Tuesday, April 3, 2018

ಗೊಂಚಲು - ಎರಡ್ನೂರೈವತ್ಮೂರು.....

ಒಂದಿಷ್ಟು ಪಿರಿ ಪಿರಿ..... 

ಹುಟ್ಟು ಕರುಣಿಸಿದ ಕನಸಿನ ಕಿರು ಹಾದಿಯ ಎದೆಯ ಗೂಡನ್ನೇ ಮುರಿದು ಮುಕ್ಕಿದ ಸಾವಿನ ನೆರಳ ಮೋಸವನ್ನೇ ನಗೆಯ ಹಸಿವಿಗೆ ಆಹುತಿ ಕೊಟ್ಟು ಬದುಕ ಕಟ್ಟಿಕೊಂಡು ಎದ್ದು ನಿಂತವರೂ; ತನ್ನಂಥದ್ದೇ ಹುಟ್ಟು ಸಾವಿನ ಭಾವ ದೌರ್ಬಲ್ಯಗಳ ಸಾಟಿ ಮನುಷ್ಯರ ಸ್ವೀಯ ಕೇಂದ್ರಿತ ಕಣ್ಣಾ ಮುಚ್ಚಾಲೆಯನ್ನೋ - ಸ್ವಂತ ಸ್ವಂತ ಅಂದು, ಸ್ವಂತ ಸ್ವಂತ ಅನ್ನಿಸಿ ಸ್ವಂತವಾಗಲಾರದವರ ಬಣ್ಣ ಬಣ್ಣದ ಹೆಸರಿನ ನಿರ್ಲಕ್ಷ್ಯವನ್ನೋ ಸೋಟೆ ತಿವಿದು ಗೆಲ್ಲಲಾರದೇ ನರಳುವುದು ಮನಸಿನ ಯಾವ ಮಾಯೆಯೋ ಕಾಣೆ...
ಈ ಮನಸೆಂಬೋ ಮರ್ಕಟದ ಪ್ರೀತಿ ಪಡೆವ ಹಪಹಪಿಗೆ ತಮ್ಮ ನಿನ್ನೆ ನಾಳೆಗಳ ಒಳಮನೆಯ ರಾಗಗಳ ಕಲೆಸಿಕೊಂಡು ಕರುಬದ ಘಾಟಿ ಮನಸನೊಂದಾದರೂ ನಾ ಕಾಣೆ...
ಸೂರ್ಯನೆದುರು ಎದೆ ಸೆಟೆಸಿ ಬೆವರಾಗಬಲ್ಲವನೂ ಚಂದಿರನ ಸನ್ನಿಧಿಗೆ ಕಣ್ಣ ಹೊಳೆ ಹರಿಸುವುದು ಯಾವ ಭಾವ ವಿಪ್ಲವವೋ ನಾನಿನಿತು ಕಾಣೆ...
#ನಾನು...
↺↻↸↺↻

ಮೌನವ ಕಡೆದರೆ ಮೌನವೇ ಹುಟ್ಟಿ ನನ್ನದೇ ಮನೆಗೆ ನಾನು ನೆಂಟನಾದಂತೆ ಭಾಸ - ವಿನಾಕಾರಣ ಪ್ರೀತಿ ತೋರಿ ಜೊತೆ ನಡೆದ ಪರಮಾಪ್ತ ಹೆಗಲೊಂದು ಅಕಾರಣ ತಲೆ ಕೊಡವಿ ಮೌನ ಸಾಕ್ಷಿಯಾಗಿ ಅಪರಿಚಿತ ನಗೆ ಬೀರಿದಾಗ...
ಹಗಲಿಗಾದರೆ ನೆರಳ ಸಾಂಗತ್ಯವಾದರೂ ಇದೆ - ಇರುಳಿಗ್ಯಾರ ಕೂಗಲಿ...?
#ನಾನು...
#ಖಾಲಿ_ಮಡಿಲು...
↺↻↸↺↻

ಸಾಯುವವರೆಗೆ ಸಾವನ್ನು ಜೀವಿಸುವುದಕ್ಕೆ ಬದುಕು ಎನ್ನಬಹುದೇನೋ...
#ಕನಸಿಲ್ಲದ_ಹಾದಿ●●●
↺↻↸↺↻

ಹಗ್ಗ ಹರಿಯೋವರೆಗೂ ಇರೋ ಎಳೆದಾಡೋ ಸೊಕ್ಕು ಅಥವಾ ಉಮೇದು ಒಮ್ಮೆ ಹಗ್ಗ ಹರೀತಾ ಇದ್ದಂಗೇ ಭಯವಾಗಿಯೋ, ತಳಮಳದ ಸುಸ್ತಾಗಿಯೋ ಮಾರ್ಪಡತ್ತೆ - ಇದ್ದ, ಇಲ್ಲದ ಅಂಟನ್ನೆಲ್ಲ ಮೆತ್ತಿ ಮತ್ತೆ ಕೂಡಿಸೋ ಹೆಣಗಾಟಕ್ಕೆ ಬೀಳ್ತೀವಿ - ಆದ್ರೆ ಎಲ್ಲ ಸರಿ ಹೋಗೋಕೆ ಕಾಲ ಅಂಬೋದು ನಮ್ಮ ಮಾತು ಕೇಳೋ ಕೂಲಿಯಲ್ಲವಲ್ಲ...
ಅಂತೂ ಇಂತೂ ಕೂಡಿಸಿಯೇ ಬಿಟ್ಟರೂ ಆಳದಲ್ಲಿ ಉಳಿದುಕೊಳ್ಳೋ ಕಸರೇ ಮುಂದೆಂದೋ ಹೊಸ ಬೆಂಕಿಗೆ ಹಳೆ ತುಪ್ಪವಾದೀತು...
#ಬಂಧ_ಸಂಬಂಧ...
↺↻↸↺↻

ಕರುಳ ಬೇನೆಯ ಬೇಗುದಿಯ ಕೂಗಿಗೆ ಹೆಗಲಾಗಲಾರದ ಕಿವುಡ ನಾನು - ಹೂವರಳೋ ಸದ್ದಿನ ಕವಿತೆ ಬರೆದೆ...
#ಸಾವಿನ_ಓಂಕಾರ...
↺↻↸↺↻

....... ಬಂದ ಹಾದಿಯಲಿ ಎನ್ನ ಗುರುತುಗಳುಳಿದಿಲ್ಲ - ಹೊರಟ ಹಾದಿಯ ಗುರುತು ಎನಗಿನಿತೂ ಇಲ್ಲ............ ನೀರ ಗುಳ್ಳೆಯ ಮೇಲೆ ನಿದ್ದೆ ಮರುಳಿನ ನಡಿಗೆ - ಈ ಘಳಿಗೆ....... ಸಾವಿಗೂ ನಿದ್ದೆ ಸಾಕ್ಷಿಯಾದರೆಷ್ಟು ಚೆನ್ನ....... ಅಲ್ಲಾಗ ಕಪ್ಪು ಕನಸೊಂದು ಮುತ್ತಾಗುತಿದ್ದರೆ ಅದಿನ್ನೂ ಚಂದ.......

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment