Sunday, March 27, 2011

ಗೊಂಚಲು - ಹತ್ತು...

ನಿದ್ದೆಗೆ  ವಿಚಿತ್ರ  ಕನಸುಗಳು  ಭೇಟಿ  ಕೊಡುತ್ತಿವೆ.

ರಾತ್ರಿಯ  ನಿಶೀಥದಲ್ಲಿ  ಕಂಡ  ಕನಸುಗಳಿಗೆ
ಹಗಲಿನ  ನಿಚ್ಛಳದಲ್ಲಿ  ಅರ್ಥ  ಹುಡುಕುತ್ತಿದ್ದೇನೆ.

ನಾನು  ಓಡುತ್ತಿದ್ದೇನೆ  ಧೋ  ಮಳೆಯಲ್ಲಿ.

ತಲೆ  ತಗ್ಗಿಸಿದ್ದೇನೆ - ಕಾರಣ  ನಾ  ಬೆತ್ತಲಿದ್ದೇನೆ.

ಬೆನ್ನ  ಹಿಂದೆ,  ತೀರ  ಸನಿಹದಲ್ಲಿ  ಯಾತರದೋ  ಹೆಜ್ಜೆ  ಸದ್ದು.

ತಿರುಗಿ  ನೋಡಲು  ಭಯವಾಗುತ್ತೆ. 

ನಾನು  ಬೆಚ್ಚಿ  ಎಚ್ಚರಾಗುತ್ತೇನೆ.

ಮನದಾಳದ  ಹಗಲಿನ  ತಲ್ಲಣಗಳೇ
ನಿದ್ದೆಯ  ರಾತ್ರಿಯ  ಸ್ವಪ್ನಗಳಂತೆ.

ಹಾಗಾದರೆ  ನನ್ನ  ಕಾಡುವ  ಸುಪ್ತ  ತಲ್ಲಣ  ಯಾವುದು.?

ರಾತ್ರಿಯ  ಸ್ವಪ್ನವನ್ನು  ವಿಶ್ಲೇಷಿಸಿದಂತೆಲ್ಲ 
ಮನದಿ  ದ್ವಂದ್ವಗಳ  ದೊಂಬರಾಟ.
ಎಲ್ಲ  ಪ್ರಶ್ನಾರ್ಥಕ.


ನಾನು  ಓಡುತ್ತಿದ್ದೇನೆ - ಯಾವುದರಿಂದ ?
ಯಾವುದರೆಡೆಗೆ ?

ಸುರಿವ  ಧೋ  ಮಳೆ - ಈಡೇರದ  ಆಸೆಗಳದಾ ?

ಬಯಸುತ್ತೇನೆ  ಯಾರೂ  ಇದಿರಾಗದಿರಲೆಂದು  -
ಎದುರಿಸಲಾಗದ  ಅಸಹಾಯಕತೆಯಾ ?
ಮನವೂ  ಬತ್ತಲಾದೀತೆಂಬ  ಭಯವಾ ?

ಕತ್ತನ್ನು  ಪೂರ್ಣ  ಬಾಗಿಸಿದ್ದೇನೆ  ಯಾರೂ  ಗುರುತಿಸದಿರಲೆಂದು - 
ಅನಾಮಧೇಯ  ಪಥಿಕನಾಗುವ  ಆಸೆಯಾ ?
ಮುತ್ತಿಕ್ಕುವ  ಹಳೆಯ  ನೋವ  ನೆನಪುಗಳಿಂದ  ತಪ್ಪಿಸಿಕೊಳ್ಳೋ  ವ್ಯರ್ಥ  ಪ್ರಯತ್ನವಾ ?

ಆದರೂ  ಯಾರೋ  ಇದಿರಾಗ್ತಾರೆ.
ಹಾಗೇ  ಗುರುತಿಸಿಯೂಬಿಡ್ತಾರೆ.
ಕೆಲವರು  ನನ್ನ  ಹೆಸರಿನಿಂದ - ಒಳಗೊಳಗೇ  ಏನೋ  ಖುಷಿ.
ಕೆಲವರು  ಅಪ್ಪನ  ಹೆಸರು, ವಂಶದ  ಹೆಸರಿಂದ -  ಅಸಹ್ಯವಾಗುತ್ತೆ.

ಓಡುತ್ತೇನೆ  ಇನ್ನಷ್ಟು  ವೇಗವಾಗಿ.
ಗಮ್ಯ  ಯಾವುದು ?
ಬರೀ  ಶೂನ್ಯ... 

ಯಾರದು  ಬೆನ್ನ  ಹಿಂದೆ  ಇಷ್ಟು  ಸನಿಹ ?

ನನ್ನ  ತಲ್ಲಣದ  ಮೂಲ - ಕನಸಿನ  ಮೂಲ  ಎಲ್ಲ  ಅದೇನಾ ?

ತಿರುಗಿ  ನೋಡಲೂ  ಭಯ. ಅಂದುಕೊಂಡದ್ದು  ನಿಜವಾಗಿಬಿಟ್ಟರೆ ?

ಬೆನ್ನ  ಹಿಂದೆ  ಇಷ್ಟೊಂದು  ಸನಿಹದಲ್ಲಿ  ನೆರಳಂತೆ  ಹಿಂಬಾಲಿಸಿ
ಬರುತ್ತಿರೋದು...
ಅದು...
: : : : :
: : : :
: : :
: :
:
ಸಾವಾ.....??????


Sunday, March 13, 2011

ಗೊಂಚಲು - ಒಂಭತ್ತು...



ಆಗಸದ  ಚಂದ್ರಮ  ಭುವಿಯ  ಮುತ್ತಿಕ್ಕಲು  ಬಾಗುವನಂತೆ...


ಹಸಿದ  ಧರಣಿ  ಬಾಯ್ಬಿರಿವುದಂತೆ...


ಆಸೆಯ  ಶರಧಿ  ಉಕ್ಕಿ  ತನ್ನ  ಮಿತಿಯ  ಮೀರುವುದಂತೆ...


ಸಹಜ  ಸಂದರ್ಭದಲ್ಲಿ  ರತಿ  ರಮ್ಯವಾದ  ಪ್ರಕೃತಿಯೇ -
ಮುನಿದಾಗ,


ಅಟ್ಟಹಾಸದಿ  ಜವರಾಯ  ತನ್ನ  ರಾಜ್ಯ  ವಿಸ್ತರಿಸುವನಂತೆ...


ಆಗ -
ಊರು - ಕೇರಿಗಳೆಲ್ಲ  ಬರೀ  ಸ್ಮಶಾನದಂತೆ...









































ಮುನಿದ  ಪ್ರಕೃತಿ  ಶಾಂತವಾಗಲಿ.


ಜಪಾನಿನ  ಆ  ನೆಲದಲ್ಲಿ  ಚೈತನ್ಯ  ಮತ್ತೆ  ಚಿಗುರಲಿ.


ಅಳುವ  ಕಡಲಲಿ  ಮತ್ತೆ  ತೇಲಿ  ಬರಲಿ
ನಗೆಯ  ಹಾಯಿ  ದೋಣಿ...

Sunday, March 6, 2011

ಗೊಂಚಲು - ಎಂಟು...

ಕೆಲವು  ಭಾವಗಳಿಗೆ

ಅರ್ಥ  ಮತ್ತು  ಮೂಲ

ಹುಡುಕಬೇಡಿ.

ಮರ್ಕಟ  ಮನಸಿನ 

   ವಿಕಾರ  ಗೋಚರಿಸೀತು...

Wednesday, March 2, 2011

ಗೊಂಚಲು - ಏಳು...

"ಜನಿಸಿದ  ಘಳಿಗೆಯ  ನಂತರದ  ಪ್ರತಿ  ಕ್ಷಣವೂ  ಸಾವಿನದಾಗಬಹುದಾದರೆ - ಈ  ಕ್ಷಣ  ನಾವು  ಬದುಕಿದ್ದೇವೆ  ಎನ್ನುವುದಕ್ಕಿಂತ  ದೊಡ್ಡ  ಕಾರಣ  ಇನ್ಯಾವುದು  ಬೇಕು  ಈ  ಬದುಕನ್ನು  ಪ್ರೀತಿಸಲು, ಆಸ್ವಾದಿಸಲು.  ಈ  ಜೀವನವ  ಆರಾಧಿಸಲು."

"ಸಾವು - ಅಂತಿಮ  ವಾಸ್ತವವಾದರೆ,  ಬದುಕು - ನಿತ್ಯ  ಸತ್ಯ..."

ಬದುಕನ್ನು  ಪ್ರೀತಿಸುವವರಿಗೆ  ಈ  ಬದುಕಿನ  ಬಗ್ಗೆ,  ಅದು  ಕೊಡಮಾಡಿದ  ಸುಖ - ದುಃಖಗಳ  ಬಗ್ಗೆ,  ಆಸೆ - ನಿರಾಸೆಗಳ  ಕಡೆಗೆ  ಯಾವೊಂದೂ  ತಕರಾರುಗಳಿರುವುದಿಲ್ಲ.  ಬದುಕನ್ನು  ಯಾವುದೇ  ಪೂರ್ವಾಗ್ರಹಗಳಿಲ್ಲದೆಯೇ ಪ್ರಾಮಾಣಿಕವಾಗಿ  ಪ್ರೀತಿಸಬಲ್ಲವನು  ಸಾವನ್ನು  ಕೂಡ  ಸಮಚಿತ್ತದಿಂದ  ನೋಡಬಲ್ಲವನಾಗುತ್ತಾನೆ.

