Tuesday, August 13, 2013

ಗೊಂಚಲು - ಎಂಬತ್ತು ಮತ್ತೊಂದು.....

ಸೋತ ಮನದ ಮಾತು.....

ಕನಸುಗಳೆಲ್ಲಾ ಮೌನದೆ ಸುಖದಲಿರುವಾಗ
ಮಾತಿನ ಭಿಕ್ಷೆಗೆ ಹೊರಡುತ್ತೇನೆ – ನಾನು ಮನಸು...
ಭಿಕ್ಷೆಯೇನೋ ದಕ್ಕೀತು
ಅಷ್ಟೋ ಇಷ್ಟೋ,
ಇಲ್ಲ
ಪಾತ್ರೆಯೂ ತುಂಬೀತು
ಆಗೊಮ್ಮೆ ಈಗೊಮ್ಮೆ...
ಸಾವಿನ ಮನೇಲಿ
ದಾನ ಹೇರಳವಂತೆ...
ಆದರೂ
ಒಂದಿನಿತೂ ತಣಿಯದೀ ನನ್ನ ಕೆಟ್ಟ ಹಸಿವು...
ಕಾರಣವಿಷ್ಟೇ
‘ಮಾತು’ ನನ್ನ ‘ಅನ್ನ’
‘ಪಾತ್ರೆ’ ತುಂಬ ‘ಮೌನ...'

Wednesday, August 7, 2013

ಗೊಂಚಲು - ಹತ್ತು X ಎಂಟು.....

ಆಗಾಗ ಹಾಡುವ ಮನಸು.....
(ಹಾಡೆಂದರೆ ನಲಿವು - ಹಾಡೆಂದರೆ ನೋವು - ಹಾಡೆಂದರೆ ಉನ್ಮಾದದುಯ್ಯಾಲೆ...)

ಭಾಷೆ - ಭಾಷ್ಯಗಳ ಮೀರಿದ ಭಾವ ಪ್ರೀತಿ...
ಅಂಥ ಪ್ರೀತಿಯನ್ನೂ ಮೀರಿದ್ದು ಬದುಕು...
ಆ ಬದುಕನ್ನೇ ಪ್ರೀತಿಯಾಗಿಸಿಕೊಳ್ಳಬಲ್ಲೆನಾದರೆ ಅದಕಿಂತ ಧನ್ಯತೆ ಇನ್ನೇನಿದೆ...
ಆ ದಿಕ್ಕಿನೆಡೆಗೆ ಇರಲಿ ನನ್ನಯ ನಡಿಗೆ...
***
ಯಾವುದೋ ಅವ್ಯಕ್ತ ಖುಷಿಯೊಂದು ಕರುಳ ತಾಕಿ ಬದುಕ ತಬ್ಬಿದ ಮಧುರ ಭಾವ ನನ್ನನಾಳುವಾಗ...
ನಲಿವಿನಲೆಗಳಲಿ ತೇಲುತಿರುವಾಗ...
ಈ ಬದುಕೆನಿತು ಸುಂದರ ಎನುತ ನಗೆಯ ಹಾಡ ಗುನುಗುತಿದೆ ಮನಸು...
***
ಪ್ರತಿ ಕ್ಷಣ ಕೊಲ್ಲುವ ಅಸಹಾಯಕತೆಗೆ ಮಾತಿನ ರೂಪ ಕೊಡುವಾಗಲೆಲ್ಲಾ ಮನಸು ವಿಚಿತ್ರ ಹಿಂಸೆಯಲ್ಲಿ ಒದ್ದಾಡುತ್ತೆ...
ಮೊಗದಲ್ಲಿ ಜೀವ ಇಲ್ಲದ ದೊಡ್ಡ ನಗು...
ನಂಗೆ ನಾನೇ ಅಪರಿಚಿತನಂತೆ ಕಂಡು ಮತ್ತಷ್ಟು ಕಂಗಾಲಾಗ್ತೇನೆ...
***
ಸಾವಿನ ಮನೆಯಲ್ಲೂ ಅಳದ ಮನಸು...
ಚಂದದ ಕನಸೊಂದ ಚಿಗುರೊಡೆಸಬಹುದಾದ ಹಾಡ ಕೇಳುತ್ತಲೂ ಒಮ್ಮೊಮ್ಮೆ ಅಳುತ್ತಿರುತ್ತದೆ..
ಈ ಮನದ ವಿಚಿತ್ರ ವ್ಯಾಪಾರಕ್ಕೇನೆನ್ನಲಿ...
***
ಸದಾ ಕಾಡುವ ಭಾವ ಇದು -
ನನ್ನ ನೋವ ಆಸ್ತೆಯಿಂದ ಆಲಿಸೋ ನೀವ್ಯಾರೂ ನಿಮ್ಮ ನೋವ ನಂಗೆ ಕೇಳಿಸಿಲ್ಲ...
ನಿಮ್ಮ ನೋವ ದನಿಯ ಕೊಂದು, ಪರರ ನೋವಿಗೆ ಕಿವಿ ಮತ್ತು ಕಣ್ಣೀರಿಗೆ ಸಾಂತ್ವನವಾಗೋ ಹಿರಿದು ಮನಸಿನ ನಿಮ್ಮಂತಾಗಲು ನಾನು ಇನ್ನೆಷ್ಟು ಜನ್ಮ ಉರುಳಬೇಕಾದೀತೇನೋ...:( 
***
ಒಂದು ಮುಗುಳ್ನಗು - ಒಂದೇ ಒಂದು ನಿಷ್ಕಾರಣ ಪ್ರೀತಿಯ ಮಾತು - ಆಗೊಂದು ಆತ್ಮೀಯ ಆಲಿಂಗನ - ಖಾಲಿ ಹಣೆಗೊಂದು ಸ್ನೇಹಪೂರ್ವಕ ಪಪ್ಪಿ....

ಸಾಕು...
ಬದುಕುವಾಸೆಗೆ ನೂರಾನೆ ಬಲದ ಭರವಸೇನ ದಯಪಾಲಿಸಿಬಿಡುತ್ತವೆ...
ಸಾವಿರ ನೋವುಗಳ ಸೈನಿಕರ ದಂಡಿಗೆದುರಾಗಿಯೂ ಎದೆಕೊಟ್ಟು ಯುದ್ಧ ಸಾರಬಲ್ಲ ಸ್ಥೈರ್ಯ ದಕ್ಕಿಬಿಡುತ್ತೆ...
ಅಂಥ ಪರಿ ಪ್ರೀತೀನ ಹಂಚೋರ ಸನ್ನಿಧಿಯಲ್ಲಿ ಕಣ್ಣ ಹನಿ ಕೂಡ ಸಹನೀಯವೇ...
ಸ್ನೇಹದೊಡಲುಗಳ ಪ್ರೀತಿಗೆ ಶರಣು...
***
ಆ ಒನಪು, ವೈಯಾರ - ಭಾನ ಮಳೆ ಮುತ್ತಲಿ ಮಿಂದ ಭುವಿಯೊಡಲ ಸಿಂಗಾರವ ಸವಿಯುತ್ತಾ - ಹೊಸ ಬೆಳಕ ಬೆರಳ ಹಿಡಿದು - ಹೊಸ ಕನಸುಗಳ ಸಂತೆಯಲಿ - ಹೊಸ ನಲಿವನರಸುತಲಿ - ಅಲೆವ ತುಡಿತದ ಮನಸ ಹೊತ್ತು ನಗುತಿರೋ ಒಂದು ಮುಂಜಾನೆಗೆ ಸಾವಿರ ಕಾಮನಬಿಲ್ಲಿನ ರಂಗಿದೆ....:)
***
ಅವಳು ಕೂತಿದ್ದ ಸೀಟಿನ ಹಿಂದಿನ ಸೀಟಲ್ಲಿ ಕೂತಿರೋ ನನ್ನ ಕಣ್ಣಲ್ಲಿ ಅವಳ ಕಿವಿಯ ಝುಮಕಿಯ ರೋಮಾಂಚಕ ಓಲಾಟ...;)
ಅಂದಕೆ ಬೆರಗಾಗಿ ಬೆಚ್ಚಗಾದ ಮನಸಿಗೆ ಸಂಜೆ ಸೂರ್ಯನ ರಂಗು...:)
ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟರೆ ಅವಳು; ಅವಳ ಹೆಣ್ಣಾಸೆಗೂ ರಂಗು ಬಂದು ಬದುಕು ಒಲವ ಇಬ್ಬನಿಯಲಿ ಮಿಂದೀತೆಂಬುದು ಈಗಷ್ಟೆ ಇಷ್ಟಿಷ್ಟೇ ಹಾಳಾಗ್ತಾ ಇರೋ ಹುಚ್ಚು ಮನಸಿನ ದುರಾಸೆ...:)

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, August 4, 2013

ಗೊಂಚಲು - ಎಪ್ಪತ್ತು ಮತ್ತು ಒಂಭತ್ತು.....

ಮೌನದ ಮಾತು.....

ಮಧುರ ಹೊಟ್ಟೆಕಿಚ್ಚೊಂದು ಮೂಡಿತ್ತು ನಂಗೆ ನಿನ್ನೆಡೆಗೆ - ಮೌನ ನಂಗಿಷ್ಟ ಕಣೋ ಅಂತ ನೀನಂದಾಗ...
ಯಾಕ್ ಗೊತ್ತಾ,
ಸಂತೆಯ ನಡುವೆ ಎಲ್ಲರೂ ಖುಷಿಯೂರಿನ ತುಂಡರಸರೇ..
ನಿನ್ನ ಗಾಢ ಮೌನದಲ್ಲಿಯೂ ನಿನ್ನಲ್ಲಿ ನಗುವಿದೆಯಾ..!!
ಮೌನದಲೂ ನಗುವಿರೋದು ಪ್ರಾಮಾಣಿಕವೇ ಆದಲ್ಲಿ ನಿನ್ನೀ ಬದುಕು ಭವ್ಯವೇ ಸರಿ...
ಸಾಧಿಸಬೇಕಿದೆ ಮೌನದಲೂ ನಗುವ ನಾನೂನು...

***

ಮೌನವೆಂದರೆ - ಹಲವಾರು ಭಾವಗಳ ಮೂಟೆ ಕಟ್ಟಿ ಮನಸ ಒಳಗಿಟ್ಟು ಅದರ ಸುತ್ತ ಒಂದು ಕಿಂಡಿಯನೂ ಇಡದೇ ನಾವೇ ಕಟ್ಟಿಕೊಂಡ ಗೋಡೆ... ಭಾವ ಝರಿಗೆ ಅಡ್ಡಲಾಗಿ ಕಟ್ಟಿಕೊಂಡ ಅಣೆಕಟ್ಟು...
ಮೌನವೆಂದರೆ - ಧ್ಯಾನವೂ ಹೌದಂತೆ... ಕೈವಲ್ಯ ಜ್ಞಾನದ ದಾರಿ... ಇದರ ಆಸೆ ಸಧ್ಯಕ್ಕೆ ನಂಗಿಲ್ಲ...
ಮೌನವೆಂದರೆ - ಸಾವು ಕೂಡ... ವಿನಾಕಾರಣದ ಮೌನದಿಂದಾಗಿಯೇ ಅದೆಷ್ಟೋ ಮಧುರ ಬಂಧಗಳು ಸದ್ದಿಲ್ಲದೆ ಸತ್ತದ್ದ ಕಂಡಿದ್ದೇನೆ...
ಅಂತೆಯೇ ಮೌನವೆಂದರೆ - ಅದಮ್ಯ ಪ್ರೀತಿಯೂ ಆಗಬಹುದಂತೆ... ಹೌದೋ ಅಲ್ಲವೋ ಗೊತ್ತಿಲ್ಲ... ಆದರೂ ಎಂಥ ಮೌನದ ಅಣೆಕಟ್ಟೂ ಪ್ರೀತಿ ಜಲದ ಒತ್ತಡಕ್ಕೆ ಒಡೆದು ಮಾತಾಗಿ ಧುಮ್ಮಿಕ್ಕೀತು ಎಂಬುದನ್ನ ನಂಬುತ್ತೇನೆ...
ಆ ನಂಬಿಕೆಯಿಂದಲೇ ಕಾಯುತ್ತಿದ್ದೇನೆ - ನಿನ್ನ ಮನದ ಬಾಗಿಲೆದುರು ಅಂಗೈಯಲ್ಲಿ ಪ್ರೀತಿ ಹಣತೆಯ ಹಚ್ಚಿಟ್ಟುಕೊಂಡು...
ನನ್ನುಸಿರ ಹಣತೆ ಆರುವ ಮುನ್ನ ನಕ್ಕು ಬಿಡು ಒಮ್ಮೆ ಮೌನವ ಮಾತಾಗಿಸಿ...
ಓ ಕಪ್ಪು ಹುಡುಗೀ....;)


***

ಒಲವೇ -
ನೀ ಇರುವಂತೆಯೇ ನಿನ್ನ ಸ್ನೇಹವ ಒಪ್ಪಿಕೊಳ್ಳುವ ಯತ್ನದಲ್ಲಿ ನಿನ್ನ ಮೌನವನೂ ಒಪ್ಪಿಕೊಂಡಾಯ್ತು...
ಆದರೂ ಮನದ ಮೂಲೆಯಲೊಂದು ಪುಟ್ಟ ನಿರೀಕ್ಷೆ : ಎಂದಿಗಾದರೂ - ನನ್ನೀ ಉಸಿರು ಮೌನವ ಅಪ್ಪುವುದರೊಳಗಾದರೂ - ನಿನ್ನ ಮೌನದ ಮೂಸೆಯೊಳಗೆ ಹುದುಗಿರೋ ನೋವೆಲ್ಲ ಕರಗಿ ಹಿತವಾದ ನಗುವೊಂದು ಈ ಬದುಕನಪ್ಪಿ ಮಾತಾಡಿಸೀತು...ನನ್ನ ನಿರೀಕ್ಷೆಯೆಂಬುದು ನನ್ನ ನಂಬಿಕೆ ಕೂಡ...

Thursday, August 1, 2013

ಗೊಂಚಲು - ಎಂಟು ಸೇರಿಸಿ ಎಪ್ಪತ್ತು..........

ಹೊಸ ವಸಂತದ ಮೊದಲ ಬೆಳಗು.....

ಕೆಲವು ಸಲ ಬದುಕು ನಮ್ಮನ್ನ ತೀರಾ ತೀರಾ ಬರಿದು ಮಾಡಿದಾಗ ಏನ್ ಮಾಡೋದು ಹೇಳು ಅಂತ ಕೇಳಿದ ಗೆಳತಿಗೆ : ಸುಮ್ಮನೇ ನಕ್ಕು ಬಿಡೋದು ಅಷ್ಟೇ; ದಕ್ಕಿದಾಗ ದಕ್ಕಿದಷ್ಟನ್ನು ಹೀರಿಕೊಳ್ಳುತ್ತಾ - ಇಲ್ಲಿ ಬರಿದಾಗಿ ಇನ್ನೆಲ್ಲೋ ತುಂಬಿಕೊಳ್ಳೋ ಸುಳ್ಳು ಸುಳ್ಳೇ ಭರವಸೆಯೊಂದಿಗೆ...ಹಾಗಂತ ಹೇಳಿದ್ದೆ.

ಸಾಯಲು ಬಿಡದ ನಲಿವು - ನಗುವ ಕೊಲ್ಲೋ ನೋವುಗಳು - ಶಾಯಿ ಮುಗಿದ ಪೆನ್ನಲ್ಲಿ ಗೀಚಿ ಗೀಚಿ ಬರೆಯಲೆತ್ನಿಸೋ ನಾಕು ಸಾಲಿನಂಥ ನಿನ್ನೆ ಮತ್ತು ನಾಳೆಗಳ ನಡುವಿನ ಇಂದೆಂಬ ಗೊಂದಲದಲ್ಲಿ ಜೀಕೋ ಪೊಳ್ಳು ಭರವಸೆಗಳ ಭಂಡ ಬಾಳು...

ನೋವ ಕಣ್ಣಿರು, ನಲಿವ ಪನ್ನೀರ ಅಷ್ಟಿಷ್ಟು ಬೆರೆಸಿ ಮಾಡಿದ ಪಾನಕದಂತದ್ದು ಈ ಬದುಕು...
ಬೆರೆಸುವಾತನಿಗೆ ಹದ ತಪ್ಪಿತೇನೋ ಪಾನಕದ ರುಚಿ ಇಷ್ಟೇ ಇಷ್ಟು ಹದಗೆಟ್ಟಿದೆ...

ಕಳೆದ ವರ್ಷಗಳ ಲೆಕ್ಕ ಸ್ಪಷ್ಟವಾಗಿ ಸಿಕ್ಕಿ ಭಯ ಬೀಳುವ; ಇಷ್ಟು ಕಾಲ ಬಾಳಿಯೂ ತೃಪ್ತವಾಗದೇ ಇನ್ನಷ್ಟು ಕಾಲ ಬದುಕುಳಿವ ಬಯಕೆ ತುಂಬಿದ ದುರಾಸೆಯ ಮನಸು...

ಕಳೆದು ಹೋದ ಖುಷಿಗಳ, ಹೀಗೇ ಬದುಕಬೇಕೆಂದುಕೊಂಡು ಹೇಗೆ ಹೇಗೋ ಬದುಕಿಬಿಟ್ಟ ನಿನ್ನೆಗಳ ಬಗೆಗಿನ ಬೇಸರವನ್ನು ಬರುವ ನಾಳೆಗಳು ಬರೀ ನಗೆಯನೇ ಹೊತ್ತು ತಂದಾವೆಂಬ ಕನಸಲ್ಲಿ ಮರೆಯಲೆತ್ನಿಸುತ್ತಾ...

ರಾತ್ರಿಯ ಸ್ವಪ್ನದಲಿ ಕಣ್ಣ ಮಿಟುಕಿಸಿ ಕಚಗುಳಿ ಇಡುವ ನನ್ನೊಲವ ಕಪ್ಪು ಹುಡುಗಿ ಹಗಲಲ್ಲಿ ನನಸಾಗಿ ಬದುಕ ಬೆಳಕಾಗಿ ನಗಲಾರಳು ಎಂಬುದು ಅಗತ್ಯಕ್ಕಿಂತ ಹೆಚ್ಚಾಗಿ ಸ್ಪಷ್ಟವಿದ್ದರೂ ಆ ಬೆಳದಿಂಗಳ ನಗುವಿಗಾಗಿ ಮನದ ಕದದ ಬೀಗವ ಕಿತ್ತಿಟ್ಟು ಕೂತು ಕಾಯುತ್ತಾ...

ಪಡಕೊಂಡದ್ದೆಲ್ಲ ಕೊಟ್ಟವರ ಕರುಣೆಯ ಕರುಳ ಹಿರಿಮೆಯಿಂದ ದಕ್ಕಿದ್ದು - ಕಳಕೊಂಡದ್ದು ಮಾತ್ರ ಸಂಪೂರ್ಣ ಸ್ವಯಂಕೃತ ಎಂಬುದು ಸ್ಪಷ್ಟವಾಗಿ ಮನಸಿಗೆ ಅರಿವಿದ್ದರೂ ಎಲ್ಲಾ ನಾನೇ ಎಂಬ ಹುರುಳಿಲ್ಲದ ಕೊಬ್ಬಿನಿಂದ ಬೀಗುತ್ತಾ...

ಕಳೆದುಕೊಂಡದ್ದು,
ಪಡೆದುಕೊಂಡದ್ದು,
ಕಳೆದುಕೊಂಡೂ ಪಡೆದುಕೊಂಡೆನೆಂಬ ಭಾವ ಮೂಡಿಸಿದ್ದು,
ಪಡೆದುಕೊಂಡೂ ಕಳೆದುಕೊಂಡಂತೆ ಭಾಸವಾಗಿದ್ದು,
ಅರ್ಧ ದಕ್ಕಿದ್ದು,
ಬಾಕಿ ಉಳಿದದ್ದು,
ಆಸೆ - ನಿರಾಸೆಗಳ ಸಂಕಲನ - ವ್ಯವಕಲನಗಳ ಲೆಕ್ಕಾಚಾರದಲ್ಲಿ,
ಮುಗಿದ ನಿನ್ನೆ - ಕಾಣದ ನಾಳೆಗಳ ಗುಂಗಲ್ಲಿ ಇರುವ ಇಂದನ್ನು ಮರೆಯುತ್ತಾ,
ಯಾವ ಕಾರಣದಿಂದ ಪ್ರೀತಿಸಿದೆನೋ - ಅವವೇ ಕಾರಣಗಳಿಗಾಗಿ ಅದರಿಂದ ದೂರ ಓಡುತ್ತಾ,
ಕಳೆದು ಹೋದ - ಅಂತೆಯೇ ಕಳೆದು ಹೋಗಬಹುದಾದ ಬದುಕ ಕ್ಷಣಗಳನ್ನು ಹಿಡಿದಿಡಲಾಗದೇ ಬೆರಗಿನಿಂದ ನೋಡುತ್ತಾ...
ನಿಟ್ಟುಸಿರೊಂದಿಗೆ ಕರಗಿ ಹೋಯಿತು ಒಂದಷ್ಟು ಕಾಲ...

ಆದರೂ ಏನ್ ಗೊತ್ತಾ -
ಇಂತೆಲ್ಲ ಉಪದ್ವ್ಯಾಪಿತನಗಳಿಂದಾಗಿಯೇ ಏನೋ ಈ ಬದುಕ ಮೇಲೆ ತುಂಬಾ ಅಂದ್ರೆ ತುಂಬಾನೇ ಪ್ರೀತಿ ಮೂಡಿಬಿಡುತ್ತೆ...
ಒಂಥರಾssss ಒಲವು - ಅಪರಿಮಿತ ವ್ಯಾಮೋಹ...
ಅನ್ನಿಸುತ್ತೆ ಆಗಾಗ, ಬದುಕನ್ನು ಅದಿರುವಂತೆಯೇ - ಮೊದಲಿರುಳ ಉನ್ಮಾದದಲ್ಲಿ ಅವಳನ್ನು ಆವರಿಸಿದಂತೆಯೇ - ಹಸಿ ಹಸಿಯಾಗಿ ಹಾಗೆ ಹಾಗೇ ಆವರಿಸಿ, ಆಲಂಗಿಸಿ, ಆಸ್ವಾದಿಸುತ್ತಾ - ಅಳಿವಿನಳುಕು ಕೂಡ ಕಾಡದಂತೆ ಇನ್ನಿಲ್ಲದಂತೆ ಪ್ರೀತಿಸುತ್ತಾ - ಪ್ರೀತಿಸುತ್ತಲೇ - ಮತ್ತ ಪ್ರೀತಿಯಿಂದಲೇ ಕೊನೆಗೊಮ್ಮೆ ಮುಗಿದು ಹೋಗಬೇಕು...
ಒಳಕೋಣೆಗೆ ಹೆಜ್ಜೆ ಇಡುವಾಗಿನ ತುಡಿತ, ಮಿಡಿತಗಳು ಅಲ್ಲಿಂದ ಎದ್ದು ಹೋಗುವಾಗಲೂ ಇರುವಂತೆ ಮನಸನ್ನು ಅಣಿಗೊಳಿಸಿಕೊಳ್ಳಬೇಕು...
ಹುಟ್ಟಿನಲ್ಲಿನ ಖುಷಿಯನ್ನೇ ಸಾವಿನಲ್ಲೂ ಸಾಧಿಸಲು ಸಾಧ್ಯವಾದೀತಾ ನನ್ನಿಂದ ಅನ್ನೋದು ಸದಾ ಕಾಡೋ ಸಾವಿರ ಸಾವಿರ ಡಾಲರ್ ಪ್ರಶ್ನೆ... :)

ಹಾಂ! ಹೇಳೋಕೆ ಮರೆತಿದ್ದೆ - ಇಂದಿನ ವಿಶೇಷ ಏನು ಗೊತ್ತಾ :
ಈಗೊಂದಿಷ್ಟು ಸಂವತ್ಸರಗಳ ಹಿಂದೆ ಇಂಥದೇ ಒಂದು ಆಗಸ್ಟ್ ತಿಂಗಳ ಮೊದಲ ದಿನದ ಮುಂಬೆಳಗಿನಲ್ಲಿ ಈ ಬದುಕಿನೊಂದಿಗೆ ಬಂಧ ಬೆಸೆದುಕೊಂಡು - ಅಳುವ ಮುದ್ರೆಯ ಮೂಲಕ ಚಿತ್ರಗುಪ್ತನ ಖಾತೆ ಪುಸ್ತಕದಲ್ಲಿ ಮೊದಲ ಹಾಜರಿ ಹಾಕಿದ್ದೆ...:)

ನೋವು ಕಾಡಲಿ ಬೇಸರವೇನಿಲ್ಲ - ಜೊತೆಗೆ ಒಂದಿಷ್ಟು ನಲಿವೂ ಉಲಿಯಲಿ - ನಗುವಿನಾಸೆಯಲಿ ಭರವಸೆಯ ಬೆಳಕ ಹಾಡೊಂದು ಮೂಡಲಿ...
ಜಾರದಿರಲಿ ಕಣ್ಣ ಹನಿಯು ನೋವ ಬಾಧೆಗೆ - ಹನಿಯುತಿರಲಿ ಸದಾ ಕಣ್ಣು ನಲಿವ ಸೋನೆಗೆ...
ನೋವಲೂ ನಗಬಲ್ಲ - ನಗುವಲ್ಲಿ ನಾನೆಂಬ ಅಹಂನಿಂದ ಬೀಗದಿರಬಲ್ಲ - ನನ್ನ ನಾನೇ ಸಲಹಿಕೊಳ್ಳಬಲ್ಲ ಒಂಚೂರು ಚೈತನ್ಯ ನನ್ನೊಳಗನ್ನು ತುಂಬಿ ನನ್ನ ಬಾಕಿ ಇರುವ ದಿನಗಳ ಬೆಳಗಲಿ...
ಹಾಗಂತ ನಂಗೆ ನಾನೇ ಶುಭಕೋರಿಕೊಳ್ಳುತ್ತಿದ್ದೇನೆ...:) :)
ಒಂದಿಷ್ಟು ನಗುವ ಉಸಿರಾಡುವ ಬಯಕೆಯ ನಾಳೆಗಳ ಹಾಜರಿಗೆ ನಿಮ್ಮದೂ ಪ್ರೀತಿಯ ಹಾರೈಕೆಯಿರಲಿ...:) :) :)


Sunday, July 14, 2013

ಗೊಂಚಲು - ಎಪ್ಪತ್ತು ಮತ್ತೇಳು.....

ಕಾಡಿ ಹಾಡುವ ಆಷಾಢ.....
( ಪೋಲಿ ಮನದ ಬಿಸಿ ಬಿಸಿ ಕಲ್ಪನೆಗಳು...)

ನನ್ನೀ ಬದುಕಿನ ಒಲವ ಮೂಲ ಧಾತುವೇ -
{ಇದೆಂಥ ಸಂಬೋಧನೆ ಅಂತ ಬೈಕೋಬೇಡ...ಯಾಕೋ ಹಾಗೆ ಕೂಗಬೇಕನಿಸ್ತು...;)}
ಈ ಊರು ನನ್ನ ಅಮ್ಮನ ಮನೆ. ಮಲೆನಾಡ ಪುಟ್ಟ ಹಳ್ಳಿ. ಇಲ್ಲೀಗ ಬರೀ ಮಳೆಯ ಹಾಡು. 
ಗೋಪಿ ಹಕ್ಕಿಯ ಸುಪ್ರಭಾತ, ಸುರಿವ ಜಿಟಿ ಜಿಟಿ ಮಳೆ, ರಾತ್ರಿಯಾದರೆ ಕಪ್ಪೆ - ಜೀರುಂಡೆಗಳ ಜೋಗುಳ. ಅಪ್ಪನ ಪ್ರೀತಿ, ಅಮ್ಮನ ಆರೈಕೆ, ಹಲಸಿನ ಹಣ್ಣಿನ ಕಡು, ಬಕ್ಕೆ ಹಣ್ಣಿನ ಮುಳಕ, ಸಂಜೆಯಾದರೆ ಸುಟ್ಟ ಗೇರುಬೀಜದ ಘಮ ಒಡಲ ತುಂಬ.
ಅಂಗಳಕ್ಕೆ ಕಾಲಿಟ್ಟರೆ ಮೆತ್ತಿಕೊಳ್ಳೋ ಪಿಚಿ ಪಿಚಿ ರಾಡಿ ಮಣ್ಣು, ಕಚ್ಚುವ ಸೊಳ್ಳೆ - ನೊರ್ಜು - ಉಂಬಳ. 
ಆಸ್ವಾದಿಸಲು ಎಷ್ಟೆಲ್ಲ ಇದೆ ಇಲ್ಲಿ. 
ಮೊದಲೆಲ್ಲ ಮಳೆಯೆಂದರೆ ಬಾಲ್ಯ ನೆನಪಾಗುತಿತ್ತು. 
ಆದರೀಗ ನಂಗಿಲ್ಲಿ ಎಲ್ಲೆಂದರಲ್ಲಿ ನಿನ್ನ ನೆನಪಾಗುತ್ತಿದೆ. 
ಇದು ವಿರಹದುರಿಯ ಅರಿವಾಗಿಸುತಿರುವ ನಮ್ಮೀರ್ವರ ಮೊದಲ ಆಷಾಢ. 
ದೇಹದುನ್ಮಾದ ಇಳಿದ ಮೇಲೂ ತಬ್ಬಿ ಮಲಗೋ ನಿನ್ನ ಒಲವಿನೊನಪಿನ ನೆನಪು ನನ್ನ ರಾತ್ರಿಗಳ ದೀರ್ಘವಾಗಿಸುತ್ತಿದೆ ಇಲ್ಲಿ.
ಮುಂಜಾನೆ ಕಣ್ಣುಜ್ಜುತ್ತ ಏಳುವ ನನ್ನೆಡೆಗೆ ಅಮ್ಮ ಎಲ್ಲ ಅರ್ಥವಾದವಳಂತೆ ತುಂಟ ನಗು ಬೀರುತ್ತಾಳೆ. 
ನಾ ಮಾತ್ರ ಕಾಣಬಹುದಾದ ನಿನ್ನ ಹಲ್ಲಿನ ಪ್ರೇಮದ ಗುರುತು ನೀನಿಲ್ಲದ ಒಬ್ಬಂಟಿ ಸ್ನಾನದ ಮನೆಯಲ್ಲಿ ನನ್ನ ಕೆಣಕುತ್ತೆ. 
ನನ್ನ ಖಾಲಿ ನಡುವಿನ ಮೇಲೆ ನಿನ್ನ ಕಿರುಬೆರಳು ಗೀಚುತಿದ್ದ ನನ್ನ ಹೆಸರಿನ ಮೊದಲಕ್ಷರದ ಕಚಗುಳಿಯ ನೆನಪು ನನ್ನ ಕಾಲ ಕಿರುಬೆರಳೂ ರೋಮಾಂಚಿತವಾಗಿ ನಿನ್ನೆಡೆಗೆ ತುಡಿವಂತೆ ಮಾಡುತ್ತೆ. 
ಗೆಳತಿಯಂಥ ಅಮ್ಮನನ್ನ ಕೇಳಿದ್ದೆ ಮೊನ್ನೆ, ವಿರಹದಲ್ಲಿ ದೇಹವೇ ಹೆಚ್ಚಾಗಿ ಕಾಡುವುದೇತಕೆ..?
ಅಮ್ಮ ನಗುತ್ತ ಹೇಳಿದ್ದಿಷ್ಟು : ಮೊದಲಾಗಿ ಎಂಥ ಪ್ರೇಮವನ್ನೂ ವ್ಯಕ್ತಪಡಿಸಬೇಕಾದದ್ದು ಇದೇ ದೇಹದಿಂದಲೇ. ಅಲ್ಲದೇ ಹಿರಿಯರು ತೋರಿಸಿದವರೊಡನೆ ಬದುಕ ಹಂಚಿಕೊಳ್ಳೋ ಸಂಪ್ರದಾಯಕ್ಕೆ ಒಗ್ಗಿಕೊಂಡ ಸಮಾಜ ನಮ್ಮದು. ಹಾಗಾಗಿ ಎರಡು ಮನಸುಗಳು ಒಂದಿಷ್ಟು ಬೆಸೆಯುವ ಮೊದಲೇ ದೇಹಗಳಿಗೆ ವಿಶೇಷಾಧಿಕಾರ ದಕ್ಕಿ ಒಗ್ಗಿಬಿಟ್ಟಿರುತ್ತವೆ. ನಿಂಗಿದು ಮೊದಲ ಆಷಾಢ. ದೇಹೋನ್ಮಾದದ ಪರ್ವಕಾಲ. ಇನ್ನೀಗಷ್ಟೇ ಕಾಮ ವಿಜೃಂಭಿಸಿ ಬೆವರಾಗಿ ಇಳಿದು ಇಷ್ಟಿಷ್ಟಾಗಿ ಪ್ರೇಮವಾಗಿ ಹರಳುಗಟ್ಟಿ ಮಗುವಾಗಿ ಆಚೆ ಬರಬೇಕಿದೆ ಕಣಮ್ಮಾ...
ಅಮ್ಮ ಎಷ್ಟೆಲ್ಲ ತಿಳ್ಕೊಂಡಿದಾಳಲ್ವಾ...
ಹುಡುಗಾ,
ಹೊಸ ಒಲವಿನೂಟಕ್ಕೆ ಮುನ್ನುಡಿಯಾಗಬಲ್ಲ ಈ ಆಷಾಢ ಕಳೆಯುವುದನೇ ಕಾಯುತ್ತ ಅರಳಿ ಮಿಡಿಯುತಿದೆ ನನ್ನೀ ಹೆಣ್ಣೆದೆ - ನಿನ್ನ ಪ್ರೇಮೋನ್ಮಾದದ ತೋಳಬಂಧಿಯ ತುಂಟಾಟಕೆ. 
ಆಷಾಢ ಕಳೆದರೆ ಶ್ರಾವಣವಂತೆ. 
ಹಬ್ಬಗಳ ಆರಂಭ. 
ವಿರಹ ಕಳೆದು ಒಲವು ನಲಿವುಗಳ ಹಬ್ಬಗಳಾಗಿ ಬರುವ ನಿನಗಾಗಿ ನಾನಿಲ್ಲಿ ಕಾಯುತ್ತಿದ್ದೇನೆ. 
ಮನಸನರಳಿಸಿಕೊಂಡು. 
ಬೆಚ್ಚಗಿನ ಹೊಸ ಕನಸ ಹೊಸೆದುಕೊಂಡು....

Saturday, June 22, 2013

ಗೊಂಚಲು - ಎಪ್ಪತ್ತಾರು.....

ಹೀಗೊಂದಿಷ್ಟು.....

ಬಾಳ ಪಯಣದ ತುಂಬ
ನಗೆ ಮಲ್ಲಿಗೆಯ ಚೆಲ್ಲಿ 
ಒಲವ ಗೀತೆಯ ನಾನು
ಹಾಡಬಲ್ಲೆನೇನು...
ಆಸೆ ದೋಣಿಯನೇರಿ
ನೋವ ಅಲೆಗಳ ಹಾರಿ
ಮಗುಚಿ ಬೀಳದೆ ನಾನು
ಆ ತೀರದೆಡೆಗೆ ತೇಲಬಲ್ಲೆನೇನು...

ಮರಣದೂರಿನ ಕಡೆಗೆ
ದಾಪುಗಾಲಿನ ನಡಿಗೆ
ಅರೆಕ್ಷಣವೂ ನಿಲ್ಲದೀ
ಕಾಲನಂಬಿನ ಚಲನೆ...
ದಾರಿ ಏರನು ಏರಿ
ಸುಸ್ತಾದ ಈ ಹೃದಯದಲಿ
ಏರಿಳಿವ ಪ್ರತಿ ಉಸಿರಲೂ
ಸತ್ತ ಕನಸಿನ ಹೆಣದ ವಾಸನೆ...

ಇದ್ದಲ್ಲಿ ಇರಲಾರದೀ
ಮಹಾ ಚಂಚಲ ಮನಕೆ
ಎಲ್ಲ ಮೀರುವ ಬಯಕೆ
ಆಗೊಮ್ಮೆ ಈಗೊಮ್ಮೆ...
ಗೆದ್ದುದೇನೂ ಇಲ್ಲ
ಬಾಯಿ ಬೊಗಳೆಯ ಬೆಲ್ಲ
ಕೈ ಮೀರಿದ್ದೇ ಎಲ್ಲ
ಹುಟ್ಟೊಮ್ಮೆ ಸಾವೊಮ್ಮೆ...

Wednesday, June 19, 2013

ಗೊಂಚಲು - ಎಪ್ಪತ್ತು ಮತ್ತೈದು.....

ಮನಸು ಅಳುವಾಗ ಕುಣಿವ ಭಾವಗಳು.....
(ಇವೆಲ್ಲ ಬರೀ ಸಂಚಾರೀ ಭಾವಗಳಷ್ಟೇ...)

* ನಗುತಿರುವಾಗ ಹತ್ತಿರವೂ ಸುಳಿಯದ ಅಮ್ಮನ ನೆನಪು ಮನಸು ಅಳುವಾಗ ಮಾತ್ರ ಬಿಡದೆ ಕಾಡುತ್ತೆ ಯಾಕೆ...?
ನನ್ನೀ ಮನಸಿನ ಕ್ರೂರ ಸ್ವಾರ್ಥಕ್ಕೆ ಏನೆನ್ನಲಿ...

* ಪ್ರೀತಿ ಕೊಡುವುದೆಂದರೇನೆಂದೇ ಗೊತ್ತಿಲ್ಲದವನಿಗೆ ಪ್ರೀತಿಸುವುದ ಕಲಿಸ ಹೋಗಿ ತಮಗೆ ತಾವೇ ನೋವ ಮಾಡಿಕೊಂಡವರಿಗೆಲ್ಲ ಒಂದು ಋಣದ ನಮನ ಸಲ್ಲಿಸಬೇಕೆನ್ನಿಸುತ್ತೆ ಆಗಾಗ...ಅದಕ್ಕೂ ನಾನೆಂಬ ನನ್ನ ಅಹಂ ಅಡ್ಡಬರುತ್ತೆ...ಪಾಪಿ ಕಲ್ಲು ಮನಸಿನ ಕರಗದ ಕೊಬ್ಬಿಗೇನೆನ್ನಲಿ...

* ಮನಸು ತೀವ್ರವಾಗಿ ಕಂಗಾಲಾದಾಗ ಗಂಡಸು ಹೆಂಡ ಇಲ್ಲವೇ ಹೆಣ್ಣಿನ ಸಂಗಕ್ಕೆ ಜಾರುತ್ತಾನೆ - ಹಾಗಂತ ಕೇಳಿದ್ದಿದೆ...
ಮನಸು ಮಗುಚಿ ಬಿದ್ದು ತೀವ್ರವಾಗಿ ರೋಧಿಸುತಿರುವಾಗಲೂ ಹೆಂಡವ ಒಡಲಿಗಿಳಿಸಿಕೊಳ್ಳಲೂ, ಬಳಿಬಂದವರಿಗೆಲ್ಲ ದಕ್ಕಿಯೂ ಯಾರವಳೂ ಆಗದವಳ ತೋಳ ಸೇರಲೂ ಅಡ್ಡಬರುವ ಹಾಳು ಜನ್ಮ ಸಂಸ್ಕಾರ...
ನಿದ್ದೆಯನೂ ಕೊಂದು ಕಣ್ಮುಂದೆ ಕುಣಿವ ಬದುಕ ವಾಸ್ತವಗಳು...
ನಾನು ಸಾವನ್ನು ಪ್ರೀತಿಸಲಾರೆ - ಬದುಕು ನನ್ನ ನಾ ಬಯಸಿದಂತೆ ಸಲಹಲಾರದು...
ಹುಚ್ಚುಚ್ಚು ಉಪದ್ವ್ಯಾಪಿ ಆಲೋಚನೆಗಳು...
ನಾನ್ಯಾಕೆ ಹೀಗಾದೆ...???

* ಬೆಸೆದುಕೊಂಡ ಯಾವ ಭಾವ ಬಾಂಧವ್ಯವನೂ ತುಂಬ ಕಾಲ ಚಂದಗೆ ಸಲಹಿಕೊಳ್ಳಲಾಗದ ನನ್ನದೇ ಮನದ ವೈಕಲ್ಯಕೆ ನಾನಿಟ್ಟುಕೊಂಡ ಹೆಸರು - ನಾನು ನಿಷ್ಠುರವಾದಿ...
ನೇರಾ ನೇರ ಮಾತಾಡಿದೆನೆಂದು ಬೀಗುತ್ತಿದ್ದರೆ ನಾನು - ನಗಲೆಂದು ನನ್ನ ಕೈಹಿಡಿದ, ನನ್ನ ಒಂದಷ್ಟು ನಗುವಿಗೆ ಕಾರಣವಾದ ಬಾಂಧವ್ಯವೊಂದು ಒಳಗೇ ನೋಯುತ್ತ ಸಾಯುತ್ತಿರುತ್ತದೆ...

* ಮೌನವೆಂದರೆ ಬೆಚ್ಚಿಬೀಳುವ ನಾನೇ ಒಂದಿಷ್ಟು ಮೌನಿಯಾಗಲು ಬಯಸುತ್ತಿದ್ದೇನೆ...
ಮಾತೇ ಎಲ್ಲವೂ ಎಂಬಂತೆ ಬದುಕಿದ ನಾನು ಫಿಲ್ಟರ್ ಇಲ್ಲದ ನಾಲಗೆ ಆಡಿದ ಅದೇ ನನ್ನ ಅತಿಯಾದ, ಶ್ರುತಿಯಿಲ್ಲದ ಮಾತುಗಳಿಂದ ಮನಸುಗಳ ನಡುವಣ ಬಂಧ ಸಾಯುವ ಭಯವು ಕಾಡುವ ಹೊತ್ತಲ್ಲಿ ನನ್ನದಲ್ಲದ ಮೌನಕ್ಕೆ ಒಮ್ಮೆ ಶರಣು ಹೋಗಬೇಕೆಂದುಕೊಳ್ತೇನೆ...
ಹಸಿವಾದಾಗ ಕರುವಿಗೆ ತಾಯ ನೆನಪಾದಂತೆ ಮಾತು ತನ್ನ ಹರಿತದಿಂದ ಮನಸ ಕೊಂದದ್ದು ಅರಿವಾದ ಘಳಿಗೇಲಿ ಮೌನದ ನೆನಪಾಗುತ್ತಿದೆ...
ಮನಸಿಗೆ ಬುದ್ಧಿ ಬಂದು ಮಾತು ಮೌನಗಳ ನಡುವೆ ನಾನು ಮಧುರ ಸಮನ್ವಯ ಸಾಧಿಸಿಕೊಳ್ಳುವುದೆಂದು...
ಎಲ್ಲ ಕಂಗಾಲು ಕಂಗಾಲು...

* ಸುತ್ತ ಪ್ರೀತಿ ಹಂಚುವವರ ಸಂತೆಯೇ ಇದ್ದೂ ಆಗಾಗ ಅಲ್ಲಲ್ಲಿ ಒಂಟಿ ಭಾವ ಇನ್ನಿಲ್ಲದಂತೆ ಕಾಡುತ್ತೆ...
ಮನಸು ಅಯೋಮಯವಾಗುತ್ತೆ...
ಒಂದು ಕ್ಷಣ ಕಾಡಿದ ಒಂಟಿ ಭಾವವೇ ಇಷ್ಟೊಂದು ಕಂಗೆಡಿಸುವುದಾದರೆ ಜನ್ಮವಿಡೀ ಒಂಟಿಯೇ ಆಗಿಹೋದವರ ಪಾಡೇನು...???

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, June 18, 2013

ಗೊಂಚಲು - ಎಪ್ಪತ್ನಾಕು.....

ಶೀರ್ಷಿಕೆ ಇಲ್ಲದ ಭಾವಗಳು.....
(ಇವೆಲ್ಲ ಬರಹವಾಗಿ ಅತಿ ಸಾಮಾನ್ಯ ಸಾಲುಗಳು - ಆದರೆ ಬದುಕಾಗಿ...)

* ಕನಸಲ್ಲಿ ಬರೆದ ಕವನ ನಿನ್ನ ಹೆಸರು...

:::^:::

* ಕೊಟ್ಟಾತನಿಗದು ಏನೂ ಅಲ್ಲದಿರಬಹುದು...
ಬರೀ ಒಂದು ಪಾವಲಿ (ನಾಣ್ಯ) - ಒಂದು ಮುಗುಳ್ನಗುವೇ ಇರಬಹುದು...
ಆದರೆ ಪಡೆದಾತನಿಗೆ ಅದೇ ಎಲ್ಲವೂ ಆಗಿದ್ದೀತು...
ಭಿಕ್ಷೆಯಾದರೆ ಒಪ್ಪತ್ತಿನ ಊಟ - ಪ್ರೀತಿಯಾದರೆ ಒಂದಿಡೀ ಜನ್ಮ ಉಸಿರಾಡಿಕೊಂಡಿರಲೊಂದು ಕಾರಣ...

@@@

* ಮೌನ ನನಗರ್ಥವಾಗಲ್ಲ - ನೀನು ಮಾತೇ ಆಡಲ್ಲ...
ನಾನು ಅಗತ್ಯಕಿಂತ ಹೆಚ್ಚೇ ಬಯಲು - ನೀನು ಗುಹೆಯೊಳಗಿನ ಕತ್ತಲು...
ಮೌನ ನಿನ್ನ ಗುಣವಾ ಅಥವಾ ಮಾತಾಡೋ ಮನಸಿಲ್ಲವಾ..?
ಗೊಂದಲ ನನಗೆ...
ಆದರೂ ನಿನ್ನ ಕಿವಿಗಳು ನಂದೇ ಅಂದ್ಕೊಂಡು ಸುರಿಯುತ್ತಲೇ ಇರುತ್ತೇನೆ ನನ್ನ ಮುಗಿಯದ ಹಳಸಲು ಶಬ್ದಗಳ...:(

* ನಿನ್ನನಿಷ್ಟು ನಗಿಸಿ ನಿನ್ನೊಂದಿಗಿಷ್ಟು ನಗಬೇಕೆಂದು ಮಾತಿಗೆ ಶುರುವಿಡುತ್ತೇನೆ ಪ್ರತಿ ಬಾರಿಯೂ...
ನಿನ್ನ ಕಣ್ಣೀರೊಂದಿಗೆ ಮಾತು ಮುಗಿಯುತ್ತದೆ...
ಹಾಗಾದಾಗಲೆಲ್ಲ ಜಗಳ ತಪ್ಪಿಸಲು ಒಂದಷ್ಟು ಕಾಲವಾದರೂ ಮೌನದ ಮೊರೆಹೋಗಬೇಕೆಂದುಕೊಳ್ಳುತ್ತೇನೆ. ಆದರೆ ಮಹಾ ವಾಚಾಳಿ ನಾನು. ಮೌನ ಸಾಧಿಸುವುದೆಂತು ಸಾಧ್ಯ. ಅದೂ ಎಲ್ಲವನೂ ಅರುಹಿ ಹಗುರಾಗಬಹುದಾದ ನಿನ್ನ ಸ್ನೇಹದೊಂದಿಗೆ...
ಸರಿ ಗಂಭೀರ ವಾದವನ್ನಾದರೂ ನಿಲ್ಲಿಸೋಣ ಅಂದುಕೊಳ್ತೇನೆ. ಆದರೆ ನಿನ್ನೊಡನೆ ಮಾತಿಗೆ ಮಿತಿ ಹಾಕಿಕೊಂಡರೆ ನಿನ್ನ ವಿನಾಕಾರಣದ ಪ್ರೀತಿಯೊಂದಿಗೆ ಕೊಬ್ಬು ತೋರಿ ನನ್ನ ಅಮಿತ ಖುಷಿಗಳಿಗೆ ನಾನೇ ಎರವಾದಂತಲ್ಲವಾ...
ಬೆರೆಯಲಾರದ - ತೊರೆಯಲಾಗದ ನನ್ನ ತೊಳಲಾಟಕೇನೆನ್ನಲಿ...
ಇನ್ನೀಗ ನಾನೇನ ಮಾಡಲಿ - ನಗಿಸಬೇಕೆಂದು ಹೊರಟೂ ಅಳುವಂತೆ ಮಾಡೋ ನನ್ನ ಸ್ವಭಾವದ ದೌರ್ಬಲ್ಯಕ್ಕೆ ನನ್ನ ನಾನೇ ಹಳಿದುಕೊಂಡು ನಿನ್ನೆದುರು ಮಂಡಿಯೂರಿ ಕ್ಷಮೆಯ ಕೋರುವುದರ ಹೊರತಾಗಿ...
ನೀನಾದರೋ ನೀಡಿದೆಲ್ಲ ನೋವನೂ ಮೌನದಲೇ ನುಂಗಿ ಮತ್ತೆ ನಗುತಲೇ ಮಾತು ಶುರುವಿಡೋ ಮೌನಗೌರಿ...

***^^^***

* ಕಿಸೆ ಖಾಲಿಯಿರುವಾಗ ಹೊಟ್ಟೆಗೆ ಹಸಿವಾಗಬೇಕು ಅಥವಾ ಹಂಗಿನ ಊಟದಲ್ಲಿ ಹಸಿವ ನೀಗಿಸಿಕೊಳ್ಳಬೇಕಾದ ಅಸಹಾಯಕತೆ ಕಾಡಬೇಕು...
ಹಾಗಾದಾಗ ಮಾತ್ರ ಹಸಿವಿನ ಕಷ್ಟ ಮತ್ತು ಅನ್ನದ ಬೆಲೆಯ ಅರಿವಾದೀತು...

* ಹಸಿ ಹಸಿ ಬೆಳಗಲ್ಲಿ ಬಿಸಿ ಬಿಸಿ ದೋಸೆ ತಿನ್ನಿಸಿ ನನ್ನ ಮತ್ತು ಮನೆತುಂಬ ಇರುತಿದ್ದ ನನ್ನದೇ ವಾರಗೆಯ ಮಕ್ಕಳ ಹೊಟ್ಟೆಯ ತುಂಬಿಸಿ ತಾನು ಮಾತ್ರ ತಂಗಳನ್ನಕ್ಕೆ ಉಪ್ಪು ನೆಂಜಿಕೊಂಡು ಹಸಿವ ಅಡಗಿಸಿಕೊಳ್ಳುತಿದ್ದ ನನ್ನ ಸಣ್ಣತ್ತೆ ನಂಗಿಂದಿಗೂ ದೇವತೆಯಂತೆ ಕಾಣ್ತಾಳೆ...

* ಎಲ್ಲಾ ಇದ್ದೂ ಬೇಯಿಸಿಕೊಳ್ಳೋ ತ್ರಾಣವಿಲ್ಲದೇ ಉಪವಾಸ ಮಲಗೋ ಹಿರಿಯರ ಕಂಡಾಗಲೆಲ್ಲ ಕಣ್ಣ ಹನಿಯೊಂದಿಗೆ ಅಮ್ಮನ ನೆನಪಾಗುತ್ತೆ...

* ಏನೇನೋ ಭ್ರಮೆಗಳಿಗಾಗಿ ಅಥವಾ ರುಚಿಯ ಬಾಯಿ ಚಪಲಕ್ಕಾಗಿ ಊಟದಿಂದ ದೂರ ಓಡುವ ಕಿರಿಯರ ಕಂಡಾಗಲೆಲ್ಲ ಅವರದು ಪ್ರಾಯದ ಸೊಕ್ಕಿನಂತೆ ತೋರಿ ಕೋಪ ಮಿಶ್ರಿತ ಬೇಸರವಾಗುತ್ತೆ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, May 6, 2013

ಗೊಂಚಲು - ಏಳು x ಹತ್ತು + ಮೂರು.....

ಮತ್ತಷ್ಟು ತುಂಡು ಭಾವಗಳು -
ಆಗಾಗ ಅಲ್ಲಲ್ಲಿ ಉಲಿವ ಪ್ರೇಮದ ಕೊಳಲು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಕಾರಣ ಕೇಳಬೇಡಿ)

ಮುಂಬೆಳಗಲ್ಲಿ ಕೇಳಿದ ನಿನ್ನ ಇನಿದನಿ - ಈ ಇಳಿ ಸಂಜೆಯಲೂ ಕಿವಿಯಲಿ ರಿಂಗಣಿಸುತಲಿದ್ದು - ಈ ಸೋನೆ ಮಳೆಯೊಂದಿಗೆ ಸೇರಿ ನನ್ನ ಮನವ ಮತ್ತೇರಿಸುತಿದೆಯಲ್ಲೆ ನನ ಗೆಳತಿ...

ನಿನ್ನ ಗುಂಗಲ್ಲಿ ಅಂದು ಆ ಪುಸ್ತಕದ ಕೊನೆ ಪುಟದ ಅಂಚಲ್ಲಿ ನಾ ಗೀಚಿದ್ದ ನವಿಲುಗರಿ ಇಂದು ನನ್ನ ಅಣಕಿಸುತ್ತಿದೆ....
ಚಿತ್ರದಾ ನವಿಲಗರಿಗೂ ಜೀವ ಬಂದೀತು ಮತ್ತೆ ಆ ನಿನ್ನ ನಗು ನನ್ನದಾದ ದಿನ...

ನೀ ಬಂದೀಯೆಂಬ ನಂಬಿಕೆಯ ಕನಸಿಂದಲೇ ಬದುಕಿಗೆ ಬಣ್ಣ ಬಂದಿದೆ ಕಣೆ...
ಇನ್ನು ನೀ ಬಂದೇ ಬಿಟ್ಟರೆ... 
ಬದುಕು ಬರೀ ಸಂಭ್ರಮವೇ ಸಂಭ್ರಮ... 
ಆದರೂ ಸಣ್ಣದೊಂದು ಅಳುಕು ಇದೆಲ್ಲಾ, ನೀ ಬರಬೇಕು ಎಂಬುದೆಲ್ಲಾ ನನ್ನ ಅತಿಯಾಸೆಯಾದೀತಾ...

ನಿನ್ನ ಪ್ರೀತಿ ಜೊತೆಯಿರುವುದಾದರೆ ಸದಾ - ಅಳಿವಿನ ಮಾತೇ ಇಲ್ಲದ ಬದುಕ ಪ್ರೀತಿ ನನ್ನದಾದೀತು.... 
ಹೇಳು ಬರುವೆಯಾ ಜತೆಯಾಗಿ ಬದುಕ ತುಂಬಾ...?

ಕೈಯಾಸರೆ ನೀಡೆಂದ ಗೆಳತಿಗೆ -
ನಿನಗಾಸರೆಯಾದೀತಾದರೆ ನನ್ನವೆರಡೂ ಕೈಗಳು ನಿಂದೇ ಕಣೆ - ನಾನಿರುವವರೆಗೂ...
ನೆನಪುಗಳಲಿ ನಗುವೆಯಾದರೆ ನಾನಳಿದಮೇಲೂ ಅವು ಬರೀ ನಿನ್ನವೇ...

ನಾಳಿನ ದುಃಖದ ಭಯಕ್ಕೆ ಇಂದಿನ ಈ ಕ್ಷಣದ ನಗುವ ಕಳಕೊಳ್ಳಲಾರೆ ನಾನು...
ಈ ಕ್ಷಣದ ನಿನ್ನೊಲವಿಗೆ ಬದುಕ ಪೂರ್ತಿಯ ಖುಷಿಗಳ ನಗುತಲೇ ತ್ಯಜಿಸಬಲ್ಲೆ...
ಈ ಕ್ಷಣದ ನಿನ್ನೊಲವ ನಗೆಯ ನೆನಪೆ ಸಾಕು ನಾ ನಾಳೆಗಳಲಿ ನಗುತಿರಲು...

ಕನಸಿನೂರಲ್ಲಿ ಕಂಡ ಚೆಲುವಿನ ಚಿತ್ರ ಬಿಡಿಸಿದೆ...
ಅದೀಗ ನಿನ್ನನೇ ಹೋಲುತಿದೆ - ಬದುಕಿಗೀಗ ಬಣ್ಣ ಬಂದಿದೆ...

ಮೊದಲ ಮಳೆಯ ತಂಪಲ್ಲಿ ನಿನ್ನ ನೆನಪಿನ ಘಮ... 
ಎದೆಯಲೆನೋ ಮಧುರ ಯಾತನೆ...

ಮಾತ ಮರೆಸಿದೆ ಗೆಳತಿ ನಿನ್ನೊಲವ ರೀತಿ... 
ಎದೆಯ ಮುತ್ತಂತೆ ನನಗೆ ಆ ನಿನ್ನ ಪ್ರೀತಿ... 
ಮನದ ಬಾಗಿಲ ತೆರೆದು ಮಲಗೆನ್ನ ಒಲವೆ... 
ಕನಸಲಿ ಬಂದು ತೊಡಿಸುವೆ ಮುತ್ತಿನೊಡವೆ...

ಈ ಚಂದಮ ಯಾಕಿಷ್ಟು ಕಾಡ್ತಾನೆ ನನ್ನ... 
ಅಮ್ಮನ ಮಡಿಲ ಕಂಪಿನಂತೆ - ನಿನ್ನ ನಗೆಯ ಬೆಳಕಿನಂತೆ...

ಬಾನ ಬಯಲಲ್ಲಿ ನಗುವ ಬಂಡಿ ಚಂದಿರ - ಒಟ್ಟೊಟ್ಟಿಗೆ ಅಮ್ಮನ ಹಣೆಯ ಬಿಂದಿಯಂತೆ ಮತ್ತು ನಿನ್ನ ಕೆನ್ನೆ ಗುಳಿಯಂತೆ ಗೋಚರಿಸಿ ನನ್ನ ಕಾಡುವ ಪರಿಯ ಹೇಗೆ ಅರುಹಲೆ ನಿನಗೆ ನನ್ನ ಪುಟ್ಟ ಗೆಳತಿ...

ನೀ ದೂರ ಮಾಡಿದ ಮೇಲೆ ನಿನ್ನೆದುರು ನಿಲ್ಲುವ ನೋವ ಭರಿಸುವ ಶಕ್ತಿ - ನಿನ್ನೆದುರು ಅತ್ತು ಹಗುರಾಗಲೂ ಆಗದೇ ಮಿಡುಕಾಡುವ ನನ್ನ ಪುಟ್ಟ ಹೃದಯಕ್ಕೆಲ್ಲಿಂದ ಬರಬೇಕು ಗೆಳತಿ...

ಯಾರೂ ಯಾರದೇ ಕನಸಿನ ಪೂರ್ಣ ಚಿತ್ರವಾಗಲು ಆಗದು... 
ಕನಸಿನ ಚಿತ್ರದ ಅರ್ಧ ಬೆಳಕು ಸಿಕ್ಕರೂ ಕನಸುಗಾರನ ಬದುಕಿಗೆ ಹೊಸ ಬಣ್ಣ ಬರುತ್ತೆ ಕಣೆ... 
ಪೂರ್ಣ ಚಿತ್ರವೇ ಸಿಕ್ಕುಬಿಟ್ಟರೆ ಬದುಕಿಗೆ ಬಡಿದಾಡಲು ಕಾರಣವೇ ಇಲ್ಲದಂತಾದೀತಲ್ಲವೆ...

ನೀನಿರುವವರೆಗೂ ನಿನ್ನ ನೆರಳು ಸತ್ಯವೆ... 
ಬೆಳಕು ಸತ್ಯವಾದರೆ ನೆರಳೂ ಸತ್ಯವೇ ಮತ್ತು ನಿತ್ಯವೇ ಗೆಳೆಯಾ...

ಆ ಹಾಡು ನೆನಪಿದೆಯಾ... ?
ಕನಸಲ್ಲಿ ಬರುವ ರಾಜಕುವರನ ಕಣ್ಣಲ್ಲಿ ಕಣ್ಣಿಡು ನೆನಪಾದೀತು ಆ ಹಾಡು...
ಮಾತಿಲ್ಲದೂರಲ್ಲಿ ಮುಸ್ಸಂಜೆ ಮಬ್ಬಲ್ಲಿ , ನಾಕು ಕಂಗಳು ಒಂದೆ ಭಾವದಲ್ಲಿ ಹಾಡುತಿದ್ದ - ಒಲವು ಜಿನುಗುತಿದ್ದ ಮನಗಳ ಮಧುರ ಭಾವಗೀತೆ...

ಮನಸುಗಳ ಅರಳಿಸುವಂಥ ಕನಸುಗಳ ಹೊತ್ತು ತರುವ ಬಂಡಿ ಚಂದಿರ ಬಾನ ತುಂಬ ಹಾಲು ಚೆಲ್ಲಿ ನಗುತಲಿರುವ... 
ಯಾವ ಮಧುರ ನೆನಪೊ ಅವನ ಮನದಲ್ಲಿ... 
ಪಾಪಿ ನನ್ನ ನಿದ್ದೆ ಕೊಲ್ಲುವ...

ಗೆಳತೀ - ನೀ ಬಂದ ಮೇಲೆ ಮನಸಿಗೆ - ಕನಸು ಸಿಹಿಯಾಗದಿದ್ದೀತೇ..?

ತಂಗಾಳಿ, ಬೆಳದಿಂಗಳು, ಸಣ್ಣ ಮೌನ, ತಾರಸಿಯ ಮೇಲೆ ಒಂಟಿ ಅಲೆದಾಟ... 
ಹಾಳು ಮನಸಲ್ಲಿ ಹುಚ್ಚುಚ್ಚು ಕನಸುಗಳು...

ಕ್ಷಮಿಸಿಬಿಡು ಗೆಳತೀ - ನಿನ್ನ ಕಣ್ಣಂಚ ನಗುವಾಗಬೇಕೆಂದು ಬಯಸಿದೆ - ಬದುಕ ಕರುಣೆ ತಪ್ಪಿ ಕಣ್ಣ ಹನಿಯಾಗಿ ನಿಂಗೆ ನೋವ ತಂದೆ...

ಗೆಳತೀ - ಹೃದಯಗಳ ಭಾವನಾತ್ಮಕ ಸಂವಹನವನ್ನು ದೈವಿಕವೆಂದರೆ ನೀನು, ತಪ್ಪೆನ್ನಲಾರೆ ನಾನು....
ಪ್ರೀತಿಯೇ ದೇವರಲ್ಲವಾ...

ತಾರೆಗಳೂ ಮೋಹಗೊಳ್ಳುವಂತ ಚೆಲುವ ನಿನ್ನ ರಾಜಕುವರ...!!!
ಹೊರ ಹೋಗದಂತೆ ಬಚ್ಚಿಟ್ಟುಕೋ ಕಣ್ಣ ಪಾಪೆಯಲ್ಲಿ....

ಗೆಳತೀ -
ಆಗಸದಿ ಚಂದಿರ ನಗುತಲಿರುವ... 
ಯಾಕೇಂತ ಕೇಳಿದ್ರೆ ಹೇಳದೆ ಸತಾಯಿಸುತಿರುವ... 
ನಿಜಾ ಹೇಳು ಏನ ಹೇಳಿದೆ ನೀ ಅವನಿಗೆ ಅಥವಾ ಹಾಗೆ ಸುಮ್ಮನೆ ಒಂದು ಪಪ್ಪಿ ಕೊಟ್ಟೆಯಾ....

ಸುರಿದ ಸಣ್ಣನೆಯ ಸೋನೆ - ಎದೆಯ ನೆಲದಲಿ ಇಂಗಿ - ಭಾವಗಳ ಝರಿಯಾಗಿ ಹೊರಚಿಮ್ಮುವುದು ಎಂಥಾ ಸೊಗಸು....

ಕಣ್ಮುಚ್ಚೆ ನನ ಗೆಳತಿ ಕನಸಲ್ಲಿ ಲಾಲಿ ಹಾಡುವೆ... 
ರಾಜಕುಮಾರ ಕುದುರೆಯೇರಿ ಬರುವ ಕಥೆಯ ಹೇಳುವೆ... 
ನಿದ್ದೆಯಲ್ಲೂ ನಾಚಿ ರಂಗೇರುವ ನಿನ್ನ ಮೊಗವ ಕಂಡು ನಾ ನನ್ನೇ ಮರೆವೆ... 
ಜೋ ಜೋ ಲಾಲಿ ಜೋ ಲಾಲಿ ಜೋಕಾಲಿ...

ಅವಳ ಕೇಳಿದೆ - 
ಕನಸಿನೂರಲ್ಲಿ ಕೋತು ಮುಗುಳ್ನಗುವಲ್ಲೆ ಕಾಡುವ ಚೆಲುವೆಗೊಂದು ಫೋನು ಮಾಡಬೇಕಿತ್ತು... 
ನಂಬರ್ ಕೊಡ್ತೀಯಾ...?
ಕನಸಲ್ಲೆ ಕೇಳೆಂದು ಕಣ್ ಮಿಟುಕಿಸಿ ನಕ್ಕಳು...:)

ಆ ಸಂಜೆ ಇಂತದೇ ಛಳಿಗಾಳಿಯಿತ್ತು ಮತ್ತು ನಿನ್ನ ಮುಂಗುರುಳು ತುಂಟಾಟವಾಡಿ ನನ್ನ ಕಾಡುತ್ತಿತ್ತು...

ಮಳೆಯ ಸೂಚನೆ - ನೀ ಬರುವ ಸೂಚನೆಯಾ ಮನಕೆ - ಸುರಿವ ಪ್ರೀತಿಜಲ ಹೊತ್ತು...
ಮಣ್ಣ ಕಂಪಿನ ಮೂಲಕ ನಿನ್ನೊಲವ ಕನಸು ನನ್ನ ಜೀವಕೋಶವ ಸೇರಿ...
ಎದೆಯ ರಂಗಮಂಟಪದಲೀಗ ನಿನ್ನ ಗೆಜ್ಜೆಯ ನಾದ...
ಉಸಿರ ತಿತ್ತಿಯಲೆಲ್ಲ ಪ್ರೇಮ ಜೀವೋನ್ಮಾದ...
ನಾನಾಗಲೇ ನಿನ್ನ ಕೆನ್ನೆಗುಳಿಯಲ್ಲಿ ನನ್ನ ಕಳಕೊಂಡು ಜನ್ಮಾಂತರಗಳೇ ಸಂದುವಲ್ಲೇ...
ಹೇಳು ನಿನ್ನೊಲವ ನನ್ನೊಲವಲಿ ಬೆರೆಸಿ ಈ ಸುರಿವ ಸೋನೆಯಲಿ ನಾಕು ಹೆಜ್ಜೆ ಜತೆ ಬಂದು ಬದುಕಿಗೂ ಗುಲ್ಮೊಹರ ಬಣ್ಣ ತುಂಬುವೆಯಾ...
ಬರುವೆಯಾದರೆ ನೀನು ಇನ್ನಷ್ಟು ಕಾಲ ನಾ ಉಸಿರಾಡಿಯೇನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, May 2, 2013

ಗೊಂಚಲು - ಏಳು x ಹತ್ತು + ಎರಡು.....

ಅರೆಜ್ಞಾನಿಯ ಒಂದಷ್ಟು ತುಂಡು ಭಾವಗಳು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಅರ್ಥ ಕೇಳಬೇಡಿ)


ಸಾವ ಭಯ ಗೆಲ್ಲೆಂದು ಬೋಧಿಸುವಾತನನ್ನು ಸನ್ಯಾಸಿಯೆಂದು ಗೌರವಿಸಿ ಸಾಷ್ಟಾಂಗವೆರಗುತ್ತೇವೆ.
ಸಾವ ಭಯವನ್ನು ನಿಜಕ್ಕೂ ಗೆದ್ದ ಸೈನಿಕನನ್ನು ನೆನೆಸಿಕೊಳ್ಳಲೂ ಪುರುಸೊತ್ತಿಲ್ಲ.
ನಿಜವಾದ ಸನ್ಯಾಸಿ ಯಾರು..?
ಸೈನಿಕನೇ ಅಲ್ಲವೇ..??

&&&

ಅವರವರ ಆಸಕ್ತಿಯಂತೆ ಅವರವರ ಬದುಕು.
ಪ್ರತಿಯೊಬ್ಬನೂ ತನ್ನ ಆಸಕ್ತಿಗಳಿಗೆ ತಕ್ಕಂತೆ, ಅವುಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲೇ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸ್ತಾನೆ.
ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ.
ಹೆಣ್ಣು, ಹೊನ್ನು, ಮಣ್ಣು, ದೇವರು, ದೆವ್ವ, ರಿಕಗ್ನಿಷನ್ ಹೀಗೆ ತರಹೇವಾರಿ ಆಸಕ್ತಿಗಳು.
ಅವರವರ ಆಸಕ್ತಿಗಳ ಸುತ್ತಲೇ ಅವರವರ ಬದುಕೂ ಗಿರಕಿಹೊಡೆಯುತ್ತಿರುತ್ತದೆ.
ಒಮ್ಮೆ ಮನಕ್ಕೆ ಒಪ್ಪಿದ ವೃತ್ತದಿಂದಾಚೆ ಹೆಜ್ಜೆಯಿಡಲು ಎಲ್ಲರೂ ಹಿಂಜರಿಯುತ್ತಾರೆ.
ಯಾಕೆ.? 
ಬಾವಿಯಿಂದಾಚೆ ಇಣುಕಿದರೆ ಸಾಗರ ಕಂಡೀತು ಎಂಬ ಭಯವಾ..?

&&&

ಕನಸು ಕಲ್ಪನೆಗಳನೆಲ್ಲ ಬದಿಗೊತ್ತಿ ಕೇವಲ ವಾಸ್ತವದ, ವರ್ತಮಾನದ ಚಿಂತನೆಯನ್ನು ಮಾತ್ರ ಮಾಡುತ್ತಲಿದ್ದರೆ ಬದುಕು ಯಾಂತ್ರಿಕವಾಗುತ್ತದಷ್ಟೇ.
ಬದುಕು ಯಾಂತ್ರಿಕವಾಗುವುದಕ್ಕಿಂತ ನರಕ ಮತ್ತೊಂದಿದೆಯಾ...
ಎಲ್ಲೋ ಓದಿದ ಗಾಲಿಬ್ ರ ಮಾತು ನೆನಪಾಗುತ್ತೆ - "ಒಬ್ಬ ಬ್ರಾಹ್ಮಣ ಹೇಳಿದ್ದಾನೆ. ಈ ವರ್ಷ ತುಂಬಾ ಚೆನ್ನಾಗಿದೆ ಎಂದು. ಈ ಮನಸನ್ನು ಇದೊಂದು ವರ್ಷ ಸಂತೋಷವಾಗಿಟ್ಟುಕೊಳ್ಳಲು ಅಷ್ಟು ನೆಪ ಸಾಕು..." ಎಂಬುದು ಆ ಮಾತಿನರ್ಥ.ಅವರ ಆ ಮಾತಿನಂತೆಯೇ ಈ ಕನಸು ಕಲ್ಪನೆಗಳೆಲ್ಲ. ಅವುಗಳ ಸಾರ್ಥಕ್ಯ ಅದಷ್ಟೇ. ಮನಸನ್ನು ಆ ಕ್ಷಣಕ್ಕೆ ಖುಷಿ ಖುಷಿಯಾಗಿಡುವುದು...

&&&

ಬದುಕೆಂಬ ಮೂರು ಚರಣಗಳ ಭಾವಗೀತೆಯಲ್ಲಿ ಪಲ್ಲವಿ ಜನನವಾದರೆ - ಕೊನೆಯ ಚರಣ ಮರಣ - ನಡುವಿನ ಅನುಪಲ್ಲವಿ ಜೀವನದಂತೆ. 
ಪಲ್ಲವಿ ಮತ್ತು ಕೊನೆ ಚರಣದ ನಡುವಣ 'ಅನುಪಲ್ಲವಿಯನ್ನು' ಎಷ್ಟು ಚೆನ್ನಾಗಿ ರಚಿಸಿ ಹಾಡಬಲ್ಲೆ ಎಂಬುದು ನಮ್ಮ ಬದುಕಿನ ಯಶಸ್ಸನ್ನು ಸೂಚಿಸುತ್ತದೆ.
ಅನುಪಲ್ಲವಿಯನ್ನು ಚಂದಗೆ ರಚಿಸಿ ಹಾಡಬಲ್ಲವರಾದಾಗ ಪಲ್ಲವಿಗೂ - ಕೊನೆ ಚರಣಕ್ಕೂ ಸಾರ್ಥಕ್ಯ ಒದಗಿಸಬಲ್ಲವರಾಗುತ್ತೇವೆ...

&&&

ಎಲ್ಲೋ ಅರಳುವ ಪ್ರೇಮ - ಇನ್ನೆಲ್ಲೋ ಕರಗುವ ಕಾಮ...
ಸನ್ನಿ ಲಿಯೋನ್ ಳ ಎದೆಯ ಸಂಪತ್ತಿಗೆ ರಾತ್ರಿ ಕನಸಲ್ಲಿ ಕಾಮ ಬೆವರುತ್ತಿದ್ದರೆ, ಮುಂಜಾನೆದ್ದು ಬಾಗಿಲಾಚೆ ಕಣ್ಬಿಟ್ಟರೆ ಎದೆಯ ಸೊಬಗೇ ಇಲ್ಲದ ಪಕ್ಕದ ಮನೆ ಮಾಧುರಿ ಕಣ್ಣಲ್ಲೇ ಪ್ರೇಮದ ರಂಗೋಲಿಗೆ ಚುಕ್ಕಿಯಿಡುತ್ತಿರುತ್ತಾಳೆ..
ಬದುಕೂ ಹಾಗೇ...
ಎಲ್ಲೋ, ಹೇಗೋ, ಯಾವುದರಲ್ಲೋ ಮೂಡುವ ಪ್ರೇಮ (ಇಷ್ಟ) - ಇನ್ನೆಲ್ಲೋ, ಇನ್ಹೇಗೋ, ಈಡೇರುವ ಕಾಮ (ಇಚ್ಛೆ)...
ಸಂತೆ ನಡುವೆ ಕೈಹಿಡಿವ ಪ್ರೇಮ - ಸಂಜೆ ಏಕಾಂತದಲಿ ಕಾಮವಾಗಿ ಕೆರಳುವ ಪರಿ ಏನೋ...
ಒಣ ಹುಲ್ಲ ಬಣವೆಯಲ್ಲಿ ಕಳೆದುಕೊಂಡ ಸೂಜಿಯಂಥ ನನ್ನವಳ ಪ್ರೇಮ - ಯಾರವಳೂ ಅಲ್ಲದ ಇನ್ನೊಬ್ಬಾಕೆಯ ಬೆವರಲ್ಲಿ ಲೀನವಾಗಿ ಸಂಭ್ರಮಿಸಿತು.
ಛೆ..
ಬದುಕು - ಪ್ರೇಮ - ಕಾಮಗಳೆಲ್ಲದರ ಅರ್ಥ ವೈಶಾಲ್ಯವನ್ನು ಮೊಟಕುಗೊಳಿಸಿಬಿಟ್ಟೆನೇನೋ ಅಲ್ಲವಾ..?

&&&&&


ಯಾರದೋ ಮನಸಿಗೆ, ಇನ್ಯಾರದೋ ಬದುಕಿಗೆ ಒಲ್ಲದ ಅಥಿತಿಯಾಗಿ ಅನಿವಾರ್ಯವಾಗಿ ಬದುಕಿರಬೇಕಾದ ಪರಿಸ್ಥಿತಿ, ವಿಚಾರಶೀಲ ಮನಸ್ಸು ಮತ್ತು ದೀರ್ಘಾಯಸ್ಸು ಈ ಮೂರನ್ನೂ ಕೊಟ್ಟು ಅಲ್ಲೆಲ್ಲೋ ಕುಳಿತು ಮಜ ನೋಡುವ ಆ ದೇವರು - ಅವನಿದ್ದದ್ದೇ ಆದರೆ ಆತನ ಹಿಂಸಾ ವಿನೋದದೆಡೆಗೆ ನನ್ನ ಧಿಕ್ಕಾರವಿದೆ...

&&&&&

ದೇಹದ ಉಸಿರು ನಿಂತ ಕಾರಣಕ್ಕೆ ಕಣ್ಗಳಲ್ಲಿನ ಕನಸುಗಳೂ ಸಾಯಬೇಕೆ.
ದೃಷ್ಟಿದಾನ ಮಾಡೋಣ...
ಇನ್ಯಾರದೋ ಕನಸುಗಳಿಗೆ ಜೀವ ಬಂದು ಅಲ್ಲಿ ನಮ್ಮ ಕನಸೂ ಜೀವಂತ...

@@@

ಬಂಡೆಯ ಭಾವ ಸುತ್ತುವರಿದ ಬೆಟ್ಟಕ್ಕೆ ಮತ್ತು ಸುತ್ತ ಮೊರೆವ ನೀರಿಗೆ ಮಾತ್ರ ಅರ್ಥವಾದೀತು... ದೂರ ನಿಂತು ಸ್ವಾರ್ಥದ ಕಣ್ಣಲ್ಲಿ ನೋಡುವವರ ಮೂದಲಿಕೆಗಳ ನೋವಿಗೆಲ್ಲಾ ನಿನ್ನ ಮನ ಬಂಡೆಯಾಗಲಿ...


@@@

ತುಂಬಾ ಪ್ರೀತಿಸುವ ನಿನ್ನೊಡನೆ ಪ್ರತಿ ಬಾರಿ ಜಗಳವಾಡಿದಾಗಲೂ ಇಬ್ಬರ ಮನಸ್ಸೂ ಇಷ್ಟಿಷ್ಟೇ ಬೆತ್ತಲಾಗುತ್ತಾ ಹೋಗಿ ಬಂಧವೊಂದು ಸದ್ದಿಲ್ಲದೇ ಸಾಯುತ್ತಿರುತ್ತದೆ. ನನ್ನೊಳಗಿನ ರಾಕ್ಷಸ ವಿಜಯದ ನಗು ನಗುತ್ತಾನೆ...


&&&

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ ಮತ್ತು ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...

****

ಹುಡುಗ ಹುಡುಗಿಯರೆಂಬ ಬೇಧವಿಲ್ಲದೇ ಎಲ್ಲ ಒಟ್ಟಾಗಿ ಕೂಡಿ, ಕುಣಿದು, ಕುಪ್ಪಳಿಸುವ ಸುಂದರ ಬಾಲ್ಯದ ಹುಡುಗಾಟಗಳದ್ದು ಒಂದು ತೂಕವಾದರೆ; ಹುಡುಗ ಹುಡುಗಿಯನ್ನು - ಹುಡುಗಿ ಹುಡುಗನನ್ನು ಕಣ್ಣಂಚಲ್ಲೇ ಕದ್ದು ನೋಡುವ, ಒಬ್ಬರನ್ನೊಬ್ಬರು ವಿನಾಕಾರಣ ಹುಡುಕಿಕೊಳ್ಳುವ, ಕಣ್ಣಲ್ಲೇ ನಗುವ, ಮಾತಾಡುವ, ಸಿಟ್ಟಾಗುವ ತುಂಟ ಚೆಲ್ಲಾಟಗಳ ಯೌವನದ್ದೇ ಒಂದು ತೂಕ...

####


ಭರವಸೆಯನೇನೋ ಕೊಡಬಹುದು, ಜೊತೆ ನಡೆವುದು ಸೊಗಸೂ ಹೌದು... ಆದರೆ ನಿನ್ನ ಬದುಕೆಂಬುದು ಅಂತಿಮವಾಗಿ ನೀ ಮಾತ್ರ ನಡೆಯಬೇಕಾದ ಒಬ್ಬಂಟಿ ದಾರಿ ಅನ್ನೋದು ಬದುಕ ಕಟು ವಾಸ್ತವ ಕಣೋ... ನನ್ನೊಲವಿನ ಜೀವ ನೀನು ತಾನೇ ತಾನಾಗಿ ನಡೆವುದ ಕಲೀಬೇಕೆಂಬುದು ನನ್ನಾಸೆ ಕಣೋ ಮರೀ...

&&&

ಹುಚ್ಚಮ್ಮಾ... ಹಳೆಯ ಕೊಳೆಯ ತೊಳೆದುಕೊಂಡು ಹೊಳೆಯಬೇಕೆಂದರೆ ಹೊಸ ನೀರ ಆಳದಲ್ಲಿ ಮುಳುಗೇಳಬೇಕು ಕಣೇ ಚಿನ್ನಾ... ನಿನ್ನ ಬದುಕು ಭಾವ ಎರಡೂ ವಿಸ್ತರಿಸೀತು... ಹೊಸದರೆಡೆಗೆ ನಾಕು ಹೆಜ್ಜೆ ಇಡುವ ಬಾ ಜೊತೆ ಜೊತೆಗೆ... ನಾಕು ಹೆಜ್ಜೆ ನನ್ನೊಡನೆ ಬಂದೆಯಾದರೆ ಐದನೇ ಹೆಜ್ಜೆ ನಾನಿಲ್ಲದೆಯೂ ಖುಷಿಯಿಂದಲೆ ಹೊಸದರೆಡೆಗೆ ತುಡಿವಂತೆ ಬೆಳೆದು ನಿಲ್ಲುವಿಯಂತೆ...

@@@

ಮನಸು ಎಲ್ಲೋ ಕಳೆದು ಹೋಗಿದೆ. ಸಿಕ್ಕವರು ಹಿಂದುರುಗಿಸಿ...
ಹಿಂದಿರುಗಿಸಲು ಮನಸಾಗದಿದ್ದರೆ ನಿಮ್ಮದನ್ನಾದರೂ ನಂಗೆ ಕೊಡಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)