ಸಾಯ್ಲಿ ಅತ್ಲಾಗೆ.....
ಕೇಳು -
ಎದೆಯ ಆಸೆ ಆಶಯ ಎರಡೂ ಈ ಕಂಗಳು ಸದಾ ನಗುತಲೇ ಇರಬೇಕು ಅನ್ನುವುದೇ ಆದರೂ,
ಒಮ್ಮೊಮ್ಮೆ -
ಮಲೆನಾಡ ಮನೆಗಳ ದೇವರ ಪೀಠದಲ್ಲಿ ದೇವರ ಪೋಟೋದ ಮರೆಯಲ್ಲಿ ಅಡಗಿ ಕೂತ ಮರಿ ಕಪ್ಪೆ ಸಮಾ ಆರತಿಯ ಹೊತ್ತಿಗೆ ಉಚ್ಚೆ ಹಾರಿಸುತ್ತಾ ಮೈಮೇಲೆ ನೆಗೆದು ಭಯ ಮೂಡಿಸುವಂತೆ ಕರುಳ ಸುರುಳಿಗಳ ಮಡತೆಯ ಮಧ್ಯದಲ್ಲೆಲ್ಲೋ ಹುಗಿದಿಟ್ಟು ಮರೆತಿದ್ದ ನೋವ ವಿಷ(ಯ)ವೊಂದು ಉಮ್ಮಳಿಸಿ ಗಂಟಲಿಗೆ ಬಂದು ಕೂತುಬಿಡುತ್ತದೆ...
ಕಪ್ಪೆಯ ಭಯಕ್ಕೆ ಪೂಜೆ ನಿಲ್ಲುವುದಿಲ್ಲ, ಅಂತೆಯೇ ಸಣ್ಣ ನೋವಿನಂಬಿಗೆ ಜೀವವೇನೂ ಹೋಗುವುದಿಲ್ಲ - ಆದ್ರೆ ಆರತಿ ತಟ್ಟೆ ಕೈತಪ್ಪುವುದೂ, ಕ್ಷಣವೊಂದಕೆ ನಗೆಯ ಮಂತ್ರ ನಾಲಿಗೆಯ ಬುಡದಲೇ ಕಚ್ಚಿ ನಿಲ್ಲುವುದೂ ಸುಳ್ಳಲ್ಲವಲ್ಲ...
___ ಚೂರು ಮನುಷ್ಯನಾದ ಮಾತ್ರಕ್ಕೆ...
&&&
ಶಬ್ದಗಳು ಕಿವಿಯ ತುಂಬಿ ಆಹಾ ಅನ್ನುವುದಕ್ಕೂ, ಭಾವಗಳು ಎದೆಯ ತುಳಿದು ಗುರುತಾಗುವುದಕ್ಕೂ ಏಸೊಂದು ಅಂತರ...
ಎದೆಯ ಮೌನದುಡಿಯೊಳಗೆ ಕಡೆಕಡೆದು ಮಿಡಿವ ಭಾವಾನುವಾದವೆಲ್ಲ ಮಂತ್ರವೇ, ತಂತ್ರವೇ, ತಾರುಣ್ಯವೇ...
___ ಈ ಎದೆಯಿಂದಾಯೆದೆಗೆ ಬೆಸೆವ ಪ್ರೀತಿಯ ಸಂಕ - ಮೌನ ಪೂಜೆ - ಮಾತು ಮಂತ್ರಾಕ್ಷತೆ...
&&&
ಕೇಳಿಲ್ಲಿ -
ಸಾವೊಂದೇ ಬದುಕಿನ ಸಮಾಧಾನ ಅಂತನ್ನಿಸುವ ಹೊತ್ತಿನಲೂ ಸಾಯದೇ ಬದುಕುತ್ತಿರುತ್ತೇವೆ, ಬದುಕನೇ ಆಯ್ದುಕೊಳ್ಳುತ್ತಿರುತ್ತೇವೆ...
ಅದಾಗಿಯೂ ಹೆಂಗೆಂಗೋ ಬದುಕ್ತಾ ಬದುಕ್ತಾ ಒಂದಿನ ಸತ್ತೇ ಹೋಗ್ತೇವೆ...
ನಾ ಸತ್ತಾದಮೇಲೂ ಇಲ್ಲಿ ಬದುಕಿರೋ ಕೆಲವರ ನೆನಪ ಹಣತೆಯ ಬೆಳಕಿಗಾದರೂ ಎದೆಯೊಡ್ಡುವಂತೆ ಬದುಕಿದ್ದೇನಾ / ಬದುಕಬಲ್ಲೆನಾ ಎಂಬುದು ಲೆಕ್ಕ - ಪ್ರಶ್ನೆ ಕೇಳಿಕೊಳ್ಳಲೂ ಭಯ, ಬದುಕಿ ಬದುಕಿ ನನಗೇ ನಾನೇ ಬೇಸರಾಗುವಷ್ಟು ಕಾಲ ಬದುಕಿಯೂ...
___ ಸಾಯ್ಲಿ ಅತ್ಲಾಗೆ...
&&&
ಮುಂದೆಂದೋ ನಿನಗಿಂತ ಉತ್ತಮರ್ಯಾರೋ ಸಿಕ್ಕಿ ನಿನ್ನ ಮರೆವುದು ಸಾಧ್ಯವಾಗುವುದಾದರೆ, ನನ್ನ ಪ್ರೀತಿ ಸುಳ್ಳಾ ಅಥವಾ ನಿನ್ನ ವ್ಯಕ್ತಿತ್ವ ಅಷ್ಟು ಜಾಳಾ...?!
ಇಬ್ಬರ ಆಯ್ಕೆಯೂ ತಪ್ಪು ಅಥವಾ ಅಪ್ರಾಮಾಣಿಕ ಎಂಬುದಷ್ಟೇ ಸತ್ಯವಲ್ಲವಾ...
___ ಕೇಳಿಲ್ಲಿ - "ಕೃಷ್ಣನ ತುಲಾಭಾರದಲ್ಲಿ ಗೆದ್ದದ್ದು ಚಿನ್ನದ ತೂಕವಲ್ಲ, ತುಳಸೀ ಕುಡಿಯ ಪ್ರೀತಿ..."
&&&
ಈ ಅಕಾಲ ಮಳೆ ಮತ್ತು ನಿನ್ನ ಮುರುಕು ಮೌನ ಎರಡೂ ಒಂದೇ ಥರ ನೋಡು...
ಮಳೆ ಮತ್ತು ಮೌನ ಎರಡೂ ಚಂದವೇ - ಆದರೆ, ಅಕಾಲದಲ್ಲಿ ಅವುಗಳ ಪರಿಣಾಮ ಮಾತ್ರ ಯಾರಿಗೂ ಶ್ರೇಯಸ್ಕರವಲ್ಲ...
___ ವಿಲಾಪ...
&&&
ಪುಟ್ಟ ಪುಟ್ಟ ಬಿಳಿ ಕ್ಯಾನ್ವಾಸುಗಳಂಥ ಹಸಿ ಎದೆಗಳ ಒಳಗೆ
ಬಣ್ಣಾ ಬಣ್ಣದ ಕನಸುಗಳ "ಕಲರವ..."
ಎದೆಯ ಭಾವದ ಪತ್ರ - ಕಣ್ಣ ಮುಂದಿನ ಚಿತ್ರ
ಅಷ್ಟುದ್ದ ಬಿಳಿ ದೋತರದ ಮೇಲೆ
ಬಿಡಿ ಬಿಡಿಯಾಗಿದ್ದೂ ಬೆರೆವ - ಬೆರೆತೂ ಬಿಡಿ ಬಿಡಿಯಾಗಿಯೇ ಬೆಳೆವ
ನೂರಾರು ಬಾಳ ರೇಖೆಗಳ ಹಸ್ತ ಮುದ್ರಾ "ಕಲರವ..."
ಬಣ್ಣ ಬಣ್ಣಗಳು ಬೆರಳು ಬೆಸೆದು
ಗುರುತಾಗಿ ಉ(ಲಿ)ಳಿಯಲಿ
ನನ್ನ, ನಿನ್ನ, ಅವನ, ಅವಳ, ನಮ್ಮ ನಿಮ್ಮೆಲ್ಲರ ಜೀವಾಭಾವಯಾನದ "ಕಲರವ..."
ಕಲಮಲಗಳ ಮೀರಿ
ಘಲಘಲಿಸಲಿ ನಗೆಯ ಕಿರು ದಾರಿ...
ಎಳೆ ರುದಯಗಳ "ಕಲರವ..."
ಕಲರವ... |
ಏನ್ಗೊತ್ತಾ -
ಸಾವಿನೆದುರು ಕೂತವನಿಗೆ ನಾಳಿನ ಕನಸುಗಳು ಅಷ್ಟೇನೂ ಗಾಢ ಅನಿಸಲ್ಲ - ಗಾಢವೇನು ಲೆಕ್ಕಕ್ಕೇ ಇರಲ್ಲ ಬಿಡು...
ಆದ್ರೆ,
ಈ ಕ್ಷಣದವರೆಗಿನ ನೆನಪುಗಳು, ಹೀಗೆಲ್ಲ ಜೀವಿಸಿದ್ದಿದೆಯಲ್ಲ ಅನ್ನಿಸಿ ಮಂದಹಾಸವ ಸುರಿವ ನೆನಹುಗಳ ಜೋಳಿಗೆಯಲಿನ ಹಿತ ಭಾವದಲೆಗಳು ತುಂಬಾನೇ ಆಪ್ಯಾಯಮಾನ...
ಅದಕೆಂದೇ,
ನನ್ನ ಅನುಕ್ಷಣದ ಕನಸೇನೆಂದರೆ ಪುಟ್ಟ ಪುಟ್ಟ ಪುಟಾಣಿ ಖುಷ್‌ಖುಷಿಯ ನೆನಪುಗಳನು ಎದೆ ಸಂದೂಕದಲಿ ಜೋಡಿಸುತ್ತಾ ಸಾಗುವುದು...
ಮಧುರ ಮೆಲುಕುಗಳ ಒಡ್ಡೋಲಗದ ಮೆಲ್ಲ ನಗೆಯಲ್ಲಿ ಸಾವು ತಾನು ಗೆದ್ದೂ ಕೂಡಾ ಸೋತ ಲೆಕ್ಕವೇ...
___ ಮುಂದೆ ನರಕದಲಿ ಇವೇ ಖುಶಾಲಿನ ಕಥೆಗಳ ಹಂಚಿ ಚಿತ್ರಗುಪ್ತನ ಗಡಂಗಿನಿಂದ ಒಂದು ಗಳಾಸು ಸ್ವರ್ಗದ ವೈನು ಕೊಳ್ಳುವ ಇರಾದೆಯಿದೆ... 🤭
&&&
ವತ್ಸಾ -
ಈ ಸಂಜೆಗಳ ಹಸಿ ಎದೆಯ ಪೆರಟುವ ಏಕಾಕಿತನ ಇಷ್ಟಿಷ್ಟಾಗಿ ಮನವ ಒರಟಾಗಿಸಿದರೆ ಅಂಥ ಪರಿ ಅಪರಾಧವಲ್ಲ - ಬದ್ಲಿಗೆ ಮನಸನ್ನ ಚೂರು ಚೂರೇ ಅ(ತಿ)ಸೂಕ್ಷ್ಮಗೊಳಿಸುತ್ತಾ ಸಾಗಿದರೆ ಮಾತ್ರ.........
ಸುತ್ತ ನಾಕು ಜನ ಆಡಿಕೊಳ್ಳುವವರಾದರೂ ಇರಬೇಕು - ಒಂಟಿ ಹೆಣ ಬಿದ್ದರೆ ದೇಹ ಕೊಳೆತ ಹೊತ್ತಲ್ಲಿ ಆರೆಂಟು ಕಥೆ ಹುಟ್ಟುವ ಅವಕಾಶವಾದರೂ ಇರುತ್ತೆ...
ಎದೆಯ ಭಾವಕೋಶ ಕೊಳೆತ ನಾತ ಬೀದಿಗೆ ಬರಬಾರದು ಅಂತ ಬಾಯ್ತುಂಬಾ ನಗೆಯ ಸುಗಂಧ ಪೂಸಿಕೊಂಡು ಅಲೆಯುವುದು...
____ ಭಂಡ ಬಾಳು...
&&&
ಕೇಳಿದ್ದನ್ನೆಲ್ಲಾ ಕೊಡುವ ಮಾಯಾ ದೀಪವೊಂದು ಸಿಕ್ಕರೆ ನನಗಾಗಿ "ನಿನಗೆ ದೀರ್ಘಾಯುಷ್ಯ ಮತ್ತು ಆ ಆಯಸ್ಸಿನುದ್ದಕ್ಕೂ ನಿನ್ನಿಷ್ಟದ ನಗುವನ್ನ ಕೇಳ್ತೇನೆ" ಅಂದೋಳ ಆಸೆ ಈಡೇರಲಿ...
"ಪ್ರಾರ್ಥನೆಗಳು ಫಲಿಸುವಲ್ಲಿ ಪ್ರೀತಿ ಚಿರಂಜೀವಿ..."
___ ಆತ್ಮಸ್ಥ ಸ್ನೇಹ ಸನ್ನಿಧಿ...
&&&
ಕವಿತೆ ಮುಗಿದಾಗ ಕವಿಯೂ ಮುಗಿಯುತ್ತಾನಾ...?
ಕವಿ ಮುಗದಲ್ಲಿಂದಲೇ ಕವಿತೆ ಹುಟ್ಟುವುದಾ...?
ಕವಿ ಮತ್ತು ಕವಿತೆ ಓರೆಗಣ್ಣಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಬೆನ್ನ ಮೇಲಿಂದ ಓಡು(ದು)ವ ಜಗದ ಮೂಲಕ ತಮ್ಮನೇ ಪರಸ್ಪರ ಪರಿಚಯಿಸಿಕೊಳ್ಳುತ್ತಾ, ಒಂದೇ ಪಾಕದಲ್ಲಿದ್ದೂ ಎಂದೂ ಸಂಧಿಸದೇ ಸಾಗುವ ರೈಲು ಕಂಬಿಗಳಾ...?
ಸಂಧಿಸಿಯೂ ಬೇರೆ ಬೇರೆಯಾಗಿಯೇ ಉಳಿವ, ಹರಿವ, ದೋಣಿ ಮತ್ತು ನೀರು, ಕವಿ ಹಾಗೂ ಕವಿತೆ - ದಡದಿಂದ ದಡಕ್ಕೆ ಪ್ರೀತಿ ಸಾಗುವಳಿಯಾ...?
ಬಗೆಹರಿಯದ / ಬಗೆಹರಿಯಬಾರದೆನಿಸುವ ಗೊಂದಲ...
ಬರೆಯಿಸಿಕೊಳ್ಳುವ ಹಾಗೂ ಬರೆಯುವ ಜುಗಲ್ಬಂದಿ ಒಡನಾಟದಲ್ಲಿ ಕವಿ ಕವಿತೆಯಿಂದ ಮತ್ತು ಕವಿತೆ ಕವಿಯಿಂದ ಮುಕ್ತ ಮುಕ್ತ...
___ ಅನುಭಾವ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment