ಪ್ರೇಮ ಪಂಚಾಕ್ಷರಿಯ ಗುನುಗು ಬೆಳಗು.....
ಭವದ ಭವ್ಯತೆಗೆ ಭಾವದ ದಿವ್ಯತೆಯ ತುಂಬಿ ದೇವ ದುಂದುಭಿಯಂತೆ ಧರೆಗಿಳಿದ ಬೆಳಕು ಎದೆಗೂ ಇಳಿಯಲಿ...
ಪ್ರೇಮ ಪಂಚಾಕ್ಷರಿಯ ಗುನುಗು ಬೆಳಗು...
ಶುಭದಿನ...🤝🫂
ಬೆಳಗು ಮಳೆಯಾಗಿ ಹಬ್ಬಿ ಇಳೆಯ ತಬ್ಬುತಿದೆ...
ಪ್ರೀತಿ ಬೆಚ್ಚಾನೆ ನೆನಪಾಗಿ ನಗೆಯಾಗಿ ರುದಯವ ತಬ್ಬಲಿ...
ಹೃದಯದ ದಿನವಿದು ಪ್ರೀತಿಯ ಬನವಾಗಲಿ...
ಶುಭದಿನ...🤝🫂
___29.09.2026
ನೀನು ಕಣ್ಣಲಿ ಮಿಡಿದ ನಗೆಯ ಕಂಪನ
ಎನ್ನ ಯೆದೆಯಲಿ ದೇವರಾಗವಾಗಿ ಮೆಲ್ಲನನುರಣಿಸಿ
ಬೆಳಗೆಂದರೀಗಿಲ್ಲಿ ಶುಭದ ಸುಗ್ಗಿಯ ಹಾಡು...
ಶುಭದಿನ... 🤝🫂
ಕಣ್ಣುಜ್ಜಿ ನಿದ್ದೆ ಪರದೆಯ ಹರಿದರೆ, ಎದುರಾದ ಕನ್ನಡಿಯಲೊಂದು ನಗೆಯ ಮಿಂಚನು ಕಂಡು ಜೀವ ಹೂವಾಯಿತು...
ಬೆಳಗಾನ ಬೆಳ್ಳಂಬೆಳಕು ನೆತ್ತಿ ತೋಯಿಸೋ ಹೊತ್ತು ನನ್ಮೇಲೇ ನಂಗೇಕೋ ಸಣ್ಣ ಪ್ರೀತಿಯಾಯಿತು...
ಈ ಇಂಥ ಬೆಳಗು ಶುಭವಲ್ಲದೆ ಇನ್ನೇನು...
ಶುಭದಿನ... 🤝🫂
ಬಾಗಿಲಿಲ್ಲದ ಬಯಲಲ್ಲಿ ಇರುಳ ಕತ್ತಲ ಕರಿ ಚಾದರ ಹೊದ್ದು ನಿದ್ದೆ ಹೋದ ಬೆಳಕು ಯಾವ ಮಗ್ಗುಲಲೆದ್ದು ಕಣ್ಬಿಟ್ಟರೂ ಬೆಳಗಾಗುತ್ತದೆ ಎಂದಿನಂತೆ...
ನಾನೋ ಒಳಿತಾಗಲೆಂದು ಬಲಮಗ್ಗುಲಲೆದ್ದು, ಶುಭವ ಹುಡುಕಲು ಗುಡಿಸಲ ಬಾಗಿಲ ತೆರೆದು ಬೀದಿಯ ಹಾದಿಯ ಎದೆಮೇಲೆ ಪಾದವೂರುತ್ತೇನೆ ಎಂದಿನಂತೆ...
ಇಂದೂ ಅಥವಾ ಇಂದಾದರೂ ಶುಭವಾಗಬಹುದು...
ಶುಭದಿನ... 🤝🫂
ಬೆಳಕು ಸಾವಿರ ಕಿರಣಗಳಾಗಿ ಬಯಲಿಗೆ ಬಿದ್ದು ಬೆಳಕೇ ಬೆಳಕಾಗಿ ಬೆಳಗುವಂತೆ;
ಶುಭವೂ ನೂರಾರು ಹೋಳುಗಳಾಗಿಯೇ ಬದುಕ ಬಾಗಿಲೆದುರು ಹರಿಯುವುದು, ಎನ್ನ ಬೊಗಸೆಗೆ ಸಿಕ್ಕಷ್ಟನು ಉಂಡು ನಗುವುದ ಕಲೀಬೇಕು ಆನು...
ಅಲಾರಾಂ ಕರೆಯುತಿದೆ - ಯಾವ ಪ್ರೀತಿ ಬಾಗಿಲು ಬಡಿಯುವುದೋ ಈ ಹಗಲಿಗೆ...
ಉಸಿರ ಬಿಸಿಗೆ ಶುಭದಿನ... 🤝🫂
ಅಲ್ಲಾ,
ಎಷ್ಟು ಪ್ರೀತಿಯ ಕುಡಿದರೆ ಬೆಳಕಾಗಬಹುದು...!?
ಅವನ ಒಡಲ ನಿಗಿನಿಗಿ ಬೆಂಕಿ ಬೆಳಕಾಗಿ ಹರಿದು ಅಲ್ಲಿಂದಿಲ್ಲಿಗೆ ಬರುವ ಹಾದಿಯಲಿ ಅದೆಷ್ಟು / ಅದೆಂತ ಪ್ರೀತಿ ಪೇಯವ ಕುಡಿದಿರುತ್ತೋ ಕಾಣೆ, ನನ್ನ ತಾಕುವ ಹೊತ್ತಿಗೆ ಸುಡುವುದನೇ ಮರೆತಿರುತ್ತದಲ್ಲ...!!
ಎಷ್ಟು ಬೆಳಕ ಕುಡಿದರೆ ನಾ ಪ್ರೀತಿ ಕವಿತೆಯಾಗಬಹುದು...!?
ಪ್ರೀತಿ ಪ್ರೀತಿ ಬೆಳಗು... 🤝🫂
ಯೆದೆಯ ಬೆಳಕಲಿ ಮಿಂದು ಸಿಂಗಾರಗೊಂಡ ಸಿರಿ ಪ್ರೀತಿ
ಬಯಲ ಬೆಳಕಲಿ ನಗೆ ಕನಕ ಹಂಚಲು ನಿಂತು
ಬಾಚಿ ತಬ್ಬಲಿ ತಬ್ಬಲಿ ಜಗವನು...
ಪ್ರೀತಿ ನಗೆಯಲಿ ಬೆಳಗು ಸಿರಿವಂತ...
ಶುಭದಿನ...🤝🫂
ಜಗದ ಬೆಳಕಿನ ಬಯಲಲಿ ಯೆದೆಯ ಬೆಳಕು ಮೆರೆಯಲೀ...
ನಡೆವ ಹಾದಿಯ ಉದ್ದಕೂ ಪ್ರೀತಿಯನು ಪ್ರೀತಿಯೇ ಎದುರ್ಗೊಂಡು ತಬ್ಬಲಿ...
ಶುಭದಿನ... 🤝🫂
ಹುಡುಕಿ ಹೊರಟ ನಗೆಯು ಬಾಗಿಲಿಗೇ ಬಂದು ನಿಂದಂಗೆ ಬೆಳಗಾಗುವುದು - ಬೆಳಕಿನ ಪ್ರೀತಿಯ ಮಳೆಯಾಗುವುದು...
ರಂಗೋಲಿ ತುಳಿದಾಡುವ ಮಗುವಂಥಾ ಬೆಳಗು...
ಶುಭದಿನ... 🤝🫂
ಒಂದೆಳೆ ಪ್ರೀತಿ ಅಕ್ಕರೆಯ ಬಂಧ ಕೈಹಿಡಿದು ಹಾದಿಯುದ್ದಕೂ ಕಾಯುವುದು...
ಬೆಳಕು ಆ ಪ್ರೀತಿಯ ಅಕ್ಕರದ ಸಕ್ಕರೆ ನಗುವಿನ ನಡೆ ನುಡಿಗೆ ಪ್ರೀತಿಯ ಸಾಕ್ಷಿಯಾಗುವುದು...
ಬೆಳಗೆಂಬ ಪ್ರೀತಿ (ರ)ಕಕ್ಷೆ...
ಶುಭದಿನ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:
Post a Comment