Thursday, May 15, 2014

ಗೊಂಚಲು - ಒಂದು ನೂರಾ ಹತ್ತೊಂಬತ್ತು.....

ಎರಡು ಮಾತು.....
(ಯಾರಿಗೆಂದು ಕೇಳಬೇಡಿ...)

ಆತ್ಮ ಸಂಗಾತವೇ -
ಹೌದು ನಾನು ಮಹಾ ಜಗಳಗಂಟ... 
ಆದರೂ ನನ್ನ ಜಗಳಗಳೇನಿದ್ದರೂ ನನ್ನೊಂದಿಗೆ ನನ್ನದು ಮತ್ತು ನನ್ನ ಬದುಕಿನೊಂದಿಗಿನದು...
ಹಾಗಿದ್ರೆ ನಿನ್ನೊಂದಿಗೆ ಕಿತ್ತಾಡುವುದ್ಯಾಕೆ ಅಂತ ಕೇಳ್ತೀಯಾ...??? 
ಅದಕ್ಕೆ ಕಾರಣವಿಷ್ಟೇ - ನಿನ್ನನ್ನ ನಾನು ಪ್ರತ್ಯೇಕವಾದ ‘ನೀನು’ ಅಂದುಕೊಂಡಿಲ್ಲ; ಅಂದರೆ ನೀ ನನಗೆ ನನ್ನ ಬದುಕಿನ ಜೀವನ್ಮುಖೀ ಖುಷಿಗಳಿಂದ ಹೊರತಾಗಿಲ್ಲ...
ಮೀರುವ - ಹಿಡಿದಿಡುವ ಹಂಬಲದಲ್ಲಿ ನದಿಗೂ - ದಡಕ್ಕೂ ಜಗಳ ತಪ್ಪಿದ್ದಲ್ಲವಲ್ಲ...
ಹಾಗಂತ ನದಿ ಮತ್ತು ದಡದ ಗೆಳೆತನವ ಪ್ರಶ್ನಿಸಲಾದೀತಾ...
ನೀ ನನ್ನ ಎದೆ ಬೀದಿಯ ಜೀವ ಶಕ್ತಿಯಾದ ನಗೆಯ ದುಕಾನು...
ನಿನ್ನ ನಂಬಿಯೇ ಸಾವಿನೊಂದಿಗೂ ನಗೆಯ ಯುದ್ಧವ ಸಾರಿದ ಭೂಪ ನಾನು...
ಸಣ್ಣ ಜಗಳ ಬೇಕೆಂದುದಕೇ ಮುಖ ತಿರುವಿ ಕೂತರೆ ನೀನು...
ನನ್ನ ಸೋಲಿಗೆ ಮುಂದೆಂದೋ ನಿನ್ನ ನಾಳೆಗಳು ನಿನ್ನ ಹಳಿಯದಿರಲಿ...


ಈ ಊರಲ್ಲಿ ಮನವ ತಾಕಿ ನಗುವ ತುಂಬಿದ ಕನಸುಗಳೇ -
ಅದೊಂದು ಪುಟ್ಟ ಊರು... 
ಆ ಊರ ಯಾವುದೋ ಬೀದಿಗೆ ಒಂದಾನೊಂದು ಕಾಲದಲ್ಲಿ ನಾನು ತುಂಡರಸ... 
ಹಾಗಾಗಿ ಈಗಲೂ ನನಗಲ್ಲಿ ನೆನಕೆಗಳಿವೆ... 
ಆದರೂ ಈಗದನ್ನ ನಾನು ಅಮ್ಮನೂರು ಅನ್ನುತ್ತೇನೆ - ಅಮ್ಮನನ್ನುಳಿದು ಉಳಿದ್ಯಾವುದೂ ಇಂದಲ್ಲಿ ನಂಗೆ ಕೇವಲ ‘ನಂಗೇ ಸ್ವಂತ’ ಅನ್ನಿಸದ ಕಾರಣಕ್ಕೆ... 
ಇಲ್ಲಿ ಅಷ್ಟೆಲ್ಲ ಆಪ್ತವಾಗಿ ನನ್ನ ಬದುಕ ತಬ್ಬಿದ ನಿಮ್ಮನ್ನ ಆ ನನ್ನ ಪೂರ್ವಾಶ್ರಮದ ಬೀದಿಗಳಲ್ಲೂ ಒಂದು ಸುತ್ತು ಸುತ್ತಾಡಿಸೋಣ, ಅಂದಿನ ನನ್ನ ಪರಾಕ್ರಮಗಳ, ವಿಕ್ರಮಗಳ (?) ನಿಮಗೆ ಅರುಹಿ ನೀವು ನಗುವಾಗ ನನ್ನೊಳಗೆ ನಾನೇ ಸಣ್ಣ ಹೆಮ್ಮೆಯಿಂದ ಬೀಗಿ ನಲಿಯೋಣ ಅಂತೆಲ್ಲ ಅಂದುಕೊಂಡದ್ದು ಅಷ್ಟು ದೊಡ್ಡ ತಪ್ಪಾ...? 
ಆ ನನ್ನ ಅರಮನೆಯಂಥ ಗುಡಿಸಲ ಅಂಗಳದಲ್ಲಿ ನಿಮ್ಮ ಪುಟ್ಟ ಪಾದದ ಗುರುತುಗಳು ಮೂಡಲಿ ಅಂತ ಹಂಬಲಿಸಿದ್ದು ತಪ್ಪಾ...?? 
ಇವೆಲ್ಲ ತಪ್ಪೆನ್ನುವುದಾದರೆ, ಅವು ನನ್ನ ಯೋಗ್ಯತೆಗೆ ಮೀರಿದ ಆಸೆಗಳೆಂಬುದಾದರೆ ನಿಮ್ಮೊಂದಿಗಿನ ನನ್ನ ಬಂಧವೇ ತಪ್ಪಲ್ಲವಾ...???
ತಪ್ಪಲ್ಲ ಅನ್ನುವುದಾದರೆ ಒಂದು ಪ್ರಾಮಾಣಿಕ ಕಾರಣವನ್ನೂ ಕೊಡದೇ, ಸಬೂಬುಗಳ ಬೆಂಬಲ ಪಡೆದು ನನ್ನ ಮನವಿಯ ತಿರಸ್ಕರಿಸಿದ್ಯಾಕೆ...????
ಮನವಿಯ ತಿರಸ್ಕರಿಸೋ ಸ್ವಾತಂತ್ರ‍್ಯ ನಿಮಗಿದೆ ಎಂಬುದು ಸತ್ಯ... 
ಅಂತೆಯೇ ತಿರಸ್ಕರಣೆಗೆ ಪ್ರಾಮಾಣಿಕ ಕಾರಣ ನೀಡಬೇಕಾದದ್ದು ನಿಮ್ಮ ಜವಾಬ್ದಾರಿ ಅಲ್ಲವಾ...????? 
ಆ ಕಾರಣವ ನೀವು ಕೊಟ್ಟಿಲ್ಲ ಎಂಬ ಕಾರಣಕ್ಕೇ ನಿಮ್ಮೊಂದಿಗೆ ಜಗಳ ಬೇಕೆಂದೆ ನಾನು... 
ಆದರೆ ಮೌನ ಪ್ರಿಯರು ನೀವು... 
ನಿಮ್ಮಲ್ಲಿ ಜಗಳಕ್ಕೆ ತಾವಿಲ್ಲ... 
ಬಾಕಿ ಉಳಿದ ಒಂದು ಜಗಳ ಮುಗಿಯದೇ ಹೇಳಬೆಕಿದ್ದ ಸಾವಿರ ಪ್ರೀತಿಯನೂ ಹೇಳಲಾಗದ ವಾಚಾಳಿ ಮೂಗ ನಾನು... 
ನಿನ್ನೆಯ ಖುಷಿಗಳ ಇಂದು, ನಾಳೆಗಳಲೂ ಮುಂದುವರಿಸುವ ತೀವ್ರ ಹಂಬಲದೊಂದಿಗೆ ಮತ್ತೆ ಮಾತಾಗಲು ಕಾಯುತ್ತಿರುವ ಅತಿ ಆಸೆಯ ಅದೇ ಹಳೆ ಹುಡುಗ ನಾನು...
ಬಾರದೇ ಮತ್ತೆ ಮರಳಿ ಆ ಪ್ರೀತಿ ಪರ್ವ ಕಾಲ......................

2 comments:

  1. ಪ್ರೀತಿಗಳೆಲ್ಲವೂ ಹಸಿರಾಗಿಯೇ ಇವೆ.....
    ನಾವೇ ದೂರ ಬಂದಿದ್ದೇವೇನೋ....

    ಕಾರಣವೇ ಇಲ್ಲದೇ ನಡೆಯುವುದೇ ಹೆಚ್ಚು ಏನಿದ್ದರೂ.....


    ಹ್ಹ ಹ್ಹಾ........... nice.......

    ReplyDelete
  2. ನಿನ್ನನ್ನು ಪ್ರತ್ಯೇಕ "ನೀನು" ಅಂದುಕೊಂಡಿಲ್ಲ ಅನ್ನುವ ಮಾತು ದಡದಿಂದ ನದಿಗೆ ಬಂದರೂ ನದಿಯಿಂದ ದಡಕ್ಕೆ ಬಂದರೂ ಅದು ಮನದೊಳಗೆ ಹುಟ್ಟು ಹಾಕುವ ಸಂತಸದ ಭಾವಗಳಿಗೆ ಎಣೆಯಿಲ್ಲಾ..

    ಆದರೆ ವಾಸ್ತವ ಏನೆಂದರೆ ವತ್ಸ, ಪ್ರತ್ಯೇಕತೆ ಪ್ರತಿಯೊಬ್ಬರ ಬದುಕಲ್ಲೂ ಇರುತ್ತದೆ ಮತ್ತು ಇರಬೇಕು ಕೂಡ... ನದಿ ಮತ್ತು ದಡ ಒಂದೇ ಅಂದುಕೊಳ್ಳಬಹುದು. ಅಡ್ಡಿಯಿಲ್ಲಾ.. ಆದರೆ ವಾಸ್ತವದಲ್ಲಿ ಅದೆರಡು ಒಂದೆಯಾ..? ಬದುಕಿನುದ್ದಕ್ಕೂ ನಿನ್ನ ಗೆಳೆತನದ ಜೊತೆಯಿರಲಿ ಎಂಬ ಹಂಬಲ ನದಿಗೂ ದಡಕ್ಕೂ ಇಬ್ಬರಿಗೂ ಇದ್ದೀತು.. ಆದರೆ ನದಿಯ ಒಡಲಲ್ಲಿ , ದಡದ ತಟದಲ್ಲಿ ಅವರವರ ಪ್ರತ್ಯೇಕತೆಯ ಬದುಕನ್ನು ಸಾಗಿಸುವಾಗ ಅವರಿಗೂ ಅದೆಷ್ಟೋ ಅನಿವಾರ್ಯತೆಗಳಿರಬಹುದಲ್ಲವಾ...? ಇದಕ್ಕಾಗಿ ದೂಷಣೆ ಯಾಕೆ ಬೇಕು?! ಗೆಳೆತನದ ಪ್ರಾಮಾಣಿಕತೆಯ ಪ್ರಶ್ನೆ ಎತ್ತಬೇಕು? ಅಷ್ಟಕ್ಕೂ ಕಾರಣ ಕೊಟ್ಟರಷ್ಟೇ ಕ್ಷಮೆಯಾ/ಗೆಳೆತನವಾ?!

    ಮೌನಿಗಳು!
    ಮಾತನಾಡಿ ಮನಸ್ಸು ನೋಯಿಸಿಕೊಳ್ಳುವುದಕ್ಕಿಂತ ಮೌನ ಒಳ್ಳೆಯದಲ್ಲವಾ?!
    ಇರಲಿ..
    ಕಾರಣವಿಲ್ಲದೇ ಹುಟ್ಟಿಕೊಂಡ ಸ್ನೇಹ.. ಕಾರಣಕ್ಕಾಗಿ ಜಗಳವಾಡುವುದು, ದೂರವಾಗುವುದು , ನೋವು ಪಟ್ಟುಕೊಳ್ಳುವುದು.. ಇವೆಲ್ಲವೂ ಎದೆಗೆ ಸಣ್ಣದೊಂದು ಸೂಜಿಯಿಂದ ಆಳವಾಗಿ ಇರಿದ ಅನುಭವ ಕೊಡುತ್ತದೆ.. ಅಂತಹ ನೋವು ಯಾವ ಸ್ನೇಹಕ್ಕೂ ಬರದಿರಲಿ..

    ಮರೆತೇ..
    ಚಂದದ ಲೇಖನ...


    ReplyDelete