Saturday, November 14, 2015

ಗೊಂಚಲು - ನೂರಾ ಅರವತ್ತೇಳು.....

ಏನೋ ಒಂದಿಷ್ಟು.....


ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...
ಮನೆಯಂಗಳದಿ ಕನಸ ಕಂದ 'ಪ್ರತೀಕ್ಷಾ' ಆಡುತಿರುವ ಭಾವದಲ್ಲಿ ಮೆದುವಾಗುತ್ತಾ - ಶುಭಾಶಯಗಳು...❤ ❤
***
ಪ್ರಜ್ಞೆಯ ಎತ್ತರ, ಭಾವದ ಆಳ ಎರಡೂ ಒಟ್ಟಾಗಿ ನಗುವುದು ತೀರಾ ತೀರಾ ವಿರಳ...
ಆತ್ಮದಲ್ಲಿ ಅಖಂಡ ಪ್ರೇಮವಿಲ್ಲದೇ ಕಣ್ಣಲ್ಲಿ ಹನಿ ಹುಟ್ಟಲಾರದೇನೋ - ಹುಟ್ಟಿದಲ್ಲಿ ಅದು ಹೆಣದ ವಾಸನೆಯಂತೆ ಅಸಹನೀಯ...
ಅಲ್ಲಲ್ಲಿ ಕೈಕುಲುಕೋ ಅಪವಾದಗಳಂಥ ಪ್ರಜ್ಞೆಯ ಎತ್ತರವ ನಗುವಲ್ಲೂ, ಭಾವದಾಳವ ಮೌನದಿಂದಲೂ ಮುಚ್ಚಿಡುವ, ಎದೆಯ ಹನಿಗಳನು ಪಾಲ್ತು ಫಾಲ್ತು ಮಾತುಗಳಿಂದ ಒಳಗೇ ಇಂಗಿಸಿಕೊಳ್ಳುವ ಶ್ರೀಮಂತ ಹೃದಯಗಳ ಸ್ನೇಹ ಸನ್ನಿಧಿ ಇನ್ನಷ್ಟು ಮತ್ತಷ್ಟು ದಕ್ಕಲಿ ಎನಗೆ...
***
ಮೊದಲ ಹೆಜ್ಜೆಗೆ ಪ್ರೀತಿ ಶಕ್ತಿಯಾಗಿ ನಡಿಗೆ ಕಲಿಸಿದವಳ ಹೆಜ್ಜೆ ನಡುಗುವ ಹೊತ್ತಲ್ಲಿ ತುಸು ಕೈ ನೀಡಬಲ್ಲೆನಾದರೆ ಬದುಕ ಋಣ ಅಷ್ಟಾದರೂ ಸಂದಂತೆ ಲೆಕ್ಕ...
***
ನೋವು, ನಗುವು - ಒಂದರ ನೆರಳು ಇನ್ನೊಂದು...
ಪರಿಸ್ಥಿತಿಯ ಮೇಲಾಟದಲ್ಲಿ ಈ ಕ್ಷಣ ಮತ್ತು ಈ ಕ್ಷಣದ ಗೆಲುವು ಮಾತ್ರ ನಿರ್ಣಾಯಕ ಎದೆಯ ಹಾಡಿನ ಯಾವ ಭಾವದ ನೆರಳು ಯಾವುದೆಂಬುದಕೆ...
ಸದಾ ಕೂಸುಮರಿಯಾಟ ಬೆನ್ನು ತಬ್ಬಿಯೇ ಹುಟ್ಟಿದ ಭಾವಗಳದ್ದು...
ನೋವು ನಗುವಿನ ಬೆನ್ನಿಗಂಟಿದ ಶಾಪ - ನಗುವು ನೋವಿನ ಮಡಿಲ ಶ್ರೀಮಂತ ಕೂಸು...
***
ಪ್ರಶ್ನೆ:
ಆ ಬಂಧ ನಿಂಗೇನು...?
ತಡಕಾಟವಿಲ್ಲದ ನೇರ ಉತ್ತರ:
ಏನೂ ಅಲ್ಲ ಮತ್ತು ಎಲ್ಲವೂ ಹೌದು...
ಅದು ಬದುಕು ಮತ್ತಾಸಾವಿನ ನಡುವೆಯ ಸಾಮರಸ್ಯದಂಥಾ ಭಾವ ಬಾಂಧವ್ಯ...
ಬದುಕ ವಿಜ್ರಂಭಣೆಯಲ್ಲಿ ಸಾವಿನ ಶ್ರೀಮಂತಿಕೆ - ಸಾವಿನ ಅಸ್ತಿತ್ವದಲ್ಲಿ ಬದುಕಿಗೆ ಫಲವಂತಿಕೆ ಇದ್ದಂತೆ...
ನಿರ್ಬಂಧಗಳ ಮೀರಿದ ನೀರ ಹರಿವಿನಂತೆ ಈ ಮನ ಮನಗಳ ನಡುವೆಯ ಪ್ರೀತಿ...
***
ಅವಳಂತಾಳೆ : ತೀವ್ರ ಆತ್ಮೀಕತೆ ಭಯ ಮೂಡಿಸುತ್ತೆ ಕಣೋ ಈಗೀಗ - ಆದ್ರೂ ಪ್ರತಿ ಜಗಳದ ನಂತ್ರಾನೂ ಪ್ರೀತಿ ತುಸು ಹೆಚ್ಚೇ ಆಗುತ್ತೆ - ಈ ಹೃದಯದ ಜಾದೂ ಅರ್ಥವೇ ಆಗಲ್ಲ...!!!
ನಿಜದ ಆತ್ಮೀಯತೆ ಮನಕೆ ಗೆಲುವ ತುಂಬುತ್ತೆ - ಭಯವೂ ಗೆಲುವಿನ ಆಕರವೇ ಅಲ್ಲವಾ - ಜಗಳವೂ ಆತ್ಮದ ಒಲವಿನ ಮೂಲವೇ ಆದೀತು ಆತ್ಮೀಯತೆ ಮನದ ಪ್ರಾಮಾಣಿಕ ಅಭಿಲಾಷೆಯಾಗಿದ್ದಾಗ - ಮೋಡ ಸೂರ್ಯನನ್ನಲ್ಲ ಚಂದಿರನನ್ನೂ ಮುಚ್ಚಿಡಲಾರದಲ್ಲವಾ ಬಹುಕಾಲ - ಹೃದಯದ ಜಾದುವಿನ ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪ್ರೀತಿಯೇ ಮತ್ತು ಪ್ರೀತಿಯೊಂದೇ; ಇದು ಎನ್ನೆದೆಯ ಪಿಸುಮಾತು...
ಪ್ರೀತಿಯ ನಮನಗಳು ಹೃದಯವಂತ ಸ್ನೇಹಿಗಳಿಗೆಲ್ಲ...❤ ❤ ❤

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, November 2, 2015

ಗೊಂಚಲು - ನೂರಾ ಅರವತ್ತರ ಮೇಲಾರು.....

ಮನದ ಖಜಾನೆಯಿಂದ.....
(ಹೀಗೆ ಬಂದು ಹಾಗೆ ಹೋಗುವ ಸಂಚಾರಿ ಭಾವಗಳು...)

ಇರುಳು ಮತ್ತು ನೆನಪುಗಳು ಸಂಭಾಷಣೆಗಿಳಿಯುತ್ತವೆ...
ಹನಿಗಳ ಹೀರಿಕೊಳ್ಳುತ್ತಾ ದಿಂಬು ಕಣ್ಣುಗಳ ಸಮಾಧಾನಿಸುತ್ತೆ...
ನೋವ ಕರಗಿಸಿಕೊಂಡು ಅಷ್ಟಿಷ್ಟು ಹಗುರಾದ ಮನಸು ಹಾಗೂ ಕನಸ ಸಲಹಿಕೊಂಡು ಒಂಚೂರು ಉಸಿರೆಳೆದುಕೊಳ್ಳಲು ತಾವು ಸಿಕ್ಕ ಪ್ರಜ್ಞೆ; ಎರಡರ ನಡುವೆಯ ಅನುಸಂಧಾನದಿಂದ ಮುಂಬೆಳಗಿಗೆ ದಕ್ಕಿದ ಕೊಡುಗೆ - ಅರೆಬರೆ ಪ್ರಶಾಂತ ನಗು...
ನಗುವೆಂದರೆ ಕನಸಿನ ಗೆಲುವಿನ ಭರವಸೆ...
ಬದುಕ ಗೆಲುವೆಂದರೆ ಇಷ್ಟೇ ಅಲ್ಲವಾ - ಹಗಲು, ಇರುಳಿನ ಸಮನ್ವಯ...
!!!
ದೇವನಾಗುವ ಬಯಕೆ - 
ಮೈಯ ತುಂಬ ರಕ್ಕಸ ರಕ್ತ - 
ಕೊನೇ ಪಕ್ಷ ಮನುಷ್ಯನೂ ಆಗಲು ಬಿಡದ ವ್ಯಾರ್ಘ ದೌರ್ಬಲ್ಯಗಳು - 
ಎಂಥ ಬಟ್ಟೆ ತೊಟ್ಟಿದ್ದರೂ ವಕೃ ದೃಷ್ಟಿಯ ಕಣ್ಣಲ್ಲಿ ಕಾಂಬುದೆಲ್ಲ ಬೆತ್ತಲೆಯೇ -
ಕೊಚ್ಚೆಯೇ ತೀರ್ಥ ಪ್ರಸಾದ ಹಂದಿ ಬದುಕಿಗೆ...
!!!
ನಗುವನುಳಿಸದ ನೆನಪುಗಳು - 
ಬೇರು ಸತ್ತ ಕನಸುಗಳು - 
ಬತ್ತಿದ ಕಣ್ಣ ಕೊಳ - 
ಭಾವಕ್ಕೆ ವೈಧವ್ಯ - 
ಮನಸಿಗೆ ಮಗು ಸತ್ತ ಸೂತಕ...
!!!
ಈ ಎದೆಯ ಗ್ರಹಿಕೆಯನೇ ಆ ಎದೆಗೂ ದಾಟಿಸಲಾರದ ಮಾತು - 
ನಗೆಹೊನಲ ಬಿತ್ತದ ಮಾತು - 
ಬಂಧ ಬೆಸೆಯದ ಮಾತು - 
ಭಾವ ಸ್ರವಿಸದ ಒಣ ಒಣ ಮಾತು ನನ್ನದು...
ಎದೆ ಎದೆಗಳ ನಡುವ ಬಯಲಿಗೆ ಕೋಟೆ ಕಟ್ಟುವ ಮೌನ - 
ಕರುಳ ಕೊರೆಯುವ ಮೌನ - 
ನಗುವಿಗೂ ಲೆಕ್ಕವಿಡುವ ಮೌನ - 
ಕಣ್ಣ ಹನಿಯನುಳಿದು ಮತ್ತೇನೂ ಬೆಳೆಯದ ಹಸಿ ಮೌನ ನನ್ನದು...
ಮಂತ್ರವಾಗದ ಮಾತು ಎಷ್ಟು ಹುಟ್ಟಿದರೇನು...
ಧ್ಯಾನವಾಗದ ಮೌನವ ಕಾಲವೂ ಧರಿಸಿದರೇನು...
ಫಲವಿಲ್ಲ ಜೀವಿತಕೆ...
ಇಷ್ಟೆಲ್ಲ ತಿಳಿದೂ ಹುಂಬ ದಡ್ಡ ನಾನು -
ಮಾತೆಂದರೆ ಜೀವಂತಿಕೆ, ಮೌನ ಮರಣ ನನಗೆ...
!!!
ಬೀದಿ ಬದಿಯ ಅನಾಥ ಕೂಸಿನಂತೆ ಹಳಸಿದನ್ನದಂಥ ನೆನಪುಗಳು, ಬಿಸಿ ತುಪ್ಪದಂತಹ ಕನಸುಗಳನುಂಡು ಜೀರ್ಣಿಸಿಕೊಂಡು ಹೆಣಗಾಟದ ನಗು ಬೀರುತ್ತಾ ಬೆಳೆದು ನಿಂತ ಬಯಲ ಪೈರು - ಬದುಕು...
ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನುಗ್ಗುವ ಎಂದೂ ಹಿಂಗದ ಹಸಿವಿನ ಪುಂಡು ಪೋಕರಿ ದನ - ಸಾವು...
"ಸಾವಿನ ಅಸ್ತಿತ್ವ ಬದುಕಿನ ಶಕ್ತಿ - ಬದುಕಿನ ನಗು ಸಾವಿನ ಸೌಂದರ್ಯ..."
!!!
ಎಲ್ಲರ ಬದುಕಿಗೂ ಅರಿವಿನ ಬೆಳಕಲ್ಲಿ ಆತ್ಮದ ಹಸಿವು ನೀಗೋ ಕೃಷ್ಣನಂಥ ''ಗುರು''ವು ''ಗೆಳೆಯ''ನಾಗಿ ದಕ್ಕಲಿ... 
!!!
ಮನಸೆಂಬ ತುಂಟಾಟದ ಮಗು ಕಳೆದೋಗಿದೆ ಭಾವದ ಹಸಿವಿಲ್ಲದವರ ಸಂತೆ ಬೀದಿಯ ಯಾವುದೋ ಕಿರು ಮೂಲೆಯಲ್ಲಿ...
ಅದರ ಆರ್ತ ಕೀರಲು ಕೂಗಿಗೆ ದಾರಿಯೂ ಕಿವುಡು...
ಮಾತು ಸತ್ತ ಮನೆಯ ಅಂಗಳದಿಂದಲೇ ಹೊರಟಂತಿದೆ ಕುರುಡು ಮೌನದ ಅಡ್ಡ ಪಲ್ಲಕಿ ಉತ್ಸವ...
ಸಾವಿರ ಗಾವುದ ಹೆಜ್ಜೆ ಸವೆದ ಮೇಲೂ ಸಾವು ಅನಾಥವೇ...
ನಿಂತುದಾದರೆ ಕಣ್ದುಂಬಿ ಘೋರಿಯೆದುರು, ಬಾಕಿ ಉಳಿದ ಕರುಳ ಕುಂಡಲಿಯೊಳಗಣ ಮಾತುಗಳ ಕವಿತೆಗಳು ಕಿವಿ ಸುಟ್ಟಾವು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, October 30, 2015

ಗೊಂಚಲು - ನೂರಾ ಅರವತ್ತೈದು.....

ಹೀಗಿಷ್ಟು ಮಾತು ಬಾಕಿ ಇತ್ತು.....
(ನನ್ನೊಂದಿಗೇ ನಾ ಆಡಿಕೊಳ್ಳಬೇಕಿದ್ದುದು...)

ಆತ್ಮೀಯತೆ : ಮನಸೊಂದು ಮತ್ತೊಂದು ಮನಸೊಂದಿಗೆ ಬೆಸೆದುಕೊಂಡ ಉನ್ನತ ಭಾವ ಸಾನ್ನಿಧ್ಯ...

ಆತ್ಮ ಸಾಂಗತ್ಯ : ಸುತ್ತಲಿನೆಲ್ಲ ಅಂಕೆಗಳ ಮೀರಿ ಆ ಮಡಿಲಿಗೋಡೋ ತುಡಿತವ ಹುಟ್ಟು ಹಾಕುವ, ಆ ಸನ್ನಿಧಿಯಲ್ಲಿ ನನ್ನತನದ ಹೆಸರಲ್ಲಿ ನಾನೇ ಕಟ್ಟಿಕೊಂಡ ಎಲ್ಲ ಗೋಡೆಗಳೂ ಉರುಳಿ ಬೀಳುವ, ಅಳುವಿಗೂ – ನಗುವಿಗೂ ಭರವಸೆಯ ಬೆಂಗಾವಲಾಗಿ ಮನಸ ಕಾಯುವ ಸ್ನೇಹದ ಹೆಗಲು...

ಆತ್ಮೀಯತೆ ಆತ್ಮದ ಸೌಂದರ್ಯ – ಸುಕ್ಕಾಗೋ ದೇಹದ ಹೊರ ಶೃಂಗಾರವಲ್ಲ...

ಅದು ಎದುರಿನವರ ದೂರ, ಆದರಗಳ ಹಂಗಿನಲ್ಲಿಲ್ಲ – ಪರಿಭಾವಿಸಿಕೊಂಡದ್ದು ನಾನು, ಕಾಲವೂ ಸಲಹಿಕೊಳ್ಳಬೇಕಾದದ್ದೂ ನಾನೇ...

ಸ್ನೇಹದ ದೀಪಕೆ ಗಾಳಿಗೆದುರಾಗಿ ಪ್ರೀತಿ ಬೊಗಸೆಯ ಆಸರೆ, ಬತ್ತಿಗೆ ಭಾವದೆಣ್ಣೆಯ ಪೂರೈಕೆ ನನ್ನಿಂದಲೇ ಆಗಬೇಕಲ್ಲವಾ – ನನ್ನ ಕರುಳ ಹಸಿವಿನ ಕೂಸಿನ ಆರೈಕೆಯ ಹೊಣೆ ನನ್ನದೇ ಅಲ್ಲವಾ...

ನನ್ನೊಳಗೆ ಹುಟ್ಟಿದ್ದು ನನ್ನೊಳಗೇ ಸಾಯಬೇಕು – ನನ್ನಾಳದ ಭಾವ ತೀವ್ರತೆ ಒಂದೇ ಅದರ ಮಾನದಂಡ...

ಈ ಅರಿವಿನೊಳಗೆ ಹುಟ್ಟಿದ ಆತ್ಮ ಸಖ್ಯತೆ ಅಡಿಗಡಿಗೂ ಎದುರಾಗೋ ಭಾವ ಭಿನ್ನತೆ, ದುಗುಡ, ಕಿತ್ತಾಟ, ಹುಚ್ಚಾಟಗಳ ನಡುವೆಯೂ ಅದೇ ತನ್ಮಯತೆಯ ಪ್ರಶಾಂತಿಯೊಂದಿಗೆ ಹರಿಯುತಿರಬಲ್ಲದು – ಅದು ಎದೆಯ ಮಂದಾಕಿನಿ...

ಅಂದಿನ ತೀವ್ರತೆ ಇಂದಿಲ್ಲ, ಮೋಹದ ಹಾಡಿಗೆ ಮೋಸವಾಯಿತು ಅನ್ನಿಸಿದರೆ ತಪ್ಪು ನನ್ನದೇ ಅನ್ನಬೇಕು – ಆ ದಾರಿಯ ಆಯ್ದುಕೊಂಡ ಪಥಿಕ ನಾನೇ ತಾನೆ...

ಅಹುದು, ಮನಸಿನ ಆತುರ ಆಯ್ಕೆಯ ಮೇಲೆ ಪ್ರಭಾವ ಬೀರದಿರಲಿ ಎಂಬುದು ಪ್ರಜ್ಞೆಯ ಮಾತು – ಅದನೂ ಮೀರಿ ಮನಸು ಆ ಕ್ಷಣವನಾಳಿದರೆ ಮಧುರ ಅನಾಹುತಗಳಿಗೆ ಬದುಕ ಮುಡಿ ಕೊಟ್ಟು ಸೆಳವು ಎಳೆದಂತೆ ತೇಲಿಬಿಡುವುದೊಳಿತು ಖುಷಿಯ ಹಸಿವಿಗೆ ಸೋತು...

ಹಾದಿಯ ಕಲ್ಲು ಮುಳ್ಳುಗಳಿಗೆ ಅಂಜಿದರೆ, ಸಣ್ಣ ಪುಟ್ಟ ಕವಲುಗಳಿಗೆಲ್ಲ ಕಂಗಾಲಾಗಿ ಹಿಂದಡಿಯಿಟ್ಟರೆ ಗಿರಿಯ ನೆತ್ತಿಯ ತಾಕಿ, ಮೋಡಕೆ ಮುತ್ತಿಕ್ಕಿ, ಇಬ್ಬನಿಯ ಮುಡಿಗೇರಿಸಿಕೊಂಡು ಖುಷಿಯ ನಿತ್ತರಿಸಿಕೊಳ್ಳಲಾಗದೇ ಬಿಕ್ಕುವುದು ಸಾಧ್ಯವಾ...

ಸ್ಪಂದನೆಗೆ ಒಡನಾಡೀ ಪ್ರತಿಸ್ಪಂದನೆ ಇಲ್ಲದೇ ಬಂಧ ನಗುವುದು ಹೇಗೆ, ಅದು ಬಂಧನವಾಗದೇ ಅನ್ನಿಸಿತು ಒಮ್ಮೆ; ಗೋಕುಲದಲ್ಲುಳಿದೇ ಒಲವನಾಳಿದ ರಾಧೆ, ಮಥುರೆಯ ರಾಜಕಾರಣಗಳ ನಡುವೆಯೂ ಕೊಳಲ ನಾದವ ಅವಳಿಗೆಂದೇ ಎತ್ತಿಟ್ಟ ಶ್ಯಾಮ, ಇಬ್ಬರೂ ಅಳಿದ ಮೇಲೂ ಅವರ ಸಾಂಗತ್ಯದ ಕಥೆ ಹೇಳುತ್ತ ಹರಿಯುತಲೇ ಇರುವ ಯಮುನೆ ಎಲ್ಲ ನೆನಪಾದರು...

ಸಾಂಗತ್ಯವೊಂದು ಭಾವವ ತಬ್ಬಿದಷ್ಟೇ ಉತ್ಕಟವಾಗಿ ಒಡನಾಟಕ್ಕೂ ದಕ್ಕಲಿ ಎಂದು ಬಯಸಿದರೆ ಅದು ಬರೀ ದುರಾಸೆಯಲ್ಲ ಹುಚ್ಚು ಮನಸಿನ ದುರಂತ ಕೂಡ ಅನ್ನುವುದು ಹಸಿ ಹಸಿ ಅನುಭವದ ಅಸಲೀ ಅರಿವು... 

ಹಾಗೊಂದುವೇಳೆ ಅಂಥದ್ದೇ ಒಡನಾಟವೂ ದಕ್ಕಿ ಬಿಟ್ಟರೆ; ಉಹುಂ ಅಂಥ ಬಾಂಧವ್ಯದ ನೆರಳು ಸೋಕಿದರೂ ಸಾಕು ನೋವೆಲ್ಲ ಶೇಷವುಳಿಯದಂತೆ ಭಾಗವಾಗಿ, ನಗುವು ತನ್ನಷ್ಟಕ್ಕೆ ತಾನು ಗುಣಿಸಿಕೊಂಡು ಬದುಕಿದು ಸ್ವರ್ಗವೂ ನಾಚುವ ನಾಟ್ಯ ಮಂಟಪವೇ ಸರಿ...

ನನ್ನ ಮಟ್ಟಿಗೆ ಆತ್ಮದೊಂದಿಗೇ ಸಖ್ಯ ಬೆಳೆಸಿಕೊಂಡ ಭಾವಕ್ಕೆ ಆಯಸ್ಸು ಆತ್ಮದಷ್ಟೇ – ಹಿರಿಯರ್ಯಾರೋ ಆತ್ಮ ಅವಿನಾಶಿ ಅಂದಂತೆ ಕೇಳಿದ ನೆನಪು... 

ಇದೀಗ ಅಲ್ಯಾರೋ ಆತ್ಮ ಸಾಂಗತ್ಯವೊಂದು ಸತ್ತು ಹೋಯಿತು ಅಂದರೆ ನಕ್ಕು ಬಿಡುತ್ತೇನೆ ಮತ್ತು ನನ್ನ ಎದೆಗೂಡಿನಲ್ಲಿ ಕಾಪಿಟ್ಟುಕೊಂಡ ಆತ್ಮೀಯ ಸಾಂಗತ್ಯಗಳನೆಲ್ಲ ಒಮ್ಮೆ ಮಾತಾಡಿಸಿ ಬರುತ್ತೇನೆ...

ಎಲ್ಲರ ಹಾದಿಗೂ (ನನ್ನಷ್ಟಲ್ಲದಿದ್ದರೂ) ಅಂಥ ಒಂದಾದರೂ ಸ್ನೇಹದ ಜಲಬಿಂದುವಿನಾರೈಕೆ ದಕ್ಕಿ ಬದುಕ ಹಸಿರಾಗಿಸಲಿ...

Sunday, October 4, 2015

ಗೊಂಚಲು - ನೂರು + ಅರವತ್ತು + ನಾಕು.....

ಆಗೀಗ _ ಏನೇನೋ.....

ಚಂದಿರ ಬೆಂಕಿ ಕಾರುತ್ತಾನೆ, ಬೆಳಕಿಗೆ ಕಣ್ಣು ಸಿಡಿಯುತ್ತದೆ - ನಗುವಿಲ್ಲದ ಹಗಲಿಗಿಂತ ಕಣ್ಣ ಹನಿ ಕಾಣದ ಇರುಳು ಹಿತವೆನಿಸುವಾಗ ಅನ್ನಿಸೀತು ಆಗೊಮ್ಮೆ ನಡೆದು ಬಿಡಬೇಕು ಬದುಕು - ಏನೂ ಕಾಡದ ಕಾಡು ದಾರಿಯಲ್ಲಿ - ತಿರುಗಿಯೂ ನೋಡದೆ...
ಆದರೆ,
ಹಾಳು ಕನಸುಗಳು ಇರುಳಲ್ಲಿ ಕಣ್ಣ ಬಟ್ಟಲಲ್ಲಿ ಒಡ್ಡೋಲಗ ನಡೆಸುತ್ತವೆ - ನೆನಪುಗಳು ಕಣ್ಣಿಂದ ಜಾರಿ ದಿಂಬಿನಂಚಲ್ಲಿ ಕರೆಯಾಗುತ್ತವೆ - ಮತ್ತೆ ಕಣ್ಣುಗಳು ಬೆಳಕಿಗೆ ಹೊಂದಿಕೊಳ್ಳಲು ಯುದ್ಧ ಸನ್ನದ್ಧವಾಗುತ್ತವೆ...
ಮತ್ತದೇ ದಿನದ ಪುನರಾವರ್ತನೆ...
ಮನಸು ಕಾಡಿನ ಕಡೆಗೆ - ಪ್ರಜ್ಞೆ ಊರಿನ ಕಡೆಗೆ - ಇರುಳಿಗೂ ಹಗಲಿಗೂ ಮುಗಿಯದ ಕಾಳಗ...

;;;;;

ಹೂತಿಟ್ಟ ಸತ್ಯಗಳಿಗೆ ಮೌನ ಕಾವಲು...
ಬಂಧದ ಗಾಂಧರ್ವ ಗಾನಕೆ ಮಾತೆ ಬಾಗಿಲು...
ನಿನ್ನ ಮೌನ ಅಬೇಧ್ಯವಾದಷ್ಟೂ ನನ್ನ ಮಾತು ಕ್ಷುದ್ರವಾಗುತ್ತೆ...
ಆಗಿಲ್ಲಿ ಬದುಕು ರಸಹೀನ; ಗಂಟಲು ಸತ್ತ ಕೋಗಿಲೆಯಂತೆ - ಗರಿಯೆಲ್ಲ ಉದುರಿ ಹೋದ ನವಿಲಂತೆ...
ಅರಿವಿನಳಲನು ಧಿಕ್ಕರಿಸಿದ ಮಾತು ಮತ್ತು ಮೌನಗಳ ತಿಕ್ಕಾಟದ ಹೀನ ಸಂತಾನವಾದ ಭಾವಹೀನತೆಯ ಬೆಂಕಿಯಲಿ ಬಾಂಧವ್ಯದ ಶವ ಸಂಸ್ಕಾರ...

;;;;;

ಬೆಳಕಿನೆಡೆಗೆ ಬಾಗಿಲು ತೆರೆದು ಕೂತೆ ಕತ್ತಲ ಭಯಕ್ಕೆ - ಎನ್ನದೇ ಒಳ ಹೊರಗಿನ ಬೆತ್ತಲು ಕಣ್ಕುಕ್ಕಿ ಮತ್ತಷ್ಟು ಭಯ ನನ್ನೊಳಗೀಗ...
ಬದುಕೇ -
ನಿನ್ನೆಡೆಗೆ, ನಿನ್ನ ವಿಚಿತ್ರ ನಡೆಗಳೆಡೆಗೆ ನನ್ನಲ್ಲಿ ವಿಸ್ಮಯವೊಂದೇ ಅಂತಿಮ...!!!

;;;;;

ತೆರೆದಿಟ್ಟರೂ ಬಾಗಿಲು - ಬೆಳಕ ಹುಟ್ಟಿಸದು ಇರುಳು...
ಕಾಯುತಿರುವ ಮಾತ್ರಕ್ಕೆ ಸಲೀಸು ಬಾರದು ಸಾವು - ದಕ್ಷಿಣಾಧಿಪತಿಯ ಕಛೇರಿಯಿಂದ ಬರದೆ ಅಂತಿಮ ಬುಲಾವು...

;;;;;

ಬದುಕ ಬೆರಳಿಗೆ ನಗೆಯ ಬೆಲ್ಲವ ಸವರಿಕೊಂಡು ಚೀಪುತ್ತಾ ಇರುಳ ದಾಟುವುದು ಎಂದಿನ ಕನಸು - ಆ ಸಾಕಾರಕ್ಕೆ ಮತ್ತೊಮ್ಮೆ ಮಗುವೇ ಆಗಬೇಕಿದೆ ಈ ಮನಸು...

;;;;;

ಕನಸಿಯೂ ಇಲ್ಲದ ಗೆಲುವು ಕೈಹಿಡಿದ ಹಾಗಿದೆ - ನಡೆವ ದಾರಿಯಲೊಂದು ನಗೆ ಹೂವು ಬಿರಿದಿದೆ...
ಬದುಕೇ ತೀರಿಸಲಾರದ ಋಣ ನಿನ್ನದು...
ಎತ್ತಿಡುವ ಪ್ರತಿ ಹೆಜ್ಜೆಯೂ ಹೊಸ ಕನಸಿಗೆ ಮುನ್ನುಡಿ...
ಬದುಕ ಉಡಿಯಲ್ಲಿ ಪ್ರತಿ ಕ್ಷಣಕೂ ಹೊಸ ಪಾಠದ ಹೂ ಅರಳುತ್ತೆ - ನಾ ಕಿತ್ತು ಮುಡಿಗೇರಿಸಿಕೊಂಡಷ್ಟೂ ನನ್ನದು...
ನಡಿಗೆಗೆ ಜೊತೆಯಾದವರ ಎದೆ ನೆಲದಲ್ಲಿ ನಾ ನೆಟ್ಟು ಹೋದ ನೆನಪುಗಳ ಮೈಲುಗಲ್ಲುಗಳು ನನ್ನ ದಾರಿ ಮುಗಿದ ಮೇಲೆ ಬೆನ್ನುಡಿಯ ಬರೆಯುತ್ತವೆ...
ಬೆನ್ನುಡಿಯ ಕೊನೆಯಲಿ ನಗೆಯ ಸಹಿಯಿರಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, September 10, 2015

ಗೊಂಚಲು - ನೂರಾ ಅರವತ್ಮೂರು.....

ಅವಳು ಹೇಳಿದ್ದು.....
(ಯಾರೆಂದು ಕೇಳಬೇಡಿ...)

ನಾನೇನೂ ಅಂಥ ಪರಿ ಮಹತ್ವಾಕಾಂಕ್ಷೆಯಗಳ ಹೊತ್ತು ಬೆಳೆದ ಹುಡುಗಿಯೇನೆಲ್ಲ - ನನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಹೇಳುವಂಥ ಯಾವುದೇ ಅತೃಪ್ತಿಗಳಿಲ್ಲದೆ ನಿಸೂರಾಗಿದ್ದವಳು - ಆಗಷ್ಟೇ ಕಾಲೇಜಿನ ದಿನಗಳು ಮುಗಿದಿದ್ದವು - ಅಷ್ಟಿಷ್ಟು ತುಂಟಾಟದ ನಷೆ ಇನ್ನೂ ಇದ್ದೀತೇನೊ ಕಣ್ಣಲ್ಲಿ - ಮನೇಲಿ ನಿಂಗೆ ಮದುವೆ ಅಂದರು - ಸಣ್ಣದೊಂದು ಕನಸು ಚಿಗುರಿದ್ದು ಆಗಲೇ - ಇವನು ಬಂದ - ಬೇಕು ಅನ್ನೋಕಿಂತ ಬೇಡ ಅನ್ನೋಕೆ ಕಾರಣವೇನಿರಲಿಲ್ಲ ನನ್ನಲ್ಲಿ - ಆಗೀಗ ಅಷ್ಟಿಷ್ಟು ಮಾತು ಶುರುವಾಗಿದ್ದರೂ ಪ್ರೇಮ ಅನ್ನುವಂಥದ್ದೇನೂ ಅರಿವಿಗೆ ಬಂದಿರಲಿಲ್ಲ - ಮಾಂಗಲ್ಯ ಕೊರಳ ಬಳಸುವಾಗ, ಸಪ್ತಪದಿ ಜನ್ಮಗಳ ಬೆಸೆಯುವಾಗ ಕೂಡಾ ಒಂದು ರಾಶಿ ಮುಗಿಯದ ಗೊಂದಲಗಳ, ಹೇಳಲು ಬಾರದ ಕಂಗಾಲುಗಳ ಬಿಟ್ರೆ ನನ್ನಲ್ಲಿ ಇನ್ನೇನೂ ಇರಲಿಲ್ಲ ಅನ್ನಿಸುತ್ತೆ - ನಿಜ ಹೇಳೋದಾದ್ರೆ ಅಂದು ಇರುಳು ಕಾಲಿಡುವವರೆಗೂ ಮದುವೆ, ಸಂಸಾರ ಅಮಿತವಾದ ಭಯ ಮಿಶ್ರಿತ ಅಚ್ಚರಿ ಅಷ್ಟೇ ಆಗಿತ್ತು - ಆದ್ರೆ ಅದಕಿಂತ ದೊಡ್ಡ ಅಚ್ಚರಿ ಆ ಇರುಳಲ್ಲಿ ಹುದುಗಿತ್ತು - ನಂಗದರ ಕಲ್ಪನೆ ಕೂಡಾ ಇರಲಿಲ್ಲ...

ಅದು ಇರುಳ ಮೊದಲ ಜಾವ – ಆ ಹೊಸ ಬೀದಿಯ ತಿರುವುಗಳಲ್ಲಿ ಅವನೊಡನೆಯ ಏಕಾಂತ ನಡಿಗೆ – ಎನ್ನ ಎಡಗೈಯ ಬೆರಳುಗಳ ನಿರ್ವಾತವನ್ನು ತುಂಬಿದ್ದ ಅವನ ನಿಡಿದಾದ ಬೆರಳುಗಳು ಅಲ್ಲಿಂದಲೇ ದಾಟಿಸುತ್ತಿದ್ದ ಬದುಕ ತುಂಬುವ ಭರವಸೆ – ಕಿಬ್ಬೊಟ್ಟೆಯ ಬಯಲಿನಾಳದಲೆಲ್ಲೋ ಅರಿವಿಗೆ ನಿಲುಕದ, ಹಿಡಿತವ ಮೀರಿದ ಎಂಥದೋ ಹೊಸ ಕಂಪನ – ಹಣೆಯ ಬೆವರ ಬಿಂದುಗಳಲ್ಲಿ ಬೆರೆಯುತಿರೋ ಬೈತಲೆಯ ಕುಂಕುಮ – ಮೈಯ ಅರಿಸಿನವಿನ್ನೂ ಹಸಿಯೇ ಇದೆ – ಎದೆಯಾಳದ ಹೊಸ ಕನಸಿನ ಭಾವದ, ಎದೆ ಮಿದುವಿನ ಹಸಿ ಆಸೆಯ ಭಾರದ, ತಲ್ಲಣ, ಕಂಪನಗಳೆಲ್ಲ ತಳಕಂಬಳಕವಾಗಿ – ಒಟ್ನಲ್ಲಿ ನಂಗೆ ನಾನೇ ಹೊಸತೆಂಬಂತೆ...
ಎಷ್ಟೆಲ್ಲ ಕಂಗಾಲಿತ್ತು, ಏನೇನೆಲ್ಲ ಗೊಂದಲವಿತ್ತು ಆವರೆಗೂ ಗೊತ್ತಾ..? ಅವನ ಬಗ್ಗೆ, ಅವನ ಆ ಮನೆಯ ಬಗ್ಗೆ, ಅವನೊಡನೆಯ ಬದುಕ ಸಾಂಗತ್ಯದ ಬಗ್ಗೆ... 
ಅಬ್ಬಾ...!!!
ಆದರೆ ಆ ಘಳಿಗೆ ಇದೆಯಲ್ಲ – ಅವನೊಡನೆ ನಡೆದ ಆ ಇರುಳ ಘಳಿಗೆ...
ಅದು ನನ್ನಲ್ಲಿ ಎಂಥ ಪರಿ ಅನುರಾಗ ಮತ್ತು ಭರವಸೆಯ ಮೂಡಿಸಿಬಿಡ್ತು ಅಂದ್ರೆ; ಹೆಬ್ಬಾಗಿಲಲ್ಲಿಟ್ಟ ಅಕ್ಕಿಯ ಕೊಳಗವನ್ನು ಬಲಗಾಲ ಬೆರಳ ತುದಿಯಲ್ಲೇ ಒದ್ದು ಅವನ ಅರಮನೆಯ ಹೊಕ್ಕಂತೆಯೇ – ಅಷ್ಟೆಲ್ಲ ವಾರಗೆಯವರ ಕೀಟಲೆ, ಪೋಲಿ ಮಾತುಗಳನೂ ಕಿರುನಗೆಯಲ್ಲೇ ಗೆದ್ದು ಅವನವರು ನಮಗಾಗಿ ಸಿಂಗರಿಸಿಟ್ಟ ಮಂಚದ ಮನೆಯನ್ನೂ ಹಿತವಾಗಿಯೇ ಸೇರಿಬಿಟ್ಟೆ...

ನೆನೆಸಿಕೊಂಡರೆ ಇಂದಿಗೂ ನಡುವಲ್ಲಿ ಹಿತದ ನಡುಕ ಮೂಡುತ್ತೆ; ಅವನ ತೋಳಲ್ಲಿ ನನ್ನ ಇರುಳು ಮೊದಲ ಬಾರಿಗೆ ಸುಖದ ಬೆವರಾಗಿ ಕರಗಿದ ಆ ಉನ್ಮತ್ತ ಕತ್ತಲನ್ನು... 
ಈಗಲೂ ಆಶ್ಚರ್ಯ ನನಗೆ – ಮಹಾ ಮುಜುಗರದ ಪ್ರಾಣಿಯಾಗಿದ್ದೋಳು ಅಷ್ಟು ಸಲೀಸಾಗಿ ಹೇಗೆ ಬೆಳಗಿದೆ ಅವನೆದುರು ಕನ್ನಡಿಯೂ ಕಾಣದ ನನ್ನ ಬೆತ್ತಲನ್ನು...
ಮರಳಿ ಮರಳಿ ಕೆರಳಿ, ಹೊರಳಿ, ಅರಳಿ, ಒಬ್ಬರನೊಬ್ಬರು ಆಳಿ, ಆಳಿಸಿಕೊಳ್ಳುತಿದ್ದ ಉನ್ಮತ್ತ ಇರುಳು ಮತ್ತು ಸುಖದ ಸುಸ್ತಲ್ಲಿ ಮೈಮುರಿದೇಳುತಿದ್ದ ನಾಚಿಕೆಯ ಹಗಲುಗಳು ಕ್ಷಣಗಳಲ್ಲಿ ಕಳೆದು ಹೋಗುತಿದ್ದ ಹೊತ್ತಲ್ಲೇ, ತಿಂಗಳ ಚಕ್ರ ನಿಂತಿದ್ದೇ ಗೊತ್ತಾಗಲಿಲ್ಲ...
ಪ್ರೇಮೋನ್ಮಾದದ ಕುರುಹಾಗಿ ಎನ್ನ ಒಡಲಲ್ಲಿ ಹೊಸ ಕುಡಿಯ ಕಚಗುಳಿ – ಅವನ ಕಣ್ಣಲ್ಲಿ ಗಂಡೆಂಬ ಹೆಮ್ಮೆ, ನನ್ನ ನಡೆಯಲ್ಲಿ ಹೆಣ್ತನದ ತೃಪ್ತಿಯ ಗೈರತ್ತು – ಹಾಲೆದೆಯ ಹಾಗೂ ಫಲವಂತ ಮಡಿಲ ಭಾರ ಬೇರೆಯೇ ರೀತಿಯಲ್ಲಿ – ಮಡಿಲಲ್ಲಿ ನಗುವ ಮಗು ಹೆಣ್ಣೆಂಬ ಪಾತ್ರಕ್ಕೆ ಪೂರ್ಣತೆ ದಕ್ಕಿದ ಘಳಿಗೆ; ಮೊದಲಿರುಳ ಮರೆತರೂ ಮಗುವಿನಳುವು ಕಿವಿತುಂಬಿದ ಮೊದಲ ಘಳಿಗೆಯ ಮರೆಯಲಾಗದು ಹೆಣ್ಣಿಗೆ – ಪ್ರಕೃತಿಯ ಕರುಳ ಭಾವಕ್ಕೆ ಜೀವ ತುಂಬಿದ ಧನ್ಯತೆಗೆ ಒಬ್ಬರಿಗೊಬ್ಬರು ಜೊತೆಯಾದೆವಲ್ಲಾ ಒಲವು ಬಲಗೊಳ್ಳಲು, ದೀರ್ಘ ನಡಿಗೆಗೆ ಶಕ್ತಿ ಬರಲು ಇನ್ನೂ ದೊಡ್ಡ ಕಾರಣ ಬೇಕಾ...!!! 

ಉಹುಂ ಇದೆಲ್ಲ ಅಲ್ಲವೋ ನಾ ನಿಂಗೆ ಹೇಳಬೇಕಾದ್ದು – ನಿನ್ನ ಪ್ರಶ್ನೆಗೆ ಇದಷ್ಟೇ ಅಲ್ಲ ನಿಜದ ಉತ್ತರ...
ಆಗಲೇ ಹೇಳಿದೆನಲ್ಲ – ದೇಹಾನ್ವೇಷಣೆಯ ನಸುಗತ್ತಲ ಗೂಡಿಗೆ ಅಡಿ ಇಡುವ ತುಸು ಮುಂಚೆ, ಆ ನಿಶೆಯಲ್ಲಿ ಇಬ್ಬರೂ ತುಸು ದೂರ ಏಕಾಂತದ ಸಂಗಾತದಲ್ಲಿ ಕಳೆದು ಹೋಗಿದ್ದೆವಲ್ಲ – ಆ ನಾಕು ಹೆಜ್ಜೆಗಳ ಗುರುತು ಇಂದಿಗೂ ಎದೆಯಲ್ಲಿ ಭದ್ರ ಕಣೋ...
ಈ ಮುಂಚೆ ಹೇಳಿದ ಎಲ್ಲಾ ತಲ್ಲಣ, ಕಂಪನಗಳಾಚೆಯ ಆ ನಿರುಪಾಯ ಮೌನ ಸನ್ನಿಧಿ – ಆ ಕ್ಷಣ ಎದೆಗೂಡಲ್ಲಿ ಅಚ್ಚೊತ್ತಿದ ಭಾವ ಸಮೃದ್ಧಿ... 
ಅದರ ಬಗ್ಗೆ ಹೇಳಬೇಕು ನಿಂಗೆ...
ಒಂದೇ ಮಾತಲ್ಲಿ ನಿಂಗೆ ಉತ್ತರಿಸೋದಾದ್ರೆ:
ಆ ಮೌನ ಸಾಮೀಪ್ಯದಲ್ಲಿ ಬೆಸೆದ ಬೆರಳ ಸ್ಪರ್ಷ ಬರೆದ ಹೊಸ ಭಾವ ಭಾಷ್ಯ – ಆ ಮೂಲಕ ಇಬ್ಬರೆದೆಯಲೂ ಒಡಮೂಡಿದ ಅಪ್ಯಾಯ ಆಪ್ತತೆ – ನನ್ನ ಗೆಜ್ಜೆ ಕಾಲ್ಗಳ ಜೊತೆ ನಡೆದ ಅವನ ಹೆಜ್ಜೆಗಳಲ್ಲಿನ ದೃಢತೆ ಮೂಡಿಸಿದ ಭರವಸೆ...
ಅವೇ ಅನ್ನಿಸುತ್ತೆ ನಂಗೆ ನಮ್ಮಿಬ್ಬರ ದಶಕಗಳ ಕಾಲದ ಅನುರಾಗದ ಒಡನಾಟಕ್ಕೆ ನಾಂದಿಯಾದದ್ದು ಮತ್ತು ಒಲವು ಒಲವನೇ ಹೆರುತ್ತಾ, ಒಲವ ಸಮೃದ್ಧಿಯ ಬದುಕ ಪಯಣಕ್ಕೆ ಸಾರಥ್ಯವಹಿಸಿದ್ದು...
ಹಗಲುಗಳ ಕಾಯುವ ಹಿತವಾದ ಮಾತು, ಸೊಗಸಾದ ಮೌನ – ಇರುಳ ಬೆಳಗಿಸುವ ನಿತ್ಯವೂ ಹೊಸತೆನಿಸೋ ಅದೇ ಮಿಲನ – ಎಷ್ಟೆಲ್ಲ, ಏರಿಳಿತಗಳ ನಡುವೆಯೂ, ಏನೆಲ್ಲ ಭಿನ್ನತೆಗಳ ಒಳಗೊಂಡೂ ಬದುಕು ಶಾಂತ ಸಂಭ್ರಮ ಕಣೋ...
ಬದುಕು ಹರಿದ ಚಾದರದಂತಾದ ದಿನಗಳಲ್ಲೂ, ಕನ್ನಡಿಯೆದುರು ನಿಂತ ಹತ್ತರಲ್ಲಿ ಎಂಟು ಬಾರಿ ಮೊಗದ ಸಣ್ಣ ಸುಕ್ಕುಗಳಲ್ಲಿ ನಗು ಕಾಣಿಸಬಲ್ಲುದಾದರೆ ಅದಕಿಂತ ಇನ್ನೇನು ಬೇಕಲ್ಲವಾ ಸಾರ್ಥಕತೆ...
ಒಲವೇ ಊರುಗೋಲು ಬದುಕ ಏರು ದಾರಿಯ ನಿರಾಯಾಸ ನಡಿಗೆಗೆ...

ಮಹಾ ಪೋಲಿ ಗೆಳೆಯ ನೀನು – ಪ್ರಶ್ನೆಯ ಕೊನೇಲಿ ಕಣ್ಣು ಮಿಟುಕಿಸುತ್ತೀಯಾ...
ಹೌದೋ ಮಂಗೂ, 
ಅನುರಾಗದ ಬೆಂಕಿಗೆ ಪ್ರಣಯ ತುಪ್ಪ ಎಂಬ ನಿನ್ನ ಮಾತೂ ಸತ್ಯವೇ...
ನಿತ್ರಾಣ ಇರುಳಿಗೆ ಚೈತನ್ಯ ತುಂಬುವುದು ಸ್ವಸ್ಥ ಕಾಮವೇ - ಅದು ನನ್ನ ಅನುಭವವೂ ಹೌದು, ನನ್ನಾತನ ಆಯ್ಕೆಯೂ ಹೌದು...
ನಡಿಗೆ ಸುಸ್ತೆನಿಸಿ ಅವ ಮಡಿಲಿಗೆ ಬಂದಾಗ ನಾ ಎದೆಗೊರಗಿಸಿಕೊಂಡು ಅಮ್ಮನಾಗುತ್ತೇನೆ – ನಾ ದಾರಿಯ ಕವಲುಗಳ ಕಂಡು ಕಂಗಾಲಿಗೆ ಬಿದ್ದಾಗ ಅವ ನೆತ್ತಿ ಚುಂಬಿಸಿ ಭದ್ರತೆಯ ಹಾಯನು ತುಂಬಿ ಅಪ್ಪನಾಗುತ್ತಾನೆ...
ಭಾವದಲ್ಲಿ ಒಲವು ಶಿಖರದೆತ್ತರ...
ಉಳಿದಂತೆ ಅದೇ ಇರುಳ ಕೊನೆಯ ಜಾವದ ಪ್ರೇಮದ ಫಲವಂತಿಕೆಯಲ್ಲಿ ನಾವು ಭೌತಿಕದ ಅಮ್ಮ – ಅಪ್ಪ ಆದದ್ದು...
ಒಲವೆಂದರೆ ಎಲ್ಲವೂ – ಒಲವಿಂದಲೆ ಎಲ್ಲವೂ - ಒಲವೇ ಕಣೋ ನನ್ನ ನಗುವಿನ ಕಾರಣ...
ಅಲ್ಲಿಷ್ಟು ಇಲ್ಲಿಷ್ಟು ಸೇರಿ ಇಷ್ಟೇ ಹೇಳಬೇಕಾದದ್ದು...
ಸೂಕ್ಷ್ಮಸಂವೇದನೆಯ ಜಾಣ ನೀನು – ಇನ್ನಷ್ಟು ವಿವರ ಬೇಕಿಲ್ಲ ಅಲ್ಲವಾ ನಿಂಗೆ...

***

ಮೂಲ ಮಾತು – 
ಸಂಜೆ ಹೊರಳುವ ಹೊತ್ತಲ್ಲಿ ನಾ ಅವಳಲ್ಲಿ ಕೇಳಿದ ಪ್ರಶ್ನೆ:
ಹಿರಿಯರಾಶಯದ ಗಂಡಿನ ಕೈಯಲ್ಲಿ ಬದುಕನಿಟ್ಟವಳು, ಯಾವ ಘಳಿಗೇಲಿ ಕುಡಿಯೊಡೆಯಿತೆ ನಿನ್ನಲ್ಲಿ ಆ ಪರಿ ಅನುರಾಗ..? 
ಅದ್ಹೇಗೆ ಕಾಯ್ದುಕೊಂಡಿರೇ ದಶಕಗಳಷ್ಟು ಕಾಲ..?

ಅವಳುತ್ತರದ ನಂತರವೂ ನನ್ನಲ್ಲಿ ಉಳಿದುಕೊಂಡ ಅಲ್ಲ ಹುಟ್ಟಿಕೊಂಡ ಸಂದೇಹ: 
ಅನುರಾಗದಲ್ಲಿ ಬದುಕು ಈ ಪರಿ ನಗೆಯ ಹೊತ್ತು ತಲೆಯೆತ್ತಿ ನಿಲ್ಲುತ್ತಾ....!!!
ಒಂದ್ಯಾವುದೋ ಘಳಿಗೆಯ ಮೌನದಲ್ಲಿ ಮಿಂಚಂತೆ ಹುಟ್ಟಿ (?), ದೇಹಭಾವದ ಮಾತಲ್ಲಿ ಮಳೆಯಾಗಿ ಅರಳಿ, ಮಾಂಗಲ್ಯದ ಆಸರೆಯಿಂದ ಅನುಗಾಲ ಬಾಳುತಿರಬಹುದಾ ಅವಳು ಮತ್ತವಳಂಥವರ ಅನುರಾಗ...???
ಈ ಪ್ರೇಮಾನುರಾಗದ ಭಾವಗಳು ನಂಗೆಂದೂ ಅರ್ಥವಾಗಲ್ಲ ಬಿಡಿ...

Saturday, August 1, 2015

ಗೊಂಚಲು - ಒಂದು ನೂರಾ ಅರವತ್ತೆರಡು.....

ಈ ದಿನಕ್ಕೊಂದು ಮಾತು.....
(ಬದುಕಿನ ಮತ್ತೊಂದು ವರುಷ - ಸಾವಿನೆಡೆಗೆ ಇನ್ನೊಂದು ಹೆಜ್ಜೆ...)


ಒಡೆದ ಮನಸು – ಬಾಡಿದ ಭಾವಲೋಕ – ಮಡಿದ ಕನಸುಗಳ ಮಸಣದ ಮೂಲೆಯಲಿ ನಿಂತ ಕ್ರುದ್ಧ ಕಬೋಜಿ...
ಒಂದು ಹೆಜ್ಜೆ ಆಚೆ ಒಲವ ಶರಧಿ – ನಡುವೆ ನನ್ನದೇ ಕೂಸಾದ “ನಾನೆಂಬ” ಕಗ್ಗಲ್ಲ ಗೋಡೆ...

ದೇಹವೆಂಬುವದಿದು ಆಸೆಗಳು ಹರೆಯದ ಮದದಿಂದ ಕುಪ್ಪಳಿಸಿ ಕುಣಿವ ದೊಡ್ಡ ಇಮಾರತ್ತಿನ ಮನೆ – ಹೃದಯವೆಂಬೋ ಕೋಳ ಕಂಬಕ್ಕೆ ಗೆದ್ದಲು...

ಸತ್ತ ಬಂಧಗಳ ರಾಶಿಯೆದುರು ಶವ ಪರೀಕ್ಷೆಗೆಂದು ಕೂತರೆ ಎಲ್ಲ ಸಾವಿಗೂ ನನ್ನ ವ್ಯಕ್ತಿತ್ವದ ವೈಕಲ್ಯವೇ ಕಾರಣ ಅನ್ನಿಸಿ ಒಮ್ಮೊಮ್ಮೆ ಮೈಲೆಲ್ಲ ನಡುಕ...
ಬದ್ಧತೆ ಇಲ್ಲದ ಭಂಡ ಬಾಳು ನಿನ್ನದು ಎಂದು ಹಳಿಯುವವರೂ, ಬದುಕ ಹೊಸ ಕೋನದಲಿ ನೋಡುವುದ ಕಲಿಸಿದವ ನೀನು ಎಂದು ಕಂಣ್ತುಂಬಿಕೊಳ್ಳುವವರೂ ಇಬ್ಬರೂ ನನ್ನವರೇ...
ಕೆಲವೊಮ್ಮೆ ಆ ಎರಡೂ ಮಾತು ಒಬ್ಬರಿಂದಲೇ ಬಂದಿದ್ದಿದೆ - ಕಾಲದ ಸಮಾಧಿಯಲಿ ಎಂತೆಂಥ ವೈಪರೀತ್ಯಗಳೋ...
ಹಾಗಾಗಿ ಹೊಸ ಪ್ರೀತಿ ಕೈ ಹಿಡಿಯಲು ಹಳೆಯದರ ಕೃಪೆಯ ಹಂಗಿಲ್ಲ ಎಂಬ ನನ್ನ ಹುಂಬತನ ಮತ್ತು ಸಕಲಕ್ಕೂ ಸಾವು ಪೂರ್ವ ನಿಶ್ಚಿತ ಎಂಬ ಸಿದ್ಧ ಸೂತ್ರವನ್ನು ಮತ್ತೆ ಮತ್ತೆ ನಂಬಿಕೊಂಡು ನನ್ನೇ ನಾನು ಸಮಾಧಾನಿಸಿಕೊಳ್ಳಬೇಕು...

ಆಷಾಢದ ಬೆಳಗಿನ ವಿರಹಿ ಮಳೆ, ಗ್ರೀಷ್ಮದ ನಡು ಮಧ್ಯಾಹ್ನ ಸುಡುವ ಬಿಸಿ, ಹೇಮಂತ ಸಂಜೆಯ ತಂಪು ಈ ಎಲ್ಲಾ ಘಳಿಗೆಗಳಿಗೂ ಸಾಕ್ಷಿಯಾಗಿರುವ ನಿನ್ನೆಗಳ ಹಂಗಿಲ್ಲದೆ ಬದುಕೋದು ಸುಲಭವಿಲ್ಲ - ಹಾಗಂತ ನಿನ್ನೆಗಳಲೇ ಹೊರಳಾಡುತ್ತಿರೋದರಲ್ಲಿ ಅರ್ಥವಿಲ್ಲ...
ಕೈಯಾರೆ ನಗುವ ಗೆದ್ದು ತಂದು ತುಂಬಿಕೊಳ್ಳುವ ಆತ್ಮ ಚೈತನ್ಯದ ಒಲವಿನಾರೈಕೆಯಿಂದ ಪ್ರೇರಿತವಾದ ಹೊಸ ಭರವಸೆ, ಹೊಸ ಸಾಧ್ಯತೆಗಳ ತುಡಿತದ ನಾಳೆಗಳ ಕನಸಿಲ್ಲದೇ ಬದುಕಿಗೆ ಬಲವಿಲ್ಲ - ಆದರೆ ನಾಳೆಗಳಲಿ ನಾನಿದ್ದೇನಾ ಎಂಬುದು ನಿಶ್ಚಿತವಲ್ಲ...
ನಿನ್ನೆಯ ನೆನೆವಂತಿಲ್ಲ, ನಾಳೆಯ ನಂಬುವಂತಿಲ್ಲ ಅಲ್ಲಿಗೆ ನನಗುಳಿದದ್ದೇನು..?
ಉತ್ತರ : ಈ ಕ್ಷಣ...
ಅಂದರೆ: ನನ್ನ ನಗು – ನಲಿವು, ದುಗುಡ – ದುಮ್ಮಾನ, ಎದೆ ಶರಧಿಯ ಪ್ರೇಮದುಬ್ಬರ – ನಾಭಿ ಮೂಲದಲಿ ಕಿಡಿ ಸೋಕಿ ದೇಹದ ಕಾಡನೆಲ್ಲ ಆವರಿಸಿ ಅಬ್ಬರಿಸೋ ಕಾಮದ ಬೆಂಕಿ, ಕಣ್ಣ ಹನಿ – ಖುಷಿಯದ್ದೂ ಅಥವಾ ನೋವಿಂದೂ, ನೆತ್ತಿಯ ಕಾವೇರಿಸೋ ಹಸಿ ಹಸಿ ಕನವರಿಕೆಗಳನೆಲ್ಲ ಒಳಗೊಂಡ ಈ ಕ್ಷಣ, ಅವನೆಲ್ಲ ಹಾಗೆ ಹಾಗೇ ತೀವ್ರವಾಗಿ ಅನುಭವಿಸಲು ನಾ ಸಾಕಿಕೊಂಡ, ನನ್ನೊಳಗೆ ಉರಿಯುತ್ತಲಿರೋ ಮೃಗೋನ್ಮಾದದ ಈ ಪುಟ್ಟ ಪುಟ್ಟ ಘಳಿಗೆಗಳು ಇವು ಮಾತ್ರ ನನ್ನವೆನ್ನಿಸುತ್ತೆ – ಸಂಪೂರ್ಣ ನನ್ನವು...
ಮರಣದ ಗೂಡು ಸೇರಿ ಬಾಗಿಲು ಮುಚ್ಚುವ ಹೊತ್ತಲ್ಲಿ ಎದುರಿನ ವಿದಾಯವ ನುಡಿವ ಕೆಲ ಕಣ್ಣುಗಳಲ್ಲಿ ಮೂಡಿ ನಿಲ್ಲುತ್ತಲ್ಲ – ಪ್ರೀತಿ, ಕರುಣೆ, ಅಸಹನೆ, ಹಿಂಸೆ, ನಿರಾಳತೆ, ನಿಟ್ಟುಸಿರು, ಆಕ್ರೋಶ (ಅಸಹಾಯತೆಯಲ್ಲಿ ಹುಟ್ಟಿದ್ದು) ಅವೆಲ್ಲ ಖಂಡಿತಾ ನನ್ನವೇ...

ಬದುಕ ಕೌದಿಯೊಳಗೆ ಇನ್ನೆಷ್ಟು ಕ್ಷಣಗಳು ನನ್ನವಾಗಿ ದಕ್ಕಲು ಮುಗುಮ್ಮಾಗಿ ಮಲಗಿವೆಯೋ... 
ಕಳೆದದ್ದಷ್ಟನ್ನು ಮಾತ್ರ ಎಣಿಸಲು ಶಕ್ತ ನಾನು... 

ಈಗೊಂದಿಷ್ಟು ವರ್ಷಗಳ ಹಿಂದೆ ಜನ್ಮ ತಳೆದ ಈ ಜೀವ ನಿನ್ನೆಗಳ ದಾಟುತ್ತಾ, ಸುಭೀಕ್ಷ ನಾಳೆಗಳ ಭೇಟಿಗೆ ಕನವರಿಸುತ್ತಾ ಇಂದನ್ನು ಮರೆಯದಿರುವಂತೆ ಮನಸ ಅಣಿಗೊಳಿಸಿಕೊಂಡದ್ದೇ ಈ ಜೀವದ ಮಹಾ ಸಾಧನೆ... 
ಈ ಸಾಧನೆ ನಿರಂತರವಾಗಲೆಂದು ಮತ್ತೆ ಮತ್ತೆ ಬಯಸುತ್ತೇನೆ... 
ಹರಸಿ ಬಿಡಿ ನೀವೂ ಒಮ್ಮೆ ಹಾಗಂತ ಇಂದು – ಈ ಜನುಮ ದಿನದಂದು – ಉಸಿರ ಒಡನಾಟ ತಪ್ಪುವ ಹೊತ್ತಲ್ಲೂ ನಗೆಯ ಒಡನಾಟ ತಪ್ಪದಿರಲೆಂದು...

ಬೆಳುದಿಂಗಳ ತೋಟದ ಮೂಲೆಯಲಿ ಮಾತಿನ ಸಮಾಧಿ ಕಟ್ಟಿ - ಮೌನದ ಮುಂಗುರುಳ ಹಿಡಿದು ಜೀಕುತ್ತಾ - ಸುಳಿದಿರುಗಿ ಸುಳಿವ ನೆನಪುಗಳ ಕುಳಿರ್ಗಾಳಿಯಲಿ ಪೊರೆ ಕಳಚಿಕೊಂಡು ಮನಸು ಬತ್ತಲಾಗುವ ಹೊತ್ತಿಗೆ - ಪೂರ್ವದ ಮೋರೆಗೆ ಹೊಸ ಕನಸಿನ ಕೆಂಪಿನ ನಂಜೇರಲಿ...

                                                  ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ

Sunday, July 5, 2015

ಗೊಂಚಲು - ನೂರು + ಅರವತ್ತು ಮತ್ತು ಒಂದು.....

ಹಗಲಿಗೂ - ಇರುಳಿಗೂ ಒಂದಿಷ್ಟು ಕನಸು.....

ಕಣ್ಣ ಹನಿಗಳನೆಲ್ಲ ಇರುಳ ಕಾವಳದ ಉರಿಗೆ ಸುರಿದು ಬತ್ತಿಸಿಬಿಟ್ಟಿದ್ದೇನೆ...
ಮನಸೀಗ ಖಾಲಿ ಖಜಾನೆ...
ಹೊಸ ಖುಷಿಗಳ ನಗೆ ಹೊನ್ನನು ಗೆದ್ದು ತುಂಬಿಕೊಳ್ಳಬೇಕಿದೆ ಈ ಹಗಲಿಗೆ...
ಶುಭದಿನ...
❤❤❤
ನಿದ್ದೆ ಇಲ್ಲದ ಕ್ಷುದ್ರ ರಾತ್ರಿಯಿಡೀ  ನೆನಪುಗಳ ಕರಗೋತ್ಸವ -
ಮಾರನೇ ಹಗಲಿನ ಕನಸುಗಳ ತುಳಿಯದಿದ್ದರೆ ಅಷ್ಟೇ ಸಾಕು...
ಶುಭರಾತ್ರಿ... 
❤❤❤
ಬೆಳಗೆಂದರೆ ಕನಸಿನ ಮರುಹುಟ್ಟು...
❤❤❤
ಹರಿದ ಸೀರೆಯ ತೊಟ್ಟಿಲಲೂ ಕೂಸು  ಕುಪ್ಪಳಿಸುತ್ತದೆ ಕಿಲಕಿಲನೆ ನಲಿಯುತ್ತ...
ಚಂದ್ರ, ತಾರೆಗಳೆಲ್ಲ ಸೇವಕರು - ನಾಯಿ, ನರಿ, ಕಾಗೆ, ಗುಬ್ಬಿಯರೆಲ್ಲ ಬಂಧು  ಬಳಗ...
ಇರುಳಿದು ಅಮ್ಮನ ಹಾಡಲ್ಲಿ ಕಂದನಿಗೆ ಪಟ್ಟಾಭಿಷೇಕದ ಹೊತ್ತು...
ಶುಭರಾತ್ರಿ... 
❤❤❤
ಕನಸಿನ ಮರಿ ಹಕ್ಕಿಯೊಂದು ಮಗ್ಗಲು ಬದಲಿಸಿ ಆಕಳಿಸಿ ಮೈಮುರಿದು ಕಣ್ತೆರೆಯಿತು...
ಇನ್ನೂ ಹಾರಬೇಕಿರೋ ದೂರವ ಕಂಡು ಸಣ್ಣಗೆ ಕಂಪಿಸಿ ಮತ್ತೆ ರೆಕ್ಕೆ ತಡವಿಕೊಂಡು ಭರವಸೆಯಲಿ ಮೆಲು ನಕ್ಕಿತು...
ಬೆಳಗೆಂದರೆ ಕನಸಿನ ಗುಬ್ಬಿ ಮರಿಯ ಗರುಡ ಯಾನ... 
❤❤❤
ಕೃಷ್ಣನ ಕೊಳಲಿಗೆ ರಾಧೆಯ ನಗು ಉಸಿರ ತುಂಬಿದಂತೆ...
ಅವನ ನೆನಪಿನ ನೆಪವೇ ಅವಳ ಗೆಜ್ಜೆಗೆ ಜೀವ ತುಂಬಿದಂತೆ...
ಅಲ್ಲಲ್ಲ ಕೃಷ್ಣನ ಬಾಂನ್ಸುರಿ, ರಾಧೆಯ ಕಾಲಂದುಗೆಗಳು ಒಟ್ಟಾಗಿ ಮಿಡಿದಂತೆ - ಅವಳೆದೆಯ ಮಾತಿನ ಗಲಗಲ...
ಅವಳಂದದ್ದು:
ಎನ್ನೆದೆಯ ಹಕ್ಕಿನ ಪದಕ ನೀನು ಕಣೋ - ‘ನೀನು’ ‘ನಾನು’ ಎಂಬುದೆಲ್ಲ ಸುಳ್ಳು; ಈ ಇರುಳ ಸಾಂಗತ್ಯ, ಆ ನಾಳೆಯ ಸಾರಥ್ಯ ಎರಡೂ ಇನ್ನೀಗ ಜೊತೆ ಬೆರೆತ ‘ನಾವು...’  
ಇದೀಗ ಬೆಳದಿಂಗಳಿರುಳ ಶಾಂತ ನರ್ಮದೆಯ ದಂಡೆಯ ನಿರಾಳ ಮೌನ ಎನ್ನೆದೆಯಲಿ... 
ಈ ಮೌನ ನಿರಂತರವಾಗಲಿ...
ಶುಭರಾತ್ರಿ...
❤❤❤
ಬೆಳಗೆಂದರೆ ಕನಸಿನ ಸಾರೋಟಿನ ಕುಲುಕಾಟದ ಧೀರ ಚಲನೆ...

Saturday, June 20, 2015

ಗೊಂಚಲು - ನೂರರ ಮೇಲರವತ್ತು.....

ಮಳೆಯ ಮರಿ ಸಾಲುಗಳು.....
(ಮುಂಗಾರಿನಲಿ ನೆನೆವಾಗ ಚಿಗುರಿದ ಭಾವಗಳು...)

ಭ್ರಮೆಗಳ ಗೂಡಿಂದಾಚೆ ಬಂದು ಅರಿವಿನ ಹಾದಿಯ ಏರನೇರಬೇಕಿದೆ...
ಮೌನವೇ ಕಿರು ಬೆರಳ ಭರವಸೆಯಾದರೂ ಆಗು ಬಾ...
ತುಸು ದೂರ ನಗುವಿನಾಸೆಯಿದೆ...
@@@
ಗವ್ವೆನ್ನೋ ವಾಸ್ತವದ ಕ್ರುದ್ಧ ಕತ್ತಲು - ಕಂಗೆಡಿಸೋ ಚಿತ್ರ ವಿಚಿತ್ರ ತಿರುವುಗಳ ಹಾದಿ - ಎಲ್ಲಾ ಜಗಳ, ಜಂಜಡಗಳ ಆಚೆಯೂ ಬೆಸೆದ ಬೆರಳುಗಳ ಸಡಿಲಿಸದ ಸ್ನೇಹಗಳು - ಬದುಕಿದು ಎನ್ನದು ಸ್ನೇಹಾನುಬಂಧಗಳ ಕರುಣೆಯ ಕೈತುತ್ತು...❤ ❤
@@@
ನಿತ್ಯವೂ ಹೊಸ ಭಾವದಿ ಕಾಡುವ ಕನಸವಳು - ಕಪ್ಪು ಹುಡುಗಿ...
ನನ್ನ ಘೋರಿಯ ಮೇಲರಳೋ ನಿಂಬೆ ಹೂವಿಗೂ ಅವಳದೇ ಘಮವಿದ್ದೀತು...
@@@
ಮಳೆಯ ನಾಕು ಹನಿಗೆ ನೆತ್ತಿ ತೋಯಿಸಿಕೊಂಡೆ - ಎಷ್ಟೆಲ್ಲಾ ನೆನಪಿನ ಮರಿಗಳು ಚಿಂವ್ ಚಿಂವ್ ಅನ್ನುತಿವೆ ಎದೆಯಲ್ಲಿ...
ಆ ಕಾಡು - ಮುಗಿಯದ ಕರುಳ ತಿರುವಿನಂಥ ಹಾದಿಗಳು - ಅಲ್ಲಿನ ನಿರ್ಭೀತ ಮೌನ - ನನ್ನೊಳಗಿನ ಸಾವಿರ ಗದ್ದಲ - ಕೈ ಹಿಡಿದು ಜೊತೆ ಬರುತಿದ್ದ ಹುಚ್ಚು ಕನಸುಗಳು...
ಇಲ್ಲಿ, ಈ ಮಹಾ ನಗರದ ಇಕ್ಕಟ್ಟು ಬೀದಿಗಳಲ್ಲಿ ಮಳೆಯೂ ಬಂಜೆಯೇ ಅನ್ನಿಸುತ್ತದೆ...
@@@
ಆಯೀ -
ಬದುಕಿಗೊಂದು ಕಾರಣ ಬೇಕೆಂಬುದಾದರೆ ಮಮತೆಯ ನಿನ್ನೊಲವೇ ನನ್ನೀ ಬದುಕಿಗಿರೋ ಕೊನೆಯ ಉದ್ದೇಶ...
@@@
ಪ್ರಶ್ನೆಯಾಗುಳಿಯದ ಅಥವಾ ಪ್ರಶ್ನೆಯೇ ಹುಟ್ಟದ - ಎದುರಾದದ್ದನ್ನು ಎದುರಾದ ಹಾಗೆಯೇ ಎದೆ ತೆರೆದು ಅನುಭವಿಸಿ ಹಿತವಾಗಿ ನಕ್ಕು ಮುನ್ನಡೆಯಬಹುದಾದ ಕೆಲವಾದರೂ ಘಳಿಗೆಗಳು ದಕ್ಕಲಿ ಎಂಬಾಸೆ ಬದುಕಿಗೆ...
@@@
ನಿತ್ಯ ದಿಂಬಿನಂಚನು ತೋಯಿಸೋ ಕಣ್ಣ ಹನಿಗಳು ಈ ಬದುಕನು ನೀ ಆಳಿದ ಪಳೆಯುಳಿಕೆಯ ಕಥೆ ಹೇಳುತ್ತವೆ...
ಈ ಮಳೆಯ ರಾತ್ರಿಗಳಲ್ಲಿ ನಿದ್ದೆಯ ಕಾಡುವ ಹಾಸಿಗೆಯ ಹಸಿವಿನ ಉರಿಗೆ ನಿನ್ನ ನೆನಪು ತುಪ್ಪವ ಸುರಿಯುತ್ತದೆ...
ಹಗಲಿಗೆ ಆಗೀಗ ನಿನ್ನ ಮುಗುಳ್ನಗು ಜೊತೆಯಾದರೆ ಅಂದಿನ ಸಂಜೆಯ ತಂಪಿಗೆ ಸಾವಿರ ಬಣ್ಣ...
ಈ ಬದುಕಿಗೆ ಇದೀಗ ನೀನೆಂಬ ನೀನು ಮುಗಿದ ಮಹಾ ಸಂಭ್ರಮ ಮತ್ತು ಉಳಿದು ಹೋದ ವಿಚಿತ್ರ ತಳಮಳದ ಪ್ರಶ್ನೆ...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 8, 2015

ಗೊಂಚಲು - ನೂರಾ ಐವತ್ತೊಂಬತ್ತು.....

ಹೀಗೆಲ್ಲ ಅನ್ನಿಸುವಾಗ.....
(ನನ್ನ ನೆನಪೇ ನನ್ನ ಕನಸ ಕೊಲ್ಲುವಾಗ...)

ಖುಷಿಗಳೆಲ್ಲಾ ಅಲ್ಪಾಯುಷಿಗಳೇ...!!!
ಯಾರೋ ಹರಸಿಬಿಟ್ಟಂತಿದೆ ನೋವಿಗೆ : ದೀರ್ಘಾಯುಷ್ಮಾನ್ ಭವ...!!!
***
ಹೇ ಸಂಜೆ ಮಳೆಯೇ -
ಭೋರ್ಗರೆದುಬಿಡು ಒಮ್ಮೆ ; ಸಾವಿಲ್ಲದ ನೆನಪುಗಳು, ಎಂದೂ ತೀರದ ಸಾವಿರ ಬಣ್ಣದ ಆಸೆಗಳು, ಬದ್ಧತೆ ಇಲ್ಲದ ಮನಸು ಹುಟ್ಟು ಹಾಕೋ ತೆವಲುಗಳೆಲ್ಲ ಕೊಚ್ಚಿ ಹೋಗಬೇಕಿದೆ ನಿನ್ನೊಡನೆ...
ಜನ್ಮದೊಡನೆ ನಂಟು ಬೆಸೆಯೋ ವಿಕಾರಗಳ ವೀರ್ಯಕ್ಕೆ ಹುಟ್ಟೋ ಒಂದಿಷ್ಟು ಕನಸುಗಳನೂ ಸಾಯಿಸಬೇಕಿದೆ ನಿನ್ನ ಸಾಂಗತ್ಯದಲ್ಲಿ...
ಹಳೆಯ ದಾರಿಗಳನೆಲ್ಲ ಅಳಿಸಿ ಬದುಕ ಸಾರೋಟಿಗೆ ಹೊಸ ಹಾದಿಯ ತೋರಬೇಕಿದೆ...
***
ಹೇ ಸಾವೆಂಬೋ ಮಹಾ ಗುರುವೇ -
ನಿನ್ನಷ್ಟು ಪರಮ ಶ್ರದ್ಧೆಯಿಂದ ಬದುಕಿನ ಪಾಠ ಹೇಳುವ ಮತ್ತೊಬ್ಬನಿಲ್ಲ ಕಣೋ...
ಗುರು ದಕ್ಷಿಣೆಯ ಹರಿವಾಣದಲ್ಲಿ ಉಸಿರಿನೊಂದಿಗೆ ನನ್ನ ಗಳಿಕೆಯ ಒಂದಿಷ್ಟು ನಗೆಯನೂ ಇಟ್ಟು ಕೊಡುವಾಗ ಸುಳ್ಳೇ ಆದರೂ ಕಂಪಿಸದಿರು - ಮತ್ತೆ ಬದುಕಿಗಾಗಿ ನಿನ್ನೊಡನೆ ಕುಸ್ತಿಗಿಳಿದುಬಿಟ್ಟೇನು...
ಮೊದಲೇ ಮಹಾ ವ್ಯಾಮೋಹೀ ಹುಂಬ ಹುಡುಗ ನಾನು...
***
ನನ್ನೀ ಮನಕೆ ಸ್ನೇಹ, ಪ್ರೀತಿಯ ಒಡನಾಟದ ಭಾವ ಬಂಧಗಳಾಚೆ ನಗುವಿದ್ದರೆ ಅದು ಮಸಣದ ಮನೆಯಲ್ಲೇ ಇದ್ದೀತು...
***
ಹೇ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಒಲವು ಒಲವನ್ನ ಹೆರಬೇಕು...
ಕನಸೊಂದು ಹೊಸದಿನ್ನೊಂದಾದರೂ ಕನಸ ಹೊತ್ತು ತರಬೇಕು...
ಆದರೆ -
ನೆನಹುಗಳ ರಕ್ಕಸ ಸಂತತಿಗಳು ಮತ್ತು ವಾಸ್ತವದ ಒಡೆದ ಕನ್ನಡಿ ಚೂರುಗಳು ಸೇರಿ ಮನದ ಗರ್ಭಕೋಶವನೇ ಬಗೆಯುವಾಗ ಬದುಕಿದು ನಗೆಯ ಬೆಳಕ ಹಡೆದೀತಾದರೂ ಹೇಗೆ...!!!
***
ಮತ್ತೆ ಮತ್ತೆ ಅನ್ನಿಸುತ್ತೆ ಪ್ರೇಮದ ಸೌಂದರ್ಯ ಮತ್ತು ವೈಫಲ್ಯ ಎರಡೂ ತನ್ನದು ಅಲ್ಲಲ್ಲ ಕೇವಲ ತನ್ನದು ಎಂಬುವ ಭಾವದ ತೀವ್ರತೆಯಲ್ಲೇ ಇದೆಯೇನೋ...
***
ಈ ನೆನಪುಗಳೊಂದಿಷ್ಟು ರಜೆ ತೆಗೆದುಕೊಂಡರೆಷ್ಟು ಚಂದವಿತ್ತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, June 5, 2015

ಗೊಂಚಲು - ನೂರು + ಐವತ್ತು + ಎಂಟು.....

ಸುಮ್ಮನೇ ಒಂದಿಷ್ಟು.....
(ಮನದ ಸುಸ್ತು ಅಕ್ಷರವಾಗಿ ಕರಗಿ...)

ಕಳೆಯಬೇಕಿದೆ ಸುಸ್ತು - ಇಳಿಸಿ ಮನದ ಭಾರ...
ನಿನ್ನೆ ಯಾವ ಯಾವುದೋ ಕಾರಣಗಳಿಂದಾಗಿ ಹುಟ್ಟಿಕೊಂಡ ಪ್ರೀತಿ ಇಂದು ಅವವೇ ಕಾರಣಗಳಿಗಾಗಿ ಹೆಳವಾಗಿ ಕೂತಾಗ ಮನಸು ಸೂತಕದ ಬಡ ಜೋಪಡಿ...
ತುಂಬಾನೇ ಭಾರ ಪ್ರೀತಿಯ ಹೆಣ - ಒಂಟಿಯಾಗಿ ಹೊತ್ತು ತಿರುಗಲು ಶಿವನೇ ಆಗಬೇಕೇನೋ...
ನಿಷ್ಕಾರಣ ಪ್ರೀತಿಯ ಮೂಲವ್ಯಾವುದು..??
ಹುಡುಕಿಕೊಳ್ಳಬೇಕಿದೆ ನನ್ನೊಳಗೆ - ಬಂಡೆ ಶಿಲ್ಪವಾಗೋದಷ್ಟು ಸುಲಭವಿಲ್ಲ...
ಆದರೂ....
***
ಈ ಸಂಜೆ ಮಳೆಯೇ ಹೀಗೆ - ಅರ್ಥವೇ ಆಗದ ಹೆಣ್ಣಿನ ಮೌನದ ಹಾಗೆ...
ಗೆಜ್ಜೆ ದನಿಯಲ್ಲಿನ ಒಲವು ಸೆಳೆಯುವ ಹೊತ್ತಲ್ಲೇ ಮಂದಹಾಸದ ಹಿಂದಿನ ನಿಶ್ಯಬ್ದ ಭಿಮ್ಮನೆ ಕಾಡುತ್ತದೆ...
ಕರುಳ ಕೊರೆಯುವ ನೆನಪೂ, ಅವಳೆಡೆಗಿನ ಬೆಚ್ಚನೆ ಕನಸೂ ಒಟ್ಟಿಗೇ ಬೇಯುತ್ತಾ ಎದೆಯ ಕುಲುಮೆಯಲಿ ದಟ್ಟ ಹೊಗೆಯಾಡುತ್ತದೆ...
ಕನಸಿನೋಲಗದ ಸದ್ದು, ಕರುಳಿನಳುವಿನ ನಿಶ್ಯಬ್ದ ಎರಡರ ಮೇಲಾಟದಲ್ಲಿ ಕಣ್ಣ ಕೊಳದ ಕಟ್ಟೆ ಒಡೆಯುತ್ತದೆ...
ಈ ಸಂಜೆ ಮಳೆಯೇ ಹೀಗೆ - ಮಸಣ ಕಟ್ಟೆಯೊಂದಿಗಿನ ಮರುಳನ ಬಡಬಡಿಕೆಯ ಹಾಗೆ.........
***
ಹೇಗೆಲ್ಲ ಅರಳಿ, ಊರೆಲ್ಲ ಸುತ್ತಿ ಸುಳಿದು, ದಕ್ಷಿಣ ಮೂಲೆಯ ಮೂರು ಮತ್ತಾರಡಿಯ ಗೂಡಲ್ಲಿ ಮುಗುಮ್ಮಾಗಿ ಮಲಗಿ ಸ್ಥಾವರವೆನಿಸೋ ಬದುಕು ಜಂಗಮ ಪಾತಳಿ - ನಾ ಹರಿದ ಜೋಳಿಗೆಯ ಜೋಗಿ - ನಡೆವುದೊಂದೆ ಕಾಯಕ - ದಾರಿ ಕರೆದಲ್ಲಿಗೆ, ಕರೆದಾಗ, ಕರೆದಂತೆ...
***
ಮತ್ತೇನಿಲ್ಲ -
ಇದ್ದಿರಬಹುದಾದ ಮನಸಿನ ಕಿಂಚಿತ್ ಒಳ್ಳೇತನ ಕೂಡ ಇರುಳ ಸಾಂಗತ್ಯದಲ್ಲಿ ನಿರ್ಗಹಿಸಲಾಗದ ತೊಡೆ ನಡುವಿನ ಉನ್ಮಾದದಲ್ಲಿ ಸೋರಿ ಹೋಗುವಾಗ ಸೂಳೆ ಮನೆಯ ಪಾವಿತ್ರ್ಯದ ಅರಿವಾಗುತ್ತೆ...
ಅವಳ ಹಸಿ ದೇಹದ ಮೇಲಿನ ನೀಲಿ ನೀಲಿ  ಕಲೆಗಳೆಲ್ಲಾ ಅವಳ ತೊಡೆಗಳ ಬಿರುಸಲ್ಲಿ ತಮ್ಮ ಶೌರ್ಯದ ಅಸ್ತಿತ್ವ ಕಳಕೊಂಡವರು ಉಳಿಸಿ ಹೋದ ಕ್ರೌರ್ಯದ ಗುರುತುಗಳಂತೆ ಕಾಣಿಸಿದರೆ ನಾನು ಅರಸಿಕನೆನಿಸಿಕೊಂಡೇನಲ್ಲವಾ...
ಆ ಕಲೆಗಳಂತೆಯೇ ಅವಳ ಕಣ್ಣ ಹನಿಗಳು ಕೂಡಾ ನೀಲಿಯಾಗಿ ಹರಳುಗಟ್ಟಿದಂತಿದೆ...
ಅವಳ ಅವುಡುಗಚ್ಚಿದ ಸ್ಪರ್ಷದ ಬೆಂಕಿಯಲ್ಲಿ ಆ ಸನ್ಯಾಸಿ ಕೂಡಾ ಮುಕ್ತ ಮುಕ್ತ...
ಇಷ್ಟಾದರೂ ಅವಳ ಹೊಟ್ಟೆಯ ಹಸಿವು ಇಂಗೀತಾ...
ಅವಳಲ್ಲವೆ ನಿಜದ ವಿರಕ್ತ...
***
ಹೇ ಅಮ್ಮನಂಥ ಸ್ನೇಹವೇ -
ನೀ ಏಕಾಂಗಿಯಾಗಿ ಇರುಳ ಗರ್ಭದಲ್ಲಡಗಿ ಕೂತು ಕೆನ್ನೆ ತೋಯಿಸಿಕೊಂಡು ಕರುಳ ಸಂತೈಸಿಕೊಳ್ಳುವಾಗೊಮ್ಮೆಯೂ ಮಡಿಲಾಗದೆ ಹೋದ ನಾನೆಂಬೋ ನನಗೆ ನಿನ್ನ ಉಸಿರ ಮರೆತ ಜಡ ದೇಹದೆದುರಲ್ಲಿ ಬಿಕ್ಕಳಿಸುವ ಹಕ್ಕಾದರೂ ಎಲ್ಲಿಯದು.....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)