Thursday, June 26, 2025

ಗೊಂಚಲು - ನಾಕ್ನೂರರ್ವತ್ನಾಕು.....

ಪಾರಿಜಾತಕೆ ನೀರುಣಿಸಲು ಬರಬಾರದೇ.....

ಏ ಮನ್ಷಾ -
ನಿಸರ್ಗದ ಪಾವಿತ್ರ್ಯವನ್ನು ಪ್ರಶ್ನೆ ಮಾಡ್ತೀಯಲ್ಲಾ -
ಪವಿತ್ರ (?) ಪ್ರೇಮಿಗಳ ಸ್ವಪ್ನ ಸ್ಖಲನದಲ್ಲಿ ಬದುಕಿನ (ಬೇಲಿಗಳ) ನಶ್ವರತೆಗೆ ಸ್ಪಷ್ಟ ನಿದರ್ಶನ ಮತ್ತು ಸಾಕ್ಷಿ ಸಿಕ್ಕೀತು ನೋಡು...

___ ಭಂಡತನ...
&&&

ಒಳಗಿನ ಕುಲುಮೆಯ ಮಡಿಲಲಿ ಪೊರೆಯುವ ಆತ್ಮ ಸಖಿ ಹಾಗೂ ಅವಳ ತೋಳಲಿ ಮುದ್ದಾಗಿ ಮೀಯುವ ನನ್ನ ಮೋಹದ ನೀಲಿ ನೀಲಿ ಕನಸು... 
___ ಕಾರುಮೋಡದ ತುಂಬು ತಾರುಣ್ಯ ಅವಳು - "ನನ್ನ ಕಪ್ಪು ಹುಡುಗಿ..."

ಭವದಲ್ಲಿರದ ಭಾವಜೀವಕೆ "ಕಪ್ಪು ಹುಡುಗಿ" ಎಂದು ಕರೆದು ನನ್ನ ಮೋಹದ ಭಾವಾತಿರೇಕಗಳ ಆಲಾಪ ಕಲಾಪಗಳನೆಲ್ಲ ತಾರಕದಲಿ ಊರ ಮುಂದೆಲ್ಲ ಹಾಡಿದೆ...
ಈಗ -
'ನಿನ್ನ ಕಪ್ಪು ಹುಡುಗಿ ಮೇಲೆ ಶಣ್ಣಕ್ ಹೊಟ್ಟೆಕಿಚ್ಚು ಮಾರಾಯ' ಅಂತನ್ನುವ ಮುಗುದೆಯರ ಯೆದೆಮೆದುವ ಮಧುರ ಕಂಪನದ ಕಳ್ಳ ಜೋಲಿಯಲಿ ನೂರು ಆಸೆ ಕನಸುಗಳ ಹೆಣೆಯುವ ಹುಟ್ಟಾ ಪೋಲಿ ನಾನು... 😉
___ ಎದೆ ಚೆಲುವ ಕಾ(ಕೂ)ಡಲೆಂದೇ ಕಟ್ಟುವ ನೂರು ಹಗಲುವೇಷಗಳು...
&&&

ಒಂದು ಸಾಲೂ ಹುಟ್ಟದ ಭಾವ ಬರಡು ಜಡ ಸಂಜೆಗಳಲೂ ನಿನ್ನ ನೆನಪು ಸಿಹಿ ಕನಸಿನೆಚ್ಚರದಂತೆ...
ನಿನ್ನ ಬೆರಳ ಭಾಷೆ ಎನ್ನ ಆತ್ಮವನಪ್ಪುವ ತಿಳಿಬೆಳಕ ಬೆತ್ತಲೆ ಇರುಳ ಚೆಲುವೆಂದರೆ ಬೆಳದಿಂಗಳ ಕುಡಿವಾಗ ಪಾರಿಜಾತ ಎದೆ ಮೇಲೆ ಬಿದ್ದಂತೆ...
ನೀ ನನಗಾಗಿ ಎನ್ನೆದೆ ಬಯಲಲ್ಲಿ ಬಲು ಆಸ್ಥೆಯಿಂದ ಬಿತ್ತಿಟ್ಟು ಹೋದ ಒಲುಮೆ ನೆನಪುಗಳಿಗಾಗಿ ಋಣಿ ನಾನು ನಿನಗೆ... 
ನಗುವಾಗಲೆಲ್ಲ ನೆನಪಾಗುವ, ನೆನಪಾದಾಗಲೆಲ್ಲ ಮುಗುಳ್ನಗುವ ಮೂಡಿಸುವ, ಎನ್ನ ಭಾವದೊಳಮನೆಯ ನಗುವೇ ಆಗಿ ಜೊತೆಯಾಡುವ ನಿನಗಿದೋ ಯೆದೆಯಾರ ಧನ್ಯವಾದವು...
___ ನೆನಪು ಅನುಭಾವದ ನಗೆಯ ಚಿತ್ರ ಶಾಲೆ... 🥰🥳
&&&

ಕರಿಯಾ -
ಬೃಂದಾವನಕೆ ವಸಂತ ಕಾಲಿಡುವಾಗ, ಎಳೆ ಬಿಸಿಲು ಯಮುನೆಯ ನಡು ಬಳಸಿ ನಡೆವಾಗ, ಕೊಳಲ ದನಿಯ ಕರಗಳು ಬಳಸಿ ಗೋಪಿಯರೆದೆ ಬಿ(ಗಿ)ರಿಯುವಾಗ - 
ಅತ್ತ ಇತ್ತ ಎತ್ತೆತ್ತ ಕಣ್ಣೆತ್ತಿ ನೋಡಿದರೂ ಚಿತ್ತ ನಿನ್ನನೇ ಭ್ರಮಿಸುವುದು...
ಹೊತ್ತಿಸಿಟ್ಟ ಕಂದೀಲಿನ ಮಂದ ಬೆಳಕಿನ ಸೋಪಾನದ ಮೇಲೆ -
ಹೂ ಚಿಟ್ಟೆ ಕನಸುಗಳಿಗೆ ನೀನಿತ್ತ ಸಿಂಗಾರ ಸೊಬಗನ್ನು ಈ ಹೆಣ್ಣೆದೆ ನಗುವಾಗಿ ಸಂಭ್ರಮಿಸುವುದು...
___ ಪಾರಿಜಾತಕೆ ನೀರುಣಿಸಲು ಬರಬಾರದೇ...
&&&

ನಮ್ ಬದ್ಕು ಅತಿ ಹೆಚ್ಚು ಪಾಠ ಹಾಗೂ ಪಕ್ಕಾ ಬುದ್ಧಿ ಕಲ್ಯೋದು ನಮ್ದೇ ತಪ್ಪುಗಳಿಂದ್ಲೇ ಕಣೋ ಅಂದ್ಲು...!!
ಸರಿ, 
ನಡಿ ಹಂಗಾರೆ, 
ಇಬ್ರೂ ಸೇರಿ ಒಂದಷ್ಟು ಸಿಹಿ ಸಿಹಿ ತಪ್ಪುಗಳ ಮಾಡಿ ಪಾಪಗಳ ಹಂಚ್ಕೊಳ್ಳೋಣ ಅಂದೆ...
ಇಷ್ಟ್ ದೊಡ್ಡ ಕಣ್ಣು ಬಿಟ್ಟು ಗುರ್ರ್ರ್ರ್ ಅಂತಿದಾಳೆ...
ನಾನೇನು ತಪ್ಪು ಹೇಳಿದ್ನಾ... !!!
____ಮಧುರ ಪಾಪಕ್ಕೆ ಹಾತೊರೆವ ಮಳೆ ಸಂಜೆಗಳು...
&&&

ಬೇರೆ ನೂರು ಭಾವಗಳಿಗೆ 'ಪ್ರೇಮ' ಎಂದು ಹೆಸರಿಟ್ಟು ಅರ್ಧನಾರೀಶ್ವರ ಕಥೆಯ ಹಾಡಿ, ರಾಧೆ, ಕೃಷ್ಣರ ಕವನ ಗೀಚಿದಷ್ಟು ಸರಳವಲ್ಲ ನಿಜದ ಪ್ರೇಮವನೇ ಜೀವಿಸಿ ಅವರಂತಾಗುವುದು...
___ ಹೆಸರಿಡದೇ ಉಸಿರೂಡಿದಾಗ ಒಡಮೂಡುವ ಜೀವರಾಗ...
&&&

ಧೋಮಳೆಯ ಸಂಜೆಗಳಿಗೆ ಅವಳ ಮುನಿಸು ಬಲು ದುಬಾರಿ...
ಇರುಳ ಬಾಗಿಲಲಿ ಎಷ್ಟು ಮುತ್ತಿನ ಕಂದಾಯ ಕಟ್ಟಿದರೆ ಸಜ್ಜೆಮನೆಯಲಿ ಬೆತ್ತಲು ಕತ್ತಲನು ಸಿಂಗರಿಸೀತು - ಉಸಿರ ಬಿಸಿಯಲ್ಲಿ ಮೌನ ಬೆವರಾಗಿ, ಮಾತು ನಲುಮೆಯ ಮಂಟಪ ಕಟ್ಟೀತು...
___ ಮೋಹಾ(ಪ್ರ)ಲಾಪ...
&&&

ಸಂಜೆಯಾಗುವ ಸರಿ ಹೊತ್ತಿಗೆ ಮೋಡಗಟ್ಟುವ ಜೀವ ಭಾವ - ಇರುಳು ಇಳಿವ ಕಾಲಕ್ಕೆ ಕನಸಲ್ಲಿ ನಿನ್ನ ತಡಕಾಡುತ್ತದೆ - ನಿನ್ನೊಡನಾಡುವ ಏಕಾಂತ ಸಂಗಾತವಿಲ್ಲದೇ ಸುರಿವ ಮಳೆಗೆ ವಿರಹ(ಹರೆಯ)ದುರಿ ಆರುವುದಿಲ್ಲ... 
___ ನಿನ್ನ ಅನುಪಸ್ಥಿತಿ ಮತ್ತು ನವಿರು ಕಂಪನಗಳಿಗೂ ಕಂಬಳಿಯನ್ನೇ ಹೊದೆಯಬೇಕಾದ ನನ್ನೀ ಹರೆಯದ ನೀರಸ ನಿಶೆ... 🫢

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment