Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ತೊಂದು.....

ಸನ್ನಿಧಿ..... 

ಬೆಳದಿಂಗಳು ಸುಡದಂತೆ ನೆತ್ತಿ ಕಾಯೋ ನೆರಳಿನಂಥಾ ಕೂಸೇ -
ಸಾವಿರ ಪ್ರೀತಿಗಳ ಧಿಕ್ಕರಿಸಿ ನಡೆದವನನೂ ಒಂದ್ಯಾವುದೋ ಮಡಿಲು ಕಿರುಬೆರಳ ಜಗ್ಗಿ ನಿಲ್ಲಿಸುತ್ತದೆ - ಕೊರಳ ಬಳಸಿದ ಒಲವ ಕಡಲು ನೀನು...
ಓಡಿ ಓಡಿ ಬೆವರಿಳಿದು ದಣಿದ‌ವನನು ತಂಬೆಳಲ ಕಿರು ಅಲೆ ಮೈದಡವಿ ನಿಲ್ಲಿಸಿದಂಗೆ ಎನ್ನೀ ಬರಡು ಬಂಡೆಯೆದೆಗೆ ನಿನ್ನಾ ಹಸಿ ಕನಸಿನೆದೆಯಾನಿಸಿ ತಡೆದು ನಿಲ್ಲಿಸಿಕೊಂಡವಳು...
ನನ್ನನೇ ನನ್ನಿಂದ ಕದ್ದು ನಿನ್ನ ರೂಪದಲಿ ನನಗೇ ನೀಡ ಹೊರಟವಳು...
ವೈತರಣಿಯ ಆಚೆ ದಡದಲ್ಲಿ ಸ್ವರ್ಗ‌ವಿದೆಯಂತೆ, ನೀನಿರುವ ಈಚೆ ದಡ ವೈಪರೀತ್ಯ‌ಗಳ ಸಂತೆ‌ಯಂತೆ ಮತ್ತು ನಾನು ನನ್ನ ಮುಕ್ತಿಗೂ ನಿನ್ನೂರನೇ ಆಯ್ದುಕೊಳ್ತೇನೆ...
 ____ಮುಂದುವರಿದು ಅಲ್ಲಿಂದ ನಗುವೊಂದು ಬಿಳಲು ಬಿಳಲಾಗಿ ತನ್ನ ಬಾಹುಗಳ ನಮ್ಮ ಹಾದಿತುಂಬಾ ಹರಡಿಕೊಳ್ಳುತ್ತದೆ...
💑💑💑

ಉಸಿರ ನಾಭೀ ನಾಳಕಂಟಿದ ಗಾಢ ಗಂಧವೊಂದು ಮೈಯ್ಯ ಬೇಲಿಗಳಲಿ ಹಿತ ನಡುಕವ ಹುಟ್ಟಿಸುತ್ತಲ್ಲ, ಏನಂತಾರೋ ಅದಕ್ಕೆ...
ನಿನ್ನ ತೋಳ್ಬಂಧಿಯ ಕನಸಲ್ಲಿ ಮನ ಮಲ್ಲಿಗೆ ಮೆಲ್ಲಗೆ ಅರಳುವಾಗ ಮನೆಯ ಮೂಲ್ಮೂಲೆಯೂ ಸರ್ವಾಲಂಕೃತ ಅಂತಃಪುರವೇ ನೋಡು...
ಮುಡಿಯಿಂದ ಅಡಿಗಿಳಿವ ಹನಿ ಹನಿ ನೀರ ಹವಳಗಳ ಎಣಿಸಲೇ ನನ್ನಾ ತುಂಟ ತುಟಿಯಿಂದ - ತಣ್ಣೀರ ಜೊತೆ ಬಿಂದಿಗೆ ತುಂಬಾ ನಿನ್ನ ಆ ರಸಿಕ ನುಡಿಗಳ ಬಿಸಿ ನೆನಪ ಬೆರೆಸಿ ಸುರಿದುಕೊಂಡೆ; ಎಂಥಾ ಚಂದ ಸಂಯೋಜನೆ ಮಾರಾಯ...
ಅಬ್ಬಿಕೋಣೆಯ ಆವರಿಸಿದ ಹಬೆಯ ತುಂಬಾ ನೀನೇ ನೀನು - ಈ ಮೈಯ್ಯ ವೀಣೆ ಬಿಗಿದು ಹೊನಲಿಡುವ ರಾಗಗಳಿಗೆಲ್ಲ ನಿನ್ನದೇ ಹೆಸರು...
ನನ್ನೆಲ್ಲಾ ಬೆಳಗೆಷ್ಟು ನಚ್ಚಗೆ, ಬೆಚ್ಚಗಿದೆ ನಿನ್ನಿಂದ...
____ ಸಾಗರನೂರಿಗೆ ಬೆಳುದಿಂಗಳು ನಡೆದು ಬಂದಂಗೆ...
💑💑💑

ನಿನಗಾಗಿ ಜೀವ ಕೊಡ್ತೀನಿ/ಬಿಡ್ತೀನಿ ಅನ್ನುವುದಂತೆ ಪ್ರೇಮ - ಜೀವನ್ಮುಕ್ತಿ(?)...
ನಿನ್ನಲ್ಲಿ ಜೀವ ತುಂಬುತ್ತೇನೆನ್ನೋ ಭಾವ ಚೈತನ್ಯ ಸ್ನೇಹ - ಜೀವನ್ಮುಖಿ...
ಪ್ರೇಮದ ನಶಾ ಸುಖವ ಧಿಕ್ಕರಿಸಬಲ್ಲ ನಾನು ನೇಹದ ಸಹಜ ಸಾಮಾನ್ಯ ಸಾಹಚರ್ಯವನೂ ದೂರ ಇಡಲಾರೆ...
#ಸನ್ನಿಧಿ...
💑💑💑

ಅವಳ ಸೆರಗಿಗಂಟಿ,
ಮಹಾ ತುಂಟನಂತೆ... ಚಿಕ್ಕವನಿದ್ದೆ... ಹೊರ ಬಯಲಿಗೋಡಿ ದಾಂಧಲೆ ಎಬ್ಬಿಸದಿರಲೀ ಅಂತ ಆಯಿ ಮಂಚದ ಕಾಲಿಗೂ ನನ್ನ ಕಾಲಿಗೂ ಸೇರಿಸಿ ಸಣಬೆ ದಾರ ಕಟ್ಟಿ ಜಗಲಿಯಲ್ಲಿ ಬಿಡ್ತಾ ಇದ್ಲು... ಅಡಿಗೆ ಮನೆಯಲ್ಲೋ ನನಗೆಂದೇ ಲಾಲಿ ಹಾಡು... ಸುಳ್ಳೇ ಅತ್ತರೂ ಎದೆಗವುಚಿಕೊಂಡು ಹಾಲೂಡಿ ಕೃಷ್ಣಾ ಅನ್ನುತಿದ್ದಳು... ಆಡಾಡಿ ತೂಕಡಿಸುವವನ ಅಂಗಾಲಿಗೆ ಎಣ್ಣೆ ಸವರಿ ಕೆನ್ನೆ ಕೆನ್ನೆ ಬಡಿದುಕೊಂಡು ಮುದ್ದೀಯುತಿದ್ದಳು...

ಇವಳ ಸೆರಗನೆಳೆದು,
ಬಲು ಪೋಲಿಯಂತೆ... ಬೆಳೆದ ಕಲಿ ಹೈದ... ಇವಳಿದ್ದಾಳೆ... ಬಲು ಜಾಣೆ... ನಂಗಿಂತ ಚೂರು ಚಿಕ್ಕವಳೇನೋ... ನಾ ಹತ್ತಿರ ಸುಳಿದು ಮೈಸೋಕದಂಗೆ ಕಣ್ಣಲೇ ದಿಗ್ಬಂಧನ ಬರೀತಾಳೆ... ಮತ್ತು ಎದೆ ತುಂಬಿ ನನ್ನದೇ ಹೆಸರು ಸೇರಿಸಿಕೊಂಡು ಸೋಬಾನೆ ಗುನುಗುತಾಳೆ... ಮೀಸೆ ಕುಡಿ ಅಡಿಯ ಸಿಡುಕಿಗೆ ನನ್ನ ಕೃಷ್ಣಾ ಎಂದು ಬೆನ್ನು ತಬ್ಬಿ ಮುದ್ದಾಗಿ ಮದ್ದರೆಯುತಾಳೆ... ಹುಸಿ ಮುನಿಸಿನ ತೂಕಡಿಕೆಗೆ ಮೃದು ತೋಳಿನ ಬಿಸಿ ಎರೆದು ಸುಖದ ನಿದ್ದೆಗೆ ಮೆತ್ತೆಯಾಗುತ್ತಾಳೆ...

ಕಾಲು ಕಟ್ಟಿ ಎದೆಯಲಿಟ್ಟುಕೊಂಡು ಕಣ್ಣಾಗಿ ಕಾಯುವ ಯಮುನೆಯಂಗಳದ ಗೊಲ್ಲಿತಿಯರು - ಅವಳು ಯಶೋಧೆ, ಇವಳು ರಾಧೆ...
💑💑💑

ಹೇ ಸ್ವಪ್ನಗಂಧೀ -
ಊರಾಚೆ ಹಳ್ಳದ ಕರಿಹಸಿರು ಏರಿಯಲಿ ನೀನೇನೋ ಸವಿ ಲಹರಿಯಲಿ ನನ್ನೆದೆಯ ತಣಿಸುವಂತೆ ಮಾತಾಗಿ ಗುಣುಗುಣಿಸುವಾಗ ಆ ಕಮನೀಯತೆಯಲಿ ಕಮ್ಮಗೆ ನಿನ್ನ ಕಣ್ಣಾಳದಲಿ ಕರಗಿ ಹೋಗುವ ಆಸೆಬುರುಕ ಕಬೋಜಿ ನಾನು...
ಸದಾ ಮುಸ್ಸಂಜೆಗಳ ಓಕುಳಿ ಬೆರಗಲ್ಲಿ ನನ್ನ ನೂರು ಫಾಲ್ತೂ ಫಾಲ್ತು ಮಾತುಗಳ ನಡುವೆ ಹಾಯಾಗಿ ಘಲಘಲನೆ ನಗುವ ಮತ್ತು ಛಕ್ಕನೇ ನನ್ನುಸಿರು ತೇಕುವ ತೆರದಿ ಮುದ್ದಿಸಿ ಸುಳ್ಳೇನಾಚಿ ಎದೆಯಲಡಗುವ ನೀನು...
ಈ ಉರಿ ಬೇಸಗೆಯಲಿ ತುಟಿ ಒಡೆದದ್ದು ಹೇಗೆಂದು ಅಮ್ಮ ಕೇಳಿದರೆ ಏನೆನ್ನಲೀ ಎನ್ನುತ್ತ ಕಣ್ಮಿಟುಕಿಸಿದರೆ ಮತ್ತೆ ಹೊರಳಿ ತುಟಿ ಕಚ್ಚುವ ಕಳ್ಳ ಕೊಂಡಾಟಗಳ ಈ ಮುದ್ಮುದ್ದು ಬಣ್ಣಾಚಾರಗಳಿಂದ ಬದುಕಿಂಗೋ ಇನ್ನೂ ಒಡೆಯದ ಮುಗ್ಧತೆ‌ಯಂತ ಸ್ನಿಗ್ಧ ಹೊಳಲು...
ಬೆಳಗುಂಜಾವದಲಿ ಇಂಥ ಕಾವ್ಯ ಕನಸಾಗಿ ಕಣ್ಣೊಡೆದರೆ ಸೂರ್ಯ ಎದ್ದಾಗಿನಿಂದ ಆರಂಭವಾಗಿ ರಾತ್ರಿ ಚಂದಮಾಮನೆದುರು ತೂಕಡಿಸುವವರೆಗೆ ಎದೆಯ ಅಂಗಳದಿ ಮನೋಹರವಾಗಿ ನರ್ತಿಸುವ ನಿನ್ನ ಬಂಗಾರ ನಗೆಯ ಹೆಜ್ಜೆ ಗೆಜ್ಜೆ ಲಜ್ಜೆ...
ಹೌದು,
ಬಡಪಾಯಿ ರಸಿಕ ಪ್ರಾಣಿ‌ಯ ಬದುಕಿಷ್ಟು ಸಹನೀಯವಾಗಲು ನಿನ್ನಂಥದೊಂದು ಸಿಕ್ಕೂಸಿಗದ ಮಧುರ ಕನಸಾದರೂ ಜೊತೆ ಬೇಡವೇ...
ಮುಂದುವರಿಯಲಿ ಇದು ಹಿಂಗೇ ಮನವು ಮಂದವಾಗದಂಗೆ...
___ ಈ ಪೋಲಿ ಗೆಳೆಯನ ಪ್ರಾರ್ಥನೆ‌ಗಳೆಲ್ಲ ಇಂಥವೇ...
💑💑💑

ಇಲ್ಕೇಳು -
ಜಗಳವಾಡಬೇಕು ನಿನ್ನಲ್ಲಿ ಪ್ರೀತಿ ಉಕ್ಕುವ ಹಾಗೆ...
ಚಕಮಕಿಗಳಾಚೆಯ ಗಾಢ ಮೋಹ ಜಗದ ಕಣ್ಣು ಕುಕ್ಕುವ ಹಾಗೆ...
ಹಾಂ,
ಜಗಳವಾಡಬೇಕು ನಿನ್ನಲ್ಲಿ ಜನ್ಮಕೂ ಈ ಹೆಗಲಿಗೆ ನಿನ್ನುಸಿರು ಅಂಟಿಕೊಳ್ಳುವ ಹಾಗೆ...
____ಹುಸಿಮುನಿಸಿಗೊಂದು ಕುಂಟು ನೆಪವ ನೀನೇ ಹುಡುಕಿಕೊಡು...
💑💑💑

ಪ್ರತಿಪದೆಯ ಚಂದ್ರ - ನೆಲವ ತುಳಿದ ಬೆಳುದಿಂಗಳ ಚಿಗುರು ಪಾದ - ಮಣ್ಣ ಮೂಸಿದ ಹೂವೆದೆಯಲಿ ಬೀಜ ಬಿರಿವ ಸಂಭ್ರಮ - ಸಂಜೆ ರಂಗಿನ ಗಲ್ಲ ತೀಡೋ ಗಾಳಿ ಗೊರವನ ಗಂಧರ್ವ ಸಲ್ಲಾಪ - ನನ್ನ ಕಿನ್ನರಿಯ ಬೆಳ್ಳಿ ಕಾಲಂದುಗೆಯಲಿ ಮೆಲ್ಲನುಲಿವ ಕಿನ್ನುರಿ ದನಿ...
ಮುಚ್ಚಂಜೆ ಓಕುಳಿಯ ನಡುವಿಗೇರಿಸಿಕೊಂಡು ಮುಂದೆ ಮುಂದೆ ನಡೆವ ಅವಳ ಭವ್ಯ ರೂಪ - ಅವಳ ಬೆನ್ನ ನಾಚಿಕೆಗಂಟಿದ ನನ್ನ ಕಣ್ಣ ದೀಪ...
ಅಲ್ಲಿಂದ,
ಇರುಳ ಸ್ವಪ್ನ‌ದಲಿ ಗುಮಿಗೂಡುವ ಸೌಂದರ್ಯ ಅವಳೇ ಅವಳು...
ಕನಸು - 
ಕಣ್ಚಮೆಯ ಕುಂಚವ ಮಾಡಿ, ಖಾಲಿ ಖಾಲಿ ಮೈಹಾಳೆಯ ತುಂಬಾ ನವಿಲುಗರಿಯ ಬರೆದು ಮುದಗೊಳ್ಳುವ, ಶೃಂಗಾರ ಗಾಣಕೆ ಜೀವ ಜೀವ ನೊಗ ಹೂಡಿ ಮದ ಅರೆದು ಸವಿರಸ ಹೀರುವ ಯುವ ಮಾಧುರ್ಯ ಮೇನೆ...
ಬೇಸಿಗೆಗೂ ಬೆಂಕಿ‌ಗೂ ಅವಿನಾಭಾವ‌ವಂತೆ - ನಾನೋ ನಿನ್ನ ಹಂಬಲದಿ ನನ್ನೇ ನಾ ಸುಟ್ಟುಕೊಳ್ಳುವ ಮಿಡತೆ...
ಪೋಲಿಯೊಬ್ಬನ ಎದೆಯಲ್ಲಿ ಪಲ್ಲಂಗವೊಂದು ಸದಾ ಸಿಂಗರಿಸಿಕೊಂಡು ಪ್ರಣಯ ಪೂಜೆಯ ಮುಹೂರ್ತ‌ಕೆ ಕಾಯುತ್ತಿರುತ್ತೆ...
_____ಮತ್ತು ನಾನೊಬ್ಬ ಹುಟ್ಟಾ ಪರಮ ಪೋಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, May 9, 2021

ಗೊಂಚಲು - ಮುನ್ನೂರೆಪ್ಪತ್ತು.....

ಜೀವಜೀವಾಂತರ ಭಾವಸಾನಿಧ್ಯ.....

ಎದೆಯ ಅಮೃತವ ಕರುಳಿಗೆ ಹನಿಸುತ್ತಾ ಎನ್ನ ನೋಟ, ರುಚಿ, ದನಿ, ಘಮ, ಸ್ಪರ್ಶಗಳಿಗೆಲ್ಲಾ ಮೊದಲಾಗಿ ಜೀವ ತುಂಬಿದ್ದು - 'ಅಮ್ಮ...'
ಕಟ್ಟುಸಿರ ಹಾಡಾಗಿ ಸದಾ ಎದೆಯ ಸುಷುಪ್ತಿಯಲಿ ಜೀವ ತಳೆದು ನಿಂತ ನನ್ನ ತೊದಲು - 'ಅಮ್ಮಾ'..‌‌.
ಒಡಲುಕ್ಕಿ ಹರಿವ ನಗುವಿನಂಚಲಿ ಹಾಗೂ ಜೀವಾಭಾವದ ನೋವಿನ ಬಿಕ್ಕಿನುದಯದಲಿ ದೇವಗಿಂತ ಮೊದಲು ಎಲ್ಲ ಎಲ್ಲಾ ಕೊರಳೂ ದನಿ ಎತ್ತಿ ಕೂಗುವ ಮಮತೆ ಕಡಲಿನ ಕುಡಿ - 'ಅಮ್ಮಾ...'
ದೇವರಲ್ಲ ಅವಳು, ಮಿಗಿಲು ದೇವರಿಲ್ಲದ ಎದೆಗೂ/ಎದೆಗಾಗಿಯೂ ತನ್ನ ಉಡಿಯಲಿ ಪ್ರೀತಿಯ ನೂರು ಕವಲುಗಳ ಹೃದಯ ಹಡೆಯುವವಳು; ಬೆನ್ನ ಹಿಂದಿನ ನೆರಳಂತ ಶಕ್ತಿ ಸುಧೆ - 'ಅಮ್ಮ...'
ಕೇಳಿ,
ಯಾರ ಮನೆಗೇ ಹೋದರೂ ಅವರ ಅಡಿಗೆ ಮನೆಯಲೊಮ್ಮೆ ಇಣುಕಿ ಬರುತ್ತೇನೆ, ಬದುಕಿಂಗಿಷ್ಟು ಗಟ್ಟಿ ಸ್ಫೂರ್ತಿ, ಎದೆ ಜೋಳಿಗೆಗಿಷ್ಟು ಅಕ್ಕರೆಯ ಪಡಿ ಕೇಳದೆಯೂ ಸಿಕ್ಕುತ್ತದೆ; ಬೇಶರತ್ತಾಗಿ ಉದರಕಿಷ್ಟು ಅನ್ನ, ಎದೆಗಿಷ್ಟು ಪ್ರೀತಿಯ ಬಡಿಸೋ ಅಕ್ಷಯ ಪಾತ್ರೆಯೊಂದು ಎಲ್ಲರ ಗೂಡುಗಳ ಅಡಿಗೆಮನೆಯ ಗೊಣಗು, ಗುಣುಗುಗಳಲಿ ಜೀವಂತ - 'ಅಮ್ಮ...'
ಏನು ಹೇಳುವುದು! ಹೇಳಿ ಮುಗಿಸಲಾಗುವ ಗುಣ ಭಾವವೇ ಅದೂ!! ಅವಳ ಹೇಳದೆಯೂ, ಅವಳದೇನನ್ನೂ ಕೇಳದೆಯೂ ನನ್ನ ಒಳಿತನಷ್ಟೇ ಹರಸಲೊಂದು ಹಸ್ತವಿದ್ದರೆ ಆ ಯಾವುದೇ ಕರಗಳಿಗೆ ನಾ ಕರೆಯುವುದು - 'ಅಮ್ಮಾ ಅಮ್ಮಾ...'

ನನ್ನ ನಗುವಲ್ಲಿ ನನಗಿಂತ ಹಿಗ್ಗಿ ಅಮ್ಮನ ನೆನಪಿಸೋ, ನಾ ನೋವೂ ಅಂದರೆ ಅಮ್ಮನೇ ಆಗಿ ವಿಲಪಿಸೋ ಎಲ್ಲರೊಳಗಿನ ಅಮ್ಮನಂಥ ಅಮ್ಮನಿಗೆ ನಿತ್ಯ ನಮನ...
____ ಇಂತಿ ನಿಮ್ಮ ಶ್ರೀ...
💞💕💞

ಏಕಾಂತದಲ್ಲೆಲ್ಲ ನೆನಹೋ, ಕನಸೋ, ಕನವರಿಕೆಯೋ ಆಗಿ ಎದೆಗೂಡಿನ ಪಡಸಾಲೆಗೇ ಬಂದು ಕೂತು ಹೆಗಲು ತಬ್ಬಿ ನೆತ್ತಿ ಮೂಸುವವರನ್ನು ಮಾರು, ಮೈಲು, ಸಾಗರ ತೀರಗಳ ನಡುವಿನಂತರಗಳಲ್ಲಿ ಅಳೆದು ಲೆಕ್ಕ ಹಾಕಿ ದೂರಾಭಾರವೆನ್ನಲಿ ಹೇಗೆ...
____ಜೀವಜೀವಾಂತರ ಮತ್ತು ಭಾವಸಾನಿಧ್ಯ...
💞💕💞

ಒಂದು ಸಾಸಿವೆಯಷ್ಟೇ ಆದರೂ ಶುದ್ಧಾತ್ಮ ಆಪ್ತತೆಯ ಎನ್ನೆದೆ ಬಟ್ಟಲಿಗೆ ಸುರಿದ ಜೀವವ ನಾ ಮರೆತ ದಿನ ಯೆನ್ನ ಸಾವಾಗಲಿ...
___ ಪ್ರಾರ್ಥನೆ...
💞💕💞

ನನ್ನೊಳಗಿನ ಸುಖದ ಹಂಬಲ ನಿನ್ನ ನೋವುಗಳಿಂದ ನನ್ನ ಪಾತ್ರ ದೂರ ನಿಂಬಂತೆ ಮಾಡುವುದು ಎಂಥ ಸ್ವಾರ್ಥ...
___ ನಿಜವಾಗಿ ನೀನಂದುಕೊಂಡಷ್ಟು ನಾನು ನಿನ್ನವನಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, May 8, 2021

ಗೊಂಚಲು - ಮುನ್ನೂರರ‍್ವತ್ತೊಂಭತ್ತು.....

ಈ ಹೊತ್ತಿನ ಪಾಠ.....

ಉಸಿರು ಹೃದಯದಲೇ ಹುಟ್ಟುವುದಂತೆ...
ಸಾವೆಂದರೆ ಉಸಿರು ನಿಲ್ಲುವುದಂತೆ...
ಉಸಿರಿಗೇ ಅಂಟಿದ ಸಾವ ಮರೆತು ಮೆರೆವ ನಾನು, ಹೃದಯದ ಕಿರು ಗಾಯಕೆ ಸಾವಿನವರೆಗೂ ಅಳುತ್ತೇನೆ...
___ಮರುಳನೇ ಇರಬೇಕು ನಾ...

🔅🕂🔆

ಬದುಕು ಕೇಳೋ ಯಾವ ಪ್ರಶ್ನೆಗೂ ಸಾವಂತೂ ವಿವರಣೆ ಕೊಟ್ಟದ್ದಿಲ್ಲ...
ಅಥವಾ 
ಬದುಕಿನ ಪರಿಪ್ರಶ್ನೆಗಳಿಗೆಲ್ಲ ಬದುಕಿನ‌ದೂ ನಿರುತ್ತರವೇ ಉತ್ತರವಾ...
_____ ಸಾವಿಗೆ ತರ್ಪಣ ಬಿಟ್ಟಷ್ಟು ಸುಲಭವಲ್ಲ ಬದುಕಿಂಗೆ ಆಜ್ಯವನೆರೆವುದು... 
🔅🕂🔆

ನನ್ನ ನೋವು ನನ್ನೆಡೆಗೆ ನನ್ನಲ್ಲಿ ಕರುಣೆ ಹುಟ್ಟಿಸಬಾರದು...
ಹಂಗೇನೇ,
ಅವರ ಭಾವ ವಶಕ್ಕೆ ನಿಲುಕಿ, ಸದರವಾಗಿ ನಾನು ಕೊಳೆ ಬೀಳುವಷ್ಟು ಪರರ ನೋವು ನನ್ನ ದೌರ್ಬಲ್ಯ‌ವಾಗಬಾರದು...
ಹೌದು,
ನೋವು ನಶೆಯಾಗಲೇಬಾರದು - ಎದೆಯ ನಶೆಯಾದರೆ ನೋವು ಮತ್ತೆ ಮತ್ತಷ್ಟು ಆಳದ ನೋವಿನ ದಾರಿಯನ್ನೇ ತೋರುತ್ತೆ... 
ತಿಳ್ಕೋ ಶ್ರೀ -
ನಿನ್ನ ಪಾಪಿ ಮನಸಲ್ಲಿ ಪಾಪಚ್ಚಿ ಭಾವಗಳಿಗೆ ಪ್ರಜ್ಞೆಯ ತುಳಿವಷ್ಟೆಲ್ಲಾ ತಾವೂ, ಕಾವೂ ಸಿಗಲೇಬಾರದು...
ಹೃದಯ ಸಂವೇದನೆ ಎಂಬುದು ಕರುಣೆಯ ಆಚೆ ಮತ್ತು ದೌರ್ಬಲ್ಯ‌ದ ಈಚೆ ನಿಂತು ಸಂವಾದಿಸಬೇಕು...
____ ಈ ಹೊತ್ತಿನ ಪಾಠ...
🔅🕂🔆

ಅಯ್ಯಾsss, ಎಷ್ಟೋ ನಗಸ್ತೀಯಾ ಪಾಪೀ...
ಗೋಪೀ,
ನಿನ್ನ ನಗಿಸುವುದೆಂದರೆ ನಿನ್ನನಷ್ಟೇ ನಗಿಸಿದ್ದಲ್ಲ ಅದು - ಅಷ್ಟು ಘಳಿಗೆ ನನ್ನ ನೋವನೂ ನಾ ಮರೆತು ನಲಿದದ್ದೂ ಹೌದು...
ಸಾವಿಗೂ ಸಣ್ಣಗೆ ಹೊಟ್ಟೆ ಉರಿಯುವಂತೆ...
____ನಿಜವೆಂದರೆ, ನನ್ನ ನಗು ನನ್ನ ಮೊದಲ ಆದ್ಯತೆ ಮತ್ತು ಅಂತಿಮ ಆಯ್ಕೆ...
🔅🕂🔆

ಯಾರೂ ಮೆಚ್ಚದ ಜೊಳ್ಳು ಕಾವ್ಯ - ನಾನು...
ಕನ್ನಡಿಯೊಳಗಣ ತಪ್ತ ಕಣ್ಣು - ನನ್ನದೇ ಪುಸ್ತಕ...
___23.04.2021
🔅🕂🔆

ಮುನ್ಸಾಗುವುದಷ್ಟೇ - ಅಲ್ಲಲ್ಲಿ ಅಷ್ಟೋ ಇಷ್ಟೋ ಆದಷ್ಟು ಹಂಚುತ್ತಾ, ಸಿಕ್ಕಷ್ಟನ್ನು ಸಿಕ್ಕಂಗೆ ನಂದ್‌ನಂದೇ ಅಂದ್ಕೊಂಡು ಸವಿಯುತ್ತಾ ಕಾಲನೊಟ್ಟಿಗೆ ಕಾಲು ಹಾಕುವುದು...
ನಿಲ್ಲಲಾಗುವುದಿಲ್ಲ - ಕಾರಣ, ಕಾಲು ನಿಂತಲ್ಲೇ ಕಾಲ ನಿಲ್ಲುವುದಿಲ್ಲ...
_____ಜೀವಯಾನ...
🔅🕂🔆

ಕೇಳಿಲ್ಲಿ -
ಅನ್ನವಾದರೂ, ಪ್ರೀತಿಯಾದರೂ
ಜೀವನ್ದಲ್ಲಿ ಒಂದಿನವೂ ಊಟ ಬಿಟ್ಟು/ಇಲ್ಲದೇ ಉಪವಾಸ ಕೂತ/ಬಿದ್ದ ಪ್ರಾಣಿಯಲ್ಲ ನಾನು, ಅದಾಗದು ಕೂಡಾ ನನ್ನಿಂದ... 
ಏನು ತಿಂದೆನೋ, ಎಷ್ಟು ತಿಂದೆನೋ, ಆದ್ರೆ ಏನೋ ಒಂದು, ಒಂದು ತುತ್ತಾದರೂ ಕೂಳಿಲ್ಲದೇ ಅಂತೂ ಮಲಗಿಲ್ಲ...
ಅಂಥ ನಾನು 
ನಿನ್ನ ಉಂಬಲಾಗದ ಅನಾರೋಗ್ಯದ, ಅವರಿವರ ಉಣ್ಣಲೇನಿಲ್ಲದ ಬಡತನದ ಶುದ್ಧ ಹಸಿವಿನ ಆರ್ತನಾದಕೆ ನಿಜಕ್ಕೂ ಆರ್ದ್ರವಾಗಿ ಸ್ಪಂಧಿಸಿಯೇನಾ ಚೂರಾದರೂ...
___"ಜಗತ್ತು ಮಾಯೆ, ಜೀವನ ನಶ್ವರ" ಒಣಕಲೆದೆಯ ರಣ ಭಾಷಣ...
🔅🕂🔆

ನಿನ್ನ ನೀನು ಸಂಭಾಳಿಸಿಕೊಳ್ಳೋದ ಕಲಿಯೋ ಶ್ರೀ...
ಇದ್ದವರು ಕೇಳಿದ್ರೆ ಕೈಗಡವೋ ಇಲ್ಲಾ ಬಡ್ಡಿ ಸಮೇತ ಬರಬಹುದು ಅನ್ಸೋ ಸಾಲವೋ...
ಇಲ್ಲದವ ಕೇಳಿದ್ರೆ, ಕೇಳೋದೇನು ಸುಮ್ಮನೇ ಸುಳಿದರೂ ಅದು ಭಿಕ್ಷೆ/ಗೇ...
ಹಣವಾದರೂ ಅಷ್ಟೇ, ಪ್ರೀತಿಯಾದರೂ ಅಷ್ಟೇ...
____ಉಫ್!! ಇಲ್ಲಿ ಹೆಣದ ಬಾಯಿಗೋ ಅಕ್ಕಿಕಾಳು, ತುಪ್ಪ, ತೀರ್ಥ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರರ‍್ವತ್ತೆಂಟು.....

ಬದುಕಿರುವ ಕಾರಣಕ್ಕೆ.....

ಎದೆಗೂಡಿನ ಹೆಬ್ಬಾಗಿಲ ನಂದಾದೀಪದುರಿಯಂಗೆ 'ನನ್ನೊಳಗೆ' ನಾನು ನನ್ನೊಡನೆ ನಿನ್ನನೂ ನನ್ನಂತೆಯೇ ಬೆಚ್ಚಗೆ ತುಂಬಿಟ್ಟುಕೊಳ್ಳಬಹುದು, ಸುಖವಾದ ಸಣ್ಣ ತಳ್ಳಿಯೂ ಇಲ್ಲದೇ ನನ್ನ ಭಾವ ಕೋಶದಿಂದ ನಿನ್ನ ಹೆಸರು ಅಳಿಸಿ ಹೋಗದಂಗೆ ಮುಚ್ಚಟೆಯಿಂದ ಕಾಯ್ದುಕೊಳ್ಳಬಹುದು - ಅದು ನನ್ನ ಪ್ರೀತಿ, ನನ್ನ ಬೇಶರತ್ ಆಯ್ಕೆ, ಅಲ್ಲಿಯದೆಲ್ಲ ಹೊಡ್ಪಡೆಗಳಿಗೆ ನನ್ನದೇ ಹೊಣೆಗಾರಿಕೆ...
ಆದರೆ,
ಹಂಗಂಗೇ ಆತ್ಮ ಸಾನ್ನಿಧ್ಯ‌ವಾಗಿ 'ನಿನ್ನೊಳಗೂ' ನನ್ನನ್ನು ತುಂಬಿಡಬೇಕು/ತುಂಬಿಬಿಡಬೇಕೂ ಅಂತ ಹಠಕ್ಕೆ ಬೀಳ್ತೇನೆ ನೋಡು, ಆಗ ಮತ್ತೆ ಮತ್ತೆ ನಿನ್ನೊಳಗೆ ಇಣುಕಲೆಳಸುತ್ತೇನೆ; ಒಂದು ಪಕ್ಷ ನಿನ್ನಾ ಒಳಗಲ್ಲಿ ನೀನೊಬ್ಬನೇ ಕಂಡುಬಿಟ್ಟರೆ ಅಲ್ಲಿಗೆಲ್ಲ ಮುಗೀತು - ಗರಬಡಿದ ಮನಸಿನ ಅಡಸಂಬಡಸಾ ಹಡಾಹುಡಿಗಳಿಗೆ ಸಿಕ್ಕಿ, ಬುದ್ಧಿಯೆಂಬೋದು ಮಂಕುದಿಣ್ಣೆಯಾಗಿ ಬಾಂಧವ್ಯವೊಂದು ಮುರಿದುಬೀಳೋ ಸದ್ದಿದೆಯಲ್ಲ; ಉಫ್ - ಅಲ್ಲಿಂದಾಚೆಗೆ ಮಾತು ಮಗುಚಿಕೊಂಡಷ್ಟೂ ನೆನಪು ಮೊರೆಯುವಂತಾಗಿ ನನ್ನೊಳಗೆ ನಾನೂ ಇರದಂತಾ ಅಯೋಮಯ...
___ಒಡನಾಡಿ/ಟ...
🔰🕀🔰

ಭ್ರಮೆಗಳು ಕೊಂಡೊಯ್ದು ನಿಲ್ಲಿಸೋ ಎತ್ತರವೂ ಭ್ರಮೆಯದ್ದೇ ಅಲ್ಲದಾ.‌‌..
ಅಪಾಯ ತಾರದೇ ತುಂಟ/ಕಳ್ಳ ಖುಷಿ ತುಂಬುವುದಾದರೆ ಅಂತವಿಷ್ಟು ಭ್ರಮೆಗಳೂ ಜೊತೆಗಿರಲಿ ಬಿಡು...
_____ ನರಕ ಸುಖ...
🔰🕀🔰

ಪಾಠ ಮಾಡೀ ಮಾಡಿ ಬದುಕಿಗೂ ಸುಸ್ತಾದಂಗಿದೆ...
ಅರ್ಹತೆ ಇಲ್ಲದೇ ಮಾನ್ಯತೆ ಬಯಸಿ ಕಳೆದುಕೊಂಡವುಗಳ ಯಾದಿಯ ಕಂಡರೆ ಭಯವಾಗುವಂತಿದೆ...
ಕನಸು ಎದೆ ಸುಟ್ಟಾಗ ಭಾವಬರಹ ಕೈಹಿಡಿದಿತ್ತು - ಏನೋ ಒಂಚೂರು ಹಗೂರ...
ಅಕ್ಷರಗಳೂ ಪದಗಳಾಗಲು ಮುನಿಸಿಕೊಂಡರೆ ಸಾವೂ ಖುಷಿಕೊಡಲಿಕ್ಕಿಲ್ಲ - ನಗೆಯೂ ಭಾರ ಭಾರ...
____ಖಾಲಿ ಖಾಲಿ ಸಂಜೆಗಳು ಮತ್ತು ಹುರುಳಿಲ್ಲದಾ ಹಪಹಪಿ...
🔰🕀🔰

ಅವ್ರು ನಂಬ್ಸೋಕೆ ಒದ್ದಾಡೋದೂ, ನಾನು ನಂಬೋಕೆ ಹೆಣಗಾಡೋದೂ - ನಂಬಿಸಿಬಿಟ್ಟೆ ಅಂತ ಅವ್ರು ಸುಳ್ಳೇ ಬೀಗುತ್ತಾ ಬೆನ್ನಾಗೋದೂ - ನಾನೋ ನನ್ನೇ ನಂಬ್ಸೋಕೆ ಬರ್ತಾರಲ್ಲಾ, ನಂಬಿ ಬಿಡ್ತೀನಾ ಅಂತ ಹುಳ್ಳಗೆ ಬೆನ್ಹಿಂದೆ ನಗೋದು - ಈ ಇಂಥ ಅಪದ್ಧ, ಅಪ್ರಬುದ್ಧ ಮೇಲಾಟಗಳಲ್ಲಿ ಸತ್ಯ ಮತ್ತು ಸುಳ್ಳು ಎರಡೂ ಪ್ರಸ್ತುತತೆಯ ಅರಿವಿಲ್ಲದೆಯೇ ಹರಕೆಯ ಬಯಲಾಟದ ಕೋಡಂಗಿ ವೇಷಗಳಾಗುತ್ತವೆ...
____ಗಾಳಿಗಂಟಿದ ಗಂಧವನ್ನ ಮುಟಿಗೆಮೌನದಲಿ ಗುಟ್ಟುಮಾಡುವುದಂತೆ...
🔰🕀🔰

ಜಗಳದಾಳದ ಸಲಿಗೆಯ ಸಲಿಲ ಎದೆಗಿಳಿಯದಿದ್ದರೆ ಪ್ರೀತಿ ಶರಧಿಯ ಆಳ ವಿಸ್ತಾರ ಬದುಕ ಬಳಸೀತು ಹೇಗೆ... ?!!
____ನೀನು ನಾನು ಮತ್ತು ನೇಹ...
🔰🕀🔰

ಮೈಲಿಗಲ್ಲು ಚಲನೆ ಕಲಿತಿಲ್ಲ...
ದೂರಗಳ ಹೇಳೋ ಕಲ್ಲೊಂದು ದಾಟಿ ಹೋಗುವವರ ಎದೆಗೆ ಹತ್ತಿರಾಗುವ ಕನಸ ಕಾಣಬಹುದೇ...?!
ಎಲ್ಲಿಗೂ ಖಾಸಾ ಆಗದ ಮೈಲಿಗಲ್ಲು ಮಾಸಮಾಸಕೂ ಹಕ್ಕಳೆದ್ದು ಮಾಸಬಹುದಷ್ಟೇ...
#ನಾನು...
🔰🕀🔰

ಅಬ್ಬೆ ಗರ್ಭದಿಂದ ಬಯಲಿಗೆ ಬಿದ್ದಾಕ್ಷಣ ಜೋರು ಅತ್ತೆ - ಉಸಿರ ನಾಳ ಚೊಕ್ಕವಾಗಿ ಉಸಿರಾಟ ಹಗೂರವಾಯ್ತು - ಪೂರಾ ಪೂರಾ ನಿಸರ್ಗ ಸಂಸರ್ಗದ ಜೀವಂತ ಹಾಡು ಅದು...
ದಿನಗಳೆದಂತೆ ನಗುವುದ ಕಲಿತೆ - ಉಹೂಂ, ಕಣ್ಣ ತೀರಕೆ ಕಟ್ಟೆ ಕಟ್ಟಿ ನಗುವುದ ಕಲಿತೆ - ಬದುಕೇ ಕರುಳ ಕೊರಳ ಹಿಂಡುವಾಗಲೂ ನಗೆಯ ಆಳುವುದ ಕಲಿತೆನೆಂಬ ಕಾರಣಕೇ ಬಲಿತೆನೆಂದು ಬೀಗಿದೆ; ಈಗಲೋ ಚಂದ ನಗುವಿನ ಡೋಲಿಯಲ್ಲಿ ಉಸಿರು ಜೀವ ಹೊರಲಾರದಷ್ಟು ಭಾರಾ ಭಾರ...
ಬೆಳೀತಿರೋದಾ - ಬೆಳೆಯೋ ಹಪಹಪೀಲಿ ಬಳಲ್ತಿರೋದಾ...?
ಬಂದದ್ದೆಲ್ಲಿಂದ - ಹೊರಟದ್ದೆಲ್ಲಿಗೆ - ನಡುವೆ ಇದೇನು ಬಡಿವಾರ...!!
ನಗುವಿಗೂ, ಅಳುವಿಗೂ ಬೇರೆಬೇರೆಯದೇ ಕಂದಾಯ...
ನಾನೇ ಪ್ರಶ್ನೆ - ನಾನೇ ಉತ್ತರ - ಮತ್ತೇss 'ಮತ್ತೆ ಮಗುವಾಗಬೇಕು' ಎಂಬೋ ದೊಡ್ಡ ದೊಡ್ಡ ಮಾತು...
____ಏನಹೇಳಲಿ ಬಡ ಭೋಗಿಯ ಗೋಳು...
🔰🕀🔰

ಖಾಲಿತನದ ಹೊಗೆಯಲ್ಲಿ ಉಸಿರುಗಟ್ಟುವ ಸಂಜೆಗಳಲೂ ಕಣ್ಣುಜ್ಜಿಕೊಂಡು ನಗೆಯೊಂದ ಹುಡುಕುತ್ತೇನೆ...
___ ಬದುಕಿರುವ ಕಾರಣಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, April 21, 2021

ಗೊಂಚಲು - ಮುನ್ನೂರರ‍್ವತ್ತೇಳು.....

ಗೆರೆ.....

ಕೇಳಿಲ್ಲಿ -
ನನ್ನ ಅತಿಯಾದ ಮತ್ತು ಅನಪೇಕ್ಷಿತ ಸ್ವಾಭಿಮಾನ ಕೂಡಾ ನಿನ್ನ ಪ್ರಾಮಾಣಿಕ ಪ್ರೀತಿ/ನೇಹಗಳ ಎದುರು ಸರಾಗ ಒಡನಾಟದ ಆಪ್ತ ತಂತುಗಳ ಬೆಸುಗೆಯನು ತಡೆಯೋ ಅಡ್ಡ ಗೋಡೆಯೇ ಆಗಬಹುದು... 
___ಗೆರೆ...
⇄↺↻⇆

ಬಂಧ ಅಥವಾ ಸಂಬಂಧಗಳನು ಸೋಸುವುದರಲಿ ಎರಡು ವಿಧ...
ಒಂದು ವ್ಯಕ್ತಿಗಳ ಗುಣಗಳನು ಸೋಸುವುದು...
ವ್ಯಕ್ತಿಗಳನೇ ಸೋಸುವುದು ಇನ್ನೊಂದು...
ಅವರವರ ವ್ಯಕ್ತಿತ್ವದ ಶಕ್ತ್ಯಾನುಸಾರ ಇದು ಅನುಸರಣೆಯಾಗುತ್ತೆ...
__ಕಳಚಿಕೊಳ್ಳುವ ಪಾಕ...
⇄↺↻⇆

ಹಾಯಲಾರದ, ಏಗಲಾರದ ಉರಿಗೆ ಜೀವಾ ಭಾವವ ನೆನೆನೆನೆದು ಪವಿತ್ರ ಪ್ರೇಮವ ಹಾಡುತ್ತಿದ್ದರು - ಪ್ರಕೃತಿಯೋ ಇರುಳ ಹೊಕ್ಕುಳಲ್ಲಿ ಅದೇ ಪ್ರೇಮದ ಕನಸೂಡಿ ಕಾಮವ ಸ್ಖಲಿಸಿ ಸಳಸಳ ಬೆವರಿ ನಿಸೂರಾಯಿತು...
#ಅಲ್ಲಿಗೆಲ್ಲ_ಚುಕ್ತಾ...
⇄↺↻⇆

ಎದೆಯ ತೇವ ಮೈಗಿಳಿಯದಂಗೆ ಅಥವಾ ಮೈಯ್ಯ ಬಿಸಿ ಹಸಿವು ನೆತ್ತಿಗೇರದಂಗೆ ಮೈಮನವ ಹದ್‌ಬಸ್ತಿನಲ್ಲಿಡ್ತಾ ಮುಖವ ಹಿಂಜಿಕೊಂಡು ಕಾಲಯಾಪನೆ ಮಾಡುವ ಹೈರಾಣು ಕಾಯಕ...
#ವಿರಾಗ...

ನಾ ನಿನಗಾಗಿ ಕಾಯುತ್ತೇನೆ, ನಿನ್ನನ್ನು ಕ್ಷಣ ಮಾತ್ರಕೂ ಕಾಯಿಸುವುದಿಲ್ಲ ಅಂತ ನಾ ಒರಲಿದರೆ ಅದು ಪ್ರೇಮಾಲಾಪವೇ ಆಗಬೇಕಿಲ್ಲ...
#ಸಾವಿಗೂ_ಕಾಯಬೇಕಾದೀತು...
⇄↺↻⇆

ನಿಸ್ಸಾರ ಪ್ರೇಮ ಕಾಮಗಳು ಸುಲಭವಾಗಿ ತಮ್ಮ ಬದುಕು ಕಟ್ಟಿಕೊಳ್ಳಲು ಆಶ್ರಯಿಸಿಕೊಂಡ ಆಳ - ಅದು ಕ್ರುದ್ಧ ಮೌನ...
ಮೌನಂ ಸಮ್ಮತಿ ಲಕ್ಷಣಂ ಎಂಬ ಆರೋಪಿತ ಭಾವದ ಸೂರಿನಡಿ ಧ್ವನಿಯ ಸಾಮಾನ್ಯ ಸಾಕ್ಷಿಯೂ ಇಲ್ಲದಲ್ಲಿ ತಾರ್ಕಿಕ ಆಖ್ಯಾನ, ವ್ಯಾಖ್ಯಾನಗಳೆಲ್ಲ ತಥಾಕಥಿತ ಕಥೆಗಳಾಗಿ ಬಲ ಕಳೆದುಕೊಳ್ಳುವಲ್ಲಿ ನೀ ಅಂದುಕೊಂಡದ್ದೇ ಸತ್ಯ ಅಥವಾ ನೀ ಹಲ್ಮೊಟ್ಟೆ ಕಚ್ಚಿ ಸಹಿಸಿಕೊಂಡದ್ದಕ್ಕೂ ಬಹುಪರಾಕಿನ ಹಾರ ತುರಾಯಿ...
ಎದೆಯಿಂದ ಎದೆಗೆ ಮೌನವೇ ದಾಟಿದರೆ ಅದು ಒಂದು ಜಗಳವೂ ಹುಟ್ಟದ ಸ್ತಬ್ಧ ಚಿತ್ರಗಳ ಜಾತ್ರೆ...
#ಆಡದೇ_ಉಳಿದದ್ದು_ಯುಗಳ_ಹಾಡಾಗುವುದು_ಹೇಗೆ...
⇄↺↻⇆

ಸಮಾನ ಅಥವಾ ಪೂರಕ, ಪ್ರೇರಕ ಸ್ಪಂದನೆ ಹುಟ್ಟದ ಇಲ್ಲವೇ ಕಳೆದೋದ ಭಾವ ಬೀದಿಯಲ್ಲಿ ಕ್ರಿಯೆಗೆ ಏನೋ ಒಂದು ಪ್ರತಿಕ್ರಿಯೆ ಅನ್ನುವಂತ ಒಣ ಒಣ ಸಂವಾದವಷ್ಟೇ ಉಳಿಯುತ್ತದೆ...
ಅಲ್ಲಿಗೆ ನೀನು, ನಾನು ನಡುವೆ ಮೌನ ಸಂಭಾಷಣೆಯ ಹೆಸರಿಟ್ಟುಕೊಂಡು ಉದ್ದಕೂ ಎಡೆ ಇಟ್ಟಂತೆ ಹಾಸಿಕೊಂಡ ಕ್ಷುದ್ರ ನಿಶ್ಯಬ್ದದ ಬೇಲಿ ಕರುಳ ಕಡೆಯುತ್ತದೆ...
ಸಂತೆಮಾಳದ ಇರುಳ ಅನಾಥ ಭಾವವನು ಹಸಿದ ಕುನ್ನಿಯೊಂದು ಮಲಗಿದಲ್ಲೇ ಗುರುಗುಟ್ಟಿ ತುಸು ಸಂತೈಸಿದಷ್ಟಾದರೂ ಸಂತವಿಸಲು ಒಂದು ಹಸಿ ಮಾತು ಬೇಕು ಮತ್ತು ಎದೆಯಲದು ಉಳಿಯಬೇಕು...
ಮತ್ತೆ ಮಾತಾಗಬಹುದೇ ಹೇಳೂ...
⇄↺↻⇆

ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಅಂತಾರೆ ಎಲ್ಲಾ ಮೊದಲು...
ಸಾವಿರ ಸುಳ್ಳುಗಳ ನಂಬಿ, ನಂಬಿಸಿಯೇ ಅಲ್ವಾ ಮದ್ವೆ ಒಂದು ಅಷ್ಟುದ್ದ ಬದ್ಕಿರೋದು ಅನ್ನೋದು ಕೊನೇಯ ತೊದಲು...
ಕೆಲವೆಲ್ಲ ಪ್ರಶ್ನೆ ಉತ್ತರ ಎರಡೂ ಮನ್ಸಲ್ಲೇ ಉಳದ್ರೇ ಹಿತ...
#ನಿಟ್ಟುಸಿರಲೇ_ಜೀವಿಸೋ_ಪಾತ್ರಗಳು...
⇄↺↻⇆

ಆಟತಿಮನೆ ಕಟ್ಟಿ, ಎಂಜಲು ಬಾಯಿ ಮಾಡಿ ಕಾಡು ಹಣ್ಣಿನ ಊಟ ತಿಂದು, ಬುರ್ ಬುರ್ ಅಂತ ಬಾಯಲ್ಲೇ ಗಾಡಿ ಓಡ್ಸೋ ಗಂಡನ್ನ ಪ್ಯಾಟೆಗೆ ಕಳ್ಸಿ, ಗುಂಡಪ್ಪನ್ನ ಮಗು ಅಂತ ತೂಗಿ ಸುಳ್ಳೇಪಳ್ಳೆ ಸಂಸಾರ ಮಾಡ್ವಾಗ ಇದ್ದ ಸುಖ ಸಂತೋಷ ನಿಜ ಸಂಸಾರದಲ್ಲಿ ಒಂದಿನಾನೂ ಕಾಣ್ಲಿಲ್ವಲ್ಲೋ...!!!
#ಕಥೆಯಾಗಿ_ವ್ಯಥೆ_ಹೇಳುವ_ಪಾತ್ರಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, March 28, 2021

ಗೊಂಚಲು - ಮುನ್ನೂರರ‍್ವತ್ತಾರು.....

ಬಾಳ್ಮೆ ರಂಗಭೂಮಿ..... 

ಕುಂಚ ಪ್ರೀತಿ: ಪಲ್ಲವಿ ಚಿತ್ರದುರ್ಗ

ಹೋಳಿಯಂತೆ
ಹರಕುದುರಿತಗಳೆಲ್ಲ ಘಳಿಗೆ ಕಾಲವಾದರೂ ಮರೆತು

ಬಣ್ಣ ಬೆಡಗಿನ ಹಬ್ಬವಾಗುವುದಂತೆ...
ಒಂದು ನಗೆಯ ಕಡವ ಕೊಡು
ನೂರು ಬಣ್ಣ ಬೆಳೆದುಕೊಳುವೆ...

ಸುಗ್ಗಿ ಸುರಿಯಲಿ
ಹಿಗ್ಗು ಹರಿಯಲಿ
ಹುಗ್ಗಿ ಉಂಡು ಸಗ್ಗವಾಗಲಿ
ಹಿಡಿ ಕನಸ ನೆಟ್ಟ ಎದೆಯ ನೆಲ...
___ ಪ್ರಾರ್ಥನೆ...
         ____ 28.03.2021
⇲⇠⇡⇣⇢⇱

ಹುಟ್ಟಾ ಮೂಕ ನಾನು - ಕಣ್ಕಟ್ಟಿಕೊಂಡು ಕುರುಡನ ಪಾತ್ರ ಮಾಡುತ್ತಿದ್ದೇನೆ...
ಬಾಳ್ಮೆ ರಂಗಭೂಮಿ...
      ___ 27.03.2021
⇲⇠⇡⇣⇢⇱

ಕೆಲವೆಲ್ಲ ಸೋಲುಗಳ ಮರೆಯುವುದೂ ದೊಡ್ಡ ಗೆಲುವು...
ಮತ್ತು
ಕೆಲವು ಗೆಲುವುಗಳ ಹೆಗಲಿಗೂ ಸೋಲಿನ ಎದೆನೋವೇ ಅಂಟಿರುತ್ತದೆ...
#ತರ್ಕಕ್ಕೆ_ಸಿಗದ_ಬದುಕಿನ_ಬಡಿವಾರ...
⇲⇠⇡⇣⇢⇱

ಆ "ಪ್ರೇಮ"ವನ್ನೊಮ್ಮೆ ಜೀವಿಸಿ ನೋಡು...
ಈ "ಪ್ರೇಮಿ" ಎಂಥ ಸಣ್ಣ ಪ್ರಲೋಭನೆ...
⇲⇠⇡⇣⇢⇱

ಭಾವಗಳ ಧುನಿಯ ಪಾತ್ರವಾಗಿ ಪಾಪ ಈ 'ಪದ'ಗಳು ನಾ ಏನೇ ಹೇಳಿದರೂ ಸಂಯಮದಿಂದ ಕೇಳಸ್ಕೋತಾವೆ...
ಎದೆ ದನಿಗೆ ಕನ್ನಡಿಯಂಥ ಕಿವಿ - ಅಪ್ಪಿಕೊಂಡ ಅಭಿರುಚಿ...
#ಬದುಕಿನ_ಸವಿರುಚಿ...
⇲⇠⇡⇣⇢⇱

ಒಳಗಿಳಿದು ನೋಡು ಶ್ರೀ -
ನಂಗ್ಯಾರೂ ಇಲ್ಲ ಅನ್ನುವಲ್ಲೇ ನಿಂಗಾಗಿ ಬದುಕಿನ ಯಾವುದೋ ಪಾಠ ಅಥವಾ ಪ್ರೀತಿ ಇದ್ದಿರಬಹುದು/ಇರತ್ತೆ...
ಮಾನಸಿಕವಾಗಿ ಸ್ವತಂತ್ರವಾದಷ್ಟೂ ಅಂತರಂಗದ ಫಿಜೂಲು ಯುದ್ಧಗಳ ಅಷ್ಟಷ್ಟು ಗೆದ್ದಂಗೇ ಲೆಕ್ಕ...
___ಖಾಲಿತನದ ಪಾತ್ರೆಗೆ ಆತ್ಮದ ಪಾತ್ರ ತುಂಬುವ ಭರವಸೆ...
⇲⇠⇡⇣⇢⇱

ವತ್ಸಾ -
ಎಷ್ಟು ತಾಲೀಮು, ಎಂಥ ಭಂಡತನ ಬೇಕು ನೋಡೋ ಬದುಕಿಂಗೆ ಒಂದು ಮುಟಿಗೆ ಹುಚ್ಚು ನಗೆಯ ಸಾಕಿ ಸಲಹಿಕೊಳ್ಳಲು...
____ಜೀವನ್ಮೋಹ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, March 27, 2021

ಗೊಂಚಲು - ಮುನ್ನೂರರ‍್ವತ್ತೈದು.....

ಕಾಡು ಕತ್ತಲ ಧ್ಯಾನ......

ಕೇಳಿಲ್ಲಿ -
ಸಾವನ್ನು ಹೆಗಲ ಮೇಲೆ ಹೊತ್ತೇ ಬದುಕನ್ನು ಪ್ರೀತಿಸಬೇಕು...
ಅದು ಅನಿವಾರ್ಯ ಮತ್ತು ಅದೇ ಬದುಕ ಹಾದಿ/ಬೇಗುದಿ...
ಹೆಗಲ ಮೇಲಿನ ಭಾರದ ನೆರಳು ಬಾಳನೆಳೆವ ರಟ್ಟೆಗೆ ರೊಚ್ಚು ತುಂಬಬೇಕು...
ಅನುಕ್ಷಣದ ಕಣಕಣವನೂ ಜೀವಿಸಲು ಅದು ಅಗತ್ಯ ಮತ್ತು ಅದೇ ಜೀವಂತಿಕೆಯ ಮೂಲ ಧಾತು...
___ ಪಲ್ಲವಿಸು ಹೊಸತೇ ಭಾವ ಧಾರೆಯಲಿ ಪ್ರತೀ ಹೊಸ ಘಳಿಗೆಯಲೂ...
↫↜⇕↝↬

ಕೊಟ್ಟ ಕೊನೇಯಲ್ಲಿ ಬಾಯಿಗಿಟ್ಟುಕೊಳ್ಳಲು ಉಳಕೊಂಡ ಸಣ್ಣ ಚೂರಿನ ರುಚಿಯಿರುತ್ತಲ್ಲ ಅದು ಬಲು ಗಾಢ ಬಲು ಗಾಢ - ಸಿಹಿಯದಾದರೂ, ಕಹಿಯದಾದರೂ...
ಕೊನೇಯ ತಿರುವಲ್ಲಿನ ಬದುಕಾದರೂ ಅಷ್ಟೇ...
#ಮತ್ತೇನಿಲ್ಲ...
↫↜↝↬

ಅವನ ಮೌನವ ನಂಬಿ ಉಸಿರಿದ್ದೂ ಹೆಣದಂತಾದ ನಿಷ್ಪಾಪಿ ಜೀವಗಳ ಕಣ್ಣೊಳಗೆ ಕುಣಿವ ಸಾವಿನ ಪಾಪವ ಯಾರ ತಲೆಗೆ ಕಟ್ಟಲಿ...
#ದೇವರು_ದೇವರಂಥವರು... 
↫↜↝↬

ಅನೂಹ್ಯ ಕತ್ತಲಿಗೂ ಬರಗಾಲ ಇಲ್ಲಿ...
ಹಗಲಿರುಳೂ ಬೆಳಕೇ ಬೆಳಕು ಉರಿವ ಊರಲ್ಲಿ ಊರುಗೋಲು ಕಳಕೊಂಡು ತೆವಳುತಿರುವ ಹುಲುಜೀವಿ ನಾನಿಲ್ಲಿ...
ಹೊಟ್ಟೆ ಹರುಕು ಚೀಲ, ಸೋತು ಪದಹಾಡುವ ಪಾದ, ಅಪಾಂಗ ಮನದ ಕನಸುಗಳ ಪ್ರೇತಾತ್ಮ, ಏನೆಲ್ಲಾ ಎಷ್ಟೆಲ್ಲಾ ಹಲುಬಾಟಗಳು ಬಿಮ್ಮಗೆ ಮಲಗಿವೆ ಎದೆ ಗೂಡಲ್ಲಿ...
ಬಾ ಕತ್ತಲೇ, ಕನವರಿಕೆಯಾ ಮರೆಸು -
ಕಳೆದೇ ಹೋಗಬೇಕು, ಮುಳುಗಿ ಕರಗಬೇಕು ನಿನ್ನೊಡಲಾ ಕಡಲಲ್ಲಿ...
___ಕಾಡು ಕತ್ತಲ ಧ್ಯಾನ...
↫↜↝↬

ಇಲ್ಲಿ ಇರುಳ ಬೀದಿಯಲೂ ಕತ್ತಲು ಸಿಕ್ಕುವುದಿಲ್ಲ - ಕಣ್ಣ ಪಾಪೆಯಲಿ ಹೆಕ್ಕಿಕೊಳ್ಳಬೇಕಷ್ಟೇ ಅಷ್ಟಿಷ್ಟು ದಕ್ಕಿದಷ್ಟು ನೆರಳನ್ನೇ...
ಹಾಗಂತ ಬೆಳಕೇನೂ ಬೀಗಬೇಕಿಲ್ಲ - ಎಲ್ಲಾ ಪಾಳಿಯಲೂ ದುಡಿಸಿಕೊಂಡ ಮಾತ್ರಕ್ಕೆ ಎಲ್ಲರೂ ಬೆಳಕನ್ನು ಪ್ರೀತಿಸುತ್ತಾರೆಂದೇನೂ ಅರ್ಥವಲ್ಲ...
ಬಿಡು ಬೆಳಕೇ -
ಅಗತ್ಯಕ್ಕೆ ಅಪ್ಪಿಕೊಂಡವರು ಅಕ್ಕರೆಯ ತಂಪಿಗೆ ಎದೆಕೊಡುವುದು ಬಲು ದುರ್ಲಭ...
#ಮಹಾನಗರ...
↫↜↝↬

ಎಲ್ಲಾ ದೀಪಗಳೂ ಆರುವುದೇ ನಿಜ...
ಕೆಲವು ಗಾಳಿಯ ಸುಳಿ ರಭಸಕ್ಕೆ, ಇನ್ಕೆಲವು ಎಣ್ಣೆ ಖಾಲಿಯಾದ ಕಾರಣಕ್ಕೆ...
ಬತ್ತಿಯ ಮೈಯ್ಯ ತುಂಬಾ ಸುಟ್ಟ ಕಲೆಗಳು...
ಇಲ್ಲಿ ಯಾರು ಯಾರ ಹೆಗಲೇರಿ ನಡೆದದ್ದೋ, ಯಾವುದರ ಚಿತಾವಣೆಗೆ ಇನ್ಯಾವುದರ ಬಲಿಯೋ ಯಾರು ಹೇಳೋರು...
___ಸುಟ್ಟಲ್ಲದೇ ಬೆಳಕೂ ಇಲ್ಲದಲ್ಲಿ ಕತ್ತಲೆಯೊಂದೇ ಸತ್ಯವಿರಬಹುದಾ ಶ್ರೀ...
↫↜↝↬

ಸಾವಿಗೆ ಮಣ್ಣು ಕೊಟ್ಟಷ್ಟು ಸುಲಭ ಅಲ್ಲ ನೋವಿಗೆ ಹೆಗಲು ಕೊಡೋದು...
___ಬಲು ಬೆರಕಿ ಈ ಬದುಕು...
↫↜↝↬

ಕೆಲವೆಲ್ಲ 
ಬದುಕುಗಳನು ಕಿತ್ತು ತಿನ್ನುವ ಇಲ್ಲಿನ ನೋವುಗಳು ಮಾಡಿಸೋ ನರಕ ದರ್ಶನಕ್ಕಿಂತ ಆ ಮೇಲೆಲ್ಲೋ ಇರುವ ಯಮನ ನರಕ ಅಂಥ ಪರಿ ಏನೂ ಕೆಟ್ಟದಿರಲಿಕ್ಕಿಲ್ಲ ಬಿಡು...
ಹೀಗನ್ನಿಸಿ 
ಕಿವಿಯಾದ ನೋವಿಂಗೆ ಹೆಗಲಾಗಲಾರದ ಗೆಳೆತನ ನಾನೆಂಬ ಹತಾಶ ಭಾವ ಕಾಡುವ ಹೊತ್ತಿಗೇನೇ -
ಮತ್ತೆಲ್ಲೋ 
ದೊಡ್ಡಾಸ್ಪತ್ರೆಗಳ ವರಾಂಡಗಳು ಖಾಲಿ ಖಾಲಿಯಾಗಿದ್ದುದು ಕಂಡರೆ ನೋಡೋಕೆ ಏನೋ ಸಮಾಧಾನ...
ಶನಿ ಮಹಾರಾಜರ ಖಾಸಾ ಬಂಟರೆಲ್ಲ ಚೂರು ನಿದ್ದೆ ಹೋಗಿರೋ ಸಣ್ಣ ನಿರಾಳ ಭಾವ... 
#ಒಂದು_ಹಿಡಿ_ಕಾಳಜಿ...
#ಆರೋಗ್ಯ(ವೇ)_ಭಾಗ್ಯ...
↫↜↝↬

ಹಾಗಂತಾರೆ, 
ಅಲ್ಲಿ ಮೇಲೆಲ್ಲೋ ನಿಜ ಸ್ವರ್ಗ ಇದೆಯಂತೆ...
ಖರೇನೇ ಹೌದು, ನಂಬಿದೆ...
ಇಲ್ಲಿಯೇ ನರಕವ ಕಂಡ ಮೇಲೆ...
ಯಮನ ಮನೆಯ ಅತೃಪ್ತ ಕಿಂಕರರೆಲ್ಲ ಆಜುಬಾಜಲ್ಲೇ ಭೇಟಿಗೆ ಸಿಕ್ಕಮೇಲೆ...
____ ಮತ್ತೆ ಮತ್ತೆ ಮೂಕ ಶೋಕ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, March 26, 2021

ಗೊಂಚಲು - ಮುನ್ನೂರರ‍್ವತ್ನಾಕು.....

ಇರುಳನೂ ಚೂರು ಜೀವಿಸಬೇಕು.....

ಉಸಿರ ಸದ್ದಿನ ನಾಡಿ ಹಿಡಿದು ಅವಳ ಜೀವಾಭಾವ ಕೋಶವ ಸೇರುವಾಸೆಯಲಿ ಮೆಲ್ಲ ಸರಿಯುತ್ತೇನೆ ಅವಳಂಗಳಕೆ - ಸೋಂಬೇರಿ ಆಸೆಬುರುಕ ಮಳ್ಳ ಹೈದ ನಾನು...
ಅಲ್ಲೋ ಅವಳ ಗೊಣಗೆಲ್ಲ ಪಾತ್ರೆಗಳ ಢಣಬಣ ಸದ್ದಾಗಿ ಕಿವಿಯನೂ ಕುಕ್ಕುತ್ತದೆ...
ಸುಮ್ಮನೆ ಹಿಂದೆ ಸರಿದು ಭಗ್ನ ಪ್ರಣಯ ಕವಿತೆ ಬರೆದು ನಿಡಿ ಉಸಿರು ಬಿಡುತ್ತೇನೆ...
#ಪ್ರಾರಬ್ಧ...
💞💞💞 

ಗ್ರೀಷ್ಮದ ಬಾಗಿಲ ಅಂಟಂಟು ಸಂಜೆಗಳಿಗೂ ನಿನ್ನದೇ ಬಣ್ಣ ಬಳಿಯುತ್ತದೆ ನನ್ನದೀ ಎದೆಯ ತಾಪಮಾನ...
ಕತ್ತಲ ಕೌದಿಯೊಳಗೆ ಮೈ ಮನಸ ನಡುವೆ ನಿನ್ನ ನೂರು ನಖರೆಗಳ ಬಿಸಿ ಬಿಸಿ ಚರ್ಚೆಯಾಗಿ ಮೈಮನದ ಹಸಿಭಾವ ಬೆವರಾಗಿ ಕಲಸುವುದು ಹುಡುಗನ ತುಡುಗು ಹರೆಯದ ಸಹಜ ಜಾಯಮಾನ...
ಕೇಳಿಲ್ಲಿ -
ಇರುಳನೂ ಚೂರು ಜೀವಿಸಬೇಕು...
ಪ್ರತಿಪದೆಯ ಚಂದಮನ ಬೆಳುದಿಂಗಳ(ಳಂಥ) ಬೆನ್ನ ಸೆರಗ ಮೇಲೆ ನಿನ್ನ ಹೆಸರ ಬರೆದು ಕವಿತೆಯ ಹುಟ್ಟನು ಆಚರಿಸಬೇಕು...
ಕತ್ತಲಿದು ಕಂತುವ ಮುನ್ನ ಒಂದರೆಘಳಿಗೆ ಕನಸೇ ನೀ ಕನಸಿಗಾದರೂ ಬಂದು ತುಟಿಕಚ್ಚಿ ಪ್ರಣಯೋಂಕಾರದ ದೇವಸುರೆ ಕುಡಿಸಿ ಹೋಗಬೇಕು...
ಇರುಳನೂ ಚೂರು ಜೀವಿಸಬೇಕು ಮತ್ತದಕ್ಕೆ ನಿನ್ನ ತೋಳ ಬೆಂಕಿ ಬಳ್ಳಿಯ ಆಸರೆಯೇ ಬೇಕು...
ಬೇಲಿಯಿಲ್ಲದ ಜೀವಾಭಾವ ಬಯಲಿನ ಹೂವು ನೀಲಿ ನೀಲಿ...
__ಕಳ್ಳ ಹಸಿವು...
💞💞💞

ಪ್ರಾಯದ ಹುಚ್ಚು ಕಾತುರಗಳೆಲ್ಲ ಕರಗೋ ಮೊದಲ ರಾತ್ರಿಯ ಸಂಭ್ರಮದ ಗಲಿಬಿಲಿಯ ಗಲಗಲದ ಹೋರಿನಲ್ಲಿ ಚೂರು ಚೂರೇ ಬಿಚ್ಚಿಕೊಂಡ ನಾಚಿಕೆ ಬೆಳಗಿನ ಬಾಗಿಲಲ್ಲಿ ಮನೆಯವರೆದುರು ಮತ್ತೆ ಎದೆಯೇರಿ ಕುಳಿತು ಉಟ್ಟ ವಸ್ತ್ರದ ಮುದುರುಗಳನು ಮತ್ತೆ ಮತ್ತೆ ಸವರುತ್ತದೆ...
ಯಾರೇ ಎದುರಾಗಿ ಸುಳ್ಳೇ ನಕ್ಕರೂ ಹಿಂದಿನಿರುಳ ಆಮೋದ ಪ್ರಮೋದಗಳೇ ಕಳ್ಳ ಹಾದಿಯಲಿ ಮೈಮನದಿ ಕಿಲಕಿಲವೆಬ್ಬಿಸ್ತಾವೆ...
ಸುಖವೆಂದರೆ ಸುಖ ಸುರಿವ ಕ್ರಿಯೆಯಷ್ಟೇ ಅಲ್ಲ - ಮಿಗಿಲು, ಕ್ರಿಯೆ ಪ್ರಕ್ರಿಯೆಯ ಹಿಂಚುಮುಂಚಿನ ಭಾವದಲೆಗಳು ಎಬ್ಬಿಸೋ ಪುಳಕದುಲಿಗಳೂ ಸುಖವೇ ಅಂತ ಗದ್ದಲದ ಮರು ಸಂಜೆಯ ತಂಬೆಲರು ಕಣ್ಣು ಮಿಟುಕಿಸುತ್ತದೆ...
ತುಳುಕಿದ ಹಾಲ್ಬಟ್ಟಲು, ಮಗುವೊಂದು ರಂಗೋಲಿಯ ಅಳಿಸಿದಂತೆ ಅಲಂಕಾರಗಳನೆಲ್ಲ ತೀಡಿ ಕೆಡಿಸೋ ಅಂಗೈಯ್ಯ ಸ್ವೇದ ಬಿಸುಪಿನ ಆತುರ, ಒಪ್ಪಿತವೇ ಆದರೂ ಅಪ್ಪುವಾಗ ನಡುಗಿದ ಮೈ ಕೈ, ಉನ್ಮಾದಕೆದುರಾಗಿ ಸುಳಿಯೋ ಸಣ್ಣ ನೋವು, ಅರ್ಥ ಕಳಚಿಕೊಂಡ ಸೋಲು, ಗೆಲುವು, ತಪ್ಪು ತಪ್ಪು ಹೆಜ್ಜೆ, ನಾಭಿ ತೀರಕೆ ಅಪ್ಪಳಿಸೋ ಛಳಕು ಛಳಕು ಮಿಂಚಿನ ಹೋಳು, ಉಸಿರ ಸೆರಗು ಹಾರಿ ಹಾರಿ ಕಾದು ಕಾಯ್ವ ತೋಳ ತುಂಬಾ ಮತ್ತೆ ಮತ್ತ ಇರುಳು...
ಮಿಶ್ರ ಬೆವರ ಮಳೆಯ ಕುಡಿಕುಡಿದು ನಿತ್ಯ ಅರಳೋ ಹಾಸಿಗೆಯ ಹೂ ಚಿತ್ರ - ಅಮೃತ ಅಮಲೇರಿ ನಶೆಯಾದ ಹಾಂಗೆ ಮಂದ ಬೆಳಕಲ್ಲಿ ತೂಕಡಿಸೋ ತೂಲಿಕೆ...
____ ಮೊದಲಿರುಳ ಬಸಿರಿನಿಂದ ಮೊದಲಾಗಿ...
💞💞💞

ಪ್ರೇಮ ಕವಿತೆ ಬರೆಯೋ ಹುಡುಗೀರೆಲ್ಲರ ಭಾವದಲ್ಲಿನ ಪ್ರೇಮಿ ಅಥವಾ ಆ ಕವಿತೆಗಳ ಭಾವ ಸ್ಫೂರ್ತಿ ನಾನೇ ಅಂತ ಸುಳ್ಳೇಪಳ್ಳೆ ಆದ್ರೂ ನಂಬಿ ಒಳಗೊಳಗೇ ಖುಷಿಗೊಳ್ಳುತ್ತಿದ್ದರೆ ಪ್ರೇಮರಾಹಿತ್ಯದಿಂದ ನರಳುತ್ತಾ "ನಂಗೆಲ್ಲಾ ಯಾರ್ ಬೀಳ್ತಾರ್ ಗುರೂ" ಅನ್ನೋ ಅಭಾವ ವೈರಾಗ್ಯದ, ಸ್ವಯಂ ಕರುಣೆಯ ಭಾವದಿಂದ ಚೂರಾದರೂ ಸುಳ್ಳು ಸಮಾಧಾನವನಾದರೂ ಹೊಂದಲಾದೀತೇನೋ ಅಲ್ವೇ..‌.
#ಪ್ರಾರಬ್ಧ...
#ಅವಳ_ಕವಿತೆಗೆ_ಉತ್ತರ...
💞💞💞

ದೇವಕಣಗಿಲೆಯ ನವಿರು ಘಮ ಹಾಗೂ ಬೆಳುದಿಂಗಳ ಹಾಲು ಮಾರಲು ಹೊರಟ ಬಾನಂಗಳದ ಇರುಳ ಹೂವು...
ತಂಬೆಲರ ಡೋಲಿಯೇರಿ ಒಲಿದು ಬರುವ ನಿನ್ನ ಕಿರುಲಜ್ಜೆಯ ಸವಿನೆನಪು - ರುದಯ ಕಡಲಿನ ಭಾವ ಶಾಲೀನತೆ...
ಎದೆಯ ತೇಜಸ್ಸಲಿಲದಲಿ ಹೊಯ್ದಾಡಿ ತೇಲುವ ಹಾಯಿ ತುಂಬಾ ನಿನ್ನದೇ ತುಂಟ ಕಿಲಕಿಲದ ಕಾವ್ಯ ಕನಸು...
ಹಾಡ ಹಡೆಯುವ ಸಂಜೆಗಳು...
💞💞💞

ಎದೆ ತಂಬೂರಿಗೆ ಬೆರಳ ಸೋಕಿಸಿ ಹಬ್ಬವಾಗಿಸಿದವನೇ -
ಯಾಕೆ ಒಬ್ಬಳೇ ಕೂತದ್ದು, ಒಳಗೊಳಗೇ ಒಬ್ಬೊಬ್ಳೇ ನಗೋದು ಅಂತಾರೆ ನೋಡಿದವರು - ನನ್ನ ಬಿಗಿದಪ್ಪಿ ಕೂತ ನಿನ್ನ ಕನಸುಗಳು ಅವರಿವರಿಗೆ ಕಾಣಲ್ಲ ನೋಡೂ...
ಈಗೀಗ ಬೆಳುದಿಂಗಳಿಗೆ ಬಾಗಿಲು ತೆಗೆವ ನನ್ನ ಸಂಜೆಗಳೇ ಹೀಗೆ - ಪಾರಿಜಾತ ಪಕಳೆ ಬಿಡಿಸಿ ಮೈನೆರೆವ ಹಾಗೆ - ಸದ್ದಿಲ್ಲ ಗದ್ದಲವಿಲ್ಲ, ನೀನೂಡೋ ಅನುರಾಗದ ಅನುಯೋಗದ ಭಾವ ತಲ್ಲೀನತೆಯ ಅಯಾಚಿತ ನಗೆಯ ಎಸಳಿನ ಗಂಧ ಮೈಮನದ ಬೀದಿ ತುಂಬಾ...
ಮುಸ್ಸಂಜೆಯ ನೂರು ಬಣ್ಣ - ಬೆಳುದಿಂಗಳಿರುಳ ಕಪ್ಪು ಬಿಳುಪು - ಗೆಜ್ಜೆಯ ಕಚ್ಚಿ ಎಳೆದು ಪುಳಕದಲೆ ಎಬ್ಬಿಸೋ ಕಲ್ಯಾಣಿಯ ಮರಿ ಮೀನು - ನನ್ನ ಸಾನಿಧ್ಯದಲಿ ನಿನ್ನ ಕಣ್ಣ ಓಲೆಗರಿಯಲಿ ಹರಡಿಕೊಳ್ಳೋ ರಸಿಕ ಚಿತ್ರಗಳು - ಮಹಾ ಸಭ್ಯತೆಯಲಿ ಸೋತು ಅನುನಯಿಸೋ ನೀನು - ಸುಳ್ಳೇ ಅನುಮಾನಿಸೋ ಕಳ್ಳ ಗೆಲುವನು ಮೆಲ್ಲೋ ನಾನು...
ಉಫ್!!
ಎಷ್ಟೆಲ್ಲಾ ಬೆಡಗು, ಬಿಂಕ, ಬಿನ್ನಾಣದ ತಂತುಗಳ ತಂದು ತುಂಬಿಬಿಟ್ಟೆಯೋ ಗೂಬೆ ಈ ಬದುಕಿನ ಭಾವ ಭಿತ್ತಿಗೆ - ಊರ ಬಾಯಲ್ಲಿನ ಬಝಾರಿ ಹುಡುಗಿಯೂ ಸಂಜೆ ಕೆಂಪಲ್ಲಿ ಮೀಯುವಾಗ ಮೈಯ್ಯ ಸೊಂಪೆಲ್ಲ ಬಿರಿದರಳಿ ಮಾತು ಮರೆತು ಮನಸುಕ್ಕಿ ಮೆದುವಾಗೋ ಹಾಗೆ...
ಹೆಣ್ಣಾಗುವ ವಿಚಿತ್ರ ತಲ್ಲಣವ ಮೀರಿ ಕಲೆತು ಕಳಿತು ಹಣ್ಣಾಗುವ ಸಮ್ಮೋಹಕ ಆಸೆಯ ತುಂಬಿದ ಗಂಧರ್ವನೇ -
ಬದುಕು ಹಾಯಬೇಕಾದ ಹೊಳೆ ಹಾಳಿಯ ಹುಳಿ ಸಿಹಿ ಮಾತಿಗೆ, ಮೈಮನೋಭೂಮಿಕೆಯ ದಿವ್ಯ ಉರಿಗೆ ಬದುಕೇ ಆಗಿ ಜೊತೆ ಜೊತೆಗೆ ನೇರಾನೇರ ಕೈಗೆ ಸಿಗುವುದು ಯಾವಾಗಲೋ ಜೋಗೀ...
#ಹೆಸರಿಲ್ಲದ_ಛಾಯೆ...
💞💞💞

ನೆನಹಿನೊಂದು ಅಲೆ ಬಂದು ಪಾದ ತೊಳೆದು ಮೈಮನದ ತುಂಬಾ ಸಾಗರನ ಎದೆಗುದಿ...
#ನೀನೇ_ತುಳಿದಂತೆ_ಎದೆಬಾಗಿಲಾ...

ಇದು ಪ್ರೇಮಿಗಳ ತಿಂಗಳಂತೆ....
ಚಿರ ವಿರಹಿಗೋ ಅದು ಬರೀ ಅಂತೆ ಕಂತೆ...
#ಬೇರು_ಕಳಚಿದ_ಹೂಪಕಳೆ...

ಅವಳೆಂದರೇ ಕನಸು...
💞💞💞

ಇಲ್ಕೇಳು -
ಸಾಗರ ದಂಡೆಗೊಪ್ಪಿಸಿದ ಕಪ್ಪೆಚಿಪ್ಪುಗಳ ಸುಖಾಸುಮ್ಮನೆ ಹೆಕ್ಕುತ್ತ ಕೂತಿದ್ದೇನೆ, ಎದೆ ಕುಡಿಕೆಯ ತುಂಬಾ ನಿನ್ನ ನೆನಪು ಅಲೆಯಾಗಿ ಮರಳುತಿದೆ...

ಹೊಳೆ ಮಡುವಲಿ ಮಿಂದ ಎಳೆಗರು ಕಾಲಿಗೆ ಕೊರಳುಜ್ಜುವಾಗ ಹಿತವಾಗಿ ಕೊರೆವ ಛಳಿ ಛಳಿ ಕಂಪನದಂತೆ ನಿನ್ನ ನುಡಿ ಒನಪಿನ ನೆನಪು...
ಕೇದಗೆ ಬನದಲ್ಲಿ ಮಿಡಿನಾಗರ ಸರಸರ ಸರಿವಂಗೆ ಆಸೆಯ ಚಿಗುರು ಬಿಸಿ ಸೆಳಕಿಂದ ಮೈಯ್ಯೆಲ್ಲ ಸುಳಿಗಂಪನ...

ಶರಧಿಯಂಗಳ - ತೋಯ್ದ ಪಾದಗಳು - ಹುಣ್ಣಿಮೆ ಮಗ್ಗುಲಿನ ಬೆಳುದಿಂಗಳು - ಅಂಟಿ ಕೂತ ಹೆಗಲ ಬಿಸುಪು - ಬೆಸೆದ ಬೆರಳ ಹೆಣಿಗೆ ಬಂಧ - ಆಪಸ್ನಾತೀಲಿ ಎಂಬಂತೆ ಪರಸ್ಪರ ಎಂಜಲು ಸವಿದ ಅಧರಂ ಮಧುರಂ - ಬೆನ್ನ ಮೇಲೆ ಹೂ ಬಿಟ್ಟ ತುಂಟ ಕವಿತೆ - ಮರಳ ಮೈಗಂಟಿದ ಪ್ರಣಯ ಗಂಧ...
ಇಷ್ಟಕಿಂತ ಹೆಚ್ಚೇನು ಬೇಕೇ - ಶುಭ ಘಳಿಗೆಗೆ ಬೇರೆ ಅರ್ಥಾರ್ಥವುಂಟೇ...!!

ಉಸಿರ ನುಡಿಸುವ ಕಾವ್ಯವೇ -
ಕಾಯುತ್ತಾ ಕಾಯುತ್ತಾ ಕೂತಲ್ಲೇ ಕೂತಿದೇನೆ ಮತ್ತು ಕುಂತೇ ಇರುತ್ತೇನೆ ಇರುಳು ಕಂತುವ ಕವಲಿನಲ್ಲೂ - ಎದೆಗಡಲ ಹೋರಿಂಗೆ ಕಣ್ಣೊಡಲು ಕರಗೋ ಮುನ್ನ ಕೊರಳ ಹಬ್ಬಿ ಮುದ್ದಿಸು ಬಾ ಒಮ್ಮೆ...
ನಿನ್ನ ಹಾದಿಗೆ ದಿಟ್ಟಿ ಇಟ್ಟು ಎವೆ ಮುಚ್ಚದ ಕಂಗಳಲಿ ಇರುಳು ಉರಿಯುತ್ತಿದೆ - ತುಟಿ ಒತ್ತಿ ಬೆಳಕನೂಡು ಬಾ ಭಾವ ಜನ್ಮ ಕುಂಡಲೀ...
#ವಿರಹ_ಸೌರಭ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರರ‍್ವತ್ತ್ಮೂರು.....

ಮುಗಿಯಬಾರದ ಸಂಭಾಷಣೆ.....

ಅವಳ ದಿನವಂತೆ...
ಹಾಯ್ದ ಅಷ್ಟೂ ಹಾಡಿಯಲೂ ಪ್ರೀತಿ ಬಿತ್ತಬಲ್ಲವಳು...
ಅವಳು ಅವಳಾಗಿ ಅರಳಬಲ್ಲ ಹೊಲ, ಅವಳೇ ಆಗಿ ಹರಡಿಕೊಂಡ ದಿನ ಮಾತ್ರ ಅವಳದು...
ಉಳಿದವೆಲ್ಲ ಬರೀ ಕ್ಲೀಷೆ ಅಷ್ಟೇ...
ಖುಷಿಯಾಗಿರಲಿ ಜೀವಾಭಾವವ ಜೀವಿಸಿ ಅವಳು ಅವಳಂತೆ...
ಅನುದಿನವೂ ಅವಳ ದಿನವಾಗಲಿ...
ಶುಭವೊಂದೇ ಆಶಯ... 💞
  ___ 08.03.2021
⇞⇜⇑⇓⇝⇞   

ಆದ್ರೆ,
"ಆಂತರ್ಯದ ನೇಹ, ಪ್ರೀತಿ, ಬಯಕೆಗಳು ಸುಳ್ಳಲ್ಲ ಅಂದಾಗ ಅಥವಾ ಪ್ರಾಮಾಣಿಕ ಅಂತಾದಾಗ ಅವನ್ನು ವ್ಯಕ್ತಪಡಿಸೋಕೆ, ಹರವಿಕೊಂಡು ಹರಿಯೋಕೆ ಬಳಸೋ ಇಲ್ಲವೇ ಹುಡುಕಿಕೊಳ್ಳೋ ದಾರಿಗಳು ಚೂರು ಉತ್ಪ್ರೇಕ್ಷಿತ ಅನ್ನಿಸಿದ್ರೂ/ಆಗಿದ್ರೂ ತಪ್ಪೇನಿದೆ ಹೇಳೂ - ನಿರುಪದ್ರವಿ ಆಗಿದ್ರೆ ಸಾಲದಾ..."
ನಿನ್ನಿಂದ, ನಿನಗಾಗಿ, ನೀನೇ ಆಗಿ ಹುಟ್ಟಿದ ಕವಿತೆಯ ಅಂಚಿಗೆ ನನ್ನ ಹೆಸರನೇ ಅಂಟಿಸಿದೆ...
____ನೀನು ನನ್ನ ಕವಿತೆಯಾದ ಹೊತ್ತಿಗೆ...
        ___21.03.2021
⇞⇜⇑⇓⇝⇞

"ನಾನು" ಅಳಿದರೆ ನಾನೂ ಒಂದು ಹರಕು ಕವಿತೆ... 🥳
      ___21.03.2021
⇞⇜⇑⇓⇝⇞

ಗುಮ್ಮನ ಕೂಗಿ ಕಂದನ ನಿದ್ದೆಯ ತೂಗಿದ ಅಮ್ಮ ಸೆರಗ ಹೊದೆಸಿ ಎದೆಗೆ ದಾಟಿಸಿದ ಮಮತೆ ಇರುಳು...
#ಶುಭರಾತ್ರಿ...
⇞⇜⇑⇓⇝⇞

ನನ್ನೊಂದಿಗೇ ಊರಿಗೆ ಹೊರಟವನಂತೆ ಓಡೋ ಗಾಡಿಯ ವೇಗಕ್ಕೆ ಚೂರೂ ಏರುಪೇರಿಲ್ಲದೆ ಸಮಸಮನಾಗಿ ಸರಸರನೆ ಬಾನ ಬೀದಿಯಲಿ ಸರಿವ ಚಂದಮ ನನ್ನ ಹಾದಿಯ ತುಂಬಾ ಬೆಳದಿಂಗಳ ಜನಪದವ ಹಾಡುತಿದ್ದಾನೆ...
ಮತ್ತು ನಿನ್ನ ನೆನಪು ತೊಟ್ಟಿಲು ತೂಗುತಿದೆ...
#ಪಯಣ...
⇞⇜⇑⇓⇝⇞

ಹಿಂಗ್ ಹೋಯ್ ಹಂಗ್ ಬಂದು ನಗೆ ಮುಗುಳ ಹೆಕ್ಕಿ ತಂದು...
ನೆನಪುಗಳು ಉಳಿದೇ ಉಳಿಯುತ್ತವೆ ಕನಸಿನಂದದಿ - ನೀ ಬಂದು ಹೋದ ಗುರುತಾಗಿ ಎದೆಯ ರಂಗದಿ...
ಮುನಿಸೂ ಮನಸ ಹುಸಿಗಾಯದ ಮುಲಾಮಾಗುತ್ತದೆ - ಬಣ್ಣದ ಬಲೂನಿಗೆ ಬಣ್ಣವಿಲ್ಲದ ಉಸಿರು ನಿನ್ನ ಹೆಸರ್ಹೇಳಿ ರೆಕ್ಕೆ ಕಟ್ಟುತ್ತದೆ...
ಸಂತೆಯಲ್ಲಿ ಹಾಯುವ ಅಜ್ಞಾತ ನೆಳಲೂ ಎದೆಯಲ್ಲಿ ಯಾವುದೋ ಪರಿಚಿತ ನೆನಪಿನ ಪುಟ ತೆರೆಯುತ್ತದೆ...
ನಿನ್ನ ನೋಟದ ಗೆಜ್ಜೆ ಸದ್ದು, ತಿರುವಲ್ಲಿ ಎಸೆದು ಹೋದ ಹೂ ರೇಣುವಿನಂಥ ಮಂದಹಾಸದ ಹೋಳು, ಬೆರಳು ಬೆಸೆದಾಗ ಹಸ್ತರೇಖೆಗೆ ದಾಟಿದ ಒಂದೆಳೆ ಬೆವರ ಘಮ - ಖಾಲಿ ಖಾಲಿ ಬೀದಿಯಲ್ಲೂ ಇಂತೆಲ್ಲಾ ನೆನಹಿನ ಕಣ್ಹನಿಗಳು ನೇರ ಎದೆ ತೀರವ ತುಳಿಯುತ್ತವೆ, ತೊಳೆಯುತ್ತವೆ...
ಹೀಗೆ,
ನೆನಪುಗಳು ಉಳಿದೇ ಉಳಿಯುತ್ತವೆ - ಬೆಳಕಿನ ಪೆಟ್ಟಿಗೆಯ ಕುಂಡೆಗಂಟಿದ ಕತ್ತಲಿನಂತೆ...
#ನೆನಪಾದವರಿಗೆ...
⇞⇜⇑⇓⇝⇞

ಏನೋ ಹೇಳ್ಲಾ...?
ಹೇಳು...

ನೀ ಯಾರ್ಗೂ ಹೇಳ್ಬಾರ್ದು ಮತ್ತೆ ಆಯ್ತಾ...
ಮ್ಮ್... ಆದ್ರೆ ನಾ ಯಾರಿಗಾದ್ರೂ ಹೇಳಿಬಿಟ್ರೆ ಅನ್ನೋ ಸಣ್ಣ ಅನುಮಾನ ನಿಂಗಿದ್ದಾಗ್ಲೂ ಅಥವಾ ಆ ಅನುಮಾನ ಕಳೆವವರೆಗೆ ಖಂಡಿತಾ ಹೇಳಲೇ ಬೇಡ... ಯಾಕಂದ್ರೆ, ಹೇಳಿಕೊಂಡಾದ ಮೇಲೆ ಇವ ಇನ್ಯಾರ್ಗೋ ಹೇಳ್ತಾನೇನೋ ಅನ್ನೋ ಭಯ/ಕಳವಳ ನಿನ್ನಲ್ಲಿ ಉಳಿದೇಬಿಡತ್ತೆ ಖಾಯಂ ಆಗಿ - ಹಂಚಿಕೊಂಡೂ ಭಾರವೇ ಆಗೋದಾದ್ರೆ ಹಂಚ್ಕೋಬೇಕಾದ್ರೂ ಯಾಕೆ... ಮತ್ತೇನ್ಗೊತ್ತಾ, ಎಲ್ಲ ಎದೆಗೂಡಲ್ಲೂ ಒಂದಷ್ಟು ನಗೆಯ ಬೆನ್ನು ಪರಚುವ ಗುಟ್ಟುಗಳು ಅಥವಾ ನೋವುಗಳು ಇರ್ತಾವೆ ಮತ್ತು ಅವನೆಲ್ಲ ಬಿಡುಬೀಸಾಗಿ ಹರಡಿಡಬಹುದಾದ ಹೆಗಲೊಂದರ ಹುಡುಕಾಟವೂ ಇರುತ್ತೆ ಅಲ್ವಾ...!! ನಿನ್ನ ಆತ್ಮಾಭಿಮಾನದ ಘನತೆಯನ್ನು ಪ್ರಶ್ನಿಸದಿರೋ, ನೀ ಬಯಸೋ ಗೌಪ್ಯತೆಯ ಗೌರವಾನ ಕಾಯೋ ಪೂರ್ಣ ಭರವಸೆ ಮತ್ತು ಇಲ್ಲಿ ಮುಕ್ತವಾಗಿ ಮನಸು ತೆರ್ಕೋಬಹುದೂ ಅನ್ನೋ ನೈಜ ಆಪ್ತತೆ ಇದ್ದಾಗ/ಇದ್ದಲ್ಲಿ ಮಾತ್ರ ಹೇಳಿಕೊಂಡು ಹಗುರಾಗಬಹುದು ನೋಡು... ಅದಲ್ಲದೇ ಅಂಥದೊಂದು ಹೆಗಲನ್ನು ಹುಡುಕಿಕೊಳ್ಳೋ ಸಾವಧಾನ ಹಾಗೂ ಸಿಕ್ಕರೆ ಅದನು ಕಾಲವೂ ಕಾಯ್ದುಕೊಳ್ಳೋ ವ್ಯವಧಾನ ಕೂಡಾ ನಿನ್ನದೇ ಪ್ರಜ್ಞೆಯ ಹಿಕಮತ್ತುಗಳಲ್ವಾ... ಹಂಗೇನೇ ನೀ ತೆರೆದಿಟ್ಟ ಎದೆ ಗುನುಗುಗಳ ಕೇಳಿಸಿಕೊಳ್ಳೋ ಕಿವಿಯ ಮೇಲೆ ಬೇಶರತ್ ನಂಬಿಕೆ ಮತ್ತು ಒಂದಾನುವೇಳೆ ಆ ವಿಶ್ವಾಸ ಹುಸಿಯಾದರೆ ಆಗಿನ ಪರಿಣಾಮವ ನಿಭಾಯಿಸೋ ಛಾತಿ ಎರಡೂ ನಿನ್ನಲಿರಲಿ; ಕೊನೇಪಕ್ಷ ಎರಡರಲ್ಲಿ ಒಂದಾದರೂ ಜೊತೆಗಿದ್ದರೆ ಒಳಿತು...

ತಿಳೀತಾ, ಏನ ಹೇಳ್ತಿದೀನಿ ಅಂತಾ...?
ಅರ್ಥವೂ ಆಯ್ತು - ಹೇಳಿಕೊಳ್ಳಬಹುದಾದ ಗಟ್ಟಿ ಹೆಗಲೂ ಸಿಕ್ಕಂಗಾಯ್ತು... ಗೋಡೆಯೊಡನೆ ನೆರಳು ಮಾತಾಡುವ ಮೋದವ ನೋಡುತ್ತಿದ್ದೆ, ಅಂತರಂಗದ ಅದೊಂದು ತಂತಿ ಜಗ್ಗಿದಂಗಾಗಿ ನಿಟ್ಟುಸಿರು ಕಣ್ಣ ತೊಳೆಯಿತು... ನಿನ್ನ ನೆನಪಾಯ್ತು - ಇಂತು ಇಷ್ಟು ಮಾತು ನಿನ್ನಿಂದ, ನಿನ್ನೊಡನೆ - ಈಗೆಲ್ಲಾ ನಿಸೂರು... "ಎಲ್ಲಾ ನೋವುಗಳಿಗೂ ಪರಿಹಾರವೇ ಬೇಕೂ ಅಂತೇನಿಲ್ಲ ಆಸ್ಥೆಯಿಂದ ಕೇಳಿಸಿಕೊಳ್ಳೋ ಆಪ್ತ ಕಿವಿಯೊಂದು ಸಿಕ್ಕರೂ ಬೇಕಷ್ಟಾಯಿತು ಅಥವಾ ಕೆಲವಕ್ಕೆಲ್ಲ ಅದೇ ಪರಿಹಾರವೂ ಇದ್ದೀತು..."
#ಗುಟ್ಟಿನ_ಗಂಟು_ಬಿಡಿಸೋ_ಹೊತ್ತು...
#ಮುಗಿಯಬಾರದ_ಸಂಭಾಷಣೆ...
⇞⇜⇑⇓⇝⇞

ಅಷ್ಟೇ...
ನಿನ್ನ ಆಯ್ಕೆಯ ಹಾದಿ ಬಂದು ನನ್ನ ಸೇರದೇ ಇರುವುದು ಪ್ರಣಯಿಯಾಗಿ ನನ್ನ ನಷ್ಟ...
ನೀನು ನಿನ್ನ ಇಷ್ಟದ ಹಾದಿಯಲೇ ನಡೆದು ಗೆಲ್ಲುವುದು ಗೆಳೆಯನಾಗಿ ನನ್ನ ಪ್ರೀತಿ...
ಎರಡರಲ್ಲೂ ನನ್ನ ಪಾಲೂ ಇದೆ ಅಂತ ಭ್ರಮಿಸುವುದು ಹುರುಳಿಲ್ಲದ ನನ್ನ ಬೋಳೇತನ...
___ಮರುಳನ ನರಕಸುಖಗಳೆಲ್ಲ ಇಂಥವೇ...
⇞⇜⇑⇓⇝⇞

ಭುವಿ ಪಾತ್ರೆ ತುಂಬಿಯೂ ಬುರು ಇಲ್ದೇ ಸುರೀತಿದ್ದ ಬಾನ ಪ್ರೇಮದ ಮಳೆ - ಹೆಜ್ಜೆಗೊಂದು ಹಿಗ್ಗೊಡೆದ ನೀರ್ಝರಿಗಳ ಕಣ್ಣು - ಗಾಳಿ ಗೊರವನ ಕೊರಳಲ್ಲಿ ನೇಗಿಲ ಹಾಡು - ರಾಡಿ ಕಿಚಡಿ ಮಣ್ಣ ಬಯಲಲಿ ಒಂದಡಿ ಜಾಗವನೂ ಬಿಡದೆ ಬಿರಿದ ಗರಿಕೆ ಬೀಜ, ಹಸಿಹಸಿರು ಮೊಳಕೆ - ಹುಲು ಜೀವವೆಲ್ಲ ಹೊದ್ದು ಓಡಾಡುತಿದ್ದ ಕನಸಿನ ಕೊಪ್ಪೆ...
ಹಳ್ಳದ ಹರಿವಿನ ಪಾತ್ರದಲಿ ನೀರ ಬಳ್ಳಿ ಸೊರಗುವ ಕಾಲಕ್ಕೂ ನೆಲಕೆ ನೂರು ಬಣ್ಣ ಬಳಿದುಕೊಡುವ ಕಗ್ಗಾಡು ಬೀಡು ನನ್ನದು...
ಕಾನನದ ಗಂಗೆಯೂ - ಅಡವಿ/ಕಂಟಿ ಹೂವಿನ ಘಮವೂ - ಮೈಯ್ಯೆಲ್ಲ ಜೇನು ಮೆತ್ತಿಕೊಂಡ ಖಂಡ ಕಾವ್ಯ - ಖಗ, ಮೃಗಗಳ ಮೆಲುದನಿಯ ಅವಿರತ ಗಮಕ; ನನ್ನ ಹುಟ್ಟು ನೆಲದ ಸೊಬಗು...
ಒಂಟಿ ಬಿಡಾರದ ಸೋರುವ ಮಾಡು - ಒಂಟೊಂಟಿ ಓಡಾಡಿದ ಕಾಡು - ಮುಳುಗಿ ನೀರು ಕುಡಿದ ಮಡು - ನನ್ನೀ ನೆನಪಿನ ಜಾಡಿನಲಿ ನೂರಾರು ಗೋಪಿ ಹಕ್ಕಿಗಳ ಗೂಡು...
ನಿತ್ಯ ಗರ್ಭಿಣಿ - ಕ್ಷಣಕೊಮ್ಮೆ ಬಾಣಂತಿ; ಅಲ್ಲಿ ನನ್ನಮ್ಮನ ನೆಲ...

ಎಮ್ಮೆಶೀರ್ಲ ವಜ್ರ @ಕಂಚೀಮನೆ
ಪಟ ಸೌಜನ್ಯ: ದತ್ತಾತ್ರೇಯ ಭಟ್ಟ ಕಣ್ಣೀಪಾಲ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, February 7, 2021

ಗೊಂಚಲು - ಮುನ್ನೂರರ‍್ವತ್ತೆರ‍್ಡು....

ಬೆನ್ನ ಹಿಂದಿನ ಶಕ್ತಿ ಸುಧೆಗೆ.....


ನಳಪಾಕ, ಭೀಮಪಾಕಗಳೂ ಪಾಠವಾದದ್ದು ಮತ್ತು ಹೆಚ್ಚಿನ ಸಲ ಪಕ್ವವಾದದ್ದೂ ಅಮ್ಮನ ಪಾಕಶಾಲೆಯಲ್ಲೇ...

ಅದೇನು ಹಿಕ್ಮತ್ತಿದೆಯೋ ಅವಳ ಕೈಲಿ ಗೊತ್ತಿಲ್ಲವಾಗಲೀ, ಹಸಿದ ಹೊಟ್ಟೆಗಳೆದುರು ಅವಳ ಪಾತ್ರೆಯ ಅನ್ನವೆಂದೂ ಹಳಸುವುದಿಲ್ಲ - ಬೊಮ್ಮನಿಗೂ ಅನ್ನವಿಕ್ಕಿದವಳಿಗೆ ಅನ್ನವೇ ಬ್ರಹ್ಮ...
ಅವಳ ಮಮತೆಯ ಮೊದಲ ನುಡಿ ಮತ್ತು ಒಡಲಿನ ಬ್ರಹ್ಮವಾಕ್ಯ ಅಂದ್ರೆ ಅದೊಂದೇ -  "ಉಂಡ್ಯಾss" ಎಂಬ ಕರುಳ ಪ್ರಶ್ನೆ...
#ಕರುಳಿಂದ_ಹೃದಯವ_ಬೆಳೆದವಳು_ಬೆಸೆದವಳು...
#ಆಯಿ... 💞😘
👩👩👩

ಲೆಕ್ಕಾಧಿಕಾರಿ ಸಾವಿತ್ರಿ... 😅

ಸೆರಗು ಸುತ್ತಿ ಸೊಂಟಕೆ ಬಿಗಿದು, ಹಲ್ಮೊಟ್ಟೆ ಕಚ್ಚಿ ಎದ್ದು ನಿಂತಳೆಂದರೆ ಅವಳ ಬದುಕಿನ ಬಡಿವಾರದ ಲೆಕ್ಕವೆಲ್ಲ ಅವಳದೇ ಶ್ರಮದಿಂದ ಅಂದಿಂದಂದಿಗೇ ಚುಕ್ತಾ...

ಇಷ್ಟಾಗಿಯೂ -
ಮುಸ್ಸಂಜೆ ಬಾಗಿಲಿಗೆ ದೀಪ ಹಚ್ಚಿಕೊಂಡು ಕೂತು ನಾ ದುಡಿದು ಕೊಡಬಹುದಾದದ್ದರ ಕೂಡಿ ಕಳೆಯುವ ಲೆಕ್ಕ ಅವಳೂ ಪಕ್ಕಾ ಬರೆಯುತ್ತಾಳೆ...
ಆದ್ರೆ -
ಅವಳು ದಿನವಹೀ ಬುಲಚೂಕಿಲ್ಲದೆ ಹಂಚೋ ಪ್ರೀತಿ ಮೂಟೆಯ ಲೆಕ್ಕ ಹಚ್ಚಿಡಲು ಲೆಕ್ಕಪಟ್ಟಿಯ ನಾ ಎಲ್ಲಿಂದ ತರಲಿ ಹೇಳಿ...
ನಾ ಗೆದ್ದ ಯುದ್ಧಗಳ ಶಕ್ತಿ ಸೂತ್ರ - ಪ್ರೀತಿಯೊಂದೇ ಅಲ್ಲಿ ಕರುಳ ಮಂತ್ರ...
ಕಣ್ಣು ಮಂಜಾದರೂ ಕರುಳು ಮಂಜಾಗದು...
ಬಿಡಿ, ಅದು ಯಾದಿ ಪುಸ್ತಕದಲಿ ಬರೆದಿಟ್ಟು ಮರಳಿಸಲಾಗದ ಲೆಕ್ಕ...
#ಉರಿವ_ಕೆಂಡವೇ_ಅವಳು_ಎಪ್ಪತ್ಮೂರರ_ಹುಡುಗಿ...
👩👩👩

ಆಯಿ ಮತ್ತವಳ ಕರುಳ ಕೊಂಡಿಗಳು... 😍

ಅವಳು ದೇವರಲ್ಲ ಗುಡಿ ಕಟ್ಟಿ ಪೂಜಿಸಿ ಬಾಗಿಲೆಳೆದುಕೊಳ್ಳಲು - ಹಾಲೂಡಿದ ಕರುಳಿಗೆ ನನ್ನ ಭಕ್ತಿಯಲ್ಲ ಪ್ರೀತಿಯ ಅಭಯ ಬೇಕು...
ಆದರೋ ನನ್ನೀ ಕೈಯ್ಯಲ್ಲಿ ಜಗವ ಓಲೈಸೋ ಆರತಿ ಬಟ್ಟಲು...
ಅವಳು ಹಠ ಹೂಡಿ ಊರಿದ ಹೆಜ್ಜೆಗಳೆಡೆಯಿಂದ ಹಾರಿದ ಧೂಳ ಹುಡಿಗಳನೇ ವರ್ಣಿಸಿ ಅವುಗಳನೇ ಅವಳೆಂದು ಬಗೆದು ಹಾಡಿದೆ - ಗಂಧವನಲ್ಲವೇ ಗಾಳಿ ಊರೆಲ್ಲಾ ಹರಡಿ ಹಂಚುವುದು; ತೇಯ್ದು ಹೋದ ಕೊರಡೇನಿದ್ದರೂ ನಾಗಂದಿಗೆಯದೋ, ಇಲ್ಲಾ ಗೋಡೆ ಮೂಲೆಯ ಮುದಿ ಜೇಡನ ಸಂಗಾತಿ ಅಷ್ಟೇ...
ಎಪ್ಪತ್ಮೂರರ ಈ ಹುಡುಗಿ ಇಪ್ಪತ್ಮೂರರ ಹುಡುಗು ನಾಚುವಂಗೆ ಜೀವಿಸುತ್ತಾಳೆ - ಚೂರು ತುಂಟತನದಿ ಕಾಡಿಸಿ ನೋಡಿ ಇಪ್ಪತ್ಮೂರರ ಬೆಡಗಿಗಿಂತ ಚಂದ ನಾಚುತ್ತಾಳೆ ಕೂಡಾ...
ಅವಳ ಬಾಡಿದ ರೆಪ್ಪೆಗಳ ಮಂಜುಗಣ್ಣಲ್ಲೂ ತರಹೇವಾರಿ ಕನಸುಗಳು ಅರಳುತ್ತವೆ, ಮತ್ತವೆಲ್ಲಾ ಬಣ್ಣಬಣ್ಣವೇ - ಆದರೆ ಆ ನಾಕಲೋಕದಲಿ ಅವಳೊಂದು ಪಾತ್ರವೇ ಅಲ್ಲ, ಬದಲಾಗಿ ಅವಳೆದೆಯ ಕನಸುಗಳ ಕಿರ್ದಿಪಟ್ಟಿಯಲ್ಲಿ ಮಕ್ಕಳು, ಮೊಮ್ಮಕ್ಕಳದೇ ಹೆಸರು ಹಾಗೂ ಕಾರುಬಾರು...

ಈ ಪರಿ ಕೂಗ್ತಾ ಇದ್ದೆ ಕೇಳ್ತಾ ಇಲ್ಯಾ, ಕಿವಿ ಮಂದ ಆಯ್ತೇನೆ ಅಂದ್ರೆ - ಇಲ್ಲೇ ಈ ನಿನ್ ಫೋನೇ ಸರೀ ಇಲ್ಲೆ, ಏನ್ ಹೇಳಿದ್ದೂ ಸಮಾ ಕೇಳ್ತ್ಲೆ ಅಂತ ನಗ್ತಾ ಅಬ್ಬರಿಸ್ತಾಳೆ...
ಬಲು ಮೋಜಿನ ಸತ್ಯ ಏನ್ಗೊತ್ತಾ -
ಅವಳೊಬ್ಬಳೇ ಇರುವಾಗ ಅನುಕ್ಷಣ ಪಿರಿಪಿರಿ ಕಾಡುವ ವಯೋಸಹಜ ಬಾಧೆಗಳೆಲ್ಲ ಮಕ್ಕಳು ಮರಿ ಅಥವಾ ತನ್ನದೆಂಬ ಬಂಧಗಳು ಅವಳ ಸುತ್ತ ನೆರೆದ ಮರು ಘಳಿಗೆ ಅಂಗಳದಾಚೆ ಹೋಗಿ ಮಂಡಿ ನಡುವೆ ತಲೆ ತೂರಿಸಿ ಕಿವಿ ಹಿಡ್ಕೊಂಡು ಕುಕ್ಕರಗಾಲಲ್ಲಿ ಡೊಗ್ಗಿ ನಿಲ್ತಾವೆ...

ಜೀವನ್ಮೋಹ ಅಂದ್ರೇನು ಅಂತ ಒಣ ಒಣ ಭಾಷಣ ಬಿಗೀತಿರ್ತೀನಿ - ಅವಳ ಪರಿಚಯಿಸಿದ್ದರೆ ಸಾಕಿತ್ತು...
ಬರೀ ಹೆಸರ್ಹೇಳಿ ಸುಮ್ನಾದರೆ ಜಗಕೇನು ತಿಳಿದೀತು - ಆದ್ರೇನ್ಮಾಡ್ಲೀ ಗುಣವಿಶೇಷಣಗಳ ಹಿಡಿದಿಡಲು ನನ್ನ ವರ್ಣಮಾಲೆಯ ಬಾಯಿಪಾಠ ಸಾಕಾಗಲ್ಲವೇ...
ನಾನೋ ಬದುಕ ಸ್ಪೂರ್ತಿಯ ಆಕರಗಳ ಎಲ್ಲೆಲ್ಲೋ ಹುಡುಕಿ ಸಾಯುತ್ತೇನೆ - ಅವಳ ಒಳಮನೆಗೆ ಇಣುಕಿದ್ದರೆ ಬೇಕಷ್ಟಾಗ್ತಿತ್ತು...
ಎಲ್ಲೋ ಸಂವತ್ಸರಕೊಮ್ಮೆ ಒಂದ್ನಾಕು ಬಿಡಿ ಸಾಲುಗಳ ಅವಳ ಹೆಸರಿಗೆ ಬರೆದರೆ ಅದನೋದಿಯೇ ನನ್ನ ಅಕ್ಷರ ಸಂಗಾತಗಳು ನಿನ್ನಮ್ಮನನ್ನೊಮ್ಮೆ ನೋಡ್ಬೇಕು ಕಣೋ, ಒಂದು ಪುಟ್ಟ ಸನ್ನಿಧಿ ಅವಳೊಟ್ಟಿಗೆ ಅಂತಾರೆ - ಇನ್ನು ನನ್ನತ್ರ ಅವಳನು ಬರಹದಲಿ ಪೂರ್ತಿ ಹಿಡಿದಿಡಲಾಗಿದ್ದಿದ್ದರೆ...!!
ಮತ್ತು ಊರಿಗೆ ಅವಳ ಬಗ್ಗೆ ಹೇಳುವಾಗಲೂ ನಾ ನನ್ನ ಸ್ವಾರ್ಥವನೇ ಕಾಯುತ್ತೇನೆ - ಅವಳೋ ಒಳಗುಡಿಯ ಕರುಣ ಚಿಲುಮೆ...
ನನ್ನ ಬರೆದವಳು - ಶಾಯಿಯ ಬಣ್ಣಕೆ ಸಿಗದ ಸಂಕೀರ್ಣವ ಬಾಳಿ ಬದುಕಿದವಳು...

ಓಯ್, ಸುಂದ್ರೀ ನಿಂಗೆ ಇಂದಿಗೆ ಎಪ್ಪತ್ಮೂರು ತುಂಬಿತ್ತು, ಸಾಕಾಗ್ದಾ ಅಂದ್ರೆ - ಯೇಹೇ, ನಿನ್ ಲೆಕ್ಕಾಚಾರ್ದಲ್ಲಿ ಎಪ್ಪತ್ತು ಮುಗೀತೇಲೆ ಕಣೆ, ಎಷ್ಟ್ ಕಾಲ ಆತು ಈ ಹುಳ್ಕುಟೆ ಬದ್ಕಿಂಗೆ, ಚಿತ್ರಗುಪ್ತಂಗೆ ಎನ್ ಮರ್ತೇ ಹೋಯ್ದರ್ಗೆ ಅಂತಾಳೆ - ಅವಳ ಆ ಆರ್ಭಟದ ಮಾತಲ್ಲಿ ಒಂದು ಸುಸ್ತನ್ನು ಹುಡುಕಿ ಸೋಲ್ತೇನೆ - ಆದ್ರೆ ಅವಳಲ್ಲಿ ಸುಸ್ತೂ ಅಲ್ಲದ, ಒಣ ಜಂಭವೂ ಇಲ್ಲದ ಒಂದು ವಿಚಿತ್ರ ನಿಸೂರು ಭಾವ ಕಾಣುತ್ತೆ...
ಅಂಥದೊಂದು ನಿಸೂರಾದ, ನಿರಾಳ ನಗುವ ಕೈಗೋಲನು ಹಿಡಿದೇ ಅವಳು ಅಷ್ಟುದ್ದ ಹಾದಿಯ ಅನಾಯಾಸದಲಿ ಎಂಬಂತೆ ದಾಟಿಬಿಟ್ಟದ್ದಾದರೂ ಹೇಗೆ...? ಬದುಕನ್ನು ಗೆಲ್ಲುವುದೇ ಹಾಗಾ...?? ಕೊನೆಗೆ ತಾನೇ ನಂಬಿ ತಲೆಬಾಗೋ ಆ ದೇವರನೂ ಆ ನಗೆಯಲೇ ಸೋಲಿಸಿ ಬಂಧಿಸಿರಬಹುದಾ...?!! (ಅವಳು ದೇವರ ಬೈಯ್ಯುವಾಗ ಅವನ ನಂಬದ ನಾನೂ ಬೆಚ್ಚುತ್ತೇನೆ)
ಸಾಕಿನ್ನು ಕಾಣುವುದೇನೂ ಬಾಕಿ ಉಳಿದಿಲ್ಲ ಅಂತಂದು ಎದ್ದು ಹೊರಡುವ ಮಾತಿನ ಬೆನ್ನಿಗೇ ಹೊರಡಲು ಬಿಡದ, ಇಷ್ಟು ಕಾಲ ಬದುಕುವ ಉದ್ದೇಶಕ್ಕಾಗಿ ಎದೆಯಾರೆ ಸಾಕಿ ಸಲಹಿಕೊಂಡು ಬಂದ ಜೀವನ್ಮುಖೀ ರೂಢಿ ಭಾವಗಳ ಮಾತು ಹೊರಡುತ್ತೆ - ಅಲ್ಲಿಗೆ ಆಗೀಗ ಚಿತ್ರಗುಪ್ತನ ಬೈಯ್ಯುವುದೂ ಕೂಡ ಅವಳು ಬದುಕನ್ನು ಪ್ರೀತಿಸಲು ಎತ್ತಿಕೊಂಡ ಒಂದು ಮಂದಹಾಸವೇನೋ ಅನ್ಸುತ್ತೆ...
ಏಳು ದಶಕಗಳು ಮಿಂದದ್ದು, ಉಟ್ಟದ್ದು, ಉಂಡದ್ದು ಎಲ್ಲಾ ನೋವಿನ ನಾನಾ ರೂಪದ ಆವೇಶವನ್ನೇ ಆದರೂ ಅವಳ ಆತ್ಮಬಲದ ಕೋಟೆ ಗೋಡೆಗೆ ಇಂದಿಗೂ ಸಣ್ಣ ಬಿರುಕೂ ಮೂಡದೇ ಹೋದದ್ದು ನನ್ನ ಯಾವತ್ತಿನ ಬೆರಗು ಮತ್ತು ನನ್ನ ನಂಗೆ ಕಾಯ್ದು ಕೊಡೋ ಬೆನ್ನ ಹಿಂದಿನ ಶಕ್ತಿ ಸುಧೆ...
ಸಾವು ತಲೆ ತರಿಯಬಹುದು - ಬದುಕು ಮಂಡಿ ಊರುವ ಮಾತೇ ಇಲ್ಲ; ಅವಳು ಬದುಕಿದ್ದು ಹಾಗೂ ಬದುಕಲು ಕಲಿಸಿದ್ದು ಹಾಗೆ ಮತ್ತು ಅಷ್ಟೇ...

ಅವಳೆಂದರೆ ಜೀವ ಬಳ್ಳಿಯ ಕತ್ತರಿಸಿದ ಮೇಲೂ ಹಾಲಾಗಿ ಹರಿದು ಭಾವ ತಂತುವ ಉಳಿಸಿಕೊಂಡ ಕರುಳ ಸಂವಾದ, ಅಕ್ಷತ ಮಮತೆ ಸಂಭಾಷಣೆ, ಮುಗಿಯಬಾರದ ಆಪ್ತ ಗೆಳೆತನ - ಇದು ನನ್ನೊಡನೆ ಅವಳ ಸೀಮಾಂತ ನಡಿಗೆ...
ಅಂತೆಯೇ,
ಈ ನೆಲದೊಡನೆ ಅವಳ ಸಂಗಾತ ಶುರುವಾಗಿ ಇಂದಿಗೆ ಪೂರಾ ಎಪ್ಪತ್ಮೂರು ಗ್ರೀಷ್ಮ, ವಸಂತಗಳು ತುಂಬಿ ಸಂದವು...
ಸಾಗಿದ್ದು, ಏಗಿದ್ದು ಎಷ್ಟು ಸುದೀರ್ಘ ಅನುಭವ ಅನುಭಾವದ ಹಾದಿ...!!!
ತನ್ನ ಹುಟ್ಟಿನ ತೇದಿಯ ಲೆಕ್ಕವಿಲ್ಲ ಅವಳಲ್ಲಿ - ನಾನು ಕರೆ ಮಾಡಿ ಹ್ಯಾಪಿ ಹುಟ್ದಬ್ಬಾನೇ ಕೂಸೇ ಅಂದ್ರೆ, ‘ನಂದಾ? ಇಂದಾ?’ ಅಂತ ಬಾಯ್ಬಿಡ್ತಾಳೆ ಪಾಪದ ಹುಡುಗಿ - ಮಾತು ಮುಗಿಸೋ ಮುನ್ನ ‘ಊಟದ ಸಂತೀಗೆ ಏನಾರೂ ಸಿಹಿ ತಿನ್ನು, ಜೊತೆಗಿದ್ದವರಿಗೂ ಕೊಡು’ ಅನ್ನೋ ಮುಗ್ಧತೆ ಅವಳಲಿನ್ನೂ...
ವಾರದೆರಡು ದಿನ ಅವಳು ಕಾಯಿಸುವ ತುಪ್ಪದ ಬಿಸಿ ಪಾತ್ರೆಯ ತಳದಲ್ಲಿರುವ ತುಪ್ಪದ ಗಸಿಯ ಜೊತೆ ಆವೆ ಬೆಲ್ಲ ಬೆರೆಸಿ ತಿನ್ನುವಾಗ ನಾಲಿಗೆ ಚಪ್ಪರಿಸೋ ವಿಶಿಷ್ಟ ರುಚಿಯೊಂದು ದಕ್ಕುತ್ತಿತ್ತು, ಬಾಲ್ಯದ ಅಂತದ್ಧೇ ಸವಿ ಇಂದಿಗೂ ಅವಳ ಸಾಂಗತ್ಯ - ಇಂದಿಗೂ ಜಾರಿಯಲ್ಲೇ ಇರೋ ಬೆವರು ಕೆಸರಿನ ಜೊತೆಗವಳ ನಂಟು ಹೇಳೋ ಹಾಗೂ ಅವಳ ಕೈಕಾಲಿನ ಕೊಳೆ ಮಣ್ಣು, ಸಗಣಿಯಲ್ಲಿ ಅರಿವಾಗೋ ಸ್ವಾಭಿಮಾನದ ಗಟ್ಟಿ ಪಾಠ...
ಲಾಲಿ ಹಾಡಲೂ ಪುರುಸೊತ್ತಿಲ್ಲದಂಗೆ ಹೊಟ್ಟೆ ಬಟ್ಟೆಗೆಂದು ದುಡಿದು ಹೈರಾಣಾದವಳು ಪ್ರೀತಿಯನ್ನು ಬಾಯಲ್ಲಿ ಒಮ್ಮೆಯೂ ಆಡಿ ತೋರಿಲ್ಲ, ಬದಲಾಗಿ ಬದುಕಿನ ಮತ್ತು ಈ ಸಮಾಜದ ಎಲ್ಲಾ ಕ್ರೌರ್ಯ, ವೈರುಧ್ಯಗಳ ನಡುವೆಯೇ ಪ್ರೀತಿ ಅಂಟುವಂಗೆ, ಪ್ರೀತಿ ಕಾಯುವಂತೆ ವ್ಯಕ್ತಿತ್ವವ ಪ್ರೀತಿಯಿಂದ ಕಟ್ಟಿಕೊಳ್ಳಿ, ಬದುಕನು ಬೇಶರತ್ ಪ್ರೀತಿಸಿ ಅಷ್ಟೇ ಅನ್ನೋ ಹಂಗೆ ಕಾಲವೂ ಕಣ್ಣೆದುರು ಬದುಕಿಬಿಟ್ಟಳು - ಅವಳ ಹಾದಿಯ ಅರಿತರೆ ನಾನೂ ಚೂರು ಉಳಿದೇನು ಅಲ್ಲಲ್ಲಿ, ನಿಮ್ಮಲ್ಲಿ... 
ಇದ್ದೀತು ಅವಳಲ್ಲೂ ಚೂರುಪಾರು ಸಣ್ಣತನ, ಕಟಿಪಿಟಿ, ಅಸಹನೆಗಳಂತ ಮನುಜ ಜಾಡ್ಯಗಳು; ಆದರೆ ಅವನೆಲ್ಲ ಮೀರಿ ನಿಲ್ಲೋ ಸ್ವಚ್ಛಂದ ಅಂತಃಕರಣದ ಮೂಲ ಹೆಸರು ಅವಳೇ ಇರಬೇಕು - ಆಯಿ...
ಹೇಳಬೇಕಾದದ್ದನ್ನು ಹೇಳಲಾಗದೆಯೇ ಉಳಿಸಿಕೊಂಡು ಮಾತು ಸೋಲೊಪ್ಪಿಕೊಳ್ಳುವಾಗ ಗೋಣು ಬಗ್ಗಿಸಿ ಸುಮ್ಮಗಾಗುತ್ತೇನೆ - ಎಂದಿನಂತೆ...

ಶಬ್ದಾಡಂಬರದಾಚೆಯ ಅಗ್ನಿ ದಿವ್ಯವೇ -
ಹುಟ್ದ್‌ಬ್ಬದ್ ಪೀತಿ ಪೀತಿ ಪೀತಿ ಶುಭಾಶಯ ಕಣೇ ನನ್ನ ಸುಂದ್ರೀ... 😘😘