Wednesday, October 28, 2026

ಗೊಂಚಲು - ನಾಕ್ನೂರ್ತೊಂಭತ್ನಾಕು.....

ನಾನೆಂಬ ಚಿರದಾಹಿಯೂ.....

ಒಂದೊಮ್ಮೆ ಜೀವದಷ್ಟು ಆಪ್ತರಾಗಿದ್ದವರು ಉದ್ದಾನುದ್ದ ವಾಕ್ಯಗಳ ರಚಿಸಬೇಕಿಲ್ಲ, ನೂರು ಕಥೆ ಹೇಳಬೇಕಿಲ್ಲ, ಸುಮ್ಮನೆ ಒಂದು ಆಪ್ತ 'ಹೂಂ'ಕಾರದಲೂ ಸ್ಪಂದಿಸಿಬಿಡಬಹುದು... 
ಒಂದೇ ಒಂದು ಕಿರು (ತೇ)ಭಾವಸೂಚಕ, ಅರ್ಧ ವಿರಾಮದ ಮಾತಲ್ಲಿ/ಸಂದೇಶದಲ್ಲಿ ಮನಸನು ತಬ್ಬಿ, ದೂರಾಬಾರಗಳ ಮೀರಬಹುದಾದಲ್ಲೂ ಸುಮ್ಮನಿದ್ದುಬಿಡಲು ಕಲಿತು, ಒಂದು ಸಹಜ ಕಾಳಜಿಯ ಪ್ರಶ್ನೆಗೂ ಉತ್ತರಿಸಲಾಗದಷ್ಟು ಕಾರ್ಯಕಾರಣದಲಿ ವ್ಯಸ್ತರಾದವರನ್ನು, ಭಾವ ನಿರ್ಯಾಣದಲಿ ಮೌನವಾದವರನು ಅವರ ಸುವ್ಯವಸ್ಥಿತ(?), ಗಂಭೀರ, ವೇಳಾಪಟ್ಟಿಯ ಬದುಕಲ್ಲೇ 'ಅವರದವರೇ ಹರಿಬಿಡಿಸಿಕೊಳ್ಳಲಿ' ಅಂತಂದು ಬಿಟ್ಟುಬಿಡುವುದು ಒಳಿತು... 
ವತ್ಸಾ,
ಅರ್ಥ ಮತ್ತೇನಲ್ಲ - 
ನಿನ್ನೊಡನಾಡುವ 'ಸ್ಪಂದನೆ'ಯ ತೇವ ಸತ್ತ ಮೇಲಷ್ಟೇ ಒಣ ಒಣ ಬಣ ಬಣ 'ಪ್ರತಿಕ್ರಿಯೆ' ಶುರುವಾಗುವುದು - ಒಂದಿನ ಅದೂ ನಿಂತೇ ಹೋಗುವುದು... 
ಪೂರ್ತಿ ನಿಲ್ಲುವ ತನಕ ಕಾಯುವುದಾ, ಇಲ್ಲಾ ಸಣ್ಣ ಸೂಚನೆಗಳಲೇ ಅರಿತು ಸೃಷ್ಟಿಯಾದ ಸೂಕ್ಷ್ಮ ಅಂತರವ ಒಪ್ಪಿಕೊಳ್ಳುವುದಾ - ಆಯ್ಕೆ ನಿನ್ನದೇ; ಕಾರಣ, ಆ ಪ್ರೀತಿ ನೇಹವೂ ನಿನ್ನದೇ ಆಗಿದ್ದಿದ್ದು...
ಸ್ಪಂದನೆ - ಪ್ರತಿಸ್ಪಂದನೆ, ಕ್ರಿಯೆ - ಪ್ರತಿಕ್ರಿಯೆಗಳೆಲ್ಲ ಹೋಗಿ ಈಗ ಬರೀ ಲೈಕು, ಲವ್ವಿನ ಎಮೋಜಿಗಳ ಮೂಲಕ ಆಪ್ತತೆಯ ತೂಕ ಅಳೆದುಕೊಳ್ಳುವ ಕಾಲ - ಹಾಗೆಯೇ ಈಗ ಅದಿದ್ದದ್ದು...
___ ಶ್ರೀ, ಹಂಗೋ ಹಿಂಗೋ ಹೆಂಗಾದರೂ ಉಳಿಸಿಕೊಳ್ಳುವುದ ಕಲೀಬೇಕಷ್ಟೇ - ಜೀವಭಾವವ... 
&&&

ಇನ್ನಾರೂ ಕೊಡಲಾರದ್ದನ್ನು ನಾನೇನು ಕೊಟ್ಟೆ ಅಂತ ಕೇಳಿದಳು... 
ಕೊಡಮಾಡದೇ ನಿನ್ನಲೇ ನೀನೇನ ಉಳಿಸಿಕೊಂಡೆ ಹೇಳೂ ಅಂದೆ...
ಉತ್ತರ ನಿರುತ್ತರಗಳ ಗಾಢತೆಗೆ ಎರಡೂ ಜೋಡಿ ಕಣ್ಣ ಕಲ್ಯಾಣಿಯಲಿ ಚಂದ್ರ ಕಲೆಸಿ ಹೋದ... 
ನಗ್ನ ಮೈಯ್ಯ ಪ್ರೀತಿ ಮೈಮುರಿದು ಮುದ್ದಾಗಿ ನಕ್ಕಿತು... 
___ ಕೊಟ್ಟ ರಾಣಿ - ಪಡೆದ ಬೈರಾಗಿ - ಎಂದೂ ತುಂಬದ ಕಾಲನ ಕೈಯ್ಯ ಭಿಕ್ಷಾ ಪಾತ್ರೆ... 🥹🫂
&&&

ಪ್ರೇಮವನು ವ್ಯಾಖ್ಯಾನಿಸೂ ಅಂದರೆ, 
ಮೈಮನಸಿಗಂಟಿದ ಬೆವರಿನತ್ತರಿನ ಘಮದಲಿ ಹೇಗೆಲ್ಲ ಹಬ್ಬಿ ತಬ್ಬಿದ ಯಾರ್ಯಾರ ಉಸಿರಿರುವುದೋ/ಹೆಸರಿರುವುದೋ ಎಂದು ಹುಡುಕಲಾಗದೆ ಸೋಲುತ್ತೇನೆ, ಮತ್ತದೇ ಚಂದಕೆ ಬೀಗುತ್ತೇನೆ...
"ಮನಸಿನ ಹಸಿ ಮಾತಿಗೆ ಮೈತಬ್ಬಿದ ಅನುರಾಗವೂ...
ಮೈಬಿಸಿಯ ತಿದಿ ತೀಡಿ ಮನಸಿಗೇರಿದ ಅನುಭಾವವೂ..." 
___ ನಾನೆಂಬ ಚಿರದಾಹಿಯೂ...
&&&

ಕೇಳೋ ಗೂಬೆ,
ನಿನ್ನ ಸಂಗದಿಂದ -
ಈ ಮನಸಿಗೆ ಸಿಕ್ಕಿದ್ದು ಚಿಟಿಕೆ ಪ್ರೀತಿ (?)... 
ಮೈತುಂಬಾ ನಿನ್ನ ರಕ್ಕಸ ಉನ್ಮಾದದ ಉಸಿರ ಗುರುತು... 
ಇಂದು, ನಾಳೆಗಳಿಗೆ ಉಳಿದದ್ದು 
ಕೆಟ್ಟ ಕನಸೆಂದು ಮರೆಯಲಾಗದ 
ಇರುಳ ಕಂಗಳ ತೋಯಿಸೋ ನೆನಪುಗಳ ನವೆ... 
ಸುಮ್ಮನೆ ಗಾಳಿ ಸೋಕಿದರೂ ತುರಿಕೆ, ಪರಪರ ಕೆರೆದರೆ ಗಾಯ...
ಹೇಯ್,
ತುಂಬಾನೇ ದುಬಾರಿಯಾಯಿತು ಕಣೋ ನಿನ್ನಾ ನೇಹ... 
___ ಎಷ್ಟು ಚಂದಿತ್ತು - ನೀ ಸಿಗುವ ಮುಂಚಿನ ನಾನು ನಂಗೆ ಮತ್ತೆ ಸಿಗುವಂತಿದ್ದಿದ್ದರೆ.... 
&&&

ವತ್ಸಾ -
ಕೊಡೋದ್ರಲ್ಲಿ ನಂದ್ಯಾವತ್ತೂ ಮೋಸ ಇಲ್ಲ...
ನಾನು ನನ್ನ ನೂರು ಪ್ರತಿಶತ ಕೊಡ್ತೇನೆ - ಹೊತ್ತುಗೊತ್ತಿಲ್ದೇ ಅವರ್ನ ಖಷಿಯಾಗ್ಸೋಕೆ ನನ್ನೆಲ್ಲಾ ಶಕ್ತಿ, ಯುಕ್ತೀನ ವಿನಿಯೋಗಿಸ್ತೇನೆ ಗೊತ್ತಾ... 
ಆದ್ರೇ..........
ತಡಿ, ತಡಿ, 
ಚೂರು ನಿಲ್ಲು... 
ಎಲ್ಲ ಎಲ್ಲಾ ಬಸಿದು ಕೊಡೋಕ್ಮುಂಚೆ ನೀನ್ ಕೊಡ್ತಾ ಇರೋದು 'ನೀನು ಬೇಕೂ' ಅನ್ನೋರಿಗಾ ಅಥ್ವಾ 'ನಿಂಗೆ ಬೇಕೂ' ಅನ್ನಿಸೋರಿಗಾ ಅನ್ನೋದನ್ನ ಒಮ್ಮೆ ಗಮನಿಸ್ಕೊಂಡಿದೀಯಾ...?! 
ಇಲ್ಲಾಂದ್ರೆ ಆಮೇಲೆ ಹೀಗೆ, 
ನಲಿನಲಿದು ನೀಡಿ ನೀಡಿ ತುಂಬಿಕೊಂಡ ಹಾಯೀ ಭಾವ ಮೂಡಬೇಕಾದಲ್ಲಿ, ಹಲ್ಮೊಟ್ಟೆ ಕಚ್ಚಿ ಕೊಟ್ಟು ಕೊಟ್ಟು ಖಾಲಿಯಾದ ನಿತ್ರಾಣ ತುಂಬಿಕೊಳ್ಳುತ್ತೆ...
ಏನ್ಗೊತ್ತಾ,
ಅಪಾತ್ರ ದಾನ ಅತೀ ಆದ್ರೆ - ನಿನ್ನಲ್ಲಿ ಮುಂದೆ ಕೊಡುವುದಕ್ಕೂ ಏನೂ ಉಳಿದಿಲ್ಲ ಮತ್ತು ಯಾರೋ ನಿಂಗೆ ಕೈಯ್ಯೆತ್ತಿ ಕೊಡ್ತೀನಂದ್ರೆ ಮಡಿಲೊಡ್ಡೋಕೂ ಧೈರ್ಯ ಸಾಕಾಗದೇ, ಭರಪೂರ ಸಿಕ್ರೆ ನಗುವನೂ ನಂಬೋ ಗುಂಡಿಗೆ ಇಲ್ಲ ಅನ್ನಂಗಾಗೋಗತ್ತೆ... 
ಒಂದೋ, 
ವಿನಾಕಾರಣ ಹಂಚಿ ಸುಖಿಸುವುದ ಕಲಿ (*ಇದು ಬಲು ಕಷ್ಟ ಮತ್ತು ಬಲು ಚಂದ)...
ಇಲ್ಲಾ, 
ಮೊಗೆದು ಕೊಟ್ಟದ್ದನ್ನೊಂಚೂರು ಮರಳಿ ಬಯಸ್ತೀಯಾದರೆ, ಕೊಳಗದಲಿ ಪಡೆದರೆ ಅಟ್ವೆಯಷ್ಟಾದರೂ ತಿರುಗಿ ಕೊಡುವ ಮನಸೂ, ಕನಸೂ ಇರೋ 'ನೀನು ಸಾಕೆನಿಸುವುದಿಲ್ಲ' ಅನ್ನೋರಿಗೆ ಕೊಡು (* ಕೊನೇಪಕ್ಷ, ಪಡಿ ಪಡೆಯುತ್ತಿರುವಷ್ಟು ಹೊತ್ತಾದರೂ ಹಿಡಿ ನಗೆಯ ಮುಡಿ ತುಂಬ್ತಿರ್ತಾರೆ)... 
ಹೆಚ್ಚಿನ್ಸಲ, 
ನಾವು ನಮ್ಗೆ ಕೊಡ್ತೀನನ್ನೋರಿಗೆ  ಬೆನ್ನು ಹಾಕಿ, ನಮ್ಗೆ ಬೆನ್ನಾಗಿ ಹೋಗ್ತಿರೋರ ಹಿಂದೆ ಓಡ್ತಾ ಇರ್ತೇವೆ - ಬೆನ್ನಿಗೆ ಕಣ್ಣಿಲ್ಲ ನೋಡೂ...
ಆಗ, 
ಯಾರ್ಗೂ ಯಾರ ಮುಖವೂ ಕಾಣದ, ಕಣ್ಣ ಕನ್ನಡಿಯಲೊಂದು ಹನಿಗವಿತೆಯೂ ಹುಟ್ಟದ ಸ್ವಯಂ ಮರುಕದ ಒಣ ವೇದನೆಯಷ್ಟೇ ಉಳಿಯುತ್ತೆ ನಮ್ಮೆಲ್ಲರಲೂ...
___ ಪ್ರೀತಿ ಪ್ರೇಮ ಪ್ರಣಯ ಪಂಚಾಯ್ತಿ... 
&&&

ಮನೆಯಂಗಳದಿ ಗ್ರೀಷ್ಮದ ಬಾಗಿಲು ಇನ್ನೇನು ತೆಗೀತಾ ಇದೆ... 
ಹೊಂಗೆ ಹೂವಿನ ಹಾಸಿಗೆ ಹಾಸಿದ ಬೀದಿ...
ಗಡಿಬಿಡಿಯಿಂದ ರಸ್ತೆ ದಾಟೋ ಹೆಗ್ಗಣ, 
ಎಸೆದಿಟ್ಟ ಕಸದ ಗುಡ್ಡೇಲಿ ಏನೋ ಹುಡುಕಾಡೋ ಬೆಕ್ಕಿನ ಮರಿಗಳು, 
ಬೆಳಗಿಂದ ಕಾದಿಟ್ಕೊಂಡು ಈಗ ಯಜಮಾನನ ಆಜ್ಞೆಗೆ ತಕ್ಕಂಗೆ ಖಾಲಿ ಮಾಡಲು ಹೊರಟ ಜಾತಿ ಕುನ್ನಿಗಳು, 
ಮನೆ ಸೇರೋ ಗಡಿಬಿಡಿಯ ಗಾಡಿಗಳು,
ಕಿಟಕಿಯಿಂದ ಜಾರಿ ಹಾದಿಯ ಕಿವಿಗೆ ಬೀಳೋ ಮನೆ ಮನೆಗಳ ಒಳಮನೆಯ ಕಿರುನಗೆ, ಹುಸಿ ಮುನಿಸಿನ(?) ಜಗಳಗಳು,
ಸೂರು ಬೆಳಗೋ ಕನಸಿನ ಮೂರು ಕಾಸಿನ ದುಡಿಮೆಗೆ ಬೆಳಗಿಂದ ಸುಳ್ಳು ನಗೆ ನಕ್ಕು ನಕ್ಕು ಸುಸ್ತಾಗಿ ತಡ ರಾತ್ರಿ ಮನೆ ಸೇರೋ ಧಾವಂತದಲಿ ಗುಡು ಗುಡು ನಡೆಯೋ ಹುಡುಗ ಹುಡುಗೀರು, 
ನಡು ರಾತ್ರಿಯಲೂ ಇದೇ ಸಹಜ ಅನ್ನಿಸುವ ಎಷ್ಟೆಲ್ಲಾ ಗಜಿಬಿಜಿ...
ಮುಗಿದ ನಿನ್ನೆಗಳ ಗಾಯಗಳ ಕೆರೆಯುತ್ತಾ, ಸಿಗದ ನಾಳೆಗಳ ಹೊಲಿಯಲು ಹೆಣಗುತ್ತಾ, ಹಳಹಳಿಕೆಯಲಿ ಬದುಕನೇ ಹಳಿಯುತ್ತಾ, ಅಬಲಾಶೆಯ ಹಸಿವು ತೀರದೇ, ನಿದ್ದೆ ಬಾರದೇ - ನಗರ ಬೇಗ ಮಲಗುವುದಿಲ್ಲ, ಮಲಗುವುದೇ ಇಲ್ಲವೇನೋ... 
ಹೊಸ ರುಚಿಯ ಕಾಳಿನಾಸೆಗೆ ಪಂಜರಕೆ ಬಂದು ಬಣ್ಣದ ಮಾತು ಕಲಿತ ಗಿಳಿ...
ಕತ್ತಲು ಕಾಣದ ಪೇಟೆಯಲ್ಲಿ, ಗದ್ದಲವೇ ಮೈಗೂಡಿ, ಮಸಣಕೂ ಇರುಳ ಮೌನದ ಕಥೆ ಕೇಳಿದರೆ ಭಯವಾದೀತು...
ಮನೆಯಂಗಳದಿ ಗ್ರೀಷ್ಮದ ಬಾಗಿಲು ಇನ್ನೇನು ತೆಗೀತಾ ಇದೆ... 
ಹೊಂಗೆ ಹೂವಿನ ಹಾಸಿಗೆ ಹಾಸಿದ ಬೀದಿ - ಅದೇ ಅಷ್ಟಿಷ್ಟು ಬೆರಗು, ಭರವಸೆ... 
___ ಒಂದಿರುಳ ಬಣ್ಣಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment