Thursday, January 14, 2016

ಗೊಂಚಲು - ನೂರಾ ಎಂಬತ್ತು.....

ಮತ್ತೂ ಅಷ್ಟು ಬಿಡಿ ಭಾವಗಳು.....

ಆ ಸೂರ್ಯನೂ ಪಥ ಬದಲಿಸುವನಂತೆ; ಆದರೆ ಜಗ ಬೆಳಗುವುದ ಬಿಡಲಾರ – ನಿತ್ಯ ನೈಮಿತ್ಯಕ್ಕೆ ತಡೆಯಿಲ್ಲ...
ಹಿಗ್ಗಿದರೂ ಕುಗ್ಗಿದರೂ ಬೆಳದಿಂಗಳು ಅಳಿಯುವುದಿಲ್ಲ – ಚಂದಿರನ ಇರುಳಿನ ಹಾಡಿಗೆ ಕೊನೆಯಿಲ್ಲ...
ಋತು ಋತುವಿಗೂ ವಸುಧೆಯ ವಸನ ಬದಲಾಗುವುದು – ಒಮ್ಮೆ ಮದುಮಗಳ ಸಿಂಗಾರ ಮಗದೊಮ್ಮೆ ಕಿಲುಬು ಹಿಡಿದ ಬಂಗಾರ...
ಸೂರ್ಯ - ಚಂದಮರ ಕರುಣೆ, ವಸುಧೆಯೊಡಲ ಮಮತೆಯ ಕೂಸು ನಾನು...
ನನ್ನೀ ಬದುಕೂ ಜಾಡು ಬದಲಿಸುತ್ತದೆ - ಹಾಗಂತ ಅದೇ ಕಾರಣಕ್ಕೆ ನಡಿಗೆ ನಿಲ್ಲಬಾರದಲ್ಲವಾ; ಬದುಕಿನ ನಡಿಗೆ ಅಂದರೆ ನನ್ನ ನಡಿಗೆ...
ನೆನಪು ಮುಚ್ಚಟೆಯ ಮುಗುಳ್ನಗುವಾದೀತು ಅಥವಾ ಕರುಳಿನಾಳದ ಕರಗದ ಬಿಕ್ಕಳಿಕೆಯೂ ಆದೀತು...
ಕನಸು ಎದೆಯುಬ್ಬಿಸುವ ಗೆಲುವಿನಾಲಯವಾದೀತು ಇಲ್ಲವೇ ಬಯಲ ಗಾಳಿಯ ಗುಲಾಮ ತರಗೆಲೆಯಂತೆ ಕಸುವಿಲ್ಲದೆ ನರಳೀತು...
ಆ ಎಲ್ಲ ಸಂದರ್ಭಗಳಲೂ ನಗೆಯೊಂದೇ ಎದೆಯ ಹಾಡು ಮತ್ತು ಕರುಳ ಹಸಿವಾದಲ್ಲಿ ಬದುಕು ಸಾವಿರ ಕವಲುಗಳ ಎದುರಲ್ಲೂ ಶೃತಿ ಮೀರದ ನನ್ನ ಆಣತಿಗನುವಾಗಿ ಮಿಡಿವ ನನ್ನ ಕೈಯ ಕೂಸೇ... 
ಬದುಕ ಕಣಜದ ತುಂಬ ನಗೆಯೇ ತುಂಬಲಿ - ಪ್ರತಿ ಹೆಜ್ಜೆಯಲೂ ನಲಿವು ಸಂಕ್ರಮಣದ ಸುಗ್ಗಿಯ ಪೈರಾಗಲಿ...
ಶುಭಾಶಯಗಳು...
=\=/=\=/=
ಸ್ನೇಹವೇ -
ಬೀಜದೆದೆಯ ಒಗಟ ಬಿಡಿಸ ಹೋಗಿ
ನಕ್ಕ ಹಸಿರಿಗೆ ಮರುಳಾಗಿ
ಬಿಕ್ಕಳಿಸುತ್ತ ನಿಂತ ಹಸಿ ಮಣ್ಣಂತೆ ಈಗ ನಾನು...
ಒಗಟು ಮರೆತೇ ಹೋಗಿದೆ...
ಒಲವು ಎದೆಯ ಬೆಳಕಾಗಿದೆ...
ನಗೆಯೀಗ ಕಣ್ಣ ಸಿಂಗರಿಸಿದ ಕಾಡಿಗೆ...
ಋತುಗಳ ನಡಿಗೆಯಲ್ಲಿ ಉದುರೀತಾದರೂ ಎಲೆ
ಬಿಡದೆ ಕಾಯ್ದುಕೊಳ್ಳುವೆ  ಹಿಡಿಯದಂತೆ ಗೆದ್ದಲು ಹಸಿರ ತಾಯಿ ಬೇರಿಗೆ...
ಸದಾ ಹಸಿ ಮಣ್ಣು ನಿನ್ನೆದುರು ನಾನು...
=\=/=\=/=
ಸಾಗರನ ಅವಿರತ ಒಳಗುದಿಯ ಮೊರೆತ - ದಂಡೆಯ ಕದಡದ ಕಡು ಮೌನ - ಕಾಡಿನ ಗರ್ಭಸ್ಥ ಧ್ಯಾನ - ಮಳೆಯ ಸ್ವರ ಸಲ್ಲಾಪ - ಹಣೆ ನೇವರಿಸೋ ಆಯಿಯ ಬೆಚ್ಚನೆ ಮಡಿಲು - ಎದೆ ಬಾಗಿಲಲ್ಲಿ ನೀ ಉಳಿಸಿ ಹೋದ ಹೆಜ್ಜೆ ಗುರುತು...
ಎಂಥ ದಿವ್ಯ ಸಾನಿಧ್ಯಗಳೋ - ನಾನು ನಾನಾಗಿ ನನ್ನೊಳಗೆ ಕಳೆದು ಹೋಗಲು ಇಲ್ಲಲ್ಲದೆ ಬೇರೆಲ್ಲಿ ಸಾಧ್ಯ...
ಹೇ ಕನಸೇ,
ಅಮ್ಮನ ಹಾರೈಕೆಯ ಹಣೆ ತಿಲಕವನಿಟ್ಟು, ನಿನ್ನ ಕಾಲ್ಗೆಜ್ಜೆಯಿಂದ ಎತ್ತಿಕೊಂಡ ಒಂದು ಪುಟ್ಟ ಗಿಲಕಿಯ ಎದೆಬೀದಿಯಲಿ ಆಡಲು ಬಿಟ್ಟು, ಅಲೆಗಳ ನಾಟ್ಯಕೆ ಕಣ್ಣಾಗಿ, ಮರಳ ಮೌನಕೆ ಕಿವಿಯಾಗಿ, ಮಳೆಗೆ ನೆತ್ತಿಯ ತೆರೆದಿಟ್ಟು, ಕಾಡಿನಾಳವ ಅಳೆಯುತ್ತ ಆವಾಹಿಸಿಕೊಂಡು ಆರಾಧಿಸಬೇಕು ನಿನ್ನ - ಅಳಿಯಲೇಬಾರದು ನನ್ನೊಳಗಣ ನಿನ್ನೆಡೆಗಿನ ಹುಚ್ಚು ಹಾಗೇ ಜೀವಿತದೆಡೆಗಿನ ಕರುಳ ಮೋಹ...
=\=/=\=/=
ಹೇ ನೇಹವೇ -
ನನ್ನೊಳಿದೆಯಾ ಎಂಬ ಅರ್ಹತೆಯ ಲೆಕ್ಕಾಚಾರವ ಮೀರಿ ನೀ ಕೈಯೆತ್ತಿ ಸುರಿದ ಪ್ರೀತಿ ನಿನ್ನೆದೆ ಗುಡಿಯ ಬತ್ತದ ಔದಾರ್ಯದ ದೊರೆತನ...
ನಾನೆಂಬೋ ನನ್ನಹಂಮ್ಮಿನ ಕೋಟೆಯ ದಾಟಿ ನೀನೀವ ಪ್ರೀತಿ ಪ್ರಸಾದಕ್ಕೆ ತಲೆ ಬಾಗಿ ಬೊಗಸೆಯೊಡ್ಡಿದೆ ಎಂಬುದಷ್ಟೇ ನನ್ನ ಹಿರಿತನ...
ಕೊಟ್ಟು ಗರ್ವವಿಲ್ಲ - ಪಡೆದು ಸಂಕೋಚವಿಲ್ಲ...
ಹೇಳು -
ಕೊಟ್ಟವನಲ್ಲೂ, ಪಡೆದಾತನಲ್ಲೂ ಹಿಗ್ಗಿನ ಸುಗ್ಗಿಯ ಸಗ್ಗದ ಸಿರಿ ಭಾವವೊಂದನೆ ಉಳಿಸಿ ನಗುವುದು ಸವಿ ಸ್ನೇಹದ ಅಕ್ಕರೆಯೊಂದೇ ಅಲ್ಲವೇ...
=\=/=\=/=
ಕೂಸಿನ ಬದುಕಿಗೆ ಬಣ್ಣ ತುಂಬುವುದೆಂದರೆ ಇಷ್ಟೇ ಅಲ್ಲವಾ - ಮಗುವಾಗಿ ಮಗುವ ಮುಂಗೈಗಿಷ್ಟು ನಗೆಯ ಮದರಂಗಿಯ ಬಳಿಯುವುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment