಭ್ರ ಶುಭದ ಅಲಂಕಾರ...
ಸಿಂಗಾರದ ಸಿರಿ ಬೆಳಗು...
ಶುಭದಿನ... 🪴

ನನ್ನ ನಗುವಿನ್ನೂ ಬಾಕಿ ಇದೆ...
ಸಾಕ್ಷಿ: ಈ ಬೆಳಗಿಗೆ ಕಣ್ಣು ನಕ್ಕಿದೆ...
ನಿನ್ನ ಕಾಂಬಲು ಇನ್ನೊಂದು ಹಗಲಿನ ಉಡುಗೊರೆ - ಬದುಕಿನಿಂದ...
ಶುಭದಿನ... 🧘

ಜಗದ ಬಯಲಲ್ಲಿ ಬೆಳಕಿನ ಹೂವು ಹೊಸತಾಗಿ ಅರಳುವ ಹೊತ್ತಿಗೆ - ನಿನ್ನ ನೆನಪಿನ ದುಂಬಿ ಹೊಸದೇ ಹುರುಪಿನಲಿ ಎನ್ನೆದೆಯ ಮುದ್ದಿಸುವಲ್ಲಿ - ಶುಭಕದು ಶುಭ ಮುಹೂರ್ತ...
ಶುಭದಿನ... 🫂🤝

ಮಂಗಳಮಯವಾಗಿ ಧಾರೆ ಸುರಿವ ಬೆಳಕಲ್ಲಿ ಎದೆಯ ಜೋಪಡಿಯಲಿರೋ ಅದು ಇದು ಎಲ್ಲದನ್ನೂ ತೋಯಿಸಿ ತೊಳೆದು ಮಡಿ ಮಾಡಿಕೊಂಡು ಶುಭವನಾಗಿಸಿಕೊಂಡರೆ ಆತು - ಸರ್ವಂ ಶುಭಮಯಂ...
ಶುಭಮಸ್ತು ಅಂತಲ್ಲದೇ ಬೇರೇನನೂ ಹರಸದ ಪಾಪಚ್ಚಿ ಬೆಳಗು...
ಶುಭದಿನ... 🧚

"ಸೂರ್ಯ ನೆತ್ತಿಗ್ ಬಂದ, ಇನ್ನೂ ಕುಂಡೆ ಮ್ಯಾಲ್ ಮಾಡ್ಕ್ಯಂಡ್ ಮನ್ಗೇ ಇದ್ದೆ, ದುಡಿಯೂ ಮಕ್ಕೊ ಹಿಂಗ್ ಬಿದ್ಕಂಡ್ ಇದ್ರೆ ದರಿದ್ರ ಹೊಕ್ತು ಮನ್ಗೆ...
ಮದ್ರಾತ್ರೆ ತನ್ಕ ಟೀವಿ, ಮೊಬೈಲು ನೋಡೂದು, ಮಜ್ಜಾನ್ತನ್ಕ ವರ್ಗುದು, ಅವಲಕ್ಷಣ..." 
ಆಯಿಯ ಅಸಹನೆಯ ಸುಪ್ರಭಾತವ ನೆನಪಿಸೋ ಆಳ್ಶಾ ಬೆಳಗು...
ಶುಭದಿನ... 🛌

ಅದೇ ಬೀದಿ, ಅದೇ ಬೆಳಕು, ಹೊಸತು ಪಾಠದ ಪಾಕ - ಹೊಸ ಬೆಳಗಿನ ಸೌಂದರ್ಯ...
ಶುಭದಿನ... 🕊️

ಬೆಳಕನು ನಂಬಿರುವ, ನೆಚ್ಚಿಕೊಂಡಿರುವ ಜೀವಗಳಿಗೆಲ್ಲಾ ಬೆಳಕು ಸಿಗಲಿ...
ಎದೆಯ ಗೂಡಿಗೂ ಬೆಳಕು ತೂರಲಿ...
ಶುಭ ಬೆಳಗು... 🤝

ಜಗದ ಜೀವಗಳ ಕಂಗಳ ಕನ್ನಡಿಗಳಲಿ ತನ್ನ ಸಿಂಗಾರ ರೂಪವ ಕಂಡು ಮುದಗೊಂಡು ಅವರ ಕನಸುಗಳ ಕಾಳಜಿಗೆ ನಿಲ್ಲುವ ಬೆಳಕಿನ ನಿತ್ಯದ ನಗುವಿನ ಹಾರೈಕೆ ಬೆಳಗು...
ಶುಭದಿನ... 🦋

ಬೆಳಕಿನ ಕೋಲು ನೆತ್ತಿ ನೇವರಿಸುವಲ್ಲಿ ಇಬ್ಬನಿಯ ಎದೆ ಕಾವ್ಯದಲ್ಲಿ ಒಂದು ಕ್ಷಣ ಇಂದ್ರಛಾಪದ ಸಂಭ್ರಮ ಮತ್ತು ಅದೇ ಘಳಿಗೆ ಮರಣದ ಮುನ್ನುಡಿ - ಬೆಳಗು ಹೇಳುವ ಬದುಕಿನ ಸರಳ ಪಾಠ...
ಶುಭದಿನ... 🌈

ಇರಲಿ ಬಿಡು ಹಾಗೇ ರಂಗವಲ್ಲಿಯ ಚುಕ್ಕಿಗಳ ಜೋಡಿಸುವಲ್ಲಿನ ಒಂದು ಸೊಟ್ಟ ಗೆರೆ - ನಕ್ಕು ಬಿಡು ಕಾಡುತಿರುವಲ್ಲೂ ಎದೆಯನು ಅಷ್ಟಿಷ್ಟು ಅಪಸವ್ಯಗಳ ಕಾವಿನ ಬರೆ...
ಮುಂಬೆಳಗಿನ ನಿನ್ನಾ ನಗುವೆಂದರೆ - ಬೆಳಕು ಬೆಳಕನು ಸಂಧಿಸಿ ಬೆಳಗು ಬೆಳಗುವಂತೆ ನಿನಗೆ ನೀನುಣಿಸಿಕೊಳ್ಳುವ ಜೀವದ್ರವ್ಯ ಕಾವ್ಯ... 
ಶುಭದಿನ... 🫂

ಬೆಳಗಿನ ಬಯಲನು ನಿನ್ನಾ ನಗೆಯ ಹೂವಿಂದ ಅಲಂಕರಿಸಿ ಆ ಬೆರಗನು ಎನ್ನ ಕಣ್ಣ ಕನ್ನಡಿಯೆದುರು ನಿಲಿಸು - ನೀನು ಬೆಳಕು, ನೀನೇ ಬೆಳಕು...
ಶುಭದಿನ... 👣

ಕಾಂಬ ಕಣ್ಣಿಗೆ ನೂರಾರು ಸಾವಿರಾರು ಬಣ್ಣಗಳ ಒಡೆದು ತೋರುವ ಬೆಳಕು ಕತ್ತಲಿಗೆ ಹೇಳುವ ಮಾತಲ್ಲಿ ನನ್ನ ಅಂತರಂಗದ ಬಣ್ಣದ ವಿವರಗಳು ಸಿಗಬಹುದಾ - ಹುಡುಕಾಟದ ಬೆಳಗು...
ಶುಭದಿನ... 🧚

ಪಟ ಪಾತಿ : ಗೆಳತಿ 'ವೀಣಾ...'

ಹೂಬನದ ಬೇಲಿಯ ದಾಟಿ ಬೆಳಕು ಬನಕಿಳಿದಾಗ ಗಿಡ ಗಿಡಗಳ ಮೈತುಂಬಾ ಹೂವು, ಚಿಗುರು ಚಿತ್ತಾರ - ಮಾಲಿಯ ಕಣ್ತಪ್ಪಿಸಿ ಗಾಳಿಯ ಹೆಗಲೇರಿದ ಘಮಕೆ ಊರೆಲ್ಲ ವಸಂತೋತ್ಸವದ ಝಲಕ್ಕು...
ಜೀವೋತ್ಸವ ರಾಗಕ್ಕೆ ಬೇಲಿಯ ಹೆಣೆಯಲಾದೀತಾ - ಹೂ ಮೃದುಲವು ಎದೆ ತಾಕಲಿ...
ಶುಭದಿನ... 🪻

ಒಂಚೂರು ಕದ ತೆರೆದು ನೋಡು - ಮನೆ ತುಂಬಾ ಬೆಳಕೇ ಬೆಳಕು...
ಒಂದಿನಿತು ನಗು ಸುರಿದು ನೋಡು - ಎದೆ ತುಂಬಾ ನಲುಮೆ ಭಾವದ ಹೊನಲು...
ಅನುದಿನವೂ ಶುಭದಿನವೇ ನೇಹವೇ... 🤝🫂

ಒಂದು ಹೊಸ ಹಾಡಿನ ಪಲ್ಲವಿಯಂಥಾ ಲಾಲಿತ್ಯ ಬೆಳಗು...
ಮಂದಹಾಸವ ಸುರಿದು ನಿಲ್ಲು - ಉದಯರಾಗದ ಆ ಪಲ್ಲವಿಯನು ಮರಳಿ ಮರಳಿ ದಿನವಿಡೀ ಹಂಚುತಿರೋಣ...
ನಗೆಯ ನಾಡಿಯ ನುಡಿ ಜಾಡು - ಉದಿಯ ಕುದಿ...
ಶುಭದಿನ... 🫂🤝

ನಗೆಯ ಕಡಲಾಗಲಿ ಬೆಳಕಿನೊಡಲು...
ಬೆಳಕಿನ ಕಡಲಲಿ ತೇಲಲಿ ನಗೆಯ ಹಾಯಿ ಸಾಲು ಸಾಲು...
ಶುಭದಿನ... 🚣

ನಿದ್ದೆ ಮರುಳಲ್ಲಿ ತೆಕ್ಕೆ ಸಡಿಲಾದ ಪ್ರಣಯಿಗಳು ತಿಳಿ ಎಚ್ಚರದಲಿ ಒಬ್ಬರನ್ನೊಬ್ಬರು ಹುಡುಕಿ ಬಳಸಿದಂತೆ ಕತ್ತಲ ಚಾದರವ ಸರಿಸಿ ಬೆಳಕೂ, ನಗೆಯೂ ಹೆಗಲ ತಬ್ಬಿಕೊಂಡ ಮಧುರ ಮೋಹಕ ಘಳಿಗೆ ಈ ಬೆಳಗು...
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಐವತ್ತು.....

ಆಯೀ ಅಂಬೋ ಭಗವದ್ಗೀತೆ..... 

ನಿನ್ನ ಭಜನೆಯೂ ನನ್ನ ನಾ ಕಾಯ್ದುಕೊಳ್ಳುವ ಹಗ್ಣಗಳಲ್ಲಿ ಒಂದಾದಲ್ಲಿ 'ನಾನು' ಎಂಬುದಷ್ಟೇ ಸತ್ಯ; ಉಳಿದ ಕಲಾಪಗಳೆಲ್ಲವೂ ಬರಿ ಪೊಳ್ಳು ಪೊಕ್ಳೆ ಅಷ್ಟೇ...
___ ಬೆಳಕನು ಪ್ರೀತಿಸುತ್ತಾ ನೆರಳಿನಲಿ ಸಂಸಾರ ಹೂಡುವುದು...
&&&

ನಾಳೆ ಯಾರಾದರೂ ಯಾಕಾದರೂ ನನ್ನ ನೆನೆಯಬೇಕು...
ಇಂದು ಒಂದಾದರೂ ನಗೆ ಮುಗುಳ ಯಾರದೇ ಎದೆ ಮಡಿಲಿಗೆ ಸುರಿಯದವನನು...
___ ಒಣ ಒಣ ಹೆಗಲಿನ ತೊಗಲು ಗೊಂಬೆ...
&&&

ನಾನಲ್ಲದ ನಾನು ನನ್ನೆದೆಯ ಕನ್ನಡಿಯಲಿ ಕಂಡಾಗಲೆಲ್ಲ ಕಂಗಾಲಾಗಿ ನಿನ್ನೆದುರು ನಿಲ್ಲುತ್ತೇನೆ - ನಿನ್ನ ಪಟದ ಕಣ್ಣೊಳಗಿಳಿಯಲೂ ರಕ್ತ ಆರಿದವನಂತೆ ಆಯಾಸಗೊಳ್ಳುತ್ತೇನೆ...
ಸತ್ತು ನೀನು ಸುಖಿ ಅನ್ನಿಸುವಾಗ ಬದುಕಿರುವ ನನ್ನ ಭಂಡ ಬಾಳಿನ ಸೋಲಿನ ಅರಿವಾದವನಂತೆ ಕನಲುತ್ತೇನೆ...
ಆದರೂ,
ಮಾತಾಗಬೇಕು - ನಿನ್ನ ಮೌನದ ಎತ್ತರವ ಮುರಿಯಬೇಕು ಎಂಬ ಸುಳ್ಳೇ ಹಠಕ್ಕೆ ಬೀಳುತ್ತೇನೆ...
ಮತ್ತದೇ ಭಂಡ ಬಾಳಿನ ತೋಳಿನಲಿ ಸರಸಕ್ಕೆ ಬೀಳುತ್ತೇನೆ...
ಮತ್ತೆ ಮತ್ತೆ ಪ್ರತಿ ಸಂಜೆಯಲೂ ನಿನ್ನ ಪಟದೆದುರು ತಲೆ ಕೊಡವುತ್ತ ನಿಲ್ಲುತ್ತೇನೆ - ಭಾವಗಳೆಲ್ಲಾ ಪಾಪ ನಿವೇದನೆಯ ಹಣ್ಣು, ಕಾಯಿ...
ಚಂಚಲ ನಾನು, ಚಿರಾಯು ಪಾಪಿ - ಒಳಗೆ ನನ್ನನಷ್ಟೇ ಪ್ರೀತಿಸಿಕೊಳ್ಳುವ ನಾನು ನನ್ನ ಅಂಕಿತ ನಾಮವನಿಟ್ಟು ಜಗದೆದುರು ನಿನ್ನ ಪ್ರತಿಮೆಗಳ ನಿಲ್ಲಿಸುತ್ತೇನೆ...
ದೇವರು ನೀನು - ಪಟದೊಳಗೆ ಅದೇ ಮಾಸದ ನಗು...
___ ಇದೆಲ್ಲದರ ವಿಮೋಚನೆಯ ದಿನ ಅದೇ ಇರಬಹುದು - ನಿನ್ನ ಪಟದ ಕೆಳಗೆ ನಾನೂ ಪಟವಾದಾಗಿನದು...

ಎಲ್ಲಾ ಹಸಿವೂ ಹಂಗಂಗೇ ಇಂಗಿ ಹೋಗುವಂಗೆ ಒಂದು ಬದುಕನೇ ನುಂಗಿ ತೇಗುವ ಸಾವಿನದೊಂದು ದಡೆ ಮತ್ತು ಆ ಬದುಕಿನ ಸುತ್ತ ಸನಿಹ ಬೆಸೆದುಕೊಂಡವರು ಬದುಕನೇ ಹಳಿಯುವಂಗೆ ಕಾಡುವ ಎಂದೂ ಇಂಗದ ಎದೆಯ ಖಾಲಿತನದ ನೋವಿನದೊಂದು ದಡೆ...
ಸಾವಿನ ತೂಕ ಹೆಚ್ಚಾ...? 
ಸಾವಿನ ಮಗ್ಗುಲ ನೋವಿನ ಭಾರ ಹೆಚ್ಚಾ...??
ಉತ್ತರ ಕಾಣದ ಕಣ್ಣ ಮುಂದೆ ಮಸುಕು ಮಸುಕು ನೀಲಿ ಬಯಲಿಂದ ನನ್ನ ಹೆಸರನು ಕೂಗುವ ನಕ್ಷತ್ರವ ಹುಡುಕುವ ಆಟವೊಂದೇ ಸಮಾಧಾನ...
___ ಅಂತಕನ ದೂತರಿಗೆ ಪ್ರಾರ್ಥನೆಯ ದರ್ದಿಲ್ಲ...

ನಮ್ಮನ್ನು ಆಳಲು ಬಿಟ್ಟು ತಾವು ಅಳಿದವರ ಔದಾರ್ಯವ ಮರೆಯಬಾರದೆಂದೇ ಶ್ರಾದ್ಧ ಮಾಡ್ತಾರಂತೆ...
ಮರುಳನಾದರೂ ಮರೆತಾದರೂ ಮರೆಯಲಾದೀತಾ ಮಡಿಲ ತಂಪನು - ಇಲ್ಲಿನೆಲ್ಲಾ ಮಿಡಿತಗಳೂ ಅಲ್ಲೆಲ್ಲಿಂದಲೋ ನೆನಪಾಗಿ ಸುರಿವ / ಸುಳಿವ ನಿನ್ನ ಹೆಸರನೇ ನುಡಿಸುತ್ತವೆ ಹೊತ್ತು ಹೊತ್ತನು...
ನನ್ನೆದೆಯಲಿ ನಿತ್ಯವೂ ನಿನ್ನ ಶ್ರಾದ್ಧ...
___ ಈ ನಗೆಯ ನಾಡಿ ನೀನು...

ಕಾಲನ ಕಾಲು ನೆತ್ತಿಯ ತುಳಿಯುವ ಹೊತ್ತಲ್ಲೂ ಸದಾ ಇಲ್ಲೇ ಮೇಲೆಲ್ಲೋ ನಗುತ್ತಾ ಕೂತು ಎದೆಯ ತೇವವ ಕಾಯುವ ಕರುಳ ಬೇರು...
___ ಆಯೀ ಅಂಬೋ ಭಗವದ್ಗೀತೆ...

ಅವಳ ನುಡಿಯಲ್ಲಿ ಗುಮ್ಮನೂ ಅವಳ ಆಜ್ಞಾವರ್ತಿ ಸೇವಕ...

ಈ ಬದುಕಿನ ಎಲ್ಲಾ ಹಿತ ಅಹಿತಗಳ ತುಂಬು ಸಭೆಯಲ್ಲಿ ಮೊದಲ ಸಾಲಿನ ನೆನಪು ನೀನು...

ಆಗಸದ ಬಯಲ ಹಾದಿಯಲ್ಲಿ ಲೋಹದ ರೆಕ್ಕೆಗಳ ದನಿ ಕೇಳಿದಾಗಲೆಲ್ಲಾ ಬೆರಗಿನಿಂದ ಕಣ್ಣರಳಿಸಿ ನೋಡುತ್ತಿದ್ದೆ ಮೊದಲೆಲ್ಲಾ...
ಅಳಿಯದ ಬೆರಗಿನೊಡನೆಯೇ ಸಣ್ಣ ಪಾಪಪ್ರಜ್ಞೆಯಂಥದ್ದೇನೋ ಕಾಡಿ ಮುಖ ಮಣ್ಣ ನೋಡುತ್ತಾ ಮೌನವಾಗುತ್ತೆ ಈಗೆಲ್ಲಾ...
"ಒಂದ್ ಸಲ ಇಮಾನ್ ಹತ್ತಿ ನೋಡ್ಲಾಯ್ತು" 
ಅಂಗಳದ ತುದಿಯಿಂದ ಸಣ್ಣಗೆ ದನಿ ಮೊರೆದಂತೆ ಭಾಸ - ನೀ ಅರುಹಿದ್ದ ಅದೊಂದು ಆಸೆಯನು ಹಾಗೇ ಉಳಿಸಿ ಕಳಿಸಿಬಿಟ್ಟೆನಲ್ಲ ನಿನ್ನನು...
ಅಂಥಾ ಬಡತನವೇನಿರಲಿಲ್ಲ - ತುಟ್ಟಿಯಾದದ್ದಾದರೂ ಏನು - ಏನೇ ಸಮಜಾಯಿಷಿ ಕೊಟ್ಟುಕೊಂಡರೂ ಮನಸು ಬಡವಾದದ್ದೇ ಹೆಚ್ಚು ನಿಜ ಅನ್ನಿಸಿಬಿಡತ್ತೆ ಈಗ...
ಹೇಳದೇ ಉಳಿದ ಅದಿನ್ನೆಷ್ಟು ಕನಸುಗಳಿದ್ದವೋ ಕರುಳ ಗಂಟಿನೊಳಗೆ - ಅವುಗಳ ಲೆಕ್ಕವೆಲ್ಲಾ ಬರೆಯದೇನೇ ಚುಕ್ತಾ ಬಿಡು...
ಇಲ್ಲಿಂದ ಹೊರಟವರೆಲ್ಲ ಅಲ್ಲಿ ನಕ್ಷತ್ರವಾಗುವರಂತೆ - ನೀನೀಗ ವಿಮಾನ ಹಾರುವ ಹಾದಿಗಿಂತ ಎತ್ತರ...
ಆದರೂ.........
ನಕ್ಷತ್ರಕೂ ವಿಮಾನಯಾನ ಕನಸೇ ಇರಬಹುದಾ..... !!?
___ ಕನಸಿಗಾದರೂ ಬಂದು ಬೈದು ಹೋಗು ಒಮ್ಮೆ....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ನಲ್ವತ್ತರಮೇಲೊಂಭತ್ತು.....

ಮಾಗಿಯ ಮೈನೋವು..... 

ಹೊಗಳಿ ಹೊಗಳಿ ಒಲಿಸಿಕೊಂಡೇನೆಂಬ ಭ್ರಮೆ ಬೇಡ - ಗುರ್ರ್ರ್ರ್ ಅಂದು ಮೂಗು ಮುರಿದಳು...
ಪರಾಕಿನ ಪಾಂಡಿತ್ಯವಲ್ಲವೇ, ಎದೆಯ ಮೀಯಿಸುವ ಕಣ್ಣೆದುರಿನ ಹೆಣ್ತನದ ಚೆಲುವನ್ನು ಸುಳ್ಳೆನ್ನಲಾಗದ ರಸಿಕನೆದೆಯ ನಲಿವು ಅದು ಅಂದೆ ಬಿಡುಗಣ್ಣಲಿ ನಗುತ್ತಾ...
ಹಿಂಗೆ ಛಳಿಗೆ ಕಂಪನಗಳ ಬೆರೆಸಿ ಏನೇನೋ ಅಂದು ಅಂದೇ ನನ್ನಂತ ಎಷ್ಟು ಹೆಣ್ಣುಗಳ ಎದೆ ಕದ್ದೆಯೇನೋ ಕಳ್ಳ ಕೊರಮ ಅಂತ ಬಿರುಗಣ್ಣಲಿ ಎದೆಯ ತುಳಿದುಬಿಟ್ಟಳು...
ಕದ್ದದ್ದು ಖರೆಯೋ ಸುಳ್ಳೋ ಕಾಣೆ, ಕಾಲಕೂ ಹೆಣ್ಣೆದೆಯ ಚೆಲುವಿಗೆ ಬೇಷರತ್ತಾಗಿ ಸೋತವನಂತೂ ಹೌದೇ ಹೌದು - ಹೀಗೆ ಶರಣು ಬಂದವನನು ನಿನ್ನಾ ಹೆಣ್ಣೆದೆಯ ಬಿಗಿಯಲೇ ಬಂಧಿಸಿ ಈ ಉಕ್ಕುವುಸಿರಿಗೆ ಆ ಬಿಸಿಯೂಡಿ ಗೆಲ್ಲಿಸೇ ಅಂದೆ ಕಣ್ಣ ನಶೆಯಲವಳ ತೇಲಿಸುತ್ತಾ... 
ಬಿಟ್ಟರೆ ತುಂಬಾ ಮಾತಾಡ್ತೀಯಾ ಪಾಪಿ ಅನ್ನುತ್ತಾ ಬೆನ್ನ ಪರಚಿ ತುಟಿಗಳ ಮು(ಕ)ಚ್ಚಿದಳು...
___ ಮಾಗಿಯ ಮೈನೋವಿಗೆ ಸೋತಲ್ಲದೇ ಪೋಲಿಯ ಉಸಿರಿಗೆ ಬೆಲೆಯೇನು...
&&&

ಎದೆಗಣ್ಣ ಹನಿಗಳ ಭಾವ ಸಾಂದ್ರತೆಯಿಂದ ಕಾಣದೇ, ದೇಹದ ಅನ್ಯೋನ್ಯತೆಯನಷ್ಟೇ ಕಂಡು ಆಡಿಕೊಂಡು ಪ್ರೀತಿ ಬಂಧಗಳನು ಪವಿತ್ರ ಅಪವಿತ್ರ ಅಂತ ನೈತಿಕತೆಯ ತಕ್ಕಡಿಯನು ತೂಗುವ ನಾವು ರಾಧೆ ಕೃಷ್ಣರನ್ನು ದೇವರಾಗಿಸಿ ಸಮಾಧಾನಗೊಂಡೆವು...
____ ಪ್ರಕೃತಿ ಸಂಗೀತವ ಮೈಲಿಗೆ ಅನ್ನುವ ಅಹಂಕಾರ...
&&&

"ಬೆಳಕಲ್ಲಿ ನಗೆಯ ಬೆಳಕಾಗಿ ನಿಂತವಳ ರೋಮಾಂಚಕ ಕತ್ತಲ ತಿರುವುಗಳನು ಹುಡುಕುವಾಗ ಪೋಲಿ ಹೈದನ ಕಣ್ಣಲ್ಲಿ ಮಾಗಿ ಕರಗುತ್ತದೆ" ಅಂತ ನಾಟಕೀಯ ಮಾದಕತೆಯಲಿ ಉಸುರಿದೆ...
"ಎದೆಯಾಳದ ಕತ್ತಲನೂ ನೋಡು" ಅಂದಳು ಮುಗುಮ್ಮಾಗಿ...
ಅಯ್ಯೋ ಬಿಟ್ಟೇನಾsss, ಎಲ್ಲೆಲ್ಲಾ ಅಲೆದೂ ಅಲ್ಲೇ ಬಂದು ನಿಲ್ಲುವುದು ಕಣ್ಣ ಕವಣೆಯ ಬಿಗಿತ, ಅದು ರಸಿಕನೆದೆಯ ನೂರು ಹಸಿ ಆಸೆ ಕಂಪನಗಳ ಹೋರಿನ ಕಂಪಿನುಸಿರ ಮೊದಲ ಚಾರಣದ ಕಿರು ಏರು ಹಾದಿ ಅಂದೆ...
ಪಾಪೀsss ಎಂದವಳ ಹುಸಿ ಮುನಿಸಿನ ತಲೆ ಮೊಟಕಿ ಅಳುವಿನ್ನೂ ಬಾಕಿ ಇದೆಯಾ ಎನ್ನುವಾಗ ಕರುಳಾಳದಲೆಲ್ಲೋ ಹೂತಿದ್ದ ನೋವ ಹನಿ ಕಣ್ಣ ಕಡಲಲ್ಲಿ ತುಳುಕಿ ಮಾತಾಗಿ ಹರಿಯುತ್ತದಲ್ಲ, ಅದು ನಾಚಿಕೆ ಬಿಟ್ಟ ಪೋಲಿಯೊಬ್ಬನ ನೇಹವೂ ಚಿಪ್ಪಿನೊಳಗವಿತು ಕೂತವಳ ಒಡೆದ ಎದೆಗೆ ಪರಮಾಪ್ತವಾಗಿ ಬೆಸೆದು ಬದುಕ ತೂಗುವ ಹೊತ್ತು...
___ ಗೋಪಿಯೆದೆಯಲಿ ಗೊಲ್ಲ ಗಾರುಡಿಯಾಗುವುದು ಹೀಗೇ ಇರಬಹುದು...
&&&

ಮಾತಾಡಿ(ಸಿ)ದರೆ 'ಮುತ್ತು' ಉದುರಿಸೋ ಹುಟ್ಟಾ ಪೋಲಿ ನಾನು - ಅವಳ ತುಂಬು ಯೌವನಕೊಂದು ತುಂಟ ನುಡಿ ನಮನ ಸಲ್ಲಿಸಿದೆ...
ನಿನ್ನಾsss - ಸಾಯ್ಸೋಕೆ ಯಾವ ಆಯುಧ ಬಳಸಲೀ ಅಂತ ಯೋಚಿಸ್ತಿದೇನೆ ಅಂದ್ಲು, ಮುನಿಸಿನಲಿ ಎದೆ ಸೆಟೆಸಿ, ಊರಗಲ ಕಣ್ಣಾಗಿ...
ಸೆಳೆದು ಎದೆ ಗೊಂಚಲ ನಡು ಕುಲುಮೆಗೆ ಸೇರಿಸಿಕೋ - ರಸಿಕನ ಕೊಲೆಗೂ ಒಂದು ಮಾಧುರ್ಯ ಮತ್ತು ಘನತೆ ಇರಲೀ ಅಂದೆ...
ಮೂಗಿನ ತುದಿ ಕೆಂಪಾಗಿ, ಕಂಗಳು ಕಲಮಲಿಸಿ, ಕಂಪಿಸುವ ತುಟಿಯ ತೇವದಲಿ ಮಾತು ಮರೆತು, ಎದೆಗೆ ಕೈಕಟ್ಟಿ ನಿಂತಿದಾಳೀಗ - ಹೆಣ್ಣ ಲಜ್ಜೆಯ ವಜ್ಜೆಗಿಂತ ಚೆಲುವು ಇನ್ನಾವುದಿದೆ...
___ ಆಹಾ!!! ಕಿವಿ ಹಾಲೆಯ ಬಿಸಿಗೆ ಹಲ್ಲೂಡುವ ಮಾಗಿ ಮುಸ್ಸಂಜೆಯ ಪ್ರಣಯ ಕಲಹಕ್ಕೆ ನವಿಲ್ಗರಿಯ ನವಿರು...
&&&

ಉತ್ಕಟವಾಗಿ ಜೀವಿಸುವುದಕ್ಕೊಂದು ಗೆಲುವಿನ ನಗು ಬೇಕಿತ್ತು...
ನಿನ್ನ ಬೆತ್ತಲೆ ತೋಳ ಬಿಗಿಯಲ್ಲಿ ಬೀಗಿ, ಊರು ಸರಸಿಯಲಿ ಕರಗಿ ಕರಗಿ ಎದೆಗೊರಗಿದೆ...
ಇರುಳೀಗ ಹೊರಳಿ ಹೊರಳಿ ಎದೆಯಿಂದ ಎದೆಗಂಟಿ ಬೆನ್ನಿಗಿಳಿದ ಬೆವರ ಹನಿಗಳೊಡಗೂಡಿ ಇಬ್ಬರ ಗೆಲುವನೂ ಸಂಭ್ರಮಿಸುತಿದೆ...
____ ಸೋಲರಿಯದ ಸಂಗಮ...
&&&

ಕತ್ತಲನ್ನೂ
ಬೆತ್ತಲನ್ನೂ
ಬೆಳುದಿಂಗಳನ್ನೂ 
ಎಳೆ ಬಿಸಿಲನ್ನೂ 
ಅಪಾರವಾಗಿ ಮೋಹಿಸುತ್ತೇನೆ...
ಕಾರಣ - 
ಕಾರಣವೇ ಇಲ್ಲದೆ ಅವು ನಿನ್ನ ಹುಡುಕುವಂತೆ ಎನ್ನೆದೆಯ ಕಾಡುತ್ತವೆ...
ನನ್ನೇ ನಾನು ಕಾಣುವುದಕ್ಕೆ ಚಂದ ಕಾರಣಗಳ ಕಟ್ಟು ಕಟ್ಟುತ್ತವೆ...
___ ಕಾರ್ಯ ಕಾರಣಗಳ ಆಚೆಯ ಕಾವ್ಯ - ನಿನ್ನ ನೆನಪು, ನಮ್ಮ ಕನಸು, ಬದುಕ ಧ್ಯಾನ(ಧ್ವನಿ)...
&&&

ನಿನ್ನದೊಂದು ಕಳ್ಳ ನಗುವಿನಲ್ಲೂ ನೂರು ಮಾಧುರ್ಯವಿದೆ ಅಂದೆ...
ಎಷ್ಟು 'ಮುಗ್ಧ ಮರುಳ' ನೀನೂ ಅಂದಳು - ಕಣ್ಣ ತುಂಬಾ ಸೋಬಾನೆಯ ಸರಿಗಮ ತುಂಬಿಕೊಂಡು...
ಅನ್ಯಾಯವಾಗಿ 'ದೊಡ್ಡವ'ನಾಗಿ ಹೋದೆ - ತಿರುಬೋಕಿ ಮನಸಿನ ಮೋಹಾಲಾಪದ ಕಂಪನ ಮೈತುಂಬ ಸಿಡಿದು...
ಸಂಜೆಯ ಪಾದಕಂಟಿದ ಬಣ್ಣಾ ಬಣ್ಣದ ಕವಿತೆ - ಅವಳ ಕೊರಳ ಕಂಪಿನ ಹಾಡು ಹಬ್ಬ... 
ಬಳಸು ತೋಳಲ್ಲಿ ತಿಳಿಗತ್ತಲ ತಿರುವಿನ ಸ್ವೇದ ಸಾಲುಗಳೆಲ್ಲಾ ಉಸಿರ ಪೂಸಿಕೊಳ್ಳುತ್ತಾವೆ - ಈರ್ವರ ಮೈತುಂಬಾ ತುಟಿಯಿಂದ ಗೀಚಿದ ಹೃದಯದ ಕಲೆಗಳು...
___ ಕುಡಿದವನೇ ಬಲ್ಲ ಮೋಹೀಮಿಳನದ ಮಧುರ ವಿಷದ ನಶೆಯಾ...
&&&

ನೀನು ಹೀಗೆ ಮಾಡು/ಹಾಗೆ ಮಾಡಬೇಕಿತ್ತು ಎಂದು ಅವಳು,
ನೀನು ಹೀಗಿರಬಾರದು/ಹಾಗಿರಬೇಕಿತ್ತು ಎನ್ನುವ ಅವನು,
ಒಬ್ಬರಿನ್ನೊಬ್ಬರನು ತನ್ನಂತಾಗಿಸಲು/ತನ್ನಿಷ್ಟದಂತಾಗಿಸಲು ಶರಂಪರ ಹೆಣಗಾಡುತ್ತಾ...
'ನಿಂಗೆ ನಾನು ಎಂದಿಗೂ ಅರ್ಥವೇ ಆಗಿಲ್ಲ' ಎಂಬ ಹರಕು ವಾದಿಂದಲೇ ಒಬ್ಬರಲ್ಲೊಬ್ಬರು ಹರವಿಕೊಳ್ಳುತ್ತಾ...
ಕಾಲಕ್ರಮೇಣ ಒಬ್ಬರಿನ್ನೊಬ್ಬರನು ಅರ್ಥೈಸಿಕೊಂಡವರಂತೆ ಗಂಭೀರರಾಗಿ, ಇವನು ಅವಳಂತಾಗಿ, ಅವಳು ಇವನಂತಾಡಲುತಾಗಿ ಅಥವಾ ಅವರಂತವರನು ಬದುಕಲು ಬಿಟ್ಟು ಬಿಡುವ ಒಣ ವಾದಕ್ಕೆ ಜೋತುಬಿದ್ದು, ಮಾತು ಮೌನಗಳೆರಡೂ ಭಾವ ಬೆಸೆಯಲು ಸೋತು ಮೂಲೇಲಿ ಕೂತು, ಅದೇ ತಾಕಲಾಟಗಳು ಅದಲು ಬದಲಾಗಿ, 'ನೀನು ಮೊದಲಿನಂತಿಲ್ಲ' ಎಂಬ ಹೊಸ ಅಸ್ತ್ರವೊಂದು ಹುಟ್ಟಿಕೊಂಡು ಬಾಂಧವ್ಯದ ಅಂಕದ ರೋಚಕತೆಯನ್ನು ಕಾಯುವಲ್ಲಿಗೆ...
ಅಲ್ಲಿಗೆ -
ಬಂಧ, ಬಾಂಧವ್ಯ, ಸಂಬಂಧಗಳ ಸುಳಿ ಚಕ್ರದ ಒಂದು ಸುತ್ತು ಸಂಪನ್ನ...
____ ಹಿಡಿಯಲುಳಿಯದ_ಬಿಡಲೊಲ್ಲದ_ಪ್ರಿಯಾನುಭಾವ ರಾಗ...
&&&

ನದಿ ಅಂದರೆ ಹರಿವು - 
ಧಾರೆ ಧಾರೆ ಕಣ್ಣಸುಳಿತೀರ್ಥವ ಹರಿಸಿ ರಾಧೆ ಕಾದದ್ದು ಯಮುನೆ ಹರಿದಲ್ಲೆಲ್ಲ ಸುದ್ದಿ...
ಶರಧಿಯದು ಇದ್ದಲ್ಲೇ ಕರುಳ‌ ಕೀಳುವ ಹೊಯ್ದಾಟ - 
ಒಳಗೇ ನುಂಗುವ ಕೃಷ್ಣನ ವಿರಹದ ಪರಿತಪನೆಯ ಉಗುಳೂ ಗಾರು ಉಪ್ಪೇ ಇರಬಹುದು...
___ ರಾಧಾ ರಾಧೇ...

ಕಾಯುವುದರಲೂ ಸುಖವಿಲ್ಲ, ಕಾದದ್ದನ್ನು ಅಂದೂ ಸುಖವಿಲ್ಲ - ಬಾರದವರಿಗೆ, ಬರಲಾಗದವರಿಗೆ...
___ ಕೃಷ್ಣ ಕೃಷ್ಣಾ...
&&&

ಪ್ರತಿ ಭೇಟಿಗೂ ಒಂದು ವಿದಾಯ ಇದ್ದೇ ಇದೆಯಂತೆ...
ಎಂದೋ 'ಒಂದು ದಿನ' ಇದು ಹೀಗಾಗುತ್ತೆ/ಹೀಗೇ ಆಗುತ್ತೆ/ಹೀಗಾಗಬಹುದು ಎಂಬುವ ಒಂದು ಅಂದಾಜಿರುತ್ತೆ ಬುದ್ಧಿಗೆ...
ಆದ್ರೆ,
ಆ 'ಒಂದು ದಿನ' ಇಂದೇ ಆಗಿರಬಹುದು/ಬರಬಹುದು ಎಂಬುದನ್ನು ಒಪ್ಪಿಕೊಳ್ಳಲು ಮನಸು ತಯಾರಿರುವುದಿಲ್ಲ ಅಷ್ಟೇ...
ನನ್ನ ಬಗ್ಗೆ ನಂಗೆ ಎಷ್ಟೇ ಗೊತ್ತಿದ್ದರೂ........
____ ಜೋಡಿಸಿದ ತುಂಡು ಹಗ್ಗದ ಗಂಟಿನಲ್ಲಿ ಅದೇನೇನು ಕ(ವ್ಯ)ಥೆಗಳಿರುತ್ತವೆಯೋ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ನಲ್ವತ್ತರಮೇಲೆಂಟು.....

ಸಾಯ್ಲಿ ಅತ್ಲಾಗೆ..... 

ಕೇಳು -  
ಎದೆಯ ಆಸೆ ಆಶಯ ಎರಡೂ ಈ ಕಂಗಳು ಸದಾ ನಗುತಲೇ ಇರಬೇಕು ಅನ್ನುವುದೇ ಆದರೂ,
ಒಮ್ಮೊಮ್ಮೆ -
ಮಲೆನಾಡ ಮನೆಗಳ ದೇವರ ಪೀಠದಲ್ಲಿ ದೇವರ ಪೋಟೋದ ಮರೆಯಲ್ಲಿ ಅಡಗಿ ಕೂತ ಮರಿ ಕಪ್ಪೆ ಸಮಾ ಆರತಿಯ ಹೊತ್ತಿಗೆ ಉಚ್ಚೆ ಹಾರಿಸುತ್ತಾ ಮೈಮೇಲೆ ನೆಗೆದು ಭಯ ಮೂಡಿಸುವಂತೆ ಕರುಳ ಸುರುಳಿಗಳ ಮಡತೆಯ ಮಧ್ಯದಲ್ಲೆಲ್ಲೋ ಹುಗಿದಿಟ್ಟು ಮರೆತಿದ್ದ ನೋವ ವಿಷ(ಯ)ವೊಂದು ಉಮ್ಮಳಿಸಿ ಗಂಟಲಿಗೆ ಬಂದು ಕೂತುಬಿಡುತ್ತದೆ...
ಕಪ್ಪೆಯ ಭಯಕ್ಕೆ ಪೂಜೆ ನಿಲ್ಲುವುದಿಲ್ಲ, ಅಂತೆಯೇ ಸಣ್ಣ ನೋವಿನಂಬಿಗೆ ಜೀವವೇನೂ ಹೋಗುವುದಿಲ್ಲ - ಆದ್ರೆ ಆರತಿ ತಟ್ಟೆ ಕೈತಪ್ಪುವುದೂ, ಕ್ಷಣವೊಂದಕೆ ನಗೆಯ ಮಂತ್ರ ನಾಲಿಗೆಯ ಬುಡದಲೇ ಕಚ್ಚಿ ನಿಲ್ಲುವುದೂ ಸುಳ್ಳಲ್ಲವಲ್ಲ...
___ ಚೂರು ಮನುಷ್ಯನಾದ ಮಾತ್ರಕ್ಕೆ...
&&&

ಶಬ್ದಗಳು ಕಿವಿಯ ತುಂಬಿ ಆಹಾ ಅನ್ನುವುದಕ್ಕೂ, ಭಾವಗಳು ಎದೆಯ ತುಳಿದು ಗುರುತಾಗುವುದಕ್ಕೂ ಏಸೊಂದು ಅಂತರ...
ಎದೆಯ ಮೌನದುಡಿಯೊಳಗೆ ಕಡೆಕಡೆದು ಮಿಡಿವ ಭಾವಾನುವಾದವೆಲ್ಲ ಮಂತ್ರವೇ, ತಂತ್ರವೇ, ತಾರುಣ್ಯವೇ...
___ ಈ ಎದೆಯಿಂದಾಯೆದೆಗೆ ಬೆಸೆವ ಪ್ರೀತಿಯ ಸಂಕ - ಮೌನ ಪೂಜೆ - ಮಾತು ಮಂತ್ರಾಕ್ಷತೆ...
&&&

ಕೇಳಿಲ್ಲಿ -
ಸಾವೊಂದೇ ಬದುಕಿನ ಸಮಾಧಾನ ಅಂತನ್ನಿಸುವ ಹೊತ್ತಿನಲೂ ಸಾಯದೇ ಬದುಕುತ್ತಿರುತ್ತೇವೆ, ಬದುಕನೇ ಆಯ್ದುಕೊಳ್ಳುತ್ತಿರುತ್ತೇವೆ...
ಅದಾಗಿಯೂ ಹೆಂಗೆಂಗೋ ಬದುಕ್ತಾ ಬದುಕ್ತಾ ಒಂದಿನ ಸತ್ತೇ ಹೋಗ್ತೇವೆ...
ನಾ ಸತ್ತಾದಮೇಲೂ ಇಲ್ಲಿ ಬದುಕಿರೋ ಕೆಲವರ ನೆನಪ ಹಣತೆಯ ಬೆಳಕಿಗಾದರೂ ಎದೆಯೊಡ್ಡುವಂತೆ ಬದುಕಿದ್ದೇನಾ / ಬದುಕಬಲ್ಲೆನಾ ಎಂಬುದು ಲೆಕ್ಕ - ಪ್ರಶ್ನೆ ಕೇಳಿಕೊಳ್ಳಲೂ ಭಯ, ಬದುಕಿ ಬದುಕಿ ನನಗೇ ನಾನೇ ಬೇಸರಾಗುವಷ್ಟು ಕಾಲ ಬದುಕಿಯೂ...
___ ಸಾಯ್ಲಿ ಅತ್ಲಾಗೆ...
&&&

ಮುಂದೆಂದೋ ನಿನಗಿಂತ ಉತ್ತಮರ್ಯಾರೋ ಸಿಕ್ಕಿ ನಿನ್ನ ಮರೆವುದು ಸಾಧ್ಯವಾಗುವುದಾದರೆ, ನನ್ನ ಪ್ರೀತಿ ಸುಳ್ಳಾ ಅಥವಾ ನಿನ್ನ ವ್ಯಕ್ತಿತ್ವ ಅಷ್ಟು ಜಾಳಾ...?!
ಇಬ್ಬರ ಆಯ್ಕೆಯೂ ತಪ್ಪು ಅಥವಾ ಅಪ್ರಾಮಾಣಿಕ ಎಂಬುದಷ್ಟೇ ಸತ್ಯವಲ್ಲವಾ...
___ ಕೇಳಿಲ್ಲಿ - "ಕೃಷ್ಣನ ತುಲಾಭಾರದಲ್ಲಿ ಗೆದ್ದದ್ದು ಚಿನ್ನದ ತೂಕವಲ್ಲ, ತುಳಸೀ ಕುಡಿಯ ಪ್ರೀತಿ..."
&&&

ಈ ಅಕಾಲ ಮಳೆ ಮತ್ತು ನಿನ್ನ ಮುರುಕು ಮೌನ ಎರಡೂ ಒಂದೇ ಥರ ನೋಡು...
ಮಳೆ ಮತ್ತು ಮೌನ ಎರಡೂ ಚಂದವೇ - ಆದರೆ, ಅಕಾಲದಲ್ಲಿ ಅವುಗಳ ಪರಿಣಾಮ ಮಾತ್ರ ಯಾರಿಗೂ ಶ್ರೇಯಸ್ಕರವಲ್ಲ...
___ ವಿಲಾಪ...
&&&

ಪುಟ್ಟ ಪುಟ್ಟ ಬಿಳಿ ಕ್ಯಾನ್ವಾಸುಗಳಂಥ ಹಸಿ ಎದೆಗಳ ಒಳಗೆ
ಬಣ್ಣಾ ಬಣ್ಣದ ಕನಸುಗಳ "ಕಲರವ..."

ಎದೆಯ ಭಾವದ ಪತ್ರ - ಕಣ್ಣ ಮುಂದಿನ ಚಿತ್ರ
ಅಷ್ಟುದ್ದ ಬಿಳಿ ದೋತರದ ಮೇಲೆ
ಬಿಡಿ ಬಿಡಿಯಾಗಿದ್ದೂ ಬೆರೆವ - ಬೆರೆತೂ ಬಿಡಿ ಬಿಡಿಯಾಗಿಯೇ ಬೆಳೆವ
ನೂರಾರು ಬಾಳ ರೇಖೆಗಳ ಹಸ್ತ ಮುದ್ರಾ "ಕಲರವ..."

ಬಣ್ಣ ಬಣ್ಣಗಳು ಬೆರಳು ಬೆಸೆದು
ಗುರುತಾಗಿ ಉ(ಲಿ)ಳಿಯಲಿ
ನನ್ನ, ನಿನ್ನ, ಅವನ, ಅವಳ, ನಮ್ಮ ನಿಮ್ಮೆಲ್ಲರ ಜೀವಾಭಾವಯಾನದ "ಕಲರವ..."

ಕಲಮಲಗಳ ಮೀರಿ
ಘಲಘಲಿಸಲಿ ನಗೆಯ ಕಿರು ದಾರಿ...
ಎಳೆ ರುದಯಗಳ "ಕಲರವ..."

ಕಲರವ...

ಏನ್ಗೊತ್ತಾ -
ಸಾವಿನೆದುರು ಕೂತವನಿಗೆ ನಾಳಿನ ಕನಸುಗಳು ಅಷ್ಟೇನೂ ಗಾಢ ಅನಿಸಲ್ಲ - ಗಾಢವೇನು ಲೆಕ್ಕಕ್ಕೇ ಇರಲ್ಲ ಬಿಡು...
ಆದ್ರೆ,
ಈ ಕ್ಷಣದವರೆಗಿನ ನೆನಪುಗಳು, ಹೀಗೆಲ್ಲ ಜೀವಿಸಿದ್ದಿದೆಯಲ್ಲ ಅನ್ನಿಸಿ ಮಂದಹಾಸವ ಸುರಿವ ನೆನಹುಗಳ ಜೋಳಿಗೆಯಲಿನ ಹಿತ ಭಾವದಲೆಗಳು ತುಂಬಾನೇ ಆಪ್ಯಾಯಮಾನ...
ಅದಕೆಂದೇ,
ನನ್ನ ಅನುಕ್ಷಣದ ಕನಸೇನೆಂದರೆ ಪುಟ್ಟ ಪುಟ್ಟ ಪುಟಾಣಿ ಖುಷ್‌ಖುಷಿಯ ನೆನಪುಗಳನು ಎದೆ ಸಂದೂಕದಲಿ ಜೋಡಿಸುತ್ತಾ ಸಾಗುವುದು...
ಮಧುರ ಮೆಲುಕುಗಳ ಒಡ್ಡೋಲಗದ ಮೆಲ್ಲ ನಗೆಯಲ್ಲಿ ಸಾವು ತಾನು ಗೆದ್ದೂ ಕೂಡಾ ಸೋತ ಲೆಕ್ಕವೇ...
___ ಮುಂದೆ ನರಕದಲಿ ಇವೇ ಖುಶಾಲಿನ ಕಥೆಗಳ ಹಂಚಿ ಚಿತ್ರಗುಪ್ತನ ಗಡಂಗಿನಿಂದ ಒಂದು ಗಳಾಸು ಸ್ವರ್ಗದ ವೈನು ಕೊಳ್ಳುವ ಇರಾದೆಯಿದೆ... 🤭
&&&

ವತ್ಸಾ -
ಈ ಸಂಜೆಗಳ ಹಸಿ ಎದೆಯ ಪೆರಟುವ ಏಕಾಕಿತನ ಇಷ್ಟಿಷ್ಟಾಗಿ ಮನವ ಒರಟಾಗಿಸಿದರೆ ಅಂಥ ಪರಿ ಅಪರಾಧವಲ್ಲ - ಬದ್ಲಿಗೆ ಮನಸನ್ನ ಚೂರು ಚೂರೇ ಅ(ತಿ)ಸೂಕ್ಷ್ಮಗೊಳಿಸುತ್ತಾ ಸಾಗಿದರೆ ಮಾತ್ರ.........
ಸುತ್ತ ನಾಕು ಜನ ಆಡಿಕೊಳ್ಳುವವರಾದರೂ ಇರಬೇಕು - ಒಂಟಿ ಹೆಣ ಬಿದ್ದರೆ ದೇಹ‌ ಕೊಳೆತ ಹೊತ್ತಲ್ಲಿ ಆರೆಂಟು ಕಥೆ ಹುಟ್ಟುವ ಅವಕಾಶವಾದರೂ ಇರುತ್ತೆ...
ಎದೆಯ ಭಾವಕೋಶ ಕೊಳೆತ ನಾತ ಬೀದಿಗೆ ಬರಬಾರದು ಅಂತ ಬಾಯ್ತುಂಬಾ ನಗೆಯ ಸುಗಂಧ ಪೂಸಿಕೊಂಡು ಅಲೆಯುವುದು...
____ ಭಂಡ ಬಾಳು...
&&&

ಕೇಳಿದ್ದನ್ನೆಲ್ಲಾ ಕೊಡುವ ಮಾಯಾ ದೀಪವೊಂದು ಸಿಕ್ಕರೆ ನನಗಾಗಿ "ನಿನಗೆ ದೀರ್ಘಾಯುಷ್ಯ ಮತ್ತು ಆ ಆಯಸ್ಸಿನುದ್ದಕ್ಕೂ ನಿನ್ನಿಷ್ಟದ ನಗುವನ್ನ ಕೇಳ್ತೇನೆ" ಅಂದೋಳ ಆಸೆ ಈಡೇರಲಿ...
"ಪ್ರಾರ್ಥನೆಗಳು ಫಲಿಸುವಲ್ಲಿ ಪ್ರೀತಿ ಚಿರಂಜೀವಿ..."
___ ಆತ್ಮಸ್ಥ ಸ್ನೇಹ ಸನ್ನಿಧಿ...
&&&

ಕವಿತೆ ಮುಗಿದಾಗ ಕವಿಯೂ ಮುಗಿಯುತ್ತಾನಾ...?
ಕವಿ ಮುಗದಲ್ಲಿಂದಲೇ ಕವಿತೆ ಹುಟ್ಟುವುದಾ...?
ಕವಿ ಮತ್ತು ಕವಿತೆ ಓರೆಗಣ್ಣಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಬೆನ್ನ ಮೇಲಿಂದ ಓಡು(ದು)ವ ಜಗದ ಮೂಲಕ ತಮ್ಮನೇ ಪರಸ್ಪರ ಪರಿಚಯಿಸಿಕೊಳ್ಳುತ್ತಾ, ಒಂದೇ ಪಾಕದಲ್ಲಿದ್ದೂ ಎಂದೂ ಸಂಧಿಸದೇ ಸಾಗುವ ರೈಲು ಕಂಬಿಗಳಾ...?
ಸಂಧಿಸಿಯೂ ಬೇರೆ ಬೇರೆಯಾಗಿಯೇ ಉಳಿವ, ಹರಿವ, ದೋಣಿ ಮತ್ತು ನೀರು, ಕವಿ ಹಾಗೂ ಕವಿತೆ - ದಡದಿಂದ ದಡಕ್ಕೆ ಪ್ರೀತಿ ಸಾಗುವಳಿಯಾ...?
ಬಗೆಹರಿಯದ / ಬಗೆಹರಿಯಬಾರದೆನಿಸುವ ಗೊಂದಲ...
ಬರೆಯಿಸಿಕೊಳ್ಳುವ ಹಾಗೂ ಬರೆಯುವ ಜುಗಲ್ಬಂದಿ ಒಡನಾಟದಲ್ಲಿ ಕವಿ ಕವಿತೆಯಿಂದ ಮತ್ತು ಕವಿತೆ ಕವಿಯಿಂದ ಮುಕ್ತ ಮುಕ್ತ...
___ ಅನುಭಾವ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)