ಪಾಪಿ ಚಿರಾಯುವಂತೆ.....
(ಸುಡು ಮಣ್ಣಲಿ ಹುಟ್ಟಿದ ಗಟ್ಟಿ ಪಿಂಡ.....)
![]() |
| ಅಗೋ ಅಲ್ಲಿ ಬಿದ್ದಿರುವ ಹೆಣ ಎನ್ನದೇ... |
ಕನಸಿನ ಕಾವ್ಯಕೆ ಕಾವಿಲ್ಲದೇ
ಅಗೋ ಅಲ್ಲಿ ಬಿದ್ದಿರುವ ಹೆಣ ಎನ್ನದೇ...
___ ಚೂರೇ ಚೂರು ಜೀವಂತಿಕೆಗಾಗಿ ನೂರು ನೂರಾರು ಬಡಿವಾರಗಳು...
&&&
ಬದುಕಿದ್ದು, ಬದುಕಲಾರದ್ದು, ಬದುಕಬಾರದ್ದು ಎಲ್ಲವನು ಬರೆದು ಬರೆದು ಬದುಕಿನ ಬರಡುತನವ ನೀಗಿಕೊಳ್ಳಲು ಹೆಣಗುವುದು...
__ ಹುಟ್ಟು ಎಷ್ಟೆಷ್ಟನ್ನೋ ಬರೆದೇ ಇಲ್ಲ, ಸಾವು ಬರೆಯುವಂಥದನ್ನ ಓದಲು ನಾನಿರಲ್ಲ, ಅದಕೇ ಬದುಕನ್ನು ಬರೆದು ಬರೆದು (ಸಾ)ಹಾಯುವುದು...
&&&
ಒಂದು ಎಳ್ಳಿನ ಮೊನೆಯಷ್ಟೂ ಶ್ರಮವಿಲ್ಲದೇ ನಾನಿಲ್ಲಿ ಹುಟ್ಟಿ ಆಗಿದೆ, ಹಂಗಂಗೇ ಸಾವಾಗುವುದೂ ಖರೇ ಖರೇ, ಇನ್ನೇನು, ಅವುಗಳ ನಡುವೆ ಇರುವ ಈ ಬದುಕನ್ನು ಮಾತ್ರ ನಾನೇ ಶ್ರಮವಹಿಸಿ, ಪ್ರೀತಿ ತುಂಬಿ ಆಗಮಾಡಿಕೊಳ್ಳಬೇಕು...
___ ಹುಟ್ಟಿನೀ ತೇದಿಗೆ ನಗೆಯದಲ್ಲದೇ ಇನ್ನಾವ ಬಣ್ಣ ಬಳಿಯಲಿ...
&&&
ಸತ್ತವನೆದೆಯಲಿ ಕವಿತೆ ಹುಟ್ಟುವುದಿಲ್ಲ...
ಕವಿತೆ ಕಟ್ಟಿದವನು ಸಾಯಲಿಕ್ಕಿಲ್ಲ...
___ ನಗು...
&&&
ಗೆದ್ದೆನೆಂದು ಸುಳ್ಳೇಪಳ್ಳೇ ಬೀಗುವ ನಾನು
ಗೆಲ್ಲಿಸಿದ ಖುಷಿಯಲಿ ಕಣ್ತುಂಬಿ ನಗುವ ನೀನು
ನಡುವೆ ಹರಿವ ಎಷ್ಟು ಎಷ್ಟೋ ಪ್ರೀತಿ ನದಿಗಳು...
___ ರುದಯ ದುಂಬಿಯ ಹಾಡು...
&&&
ಎನ್ನ ಭೇಟಿ ಆಗಿಲ್ಲ ನಿನಗಿನ್ನೂ - ಪ್ರೀತಿಯದೆಂತು ಪರಿಚಯವಾದೀತು...
ಒಳನಾಡಿಗಳಲಿ ಒಡನಾಡಬಾರದೇ...
___ ಹೂದುಂಬಿ ಸಂಪುಟ...
&&&
ವತ್ಸಾ -
ನಿಂಗೆ ನೀನು ತುಂಬಾ ಬದುಕು ನೋಡಿಬಿಟ್ಟಿದೀನಿ ಅನ್ಸತ್ತೆ ಅಂದ್ರೆ, ಹಂಗಂತ ನಿನ್ನ ನೀನು ನಂಬಿಸಿಕೊಂಡು, ನಿನ್ನ ಸುತ್ತಲೂ ಅದನ್ನೇ ಒಪ್ಪಿಸಲು ಹೆಣಗುವಿಯಾದರೆ, ನಿನ್ನ ನೋಟ ತುಂಬಾನೇ ಬಾಲಿಶವಾಗಿದೆ ಅಂತಲೇ ಅರ್ಥ...
ಚಿತೆಯ ಉರಿಗೆ ಬಾಡಿದ ಮಸಣದ ಹೂಬಳ್ಳಿಯ ಮಾತಾಡಿಸಬಲ್ಲೆಯಾದರೆ ಹೇಳು, ಆಗ ಚೂರು ಒಪ್ಪಬಹುದು ನೋಡು ನಿನ್ನಾ ಬಕ್ಕಣದ ಬಿಗುಮಾನವ...
___ ರುದಯ ಕಂಡು ನಾಲಿಗೆ ಕುಣೀಬೇಕು ಕಣಾ...
&&&
ನಾಳಂಗ್ ಬೆಳ್ಕ್ ಹರಿಯೂ ಹೊತ್ತಿಂಗೆ ನಾ ಸತ್ ಬಿದ್ರೆ ಕಡೀಗೆ ನಿನ್ಗೆ ಎನ್ ಬಗ್ಗೆ ಯಾವಾಗೂ ಎಂತಾ ನೆನ್ಪವ್ತಾ ಇರ್ತು ಅಂತ ಕೇಳೀರೆ ಎಂತಾ ಹೇಳ್ಲೀ...
ನೆನಪಪ್ಲೆ ಎಂತಾ ಉಳ್ದಿರ್ತು, ಎನ್ಗೆ ಆನೇ ಮರ್ತೋದ್ಮೇಲೆ...
ಜೀವ ಚಟ್ಟದ್ ಮೇಲಿಲ್ಲೆ ಹೇಳೂದ್ ಒಂದ್ ಬಿಟ್ರೆ ಹೆಣಕ್ಕೂ ಯನ್ಗೂ ಅಂತಾ ವ್ಯತ್ಯಾಸ ಏನಿರ್ತ್ಲೆ ಬಿಡು...
ಇಲ್ಲದ್ದೋದ್ ಹಲ್ಬೂದ್ ಬಿಟ್ಟು ಸುಮ್ಮಂಗಿಪ್ಪೂದ್ ಕಲಿ ಮಾತ್ರ...
___ ನೇಹ ಸಾನಿಧ್ಯ - ಬದುಕೆಂಬೀ ಕಥೆಯ ಪಾತ್ರಗಳು...
&&&
ನಿನ್ನ ಪ್ರೀತಿಯ ಛಾಯೆ ಕಾಯುವ ನನ್ನ ಹಾದಿಯ ತುಂಬಾ ನಗೆಯ ಮರಿಗಳ ಗಲಗಲ ಗದ್ದಲ...
ಈ ಬದುಕು, ಇದರ ಬಾಗು ಬಳುಕು ನಿನ್ನ ಪಡಿಯಚ್ಚು...
ನಗೆಯ ಗಣಿ ನಿನ್ನ ಒಡಲು - ನಂದೂ ತಾನೇ ನಿನ್ನ ಮಡಿಲು...
ಅಲ್ವಾ!
"ನನ್ನದಾಗಿದ್ದನ್ನಷ್ಟೇ ನಾನು ಬಿಟ್ಟು ಕೊಡಬಹುದು, ಹಂಚಿ ಹರಿಯಬಹುದು" ನೋಡೂ...!!
ಅದಕೇ -
'ನಗು' ನನ್ನ ಜಗದ ಗುರುತು... 😊
&&&
ಇಲ್ಕೇಳು -
ನೋಡಿ, ಒಡನಾಡಿ, ಕೂಡಿಯಾಡಿದವರ ವಿರಹ, ವಿರಾಗ, ವಿದಾಯಗಳಿಗಿರುವ "ಎಲ್ಲೋ ಹೇಗೋ ಚಂದ ಇದ್ರಾತು ಬಿಡು" ಅನ್ನೋ ಹಾರೈಕೆಯ ಕನಸಿನ ಕಾರುಣ್ಯ 'ವಿಯೋಗ'ಕ್ಕೆ ಇಲ್ಲ ನೋಡು...
ಅದಕೇ
ಯೆದೆಗಂಟಿದವರ, ಒಡಲ ಮರಿಗಳ ಮರಣದೆದುರಿನ ಖಾಲಿತನದಿಂದೆದ್ದ ಕೈಕಾಲೇ ಆಡದ ಅಸಹಾಯ ಭಾವವೊಂದು ಆ ಮುಂದಿನ ಅಡಿಅಡಿಗೂ ಕರುಳ ಸಿಕ್ಕುಗಳೆಡೆಯಲಿನ ಮಾಯದ ಹುಣ್ಣಂತೆ ಕಾಡುತ್ತಿರುತ್ತದೆ...
ಹಾಗೆಂದೇ
ತನ್ನ / ತನ್ನವರ ಸಾವಿನ ಸುಳ್ಳು ಕನಸಿಗೂ ಕಣ್ಣು ಕೋಡಿ ಬೀಳುತ್ತದೆ...
ಏನಿಲ್ಲ
ಕಣ್ಣೊರೆಸ್ಕೋ - ನಾನಿನ್ನೂ ಬದ್ಕೇ ಇದ್ದೇನೆ...
ಪಾಪಿ ಚಿರಾಯುವಂತೆ...
ನಾನೋ ಪಾಪವೇ ಮೈವೆತ್ತಿದ ಪ್ರಾಣಿ...
&&&
ಪಾಪಿ ಚಿರಾಯುವಂತೆ...
ನಾನೋ ಹುಟ್ಟಾ ಪರಮ ಪಾಪಿ ಪ್ರಾಣಿ - ಸುತ್ತಾ ಪಾಽಽಪದ ಜೀವಗಳು...
___ ಈ ನೆತ್ತಿ ಕಾಯ್ವ ನೇಹದ ನೆಂಟಸ್ತಿಕೆಗಳು...
&&&
ಮಮಕಾರದ ಮಡಿಲೇ -
ಸ್ವಾತಂತ್ರ್ಯವ 'ಕೊಡುವ' ಮಾತಾಡುವವರ ಕೊಡವಿಕೊಂಡು, ಪ್ರೀತಿ 'ಕೊಡುವ' 'ಪಡೆವ' ಹುಚ್ಚಿನಿಂದ ಕಳಚಿಕೊಂಡು, ಸ್ವಾತಂತ್ರ್ಯ ಮತ್ತು ಪ್ರೀತಿಯ ಸಹಜತೆಯನು ಸಹಜವಾಗಿ ಜೀವಿಸುವಂತಾಗಿ; ನೀನು ನೀನಾಗಿ ಚಿಗುರಿ, ನೀನು ನೀನಷ್ಟೇ ಆಗಿ ಹಬ್ಬಿ ಹರಡಿ, ಪ್ರತಿ ದಿನವೂ ನಿನ್ನ ದಿನವಾಗಲಿ...
ಶುಭಾಶಯವು ಕೂಸೇ... 🤝🫂
&&&
ನೆನಪಲ್ಲಿ ನೆನೆಯಬಾರದೆಂದು ಅವಳ ನೆನಪಿಗೆಂದು ದಿನವಿಡೀ ಏನೂ ಬರೆಯಲಿಲ್ಲ...
ಮರೆತೇನೆಂಬ ನರಕ ಸುಖ...
ಹೋಗತ್ಲಾಗೆ, ಹುಟ್ಟು (ಸುಟ್) ನೆನಪು ಸುಟ್ಟರೂ ಹೋಗ್ತಿಲ್ಲ...
___ ಸತ್ ದಿನ...
ನೀನು ತುತ್ತಿಟ್ಟು ಕರುಣಿಸಿದ ನಗುವಿಗಿನ್ನೂ ಜೀವವಿದ್ದರೆ ಅದು ನಿನ್ನದೇ ಪ್ರಾರ್ಥನೆಯ ಫಲ.....
____ ಈ ತೇದಿಗೆ ನಿನ್ನದೇ ಹೆಸರು/ಉಸಿರು....
&&&
ಯಾವ ಹೊತ್ತಲೂ ಹೊಸ್ತಿಲು ದಾಟಿ ಒಳ ಬರಬಹುದಾದ ಶುಭದ ಪರಿವಾರಕೆ ಬರುವಾಗ ಕತ್ತಲು ಮೆತ್ತಬಾರದು, ಹೊಸಲ ಪಟ್ಟಿ ಎಡವಬಾರದು ಎಂದು ಹೆಬ್ಬಾಗಿಲಲಿ ಹಣತೆ ಹಚ್ಚಿಡುತಿದ್ದ ಅಮ್ಮನ ಕಣ್ಣ ಮುಗ್ಧ ನಗೆಯಲ್ಲೇ ಎಲ್ಲಾ ಶುಭದ ಗಣಗಳೂ ಬೆಚ್ಚಗೆ ಕೂತಿದ್ದವು...
ಅದಕೇ, ಅಮ್ಮಂದಿರು ಒಳಹೊರಗಾಡುತಿದ್ದರೆ ಶುಭವು ಬೆನ್ನಿಗಿದ್ದಂಗೇ ಲೆಕ್ಕ...
ಮುಂಬೆಳಗಿಗೆ ಮಮತೆ ಮಡಿಲ ನೆನಪೂ ಶುಭವನೇ ಪ್ರಾರ್ಥಿಸುತ್ತದೆ...
ಶುಭದಿನ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)


No comments:
Post a Comment