Wednesday, April 4, 2018

ಗೊಂಚಲು - ಎರಡ್ನೂರೈವತ್ನಾಕು.....

ಉಗಾದಿ.....

ಮೋಡದ ಮೆಲು ಮುದ್ದಿಗೆ ಭುವಿ ಹೆಣ್ಣಾದ ಸುದ್ದಿ - ಮಣ್ಣ ಘಮದಲ್ಲಿ...
ಭಂಡ ಗಾಳಿಯ ಬೈಯ್ಯಬೇಕಿದೆ - ನಿನ್ನ ತುಂಬಿಕೊಳ್ಳೋ ನನ್ನ ಕಣ್ಣಲ್ಲಿ ಧೂಳಕಣ...
ನಿನ್ನ ಉಂಗುರ ಬೆರಳ ಬಿಸುಪಿನ ತುಂಟ ಕರೆಯ ಹಾಗಿದೆ - ಹೆಗಲ ಮೇಲೆ ಮೊದಲ ಮಳೆ ಹನಿ...
ಇಂತೀಗ -
ಇರುಳಿಗೂ ಮೂರು ಘಳಿಗೆ ಮುಂಚೆಯೇ ಹರೆಯದ ಹಸಿ ಉಸಿರು ನಾಭಿ ತಿರುವಿನಲಿ ಹಾದಿ ತಪ್ಪಿದೆ...
ನೀನಿಲ್ಲಿ ಈ ಹೊತ್ತು ಕರೆಯದೇ ಬರಬಾರದೇ; ಕಳ್ಳ ನಗೆಯ ಹೊತ್ತು - ಈ ಮಳೆಯ ಹಾಗೆ, ಆ ನೆನಪ ಹಾಗೆ...
#ಮಳೆಯ_ಹಾದಿಯಲಿ_ಒದ್ದೊದ್ದೆ_ನಿನ್ನ_ಹೆಜ್ಜೆ_ಗುರುತು...
⤼⤸⤻⥀⤺⤹⤽

ಒಂದೇ ಶಬ್ದದಲ್ಲಿ ಹೇಳಿ ಮುಗಿಸಲು ಭಾವಗಳೇನು ಬುದ್ಧಿಯ ಕಸರತ್ತೇ...?!
#ನಾನು...
⤼⤸⤻⥀⤺⤹⤽

ಕಣ್ಣು ಸಿಡಿಯುವ ಬೆಳಕು - ಕೊರಳ ಬಿಗಿಯುವ ಕತ್ತಲು...
ಕನಸ ಸಾಂಗತ್ಯವಿಲ್ಲದ ಹಾದಿಗೆ ನಗೆಯ ನೆನಪೂ ಕೂಡಾ ಕರುಳ ಮುಳ್ಳು...
ಮಳೆಯ ಬಯಸಿ ರೆಕ್ಕೆ ಕಟ್ಟಿಕೊಂಡ ಗೆದ್ದಲಿಗೆ ದೀಪದ ಬುಡವೇ ಮಸಣ...
ತುಂಡು ಬಾಲದ ನೃತ್ಯಕ್ಕೆ ಮರುಳಾದ ಬೆಕ್ಕಿಗೆ ಹಲ್ಲಿ ಸದಾ ಹುಳಿ ದ್ರಾಕ್ಷಿ...
ನಡು ಕಾಡಲ್ಲಿ ಚಿತ್ತ ಸೋತು ಹಾದಿ ತಪ್ಪಿದರೆ 'ದಾಟು ಬಳ್ಳಿ'ಯ ಮೇಲೆ ನೆಪದ ಆರೋಪ...
#ನನ್ನ_ಹಾದಿ...
         ***ಒಟ್ಟಿಗೇ ಕೂತ ಬೇರೇ ಬೇರೆ ಸಾಲುಗಳು; ಅರ್ಥ ಮಾತ್ರ ಕೇಳ ಬೇಡಿ...
⤼⤸⤻⥀⤺⤹⤽

ಅಮ್ಮ ಗುಮ್ಮನ ಕರೆಯುತ್ತಾಳೆ - ಕಂದ ಮಡಿಲ ಬಳಸಲೆಂಬಾಸೆಗೆ...
#ಹೆಣ್ಣು...
⤼⤸⤻⥀⤺⤹⤽

ನಿನ್ನನ್ನು ನೀನು ನೀನಾಗಿ ಜೀವಿಸು - ಹೆಜ್ಜೆಯ ಅಪರಿಚಿತತೆಯನ್ನೂ ನಗುವಾಗಿ ಆವಾಹಿಸು...
ದಿನವೆಲ್ಲ ನಿನ್ನದೇ - ಪ್ರತಿ ದಿನವೂ ನಿನ್ನದೇ...
#ಒಳ_ಮನೆಯ_ಬೆಳಕು...
⤼⤸⤻⥀⤺⤹⤽

ನಾನು ಸಣ್ಣವನಿದ್ದಾಗ ತುಂಬಾ ಚಿಕ್ಕೋನಿದ್ದೆ ಮತ್ತು ದೊಡ್ಡವನಾದಮೇಲೆ ಇನ್ನೂ ಚಿಕ್ಕವನಾದೆ...
#ಕಥೆ...
⤼⤸⤻⥀⤺⤹⤽

ಬೆಂಕಿಯೂರಿನ ಮೌನಕ್ಕೆ ಮಾತಿನ ಹುಳಿ ಬೆಣ್ಣೆ ಮಾರಲು ಹೊಂಟವನಿಗೂ ಹಗಲಿನುರಿಗೆ ನೆತ್ತಿಯ ಅಡವಿಡುವುದೇನೂ ಕಷ್ಟವಲ್ಲ - ಈ ಇರುಳಿನದೇ ಸಮಸ್ಯೆ; ಶವದ ಮನೆಯಂತೆ ತಣ್ಣಗೆ ಕೊರೆವ ಬೆಳದಿಂಗಳ ಸಂಭಾಳಿಸುವುದು ಸುಲಭವಲ್ಲ...
#ತರಹೇವಾರಿ_ಹಸಿವಿನ_ಹಾದಿ...
#ದಿಕ್ಕೆಟ್ಟ_ಬದುಕ_ವ್ಯಾಪಾರಿ...
⤼⤸⤻⥀⤺⤹⤽

ಎಂಥಾ ಜಡಿಮಳೆಯೂ ಎದೆಯುರಿಗೆ ತಂಪೀಯಲಾರದು ಒಮ್ಮೊಮ್ಮೆ - ನೀರು ಸೋಕಿದರೆ ಗಾಯ ಮತ್ತೆ ಹಸಿಯಾಗಿ ಕೀವು - ಅಸಹನೀಯ.......
ಸಾಯದೇ ಸ್ವರ್ಗ ಸಿಗದಂತೆ(!?)........
#ಕರುಳ_ಹಾದಿಯ_ಬಿಕ್ಕಳಿಕೆ...
⤼⤸⤻⥀⤺⤹⤽

ಹೌದು - ಗೆದ್ದ ತೋಳು ನನ್ನದೇ...
ಗೊತ್ತಾ - ಗೆಲ್ಲುವ ಬಲ ತುಂಬಿದ ಒಲುಮೆ ನಿನ್ನದು...
ನೇಗಿಲ ಮೊನೆಗೊ ನೆಲದ ಎದೆಗೂ ಬೀಜ, ಬೆವರು ಪೈರಾಗುವ ನಂಟು...
ತೇಲುವ ದೋಣಿ ತಾ ಸೇರುವ ದಡದ ದಿಕ್ಕು ಅಂಬಿಗನ ಉಸಿರಲ್ಲವೇ...
ನನ್ನ ಹಾದಿಗೆ ನಿನ್ನ ಹೆಸರಿಟ್ಟಲ್ಲಿ ಗೆಲುವು ಒಲುಮೆಯದಲ್ಲವೇ...
'ನೀನು' 'ನಾನು' ಮರೆತು ಬೆರೆತ ಬದುಕು - ಬಯಲಿಗೆ ಬಿದ್ದ ಬೆಳಕು...
#ಉಗಾದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment