Thursday, June 26, 2025

ಗೊಂಚಲು - ನಾಕ್ನೂರರ್ವತ್ತೆರ್ಡು.....

ದಿನವೆಂಬ ಕಾವ್ಯ ಸಂಪುಟದ ಚಂದ ಮುನ್ನುಡಿ - ಬೆಳಗು.....

ನೇಹವೇ -

ಬೆಳಕಿಗೆ ನಿನ್ನ ಹೆಸರಿಟ್ಟೆ - ಪ್ರೀತಿ ಎದೆಯ ತುಂಬಿತು...

ಪ್ರೀತಿಗೆ ಇನಿತು ಉಸಿರ ಕೊಟ್ಟೆ - ಬದುಕೇ ನಗೆಯ ಬೆಳಕಾಯಿತು...

ಬೆಳಗೆಂದರೆನಗೀಗ ನನ್ನ ನಗುವ ಸಲಹುವ ನಿನ್ನ ಪ್ರೀತಿ ಮಡಿಲು...

ಕಲ್ಲೆದೆಯೂ ಹೂವ ಬೇರನು ಕಾಯುವ ದೀಪಕರಾಗ ಬೆಳಗು...

ಶುಭದಿನ... 🤝🫂

ಸುಮ್ಮನೆ ಧಾರೆ ಸುರಿವ ಬೆಳಕು 

ಒಲಿದು ಒಳಮನೆಗೂ ಬರಬೇಕು 

ಹಾಗಂತ ಬಯಸಿದರೆ

ಯೆದೆಯ ಬಾಗಿಲನು ನಾನೇ ತೆರೆದಿಟ್ಟು ಕಾಯಬೇಕು...

ಬೆಳಕೇ ಆಗಲು 

ಬೆಳಕಿನೆದುರು ಬಯಲಾಗಬೇಕು / ಬಯಲೇ ಆಗಬೇಕು...

ಪ್ರೀತಿಯಾ ರೀತಿಯೇ ಬೆಳಗು... 

ಶುಭದಿನ...🤝🫂

ಬೆಳಕಿನ ಕಿರು ಸ್ಪರ್ಷಕೆ

ಪ್ರೀತಿಯ ಹೂ ಅರಳಿ

ಗಾಳಿಯ ರಥವೇರಿ ಘಮವು

ಬಯಲಿಗೆ ಸ್ವಂತವಾಯಿತು / ಸ್ವತಂತ್ರವಾಯಿತು..‌.

ಬೆಳಗಾಯಿತು...

ಶುಭದಿನ... 🪻🦋

ಪ್ರತಿ ಹಗಲಿಗೂ ಹೂವಿಂದ ಹುಳದವರೆಗೂ ಒಂದು ಹೊಸ ಸಂಭ್ರಮ, ಉತ್ಸವದ ಉಲ್ಲಾಸದ ಗಡಿಬಿಡಿ...

ಪ್ರಕೃತಿಯ ಸುಧಾರಿತ ತಳಿ ನಾನು, ಒಂದು ಸಣ್ಣ ನಗುವ ದುಡಿದುಕೊಳ್ಳಲು ನನ್ನಲ್ಲಿ ಯಾಪರಿ ಮಿಜಿಮಿಜಿಯ ಹಡಾಹುಡಿ...

ಸಹಜತೆಯ ಬದುಕಲರಿಯದವನ ಶ್ರೇಷ್ಠತೆಯ ಪೊಕ್ಕು ಅಮಲು ಎಷ್ಟೊಂದು ದುಬಾರಿ...

ಅರಿವು - ಬೆಳಗು... 🤝🫂

ಹೂವಿನೆದೆಯಲೀ, ದುಂಬಿ ತುಟಿಯಲೀ ನಿಸರ್ಗ ಕಟ್ಟಿದ ಪ್ರೇಮದ ಗೂಡನು ಬೆಳಗು ಬೆಳಕನೂಡಿ ಕಾಯುತ್ತದೆ...

ಒಂದು ನಗು ನೂರಾಗಿ ಹರಡುವ ಕಾಡು ಕಾವ್ಯಕ್ಕೆ ಬೆಳಕು ಸಾರಥಿಯಾಗುತ್ತದೆ...

ಬೆಳಗೆಂಬೋ ಕನಸ ಹಸಿವಿನ ಹಾಡು...

ಶುಭದಿನ... 🤝🫂

ಪಾಪ!! 

ಅಲ್ಯಾರಿಗೂ ವಾರದ ರಜೆಯೂ ಇಲ್ಲ...

ಅಥವಾ

ರಜೆಯಿಲ್ಲದ ಬೇಸರವೂ ಗೊತ್ತಿದ್ದಂತಿಲ್ಲ - ಮಜವಾಗಿರಲು ಅಲ್ಲಿ ರಜೆ ಬೇಕಿದ್ದಂತಿಲ್ಲ...

ಬೆಳಗುವುದು, ಅರಳುವುದು, ಸುತ್ತಣ ಸಣ್ಣ ಮಿಸುಕಾಟವನೂ ಆತ್ಮದ ಹೊನಲುಕ್ಕಿ ಸಂಭ್ರಮಿಸುವುದು ನಿತ್ಯದ ಸರಳ, ಸಹಜ ನೇಮ/ಪ್ರೇಮ...

ಬಯಲಿಗೆ ಬಿದ್ದವರ ಅರೆ ಕ್ಷಣಕೂ, ರವಷ್ಟೂ ಜಡವಾಗದ ಜೀವ ಭಾವ ಚೈತನ್ಯದ ಮೂಲ ಪ್ರೀತಿ ಯಾವುದದು...!!

ಅಥವಾ 

ಮುಕ್ತ ಪ್ರೀತಿಯೇ ಮೂಲಧಾತುವಹುದಾ - ನಿಮಿತ್ತವಹುದಾ...!!

ಬೆರಗು ಅಲ್ಪನ ಬೆಳಕು...

ಬೆಳಗು... 🪻🦋🌦️

ಇಳಿಯದ ಇರುಳ ಉತ್ಸವದ ನಶೆಯ ಕಿರು ಕಂಪನಗಳಲಿ ಮತ್ತೆ ಮತ್ತೆ ಆಲಸ್ಯದ ಮೈಮುರಿದು, ಅಯಾಚಿತದಿ ಗುಟ್ಟಿನ ಗಾಯಗಳ ಮೆಲ್ಲ ಸವರಿ, ಮೈಮನದ ಬೆಚ್ಚಾನೆ ಸಂಭ್ರಮಕೆ ಚವರಿ ಬೀಸಿಕೊಳ್ಳುವ ರಸರಾಜಿ ಬೆಳಗು...

ಮಧುಮತ್ತ ಶುಭದಿನ... 🪻🦋

ಗೆಲುವಿನ ಕನಸು, ಗೆಲುವಿನದೇ ನಶೆ ತೂಗುವ ತುಂಬಿದ ಕಂಗಳ ಬಣ್ಣಾ ಬೆಡಗಿನ ಬೆಳಗು...

ಶುಭದಿನ... 🤝🫂

ಹೂವ ಮೈತುಂಬಾ ಹರಿದು, ತನ್ನುಸಿರ ಬಿಸಿಯ ಸುರಿದು, ಮೈಛಳಿ ಕಳೆದು ಅಪಾದಮಸ್ತಕ ಅರಳಿ ನಿಲ್ಲುವ ಹೂವಿನಂದ ಗಂಧವ ಜಗಕೆ ಪರಿಚಯಿಸಿ ನಲಿವ ಬೆಳಗು ಬೆಳಕು...

ದುಂಬಿ ಕಣ್ಣಲಿನ ಪ್ರಣಯದಾಸೆಗೆ ಬಿರಿದ ಹೂವಿನದೇ ಬಣ್ಣ - ದುಂಬಿ ಸ್ಪರ್ಷಕೆ ಮೈಮರೆತ ಹೂಗರ್ಭದಲಿ ಕಾಯಿ ಕದಲುವ ಕನಸು...

