Friday, October 30, 2026

ಗೊಂಚಲು - ನಾಕ್ನೂರ್ತೊಂಭತ್ತಾರು.....

ಎಂದಿನಂತೆ ಸೂಽಽಪರ್.....

ಕರಿಯನ ಉಸಿರ ಕುಡಿದ ಕೊಳಲಿನ್ನೂ ಹಾಗೇ ಇದೆ ರಾಧೆಯ ನಡುವಲ್ಲಿ...
ಕಾಯುತ್ತಾಳೆ ಗೋಪಿ(ಕೆ) -
ದೇವನಿಗೂ ಜಗದ ರಾಜಸೂಯ ಸುಸ್ತಾಗಿಸಬಹುದು, ಪಾಂಚಜನ್ಯದ ಉಸ್ತುವಾರಿ ಮುಗಿದ ದಿನ ಮತ್ತಿದೇ ಮಡಿಲಲಿ ಮುರಳಿ (ಉ)ನಲಿಯಬಹುದು...
ಸುಮ್ಮನೆ ಕೊಳಲ ತುಟಿಯನೊಮ್ಮೆ ಉಂಗುರ ಬೆರಳಲಿ ಸವರುತ್ತಾಳೆ - ಬೃಂದಾವನದ ಬಿದಿರೆಲ್ಲ ಮೈಕೊಡವಿ ನಿಟ್ಟುಸಿರಿಟ್ಟರೆ, ಯಮುನೆ ಹರಿವಲ್ಲಿ ನೆನಪ ಕೆಂಡ ಸೆರಗ ಸುಟ್ಟಂತ ಕಂಗಾಲ ಕನಲು...
ಯುದ್ಧಕಾಯುವುದು, ಯುದ್ಧ ಮುಗಿಯಲೆಂದು ಕಾಯುವುದು ಇಷ್ಟೇ ಇರಬೇಕು ಪ್ರೀತಿಯ ಯೆದೆಬರಹ...
___ ಗೋಪಿಯರ 'ಎದೆ ಭಾರದ' ಆಲಾಪ ಕಲಾಪ ವಿಲಾಪವು 'ಕೃಷ್ಣಾ...'
&&&

ಕೊಳಲನೂದುವ ಬೆಸ್ತನೂ
ಕೊಳವನಾಳುವ ಕನ್ನೆಯೂ
ಬೆಳುದಿಂಗಳ ಮಿಂದ ಹಿಮತಂಪು ಸರಸಿಯಲಿ
ವಿನೋದದ ವಿಹಾರ ಗೈಯ್ಯುವರಂತೆ...
ಅವರ ಪ್ರೇಮ ತುಂಬಿ ತೊನೆದು
ಚಂದ್ರಾ
ನದಿಯಾಗಿ ಹರಿವುದಂತೆ... 
ಸ್ಪಟಿಕ ಶುದ್ಧ ಜಲಕುಂಡದಲಿ 
ಆಗಸನ (ಪ್ರ)ಪ್ರೀತಿ ಬಿಂಬ...
ದಡದಿ ನಿಂತು ಕಣ್ಮಣಿದವನ
ಮನಸೀಗ ನೀಲಿ ನೀಲಿ...
ಜೀವವೋ ಜನಪದ ಗೀತೆ...
___ ಚಂದ್ರತಾಲ್... 🥰

ಚಂದ್ರತಾಲ್...

ಗೊಲ್ಲನದ್ದೇನೂ ತಪ್ಪಿಲ್ಲ
ಗೋಪಿಕೆಯರ ಕಣ್ಣೋಟಗಳದ್ದದು ಪ್ರಭಾವ...
ಅವರ ಚಂಚಲ ದಿಟ್ಟಿಯ ಕುದಿ ಎಸರ ಬಿಸಿಗೆ 
ಇವನ ಉಸಿರು ಓಲಾಡಿದಂತೆಲ್ಲ 
ಕರದ ಕೊಳಲಲ್ಲಿ ತರತರ ರಾಗ ಸಂಯೋಗ... 
___ ಯೆದೆ ಬೃಂದಾವನ...
&&&

ವತ್ಸಾ -
ಪ್ರೀತಿ ಹಾಗೂ ನಗುವನ್ನು ಆಯ್ದುಕೊಳ್ಳುವುದು ಸುಲಭ ಮತ್ತು ಎಲ್ಲರ ಆಯ್ಕೆಯೂ ಅದೇ... 
ಆದ್ರೆ, 
ಪ್ರೀತಿಯನ್ನಾಗಲೀ ಹಾಗೂ ನಗುವನ್ನಾಗಲೀ ಕಾಲಕೂ ಕಾಯ್ದುಕೊಳ್ಳುವುದಿದೆಯಲ್ಲ, ಅದು ಮಾತ್ರ ಬಲು ಗಟ್ಟಿ ಎದೆಗಳ ಖಾಯಂ ಅಂತರ್ವಾಹೀ ಕಾಳಗ...
___ ಮರಳಿ ಸಿಗುವ ಖಾತ್ರಿ ಇಲ್ಲದೆಯೂ ಸುರಿವ ಎದೆಯ ಪಾತ್ರೆ ಖಾಲಿಯಾಗದಂಗೆ ಬದುಕ ಹಾದಿಯುದ್ದಕೂ ಕಾದುಕೊಳ್ಳಬೇಕು ನಿನ್ನನು ನೀನು... 
&&&

ಯೆದೆಯ ವ್ಯಥೆ ಗಾಢವಿದ್ದಷ್ಟೂ 
ಬದುಕ ಕಥೆ ರಂಜನೀಯವೇನೋ ನೋಡು;
ಪರರದ್ದಾದರೂ, ನಂದೇ ಆದರೂ;
ಕೇಳುವಾಗಲೂ, ಆಡುವಾಗಲೂ...
___ ಜಗತ್ತು ಮಾಯೆ ಜೀವನ ನಶ್ವರ... 

ನೀ ಮರೆಯಲು ಹೇಳಿದ ಮಾತುಗಳೇ ಮುದ್ದಾಂ ನೆನಪಾಗುವ ಸಂಜೆಗಳು... 
___ ಮಧುರ ಯಾತನೆಯ ದಿಡ್ಡಿ ಬಾಗಿಲು... 

ಉಸಿರಿನ ರುಚಿಗೆ ಮರುಳಾದ ಹೆಸರಿಲ್ಲದ (ಬದುಕ) ಹೆಣವೊಂದು ಈಗಷ್ಟೇ ಚಿತೆಯಿಂದೆದ್ದು ಬಂದು ಗಾಳಿ ತಿನ್ನಲು ಹೊರಟಂತಿದೆ... 
___ ನಗು ಕಂಡರೆ/ಬಂದರೆ ಭಯ ಬೀಳಬೇಡಿ... 
&&&

ಇಲ್ಕೇಳು -
ಬೆಳಕಾಗಲೀ, ಪ್ರೀತಿಯ ಬಂಧವಾಗಲೀ, ಇನ್ನೇನಾಗಲೀ ಕಳೆದುಕೊಳ್ಳುವ ಭಯ ನಮ್ಮಲ್ಲಿಲ್ಲದೇ ಹೋದರೆ ಅವುಗಳಿಗಾಗಿ ದುಡಿಯುವ/ತುಡಿಯುವ ಮಿಡಿತದ ತೀವ್ರತೇನ ಕಳಕೊಂಡ್ಬಿಡ್ತೇವೆ ವತ್ಸಾ... 
ದುಡಿಸದೇ ಕೂತಲ್ಲೇ ಕೂತ್ರೆ ಮೈಗೆ ಝೋಮು ಹಿಡೀತದಲ್ಲ ಹಂಗೇನೇ ತುಡಿದು ಎದ್ದು ಹೊರಡದೇ ಮಿಡಿತಗಳ ಕೊಂದ್ಕೊಂಡ್ಬಿಟ್ರೆ ಮನಸೂ ಜಡ ಹಿಡಿದು ಹಡಾಲೆದ್ದು ಹೋಗಿ ನಿಧಾನಕ್ಕೆ ನಮ್ಮನ್ನೇ ನಾವು ಕಳ್ಕೊಂಬಿಡ್ತೇವೆ... 
ಒಂದೊಮ್ಮೆ 'ನಡಿ ಏನಾಗತ್ತೋ ನೋಡೇ ಬಿಡೋಣ' ಅಂತ ಎಂಥಾ ಯುದ್ಧಕ್ಕಾದ್ರೂ ಸಜ್ಜಾಗಿಬಿಡ್ತಿದ್ದೋರು, ಈಗದೆಲ್ಲಾ ಸುಳ್ಳೆಂಬಂತೆ 'ಯೇಽಽ ಏನಾಗತ್ತೆ ಬಿಡು ಮಹಾ' ಅಂತ ನಮ್ಗೆ ನಾವೇ ಸಬೂಬುಗಳ ಶಬಾಶ್ಗಿರಿ ಕೊಟ್ಕೊಂಡು ನೆಲಹಿಡಿದು ಬಿಲ ಸೇರಿ ಬಿಡ್ತೇವಲ್ಲ, ಮೈಯ್ಯ ಆಲಸ್ಯದಂತೆ, ಸಹಜ ಸುಸ್ತಿನಂತೆ ಕಾಣೋದು ಯಾವ ಮಾಯದಲ್ಲಿ ಮನಸಿನ ರೋಗವಾಗಿ ಬೆಳೆದು ನಿಲ್ಲುತ್ತೋ ಗೊತ್ತೇ ಆಗಲ್ಲ ನೋಡು; ದೊಡ್ಡ ದುರಂತ ಅದು - ಬೇಗ ಎಚ್ಚರಾಗ್ದೇ ಇದ್ರೆ ನಮ್ಮ ಬದುಕಿನ ರುಚಿಗೆ ನಾವೇ ಮಾಡಿಕೊಳ್ಳೋ ಮರಾಮೋಸ... 
ಕಳೆದುಕೊಳ್ಳುವ ಭಯವಿಲ್ಲದ ಭಾವ ಎಲ್ಲರ ಯೆದೆಯಾಳದ ಬಯಕೆಯೇ ಹೌದಾದರೂ, ಕಳೆದು ಹೋದೇನೆಂಬ ಎದೆ ಹಿಂಡುವ ಭಯವೇ ನಮ್ಮ ನಿಲ್ಲದ ಹರಿವಿನ ನಿರಂತರ ಚೈತನ್ಯವೂ ಹೌದೇ ಹೌದು - ಅದಕೇ, ಇಷ್ಟೇ ಇಷ್ಟು, ಲವಣದಷ್ಟಾದರೂ ಭಯ ಬೇಕು ಬೆನ್ನ ಬಲವಾಗಿ... 
___ 'ಕಳ್ಕೊಳ್ಳೊದೇನೋ ಇದೆ ಅದ್ರಲ್ಲಿ ಅಂತನ್ಸಲ್ಲ ಬಿಡು' ಎಂಬ ಸಣ್ಣ ಸಾಮಾನ್ಯ ನುಡಿ ಕೇಳಿ ಸಾಮಾನ್ಯನಂತೆ ಕಳಕೊಳ್ಳುವ/ಕಳೆದೋಗುವ ದೊಡ್ಡ ಭಯವಾಯಿತು - ಇಷ್ಟು ವದರಿದೆ...  
&&&

ಹೆಂಗಿದ್ದೀ...? 
ಎಂದಿನಂತೆ ಸೂಽಽಪರ್... 
ಕೊನೇಯ ಉಸಿರ ನಸನಸೆಯಲ್ಲಾದರೂ ಎಷ್ಟು ಚೆಂದ ನೋಡೀ ಪ್ರಶ್ನೋತ್ತರ... 
ಆ ಕ್ಷಣಕೆ ಪ್ರಶ್ನಿಸಿದ ನಿನ್ನೆದೆಯಲೂ, ಉತ್ತರಿಸೋ ನನ್ನಲ್ಲೂ ಒಂದು ಅಕಾರಣ ಸಾವಧಾನದ ನಗುವರಳುತ್ತಲ್ಲಾ - ಸಾಕು ಬಿಡೇ... 
ಸುಳ್ಳೇ ಆದರೂ, ಸಣ್ಣಾತಿಸಣ್ಣದೇ ಆದರೂ, ನಗುವೊಂದು (ಬಿ)ಎತ್ತಿ ಕೊಡುವ ಸಮಾಧಾನವಾ, ಇಲ್ಲಾ ಭರವಸೆಯಾ ಎಂಥದ್ದೋ ಒಂದು ಸಣ್ಣ ನಿಸೂರಿನ ಎಳೆ ಇಬ್ಬರನೂ ಆತ್ಮೀಕ ಭಾವದಲಿ ತಬ್ಬುತ್ತದಲ್ಲಾ; ಅದಕಿಂತ ಇನ್ನೇನು ಬೇಕೇ ಜೀವಕೆ - ಜೀವಿಸಲಾಗಲೀ, ಜೀವ ಬಿಡಲಾಗಲೀ... 
ಕಳೆದ ಆಯಸ್ಸನ್ನು 'ಸವೆಸಿದ್ದಲ್ಲ ಸವಿದದ್ದು' ಅನ್ನೋಕೂ ಧೈರ್ಯ ಬೇಕು ನೋಡು - ಕಳೆದುಕೊಳ್ಳುವ ಸುಖದ(?) ಮೇಲೆ ತುಂಬಾ ಪ್ರೀತಿ ಬೇಕು... 
ಅರ್ಥ ಆಯ್ತಾ... 
'-----ಅಹ್'
ಈಗ ಹೇಳು, ನೀ ಹೆಂಗಿದ್ದೀ...? 
ಎಂದಿನಂತೆ ಸೂಽಽಪರ್... 
___ ಒದ್ದೆ ಕಣ್ಣಂಗಳದಲಿ ನಗೆಯ ಇಂದ್ರಚಾಪ - "ಎಂದಿನಂತೆ ಸೂಽಽಪರ್..."  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment