Thursday, November 14, 2013

ಗೊಂಚಲು - ತೊಂಬತ್ನಾಕು.....

ನನ್ನ ಮನಸು.....

ಬೇಲಿಯ ಹಂಗಿಲ್ಲ - ಕಾವಲುಗಾರ ಬೇಕಿಲ್ಲ – ಕಾರಣ: ಕಾಯಬೇಕಾದದ್ದೇನೂ ಉಳಿದಿಲ್ಲ – ಫಸಲೆಲ್ಲ ಒಣಗಿಹೋದ ಖಾಲಿ ಖಾಲಿ  ಬಯಲು – ಅದು ನನ್ನ ಮನಸು...

ಹೊಸ ಕನಸೊಂದು ಕರೆ ಮಾಡಿ ಹಾಯ್ ಅನ್ನ ಬಂದರೆ – ಕರೆ ಸ್ವೀಕರಿಸಲು ಕಳಕೊಂಡ ಕನಸುಗಳ ನೆನಪು - ಮತ್ತೊಂದು ಕನಸನು ಆ ಸಾಲಿಗೆ ಸೇರಿಸಿ ಯಾದಿ ಬೆಳೆಸಿದಂತಾದೀತೆಂಬ ಭಯದ ಮಂಪರು – ಅದು ನನ್ನ ಮನಸು...

ನಿನ್ನೆ ಎಲ್ಲ ಇತ್ತು – ಇಂದೀಗ ಎಲ್ಲ ಶೂನ್ಯ – ನಾಳೆಗಳಲೂ ಶೂನ್ಯವೇ ಶಾಶ್ವತವಾದೀತೆಂಬ ಭಯದ; ಯಜಮಾನ ಅಳಿದ ಸಾವಿನ ಮನೆಯ ಹಗಲು – ಅದು ನನ್ನ ಮನಸು...

ನಾನೆಂಬ ನನ್ನಹಂಮ್ಮಿನ ಗುಂಗಲ್ಲಿ – ನಿನ್ನೆ ನಾಳೆಗಳ ಹಂಗಲ್ಲಿ – ಹಳಸಿದವುಗಳ, ಅಳಿದವುಗಳ - ನನ್ನೆಲ್ಲ ಒರಟುತನದಲ್ಲಿ ದಹಿಸಿಯೂ ಉಳಿಯಲು ಒದ್ದಾಡುವವುಗಳ ಲೆಕ್ಕಾಚಾರಗಳಲ್ಲಿ ನಿದ್ದೆ ಸತ್ತ ಇರುಳು – ಅದು ನನ್ನ ಮನಸು...

ಪ್ರೀತಿಯ ಉಣಿಸಲಾರದ – ಯಾರೋ ನನಗುಣಿಸಬಂದರೆ ಉಣ್ಣಲೂ ಬಾರದ ಉರುಟು ಬಂಡೆ – ಯಾರಿಗೂ ನೆರಳು ಕೂಡ ಆಗದ ಜಾಲಿ ಮರ – ಅದು ನನ್ನ ಮನಸು...

ಜೀವಂತಿಕೆ ಇಲ್ಲದ – ಒಣ ಮಾತುಗಳಲ್ಲಿ ನಗುವಿನ ಕಾರಣ ಹುಡುಕುತ್ತಾ; ಮೂಲ ಖುಷಿಯ ಭಾವವನೇ ಕೊಲ್ಲುವ – ಶವ ಪರೀಕ್ಷಕ ಅಥವಾ ಹೆಣದ ಮನೆಯ ಒಡೆಯನ ನಿರ್ಭಾವುಕತೆ – ಅದು ನನ್ನ ಮನಸು...

9 comments:

  1. ನಿರ್ಭಾವುಕ ಮನಸ್ಸು ಬೆಳೆಸಿಕೊಳ್ಳುವುದು ಕೂಡಾ ಸಾಧನೆಯ ಒಂದು ಅಂಶ...
    ಮನಸ್ಸು ನಿರ್ಭಾವುಕವಾಯಿತು ಅಂತಾದರೆ ಅದು ಬಿಳಿ ಹಾಳೆ ಅಂತಾಯಿತು...

    ಅದರಲ್ಲಿ ನಾವು ನಮಗೆ ಬೇಕಾಗಿದ್ದನ್ನ ಗೀಚಿಕೊಂಡರಾಯಿತು.....
    ಸಂತಸವನ್ನೇ ಗೀಚಿಕೊಳ್ಳೊಣ ಬಿಡು...
    ಚಂದದ ಬರಹ....

    ReplyDelete
  2. ನಿರ್ಭಾವುಕ ಮನಸ್ಸನ್ನು ಭಾವಗಳಲ್ಲಿ ಕೂಡಿ ಹಾಕೋ ಪ್ರಯತ್ನವಾ ???

    ReplyDelete
  3. ಈ ದ್ವಂದ್ವಗಳ ನಡುವೆಯೇ ಏನೋ ಹೀಗೊಂದಿಷ್ಟು ಖಾಲಿ ಬೆಳಗು ಈ ಮನದ ಆತ್ಮೀಯರನ್ನ ದಿನವೂ ಸ್ವಾಗತಿಸುತ್ತಿರೋದು :(
    ಈ ಮನ ಕಳೆದು ಅಲ್ಲೊಂದಿಷ್ಟು ಜೀವ ಸೆಲೆ ಚಿಮ್ಮಲಿ ...
    ಪ್ರೀತಿಯಾದೀತು ಪ್ರೀತಿಸೋ ಮನಗಳಿಗೂ :)
    ಮನ ಮುಟ್ಟಿತು ಭಾವ ಬರಹ

    ReplyDelete
  4. ಬೇಸಿಗೆಯಲ್ಲಿ ಎಲ್ಲಾ ಒಣಗಿದಂತಿದ್ದರೂ ಒಂದು ಹನಿ ಮಳೆ ಬಿದ್ದಂತೆ ಎಲ್ಲಾ ಹಸಿರೋ ಹಸಿರು... ಹಳದಿ ಹಸಿರುಗಳೆಲ್ಲಾ ಕಾಲಾಂತರದ ರೂಪಾಂತರಗಳಲ್ಲವೇ ವತ್ಸಣ್ಣ.. ಏನೂ ಇಲ್ಲವೆಂದರೂ ಅಲ್ಲಿ ಏನೋ ಇದ್ದೇ ಇರುತ್ತೆ ;-)

    ReplyDelete
  5. ಒಂದು ಒಳ್ಳೆಯ ಬರಹ....

    ReplyDelete