ಹೂವೇ ನೀ ಹಂಬಲಿಸೋ ಗೆಳೆತನದಲಿ ನಲ್ಲನ ಪಟ್ಟ ಯಾರಿಗೆ...?! 

ಪ್ರಶ್ನೆಗಳ ಲೆಕ್ಕಿಸದೇ ಬೆರಗನಷ್ಟೇ ಉಳಿಸಿ ನಗುವ ಸಹಜ, ಸರಳ, ಪ್ರಚ್ಛನ್ನ ಬೆಳಗು...

ಶುಭದಿನ... 🪻🦋

ಬೆಳಕಲೇ ಬದುಕುವ 

ಬೆಳಕನೇ ಹುಡುಕುವ 

ಬೆಳಕಿನ ಕುಡಿಗಳ

ಬೆಳಗಿನ ಕಲರವ - 'ಬೆಳಗಾಯಿತು, ಎದ್ದು ಹೊರಡಿ ಬೆಳಕಿನ ಕೊಯ್ಲಿಗೆ...'

ಬೆಳಕಿಗೂ ಬೆಳಕಿನದೇ ಹಸಿವಿದ್ದಂತಿದೆ...!!

ಶುಭದಿನ...🤝🫂

ಜಗದ ಮಾಯೆ ಮತ್ತು ನಶ್ವರತೆಯನು ಕನ್ನಡಿ ಹಿಡಿದು ತೋರಿ ನಾನೆಂಬ ನನ್ನಹಂಕಾರಕೆ ಮದ್ದರೆಯಲು ಹೆಣಗುವ ರುದ್ರ ರಮಣೀಯ ಬೆಳಗು...

ಬೆಳಗಾಯಿತು - ಹೊಸ ಅಂಕಕೆ ಬೆಳಕಿನ ಸಂಕಲನ...

ಗಿರಿ, ಗವಿಗಳ ಕತ್ತಲ ಏಕಾಂತದಲಿ ಎಲ್ಲರೂ ಹುಡುಕುವ ಬೆಳಕು 

ಸಂತೆ, ಜನ ಜಾತ್ರೆಯಲಿ ಮಿಂಚಂತೆ ಹೊಳೆವ ಪ್ರೀತಿಯಲಿ ಅಡಗಿ ನಗುತಿತ್ತು...

ದರ್ಶನ ಬೆಳಗು...

ಶುಭದಿನ...

ಸೂರಿಲ್ಲದ ಮಸಣದ ಮೇಲೂ ಬೆಳಕು ನೂರು ಲಾಸ್ಯವನಾಡುತ್ತದೆ...

ಸೂತಕದ ಮನೆಯಲೂ ನಿದ್ದೆ ಮರುಳಲ್ಲಿ ಮಗು ದೇವನಗೆಯ ನಗುತ್ತದೆ...

ಕನಸಿನೆಚ್ಚರ, ಕನಸು-ಎಚ್ಚರ, ನಶ್ವರತೆಯಲೇ ಈಶ್ವರತೆಯ ಸತ್ಯ...

ನಿಟ್ಟುಸಿರು - ಕಟ್ಟುಸಿರಲಿ ಮತ್ತೆ ಮತ್ತೊಂದು ಬೆಳಗು...

ಶುಭದ ಪ್ರಾರ್ಥನೆ...🫂🤝

ಬೆಳಕನು ಪ್ರೀತಿಸು ಸುಮ್ಮನೆ

ಬೆಳಕಾಗಲಿ ಪ್ರೀತಿಯ ಒಳಮನೆ...

ಬೆಳಗು - ಪ್ರೀತಿಯ ಸಂರಚನೆ...

ಶುಭದಿನ... 🫂🤝

'ಬೆಳಕು ಪ್ರೀತಿಯ ತಬ್ಬಿ, ಪ್ರೀತಿ ಬೆಳಕನು ಹಬ್ಬಿ, ನಗೆಯ ಭುವನ ಸಂಚರಣ...'

ಬೆಳಗಾಯಿತು - ಹೂವರಳುವ ಸದ್ದಿಗೆ ದುಂಬಿ ತುಟಿಕಚ್ಚಿತು...

ಶುಭದಿನ... 🪻🦋🫂

ಯೆದೆಯ ಕಣ್ಣ ಹನಿಯ ಕಲೆಯ ಜಗವು ಕಾಣದ ಹಾಗೆ ಮೊಗವ ತಿಕ್ಕಿ ತಿಕ್ಕಿ ತೊಳೆದು, ಕನ್ನಡಿಗೂ ತಿಳಿಯದಂಗೆ ಗಡಿಬಿಡಿಯಲಿ ನಗೆಯ ಅಲಂಕಾರ ಮಾಡಿಕೊಂಡು, ಸುಳ್ಳೇ ಆದರೂ ಗುಣಾತ್ಮಕ ಭಾವದಲಿ ಬೆಳಕನು ಎದುರುಗೊಂಡರೆ ಅಲ್ಲಿಗೊಂದು ಮಹಾಸಭ್ಯ ಬೆಳಗು ಸಂಪನ್ನ...

'ನಾನು' ಉಳಿದು ನಾನುಳಿವ ಶುಭದಿನದ ಶುಭಾರಂಭ...🤝🫂

ಎಳೇ ಬೆಳಕಿಗಿಷ್ಟು ಎಳೆ ಎಳೆ ನಗೆಯ ಬಣ್ಣವ ಬಳಿದು ಬಯಲಿಗೆ ಬಿಟ್ಟೆ...

ಊರ ಹಾದಿ ಬೀದಿಯ ತುಂಬಾ ಎನ್ನ ಕಣ್ಣ ತಣಿಸುವ, ಎದೆಗೆ ಬಿಸಿ ತುಂಬುವ ಬಣ್ಣಾ ಬಣ್ಣಗಳ ಕಾಮನಹಬ್ಬ...

ಬೆಳಗು - ವಸಂತ ಪರ್ವ...

ಶುಭದಿನ... 🤝🫂

ತನ್ನ ಸೋಕಿದ ಬೆಳಕಿನ ಸಣ್ಣ ಕಿಡಿಗೂ 'ನೀ ಸೋಕಿದಷ್ಟೂ ನಿನ್ನ ಮಡಿಲಿಗೇ' ಎಂಬಂತೆ ಅಷ್ಟು ಭಾಗ ಭಾವ ಬೆರೆತು ಕರಗುವ ಕತ್ತಲ ಸಮರ್ಪಣೆ...

ತಾನು ತಾಕಿದ ಹಿಡಿ ಕತ್ತಲಿಗೂ ತನ್ನದೆಲ್ಲ ಅಂಶ ಬಸಿದು 'ನಿನ್ನ ಸೋಕಿದೆ, ಇನ್ನೀಗ ನೀನೂ ನಾನೇ ಆದೆ' ಎಂದು ಕರಿಗತ್ತಲ ಕುರುಡಿಗೆ ಕಣ್ಣಾಗುವ ಬೆಳಕಿನೆದೆಯ ಪ್ರೀತಿ...

ಹಗಲು (ಬೆಳಕು), ಇರುಳೂ (ಕತ್ತಲು) - ನಿರಾಕಾರ ಪ್ರೀತಿ ಸಂರಚನೆ...

ಶುಭದಿನ... 🫂🤝

ಬೆಳಕು ಎನ್ನ ನೆತ್ತಿ ಸವರಿ ಮರುಳಾ ಎಂದು ನಕ್ಕರೂ,

ಆನು ಮತ್ತೆ ಬೆಳಗಾಯಿತೆಂದು ನಲಿವುಕ್ಕಿ ನಕ್ಕರೂ,

ಪ್ರೀತಿ ಯಾನಕೆ ಶುಭದ ಬಾಗಿಲು ತೆಗೆದಾಂಗೆಯೇ ಲೆಕ್ಕ...

ಬೆಳಕು ಮೈದೋರುವುದೆಂದರೆ ಶುಭವರಳುವುದು - ಯೆದೆಯ ನಗುವೆಂದರೆ ಪ್ರೀತಿಯ ಬೆಳಕೇ ಬೆಳಕು...

ನಿಮಗೆ ತಮಗೆಲ್ಲಾ ಹೆಗಲು ತಬ್ಬಿದ ಪ್ರೀತಿ ಪ್ರೀತಿ - ಶುಭದಿನ... 🤝🫂

ಅವಳ ನೆನಪಿನ ಜಾಡನು, ಅವಳ ನೆನಪಿಸೋ ಹಾಡನು ಎನ್ನೆದೆಯು ಮಗುವು ಕಾಗುಣಿತವ ಉರುಹೊಡೆವಂತೆ ಬಿಡದೆ ತಾರಕದಿ ಗುನುಗುವುದನು ನೋಡಿ ಬೆಳಗು ಊರಗಲ ನಗುತಿದೆ...

ಎನ್ನ ಕಪ್ಪು ಹುಡುಗಿಯ ಕಾಡಿಗೆ ಕಣ್ಣ ಕಾವ್ಯದಲಿ ಬೆಳಕು ಮರುಜನುಮ ಪಡೆದಂತಿದೆ...

ಇನ್ನಿದು ಶುಭದ ಹಾದಿಯೇ ಸರಿ...

ಶುಭದಿನ... 😍🫂

ನೀ ಸುಳಿವ ಕನಸಿನಲ್ಲೂ ಬೆಳಕ ಬೀಜಗಳಿವೆ...

ಭರಪೂರ ನಗೆ ಫಲದ ಉಲ್ಲಾಸೀ ಬೆಳಗು...

ಶುಭದಿನವೇ ಸೈ... 🤝🫂

ಮತ್ತು ನಾ ಹೇಳೋ ಪಾಠ ನಾನನುಸರಿಸಲೆಂದಲ್ಲ, ನನ್ನ ಅನುಭವ ನನ್ನ ಬೆಳಸಲಲ್ಲ ನಿನ್ನ ನಿರ್ದೇಶಿಸಲೆಂದಷ್ಟೇ ಅಂದುಕೊಳ್ಳೋ 'ನಾನು...'

ನನ್ನನೂ ಸೇರಿಸಿಯೇ ಬಡಿಯುವ ಬದುಕು ಹಾಗೂ ಇಂಥ ಎನ್ನ ಹುಂಬ ಮರುಳು ದೊಂಬ್ರಾಟ ನೋಡಿ ಒಳಗೊಳಗೇ ನಗುವ ಬೆಳಗು...

ಒಳಗಿನ ಬೆಳಕು ತೋರುವ ನಗುವ ಕಲಿಬೇಕು ನಾನು...

ಬೆಳಗು ಶುಭವಾಗಬಹುದು... 🤝🫂

ಪ್ರೀತಿಯ ಭಾಷೆ ಯಾವುದು...? ಗೊಂದಲದಲ್ಲಿದ್ದೆ...

ಬೆಳಕಿನ ಸ್ಪರ್ಷಕೆ ಅರಳಿದ ಹೂವು ಗಾಳಿಗೆ ಗಂಧ, ದುಂಬಿಗಳ ತುಟಿಗೆ ಮಧು ಬೆರೆಸಿ, ಹೂವ ಹಡೆದ ಬೇರು ಮತ್ತೆ ತೊಟ್ಟಿಲ ಕನಸು ಕಾಣುವಾಗ, ಬಯಲ ತಬ್ಬಿದ ಬೆಳಗು ಸಣ್ಣಗೆ ತೇಗಿದಂತನಿಸಿತು...

ಅಲ್ಲೇ ಉಳಿದ ಮತ್ತದೇ ನೂರು ಗೊಂದಲಗಳ ಮರೆತು ಬೆರಗನು ಬಾಳುವಲ್ಲಿಗೆ ಬದುಕಿನ ಭಾವಬಳ್ಳಿಯ ಸರಳ ಸೊಬಗಿನ ಪ್ರೀತಿಗೆ ಬಿದ್ದೆ...

ಶುಭದಿನ... 🤝🫂

ಬೆಳಕಿಗೂ ಹೂವ ಘಮವಂಟಿರಬಹುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment