Thursday, June 26, 2025

ಗೊಂಚಲು - ನಾಕ್ನೂರರ್ವತ್ತೊಂದು.....

ಬೆಳಗೆಂಬ ಕಾವ್ಯ ಕುಸುರಿ... 🪻🦋

'ಬೆಳಕು' ಅಮ್ಮನಂತೆ...
'ಅಮ್ಮ' ಬೆಳಕಿನಂತೆ...
ಅವಳ ಸಣ್ಣ ನೆನಪೂ ಶುಭ ನುಡಿವ ಬೆಳಕಿನ ನೂರು ಕಿಡಿಗಳಂತೆ...
'ಬೆಳಗು' ಅಮ್ಮನಂತೆ... ಶುಭದಿನ... 🤱💞

ನವಿಲ್ಗರಿಯ ತೀಡಿದ ಬೆರಳೇ ಸುದರ್ಶನವ ಆಡಿಸಿತು - ಪ್ರೀತಿ ಮತ್ತು ಶಾಂತಿಯ ನಗುವ ಕಾಯಲು...
ಕೊಳಲು ಮತ್ತು ಪಾಂಚಜನ್ಯ ಪರಮಾಪ್ತ ಗೆಳೆಯರು - ಪ್ರೀತಿಯ ಯಜಮಾನ್ಯದಲಿ...
ಶುಭವೇ ನಿರೀಕ್ಷೆ - ಶುಭವೊಂದೇ ಹಾರೈಕೆ...
 ಶುಭದಿನ... 🤝🫂

ಎಂಥಾ ಅಕಾಲ ಮಳೆಯ ಹೊಡೆತಕ್ಕೆ ಕೂಡಾ ನೆನಪುಗಳು ತೊಳೆದೋದ ದಾಖಲೆ ಇಲ್ಲ ನೋಡು...
ಪ್ರತಿ ಬೆಳಗಿನ ನಿದ್ದೆಗಣ್ಣನುಜ್ಜುವ ನಿನ್ನ ನೆನಪಿನ ಹೊಳಪಷ್ಟೇ ನನ್ನ ಅನುಗಾಲದ ಆಸ್ತಿ...
ನೆನಹುಗಳಲಿ ಕಳೆದು ಹೋಗುತ್ತೇನೆ ಮತ್ತು ನೆನಹುಗಳಿಂದಲೇ ನನಗೆ ನಾನಿಷ್ಟು ಉಳಿದುಕೊಂಡಿದ್ದೇನೆ...
ನೆನಪಿನೌತಣ ಬೆಳಗು...
ಶುಭದಿನ... 🤝🫂

ಪ್ರೀತಿ ಪರಿಭ್ರಮಣದಲಿ ಯೆದೆಯಿಂದ ಹರಿವ ಕಾರುಣ್ಯದ ಬೆವರು - ಬೆಳಕು...
ಬೆಳಗಾಯಿತು - ಪ್ರೀತಿ ಹೊಳೆಯಾಗಲಿ...
ಶುಭದಿನ... 🤝🫂

ಈ ರುದಯ ಕಮಂಡಲದಿಂದ ಆ ಯೆದೆಯ ಬೊಗಸೆಗೆ ಬಿದ್ದ ಹನಿ ಹನಿ ಪ್ರೀತಿಯೂ ಅಕ್ಷಯವಾಗಿ ಎರಡೆರಡು ಬದುಕ ಬಳ್ಳದ ತುಂಬಾ ನಗೆಯ ನಗ ನಾಣ್ಯ...
ಬೆಳಗೆಂದರೂ, ಬೆಳಕೆಂದರೂ ಧಾರೆ ಧಾರೆ ಅಲೆ ಅಲೆ ಪ್ರೀತಿ ಅಕ್ಷಯಾಂಬುಧಿ...
ಶುಭದಿನ... 🤝🫂🍬

ಯಾವುದೋ ಧ್ಯಾನದ ನಡುವೆ ಅಲೆವಾಗ ಛಕ್ಕನೆ ತನ್ನೆಡೆ ಸೆಳೆದು ಬಿಡುವ ಒದು ನೆನಪು, ಅದು ತನ್ನೊಡನೆ ಹೊತ್ತು ತರುವ ಮಂದಹಾಸ; ಶುಭವೆಂದರೆ ನಿನ್ನ ನೆನಪಿನೊಂದಿಗೆ ತೇಲಿ ಬರುವ ಹಾಯೀಭಾವ...
ನೀನಲ್ಲಿ ಮೈಮುರಿದು ನಕ್ಕಂತಿದೆ - ನನ್ನ ಬೆಳಗಿನ ಶುಭಾರಂಭ...
ಶುಭದಿನ... 🤝🫂

ಆಲಸ್ಯದ ಸೊಂಟ ತಿವಿದು, ವಿಲಾಸದ ಆರಾಮವು ಮೂಗುಮುರಿವಂತೆ ಮಾಡಿ, ಮನೆ ತುಂಬಾ ಹಬ್ಬಿ ಹರಡಿ ಹಗಣವೆಬ್ಬಿಸೋ ಕೋಳಿ ನಿದ್ದೆಯ ತುಂಟ ಮಗುವಿನಂತ ರಜಾ ದಿನದ ಹಗಲು...
ಶುಭದಿನ ಮೈಮುರಿಯುವುದೂ ಹಾಗೇ... 🤝🫂

ಮೈಮುರಿದು ಕಣ್ತೆರೆದೆ - ನಿನ್ನೆಯ ನೆನಪೋ, ನಾಳಿನ ಕನಸೋ, ಹಣೆಯ ಮುದ್ದಿಸಿ ಇಂದಿನೀ ಎಚ್ಚರದಲಿ ಯೆದೆಬಾಗಿಲ ರಂಗೋಲಿಯಲಿ ನಿನ್ನ ಹೆಸರು...
ನಗೆಯರಳಿ ಬೆಳಗಾಯಿತು...
ಶುಭದಿನ... 🤝🫂

ಬೆಳಕಿಗಾಗಿ ಕಾಯುವುದೆಂದರೂ, ಬೆಳಕಿಗೆ ಎದೆ ತೆರೆಯುವುದೆಂದರೂ, ಬೆಳಕನು ಹಾಯುವುದೆಂದರೂ, ಒಟ್ನಲ್ಲಿ ಬೆಳಕಿನ ಆಜೂಬಾಜು ಸುಳಿವ ಭಾವಾನುಭಾವಗಳೆಲ್ಲ ಶುಭದ ಕನವರಿಕೆಗಳೇ...
ಬೆಳಗು - ಶುಭದ ಅನುವಾದವಾಗಲಿ...
ಶುಭದಿನ... 🤝🫂

ನಿನ್ನ ನಗುವನ್ನು, ಮೈಮುರಿದೇಳುವ ನಗೆ ಬಿಂಬದಾ ಚೆಲುವನ್ನು ಕಣ್ತುಂಬಾ ಕುಡಿದು, ಮಧುರ ಪಾಪದ ನಶೆಯಲ್ಲಿ ತೇಲುವ ಎನ್ನೆದೆಯ ಕನಸಿಗೆ ಬೆಳಕು ನಿತ್ಯವೂ ಪ್ರೀತಿ ಸುರಿಯುವುದು - ಮತ್ತೆ ಬೆಳಗಾಗುವುದು...
ನಗೆಯ ತಬ್ಬಿ, ನಗೆಯೇ ಆಗಿ ಬೆಳಕ ಎದೆಗೆಳೆದುಕೊಂಡು ಶುಭವ ಸಂಭ್ರಮಿಸುವ ಅಮೃತ ಘಳಿಗೆ - ಬೆಳಗೆಂದರೆ...
ಶುಭದಿನ... 💞🤝🫂

ಪ್ರಶ್ನೆಯೂ ಬೆಳಕೇ
ಬೆಳಕೇ ಉತ್ತರ...
ಬೆಳಕ ಪ್ರೀತಿಯನುಂಡು ಪ್ರೀತಿ ಬೆಳಕಿನೆಡೆಗೆ ಮುನ್ನುಡಿಯ ಬರೆವ ಬೆಳಗು...
ಶುಭದಿನ... 🤝🫂

ಕತ್ತಲೆಂಬ ಸತ್ಯಕಿಷ್ಟು ಪ್ರೀತಿ ಸ್ಪರ್ಷವಾಯಿತು
ಬೆಳಕು ತನ್ನ ಸತ್ಯವ ತೋರಿತು ಬೆಳಗಾಯಿತು - ಎಲ್ಲಾ ಬೆಳಕಾಯಿತು...
ಶುಭದಿನ... 🤝🫂

ಹೂವು ಮೈನೆರೆದು ಗಂಧವ ಸೂಸಿ, ದುಂಬಿ ಮೈಮುರಿದು ಗುಂಜಾರವ ಮಾಡಿ,
ಬೆಳಕು ಇಟ್ಟ ಮುಹೂರ್ತದಲಿ ಬನದ ಬೇಲಿಯಲೂ ಪ್ರೀತಿ ಸಂಕಲನ...
ಬೆಳಗರಳಿತು...
ಶುಭದಿನ... 🪻🦋🤝🫂

ಎಷ್ಟೊಂದು ಗೆಲುವಿನ ಭರವಸೆಯ ಹೊತ್ತು ಮೈದೋರುತ್ತದೆ ಒಂದು ಬೆಳಕಿನ ಕಿರಣ...
ಬೆಳಗಾಗುವುದೆಂದರೆ ಬೆಳಕಾಗುವುದು - ಬೆಳಕಾಗುವುದೆಂದರೆ ಹೊಸತಾಗಿ ಗೆಲುವಿಗಾಗಿ, ಗೆದ್ದ, ಗೆಲ್ಲುವ ನಗುವ ಸಂಭ್ರಮಕಾಗಿ ವಿಶ್ವಾಸದ ವಿಧೇಯತೆಯಲಿ ಸಜ್ಜಾಗುವುದು...
ಶುಭದಿನ... 🤝🫂

ಹುಡುಕಿ ಬರುವ ಬೆಳಕ ಕಿಡಿ (ನೀನು)
ಕಾದು ಕುಳಿತ ನಗೆಯ ಹುಡಿ (ನಾನು) ಒಂದನೊಂದು ಹೆಗಲು ತಬ್ಬಿ ಪ್ರೀತಿಯನು ಸಂಭ್ರಮಿಸುವಾಗ ಬದುಕು ಮುಗಿಲಿಗೆ ಮೋರೆ ಮಾಡಿ ಅಭಿವಾದನ ಹೇಳುತ್ತದೆ...
ಬೆಳಗೆಂದರೆ ಸ್ನೇಹಮಯೀ ಧನ್ಯತೆ...
ಶುಭದಿನ... 🤝🫂

ಒಂದು ಪ್ರಚ್ಛನ್ನ ನಗುವಿನ ಮನಸ್ವೀ ಪ್ರಾರ್ಥನೆಯ ಬೆಳಗು...
ಶುಭದಿನ... 🍫🪻

ಬೆಳಕೇ,
ಎದೆಗಿಳಿದು ಬೆಳಕ ತೋರು...
ಪ್ರೀತಿ ಪ್ರಾರ್ಥನೆ ಬೆಳಗು...
ಶುಭದಿನ... 🤝🫂

ಪ್ರೀತಿಸುವುದಾದರೆ ಬೆಳಕನ್ನೇ ಪ್ರೀತಿಸೂ ಅಂದೆ...
ಬೆಳಕೆಂದರೇ ಪ್ರೀತಿ, ಪ್ರೀತಿ ಅಂದರದೂ ಬೆಳಕೇ ಅಂತಂದು ನಕ್ಕಿತು ಬೆಳಗು...
ಶುಭದಿನ... 🫂🤝

ಒಂದು ಕನಸಿನ ಕಿಡಿಯು ಒಂದು ನೆನಪಿನ ಛಡಿಯ ಹಿಡಿದು ಅಲೆಮಾರಿ ನಗೆಯ ಹುಡುಕುತ್ತ ದಿನದ ಬೀದಿಯ ಜಾಲಾಡಲು ಹೊರಟಂತಿದೆ...
ದಾರಿಯಲಿಷ್ಟು ಪ್ರೀತಿ ಪಲುಕು ಸಿಕ್ಕರೆ ಯೆದೆಗಣ್ಣು ಬೆಳಕ ಮೀಯಬಹುದು...
ಶುಭದಿನ... 🤝🫂

ನನಗೆ ನನ್ನ ತೋರುವ ನಿನ್ನ ಅರಳು ಕಂಗಳ ಬೆಳಕಿಗೆ
ನಿನ್ನ ನಗೆ ಸೊಬಗನೆನ್ನ ಕಣ್ಣಲಿ ತುಳುಕಿಸುವ ಕನ್ನಡಿ ಬೆಳಗಿಗೆ ಪ್ರೀತಿ ಕರಗಳ ವಂದನೆ...
ಬೆಳಕಿಗೆ ವಂದನೆ - ಬೆಳಗಿಗೆ ವಂದನೆ...
ಶುಭದಿನ... 🤝🫂

ಯಾರೋ ಬರೆದ ಕವಿತೆ ಸಾಲೊಂದು ಎದೆಗಿಳಿದು ನನ್ನದೇ ಆಗಿ ನೂರು ಭಾವಗಳ ಹಡೆದಂತೆ ಬೆಳಗು ಬೆಳಕನ್ನು ಮಡಿಲಿಗೆ ಸುರಿದು ಕಣ್ಣು ಬಣ್ಣಾ ಬಣ್ಣಗಳ ಬೆರಗನ್ನು ಮೀಯುತ್ತದೆ...
ಶುಭದಿನ... 😍

ಬೆಳಕೇ -
ಯೆದೆಯ ಕತ್ತಲಲ್ಲಿ ಕಳೆದು ಹೋದ ಪ್ರೀತಿ ಸೂಜಿಯ ಎತ್ತಿಕೊಡು, ಬದುಕಿಂಗೊಂದು ಬೆಚ್ಚನೆ ನಗೆ ಕೌದಿಯ ಹೊಲಿದುಕೊಳ್ಳುತ್ತೇನೆ...
ಬೆಳಗೇ - ನನಗೆ ನನ್ನ ಹುಡುಕಿಕೊಡು, ಬೆಳಕೇ ಆಗಿ ಕರಗುತ್ತೇನೆ...
ಶುಭದಿನ... 🤝🫂

ಬೆಳಕಿನ ಮೃದು ಸ್ಪರ್ಷಕೆ
ಹೂವು ಮೈನೆರೆದು ನಗುವಾಗ ಗಾಳಿ ಪ್ರೇಮ ಗಂಧವ ಹೆಗಲಮೇಲೆ ಹೊತ್ತು ಊರೆಲ್ಲ ಉಣಿಸುತ್ತದೆ - ನಾನು ಹೂದೋಟದ ಬೇಲಿಯಲಿನ ಚಿಟ್ಟೆಯ ಮೈದಡವಿ ಪ್ರಣಯದ ಹುಡಿ ಮೆತ್ತಿಕೊಳ್ಳುತ್ತೇನೆ...
ಮುಂಬೆಳಗಿನ ನಿನ್ನ ಕನಸಿಗೆ ನಾನರಳಿದ ಉಸಿರ ಹಾಡನು ಊರು ಕೇಳದ ಹಾಗೆ ನನ್ನ ನಲಿವಿಗೆ ನೂರು ಕಥೆ ಕಟ್ಟುತ್ತೇನೆ...
ನೀನೂ ಹಿಂಗೇನಾ...!?
ಶುಭದಿನ... 🪻🦋🫂

ಬೆಳಕಿನ ನುಡಿಸಾಣಿಕೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment