Tuesday, October 27, 2026

ಗೊಂಚಲು - ನಾಕ್ನೂರ್ತೊಂಭತ್ಮೂರು.....

ಬೆಳಕು ನುಡಿಸುವ ವಿಶ್ವ ಪ್ರೇಮದ ಗೀತೆ - ಬೆಳಗು.....🤝🫂

ವೀಡಿಯೋ ಸೌಜನ್ಯ: ಗೆಳತಿ ವೀಣೆ...
ಅಂದ ಚಂದ ಗಂಧಗೂಡಿ ಮೈದಳೆವ ಹೂ ಬೆಳಕಿನ ಮರಿಗಳ ಸೊಬಗು...
ಹೂವೂ, ಚಿಟ್ಟೆಯೂ, ಕಿಟ್ಟಾಟವಾಡುವ ಬೇಲಿಯಿರದ ಬಾವ ಬೆಡಗು...
ಯೆದೆಯ ಕಣ್ಣು ತುಂಬಿ ತುಳುಕೋ ಪ್ರೀತಿಯ ಬಣ್ಣಾ ಬಣ್ಣ ಬೆಳಗು...
ಶುಭದಿನ... 🤝🫂

ಬೆಳಗೆಂಬ ಒಲವ ಮಾಯೆ...
ಒಲವೆಂಬ ಬೆಳಕ ಛಾಯೆ... 
ಶುಭವದೇ - ಪ್ರೀತಿಯು ಪ್ರೀತಿಯ ನಗೆಯ ಕಾಯೆ... 
ಶುಭದಿನ... 🤝🫂

ಅಕ್ಷಿಗಳ ಕಕ್ಷೆಯಲಿ ಬೆಳಕು ಬಣ್ಣಾ ಬಣ್ಣಗಳ ರಂಗವಲ್ಲಿಯನಿಡುವ ಹೊತ್ತು... 
ಬೆಳಗಾಯಿತು - ಯೆದೆಗೂ ಇಷ್ಟು ಒಲವ ಗೆಲುವ ಬಣ್ಣ ತುಂಬಲಿ... 
ಶುಭೋದಯ... 🤝🫂

ಬೆಳಗಾನೆದ್ದು ಬೆಳಕಿನ ವಾಮನ ಪಾದ ಎದೆಯ ತುಳಿದರೆ ಉಸಿರುಸಿರೂ ಬೆಳಕೇ ಆಗಿ ಕಣ್ಣು ಹರಿದಲ್ಲೆಲ್ಲಾ ಪ್ರೀತಿ ಸಾಮ್ರಾಜ್ಯ...
ನಗೆಯ ಕೋಶ ತುಂಬಿ ತುಳುಕಿ ತ್ರಿಕಾಲವೂ ಶುಭದ ಸುಗ್ಗಿ...
ಶುಭದಿನ... 🤝🫂

ಬೆಳಕು ನಿನ್ನೂರ ದಾರಿ ತೋರಬಹುದು...
ಅಥವಾ 
ನೀನೇ ಬೆಳಕಿನ ಹಾದಿಯಿರಬಹುದು...
ನಾನೋ (ತು)ಹುಡುಗು ಬುದ್ಧಿಯ, ಖುಷಿಯ ಹುಡುಕಾಟದ ಬಡ ಪಥಿಕನು...
ಬೆಳಕೇ -
ನನ್ನ ಬಂಡಿಯ ನಕ್ಷೆ ನಿನ್ನ ಕಕ್ಷೆಯ ಮೀರದಂಗೆ ನೀನೇ ಕಾಯಬೇಕು...
ಪ್ರೀತಿ ಪ್ರೀತಿ ಬೆಳಗು - ನಗೆಯ ಗುನುಗು ಬೆಳಗು...
ಶುಭದಿನ... 🤝🫂

ಒಂದು ಹೆಜ್ಜೆ ನಗೆಯ ಕಡೆಗೆ...
ಪ್ರೀತಿ ಪಾರಾಯಣ ಬೆಳಗು...
ಶುಭದಿನ...🤝🫂

ಬಣ್ಣದಲದ್ದಿದ ಪಾದದ ಕೂಸು ಊರೆಲ್ಲ ಅಲೆದು ಹಾದಿ ಬೀದಿಯ ಮೈತುಂಬಾ ಬಣ್ಣದಾ ಹೆಜ್ಜೆಯ ಹಚ್ಚೆ ಗುರುತು...
ಪ್ರೀತಿ ಕೋಡಿ ಹರಿದಾಂಗೆ ಬಿಚ್ಚು ನಗೆಯ ಹಂಬಲದ ಹೂಬೆಳಗು...
ಶುಭದಿನ... 🤝🫂

ಕನಸಿಂದ ಕಣ್ತೆರೆದರೆ ಬೆಳಕು ಕಸುವಾಗಿ ಎದೆ ತುಂಬಿ; ಬೆಳಗೆಂದರೆ ಕರುಣಾಳು ಕಲ್ಪತರು...
ಶುಭದಿನ... 🤝🫂

ಬೆಳ್ಳಂಬೆಳಗು ಬೆಳಕಿನುಡಿಯಿಂದ ನಗೆ ಮುಗುಳ ಹೆಕ್ಕಿ ತಂದು ಯೆದೆಯಂಗಳವ ಸಿಂಗರಿಸೆ, ದಿನದ ಪುಸ್ತಕದ ನಡುವೆ ಶುಭದ ನವಿಲುಗರಿ ಮರಿ ಹಾಕಬಹುದು...
ಶುಭದಿನ... 🤝🫂
&&&

ಮುರಿದ ಕೊಂಬೆಯ ಮೈಸವರಿದ ತಂಗಾಳಿ ಪ್ರೀತಿಯದ್ಯಾವುದೋ ಗುಟ್ಟು ಹೇಳಿರಬಹುದು... 
ಬೆಳುದಿಂಗಳ ಹಾಲ್ಕುಡಿದ ಮುದಿ ಎಲೆಯು ಮರು ಜನುಮದ ಕಥೆಯ ನಂಬಬಹುದು... 
ಶುಭವನೇ ಎಣಿಸುವ ಯೆದೆಯಾದರೆ, 
ಇರುಳ ಮಡಿಲಲಿ ಬೆತ್ತಲು ಪ್ರೀತಿಯ ಹಡೆಯಬಹುದು - ಕತ್ತಲ ಸೆರಗ ಹೊದ್ದು ಪ್ರೀತಿ ಬೆತ್ತಲಾಗಲೂಬಹುದು... 
ಶುಭರಾತ್ರಿ... 💞

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment