ಗಳಿಕೆ, ಉಳಿಕೆಗಳ ತೂಕ.....
ವತ್ಸಾ -
ಎಲ್ಲರನೂ ನಗಿಸುವ ನಿನ್ನ ಗುಣ ನಿನ್ನೊಳಗಿನ ನೋವನು ಚೂರೂ ಅಳಿಸಿಲ್ಲ ಅಥವಾ ಕ್ಷಣಕಾದರೂ ಮರೆಸಿಲ್ಲ ಅಂದ್ರೆ ನಗಿಸೋದು ನಿನ್ನ ವೃತ್ತಿ ಅಂತನ್ನಿಸುತ್ತೆ...
ನಗಿಸೋದು ಹಾಗೂ ನಗೋದು, ನಗುವವನ ಮತ್ತು ನಗಿಸೋನ ವೃತ್ತಿ ಆಗಬಾರದು ಪ್ರೀತಿ ಆಗ್ಬೇಕು ಅಲ್ವಾ...
___ ನಗುವಾಗ ಮಗುವಾಗು...
&&&
ಶ್ರೀ -
ಶಾಂತಿಯನ್ನು ಹುಡುಕಿ ಹೊರಡಬೇಡ - ಶಾಂತವಾಗಿ ಬದುಕುತ್ತ ಹೋಗು ಅಷ್ಟೇ...
ನಿನ್ನೆಗಳೂ, ನಾಳೆಗಳೂ ಇದ್ದುಕೊಳ್ಳಲಿ ಅವಿದ್ದಂತೆ - ಇಂದಿಗವುಗಳ ಚಿಂತೆ ಬೇಡ ಅಷ್ಟೇ...
ಇಂದು ನಿನ್ನೆಯಂತಿಲ್ಲ, ನಾಳೆಯೂ ಇಂದಿನಂತಿರುವುದಿಲ್ಲ - ಹಾಗೆಂದೇ, ನೆನಪು, ಕನಸುಗಳು ಇಂದಿನ ಪ್ರೀತಿಯಾಗಬೇಕು, ನರಳಿಕೆ, ಕನವರಿಕೆಗಳಲ್ಲ...
___ ಜೀವಿಸುವ ಧ್ಯಾನ...
&&&
ವತ್ಸಾ -
ಪ್ರೀತಿಸಲ್ಪಡುವ ಬಯಕೆ ತಂದೊಡ್ಡುವ ನೋವುಗಳಿಂದ ಬೇಷರತ್ತಾಗಿ ಪಾರಾಗಬೇಕಾ...?
ಒಂದೇ ಉಪಾಯ - ಬೇಷರತ್ತಾಗಿ ಪ್ರೀತಿಸುವುದನು ಕಲಿತುಬಿಡು...
___ ಪ್ರೀತಿಯ ಉಪದೇಶ...
&&&
ಇದ್ದು ಯಾರಿಗೂ ಲಾಭಿಲ್ಲೆ
ಹೋಗಿ ಏನೂ ನಷ್ಟ ಇಲ್ಲೆ
ಅಲ್ಲಿಗೆ
ಎನ್ನ ಬದುಕಿನ ನಗು ಪೂರಾ ಪೂರಾ ಎಂದಷ್ಟೇ, ಎನಗಷ್ಟೇ...
___ ಗಳಿಕೆ, ಉಳಿಕೆಗಳ ತೂಕ...
&&&
ಇಲ್ಲಿ -
ಸಾವಿಗಾಗಿ ಕಾದವರು ಕಾದೇ ಇದ್ದಾರೆ...
ಬದುಕಿಗಾಗಿ ಕನಸಿದವರು ನೆನಪಾಗಿ ಹೋದರು...
___ ಯಾವ ಹಾವು....... ಯಾವ ಏಣಿ....... ಆಟ ಯಾರದು.......
&&&
ವತ್ಸಾ -
ಹೆಣದ ನಿಶ್ಚಲ ಕಣ್ಣಲ್ಲೊಮ್ಮೆ ಕಳೆದು ಹೋಗು - ಮೌನದ ರುದ್ರ ತಾಂಡವ ಯೆದೆಯ ತುಳಿದು, ಮಾತಿನ ಘನತೆ, ಪ್ರೀತಿಯ ಎತ್ತರ ಬದುಕಿನ ಭಾಷೆಯ ಬೆಳಗಲಿ...
ಕೇಳು -
ಹೇಳಲೇನೂ ಉಳಿದಿಲ್ಲದ ಭಾವ ಕಾಡುವಲ್ಲಿ ಬದುಕು ತುಂಬಾನೇ ಹೇಳುತ್ತಲಿರುತ್ತದೆ...
___ ಮಸಣ ವೈರಾಗ್ಯ ಮನವ ತೊಳೆಯಲಿ...
&&&
ಒಂದು ವಾಕ್ಯದಲ್ಲಿ ಪ್ರಶ್ನೆಯನ್ನೂ ಕೇಳೋಕೆ ತಿಳಿಯದವನು ಒಂದೇ ಮಾತಲ್ಲಿ ಉತ್ತರ ಹೇಗೆ ಹೇಳಿಯಾನು...
___ ಬದುಕು ನೂರಾರು ಗ್ರೀಷ್ಮ, ವಸಂತಗಳ ಮೀರಿದ ಹಾಡು...
ರೆಕ್ಕೆ ಬಲಿಯುವವರೆಗೆ ಮಾತ್ರ ಹಕ್ಕಿ ಗೂಡಿಗೆ ಸ್ವಂತ ಸ್ವಂತ...
ರೆಕ್ಕೆ ಬಲಿತ ಮೇಲೆ ಅದು ಬಾನಿಗೂ ಸ್ವಂತ...
___ ಸಂಸಾರ ಸಾರದ ಸಣ್ಣ ತಿಳುವಳಿಕೆ...
&&&
ನನ್ನ ನಶೆಗಳಲಿ ನನ್ನ ಪಾಡಿಗೆ ನಾನು ಆರಾಮಿದ್ದೇನೆ...
ನನ್ನನೆಚ್ಚರಿಸೋ ಹುಕಿಗೆ ಬಿದ್ದು ಎಚ್ಚರ ತಪ್ಪಬೇಡಿ...
&&&
ನನ್ನ ದೇಹದ ಸಾವಿನ ಸೂತಕ ನನಗಿಲ್ಲ...
ಆದ್ರೆ,
ನನ್ನ ಭಾವ ಸತ್ತ ಸೂತಕವ ಮಾತ್ರ ನಾನೇ ಸೈರಿಸಬೇಕು...
___ ಅವರು ಕೊಂದದ್ದಾದರೂ, ನಾನೇ ಕತ್ತು ಹಿಸುಕಿದ್ದಾದರೂ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Thursday, June 26, 2025
ಗೊಂಚಲು - ನಾಕ್ನೂರರ್ವತ್ಮೂರು.....
Subscribe to:
Post Comments (Atom)
No comments:
Post a Comment