Tuesday, April 1, 2014

ಗೊಂಚಲು - ಒಂದು ಸೊನ್ನೆ ಒಂದು ಮೂರು.....

ಎಲ್ಲಾ ಮನಸಲ್ಲಿ.....
(ಚೂರು ಚೂರು ಮಾತುಗಳು - ಹೇಗಾದರೂ ಹೊಂದಿಸಿಕೊಳ್ಳಿ...)

ಪ್ರೇಮದ ಮೃದು ಪಾದದ ಧೂಳ ಕಣವೊಂದು ಎದೆಯ ತಾಕಿತು - ನಗುವೊಂದು ಗೂಡು ಕಟ್ಟಿದೆ...

ಹಸಿ ಬಿಸಿ ಉಸಿರಲ್ಲಿ ಹಸೆಮಣೆಯ ಹಾಡು...

ಹೆರಳ ಕೇದಗೆಯ ಘಮಲು – ನಾಭಿಯಾಳದಲೇನೋ ಹುಚ್ಚು ಅಮಲು...

ಕನಸು ಕಣಿ ಹೇಳಿದೆ...

ನೆನಪೊಂದೇ ಈಗೀಗ ಪ್ರತಿ ಕ್ಷಣದ ಊಟ ಒಳಗಿನ ತೀರದ ಹಸಿವಿಗೆ...

ಕನಸುಗಳು ಹಾದಿ ತಪ್ಪದಿರಲು ನೆನಪುಗಳ ಸರ್ಪಗಾವಲು - ಮತ್ತದೇ ಹಾದಿಯ ತುಳಿಯದಿರಲು ಕೂಡ...

ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...

ಎಲ್ಲೆಲ್ಲಿ ತಿರುಗಿದರೂ ಮತ್ತಲ್ಲೆ ತಲುಪುವೆ ಎಂಬುದು ಎಷ್ಟು ಸತ್ಯ..!! ಆ ದಿನಗಳಲ್ಲಿ ಒಬ್ಬಂಟಿಯಾಗಿ ಬಂದು ಕೂರುತ್ತಿದ್ದ ಅದೇ ಜಾಗದ ಕಲ್ಲುಚಪ್ಪಡಿ ಮೇಲೆ ಇಂದು ಮತ್ತೆ ಕೂತಿದ್ದೇನೆ. ಅಂದಿನಂತೆಯೆ ಒಂಟಿಯಾಗಿ ಜನಜಾತ್ರೆಯ ನೋಡುತ್ತಾ. ಅಂದಿನ ಆ ನಾನು ನಂಗೆ ಮತ್ತೆ ಸಿಕ್ಕೇನಾ... 
ತಿರುಕನಲ್ಲೀಗ ಹಿಮ್ಮುಖ ಚಲನೆಯ ತೀವ್ರ ಬಯಕೆ...

ಖಾಲಿಯಾಗಿದೆ ಮನಸು...
ಇರುಳೊಂದರ ಮಟ್ಟಿಗಾದರೂ ಒಳತೂರಿ ಬರಬಾರದೇ ಒಂದಾದರೂ ಹೊಸ ಕನಸು...

ಕೊಟ್ಟದ್ದಕ್ಕೂ, ಕಿತ್ತುಕೊಂಡಿದ್ದಕ್ಕೂ ಒಂದು ಕಾರಣವನೂ ಕೊಡದೇ ಕಾಡಿಸೋ ಈ ಬದುಕಿನೆಡೆಗೆ ನಂಗೆ ತೀವ್ರ ಬೇಸರ, ಕೋಪ ಮತ್ತು ನಿರಂತರ ಪ್ರೀತಿ...

ನನ್ನ ನಾ ಗೆಲ್ಲಲು ನನ್ನ ಮನೋಬಲ ನಂಗೆ ಆಧಾರ...
ಆದರೆ ಪ್ರೀತಿಯ ಗಳಿಕೆ ಎಂಬುದು ಪರರ ಮನಸ ಗೆಲ್ಲೋ ಆಟ..
ಅಲ್ಲಿ ನನ್ನ ಮನೋಬಲ ಬಲವನೆಲ್ಲ ಕಳಕೊಂಡ ಮೂರು ಕಾಸಿಗೂ ಇರದ ಕಸವೂ ಆದೀತು...

ಪ್ರೀತಿ ಹರಿವ ನದಿಯಂತೆ...
ಸಮುದ್ರವ ಸೇರೋ ಹಂಬಲವ ಬಿಟ್ಟರೆ ಹರಿವು ಇನ್ನಷ್ಟು ಸರಾಗವೇನೋ ಅನ್ನಿಸುತ್ತೆ...
ಆದ್ರೆ ಸಮುದ್ರದ ಸೆಳೆತವ ಬಿಡೋದು ಹೇಗೆ - ಬಿಟ್ಟುದೇ ಆದರೆ ಹರಿವಿಗಿರೋ ಉದ್ದೇಶ ಕಳೆದುಹೋಗುತ್ತೆ - ಉದ್ದೇಶ ಇಲ್ಲದಲ್ಲಿ ತುಡಿತ ಎಲ್ಲಿಯದು... 

ನನ್ನದಲ್ಲದ್ದು, ನನ್ನೋಳಿರದೇಹೋದದ್ದು ಮತ್ತು ನನಗೆಂದಿಗೂ ಸಿಗಲಾರದು ಎಂಬುದರೆಡೆಗೆ ನಂಗೆ ತುಡಿತ ಜಾಸ್ತಿಯೇ ಎಂದಿಗೂ...
ಅದಕೇ ನನ್ನಲ್ಲಿ ಪ್ರೀತಿಯೆಡೆಗೆ ಆ ಪರಿ ದಾಹವಿದ್ದೀತು...
ತಣಿಯದ ದಾಹವೆಂಬ ಅರಿವಿದ್ದೂ ಸದಾ ಬರೀ ಹುಡುಕಾಟ...

ಬೆಳಗೆಂದರೆ ಕವಿನಾಮದಂಕಿತವಿಲ್ಲದೆ ಹುಟ್ಟಬೇಕಾದ ಹೊಸ ಕವಿತೆಯ ಮೊದಲ ಸಾಲು...

ಬೆಳಗೆಂದರೆ ಗಲಗಲ – ಒಳಗೂ, ಹೊರಗೂ...

ಪ್ರೀತಿ – ಪರವಶತೆ – ಮೌನ = ಬೆಳಗು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

5 comments:

  1. super... ondishtu bhaavagalu endigoo kaadaballanthavu ....
    *ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...

    *ಖಾಲಿಯಾಗಿದೆ ಮನಸು...
    ಇರುಳೊಂದರ ಮಟ್ಟಿಗಾದರೂ ಒಳತೂರಿ ಬರಬಾರದೇ ಒಂದಾದರೂ ಹೊಸ ಕನಸು...

    ReplyDelete
  2. §ಬೆಳಗೆಂದರೆ ಕವಿನಾಮದಂಕಿತವಿಲ್ಲದೆ ಹುಟ್ಟಬೇಕಾದ ಹೊಸ ಕವಿತೆಯ ಮೊದಲ ಸಾಲು...§ ಸೂಪರ್ರೂ..

    ReplyDelete
  3. ಸುಂದರ ಸಾಲುಗಳು. ಭಾವಗಳು ಉಕ್ಕಿ ಹರಿಯುತಿರಲಿ ಹೀಗೆ.

    ReplyDelete
  4. ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...
    ಮನಕ್ಯಾಕೋ ದುಃಖವಾಯ್ತು..

    ಎಂದಿನಂತೆ ಭಾವಪೂರ್ಣ ಬರಹ

    ReplyDelete
  5. "ನನ್ನದಲ್ಲದ್ದು, ನನ್ನೋಳಿರದೇಹೋದದ್ದು ಮತ್ತು ನನಗೆಂದಿಗೂ ಸಿಗಲಾರದು ಎಂಬುದರೆಡೆಗೆ ನಂಗೆ ತುಡಿತ ಜಾಸ್ತಿಯೇ ಎಂದಿಗೂ..."
    ನಿಮ್ಮೊಬ್ಬರಿಗೇ ಅಲ್ಲ... ಎಲ್ಲರಿಗೂ ಅಷ್ಟೇ ಇರದಿದ್ದಾಗ ಬೇಕು ಎಂಬ ತುಡಿತ....
    ಅದು ಸಿಕ್ಕಿದ ಮೇಲೆ ಇನ್ನೊಂದರ ಮೇಲೆ ಮನಸ್ಸು ಹೊರಳುತ್ತದೆ... ಒಟ್ಟಿನಲ್ಲಿ ಉಸಿರಿರುವವರೆಗೂ ತುಡಿತವಿದ್ದದ್ದೇ ...!! ಮನವೆಂಬುದು ಮರ್ಕಟವಿದ್ದಂತೆ ...!
    ಚೆಂದದ ಬರಹ :) :)

    ReplyDelete