ಬದುಕಿರುವ  ಪ್ರತಿ  ಘಳಿಗೆಯನ್ನೂ  ಅದಮ್ಯವಾಗಿ  ಪ್ರೀತಿಸುತ್ತಾ - ಸಾವನ್ನೂ  ಗೌರವದಿಂದ  ನಗುತ್ತ  ಸ್ವಾಗತಿಸಬಲ್ಲವನಾಗುವುದರೆಡೆಗೆ  ನನ್ನ  "ಪಯಣ..."

ಸಾವು - ಒಂದು  ನಿಲ್ದಾಣ ?????


Sunday, February 20, 2011

ಗೊಂಚಲು - ಆರು...

"ಈ ಪ್ರೀತಿ ಒಂಥರಾ ....."


ಪ್ರತೀ ಜೀವಕ್ಕೂ, ಗಂಡು - ಹೆಣ್ಣೆಂಬ ಭೇದವೇ ಇಲ್ಲದೆ ಎಲ್ಲ ಜೀವಗಳಿಗೂ ಒಂದು ಕನಸು,ಕಲ್ಪನೆ, ಆಸೆ ಇರುತ್ತೇನೋ. ತಾನೂ ಯಾರನ್ನಾದ್ರೂ ಪ್ರೀತಿಸ್ಬೇಕು - ಯಾರಿಂದಲೋ ಪ್ರೀತಿಸಲ್ಪಡಬೇಕು - ಒಂದಿಡೀ ಬದುಕನ್ನು ಅವರ ಸಾಂಗತ್ಯದಲ್ಲಿ ಕಳೀಬೇಕು - ತನ್ನೆಲ್ಲ ಪ್ರೀತೀನ ಅವ್ರಿಗೆ ಧಾರೆ ಎರೀಬೇಕು - ಅವರೆಲ್ಲ ಪ್ರೀತಿ ಭಾವಗಳನ್ನ ತನ್ನದನ್ನಾಗಿಸ್ಕೋಬೇಕು - ಅವರ ಮನೋಪ್ರಪಂಚದ ಕೇಂದ್ರಬಿಂದು ತಾನೇ ಆಗ್ಬೇಕು. ಸಿನೆಮಾಗಳ ಹಾಡುಗಳಲ್ಲಿ ತೋರಿಸ್ತಾರಲ್ಲ ಹಾಗೇ, ತಾನೂ ಕೂಡ ಜಗತ್ತಿನೆಲ್ಲ ಸುಂದರ ತಾಣಗಳನ್ನು ನೋಡಿ ಸವೀಬೇಕು. ಬೆಸೆದ ತೆಕ್ಕೇನ ಸಡಿಲಿಸದೇ ಓಡಾಡ್ಬೇಕು,ಓಲಾಡ್ಬೇಕು. ಮುತ್ತೇ ಮಾತಾಗ್ಬೇಕು, ಮತ್ತಲ್ಲಿ ತೇಲಾಡ್ಬೇಕು. ಹೀಗೇ ಏನೇನೋ ಕನಸುಗಳು - ಕಲ್ಪನೆಗಳು. ತನ್ನ ಜೀವ ತನ್ನಂತದೇ ಮತ್ತೊಂದು ಜೀವಾನ ಸೃಷ್ಠಿಸೋ ವಯಸ್ಸು ಮೂಡಿದ್ದು ತನಗೇ ತಿಳಿದಾಗಿನಿಂದ ಈ ಆಸೆ, ಕನಸು ಹೃದಯದ ಬಡಿತದೊಂದಿಗೇ ಮಿಳಿತವಾಗಿ ಬಿಡತ್ತೇನೋ. ಆದ್ರೆ ವಿಪರ್ಯಾಸ ಗೊತ್ತಾ.! 99.9% ಜನರ ಈ ಕನಸು ಕನಸಾಗಿಯೇ ಉಳಿದು ಹೋಗತ್ತೆ. ಬದುಕಿನ ಘನ ವಾಸ್ತವಗಳು "ಪ್ರೀತಿ"ಯಂಥ ತೀವ್ರತರ ಭಾವಗಳನ್ನೂ ಸಾಯಿಸಿ ಸಮಾಧಿ ಮಾಡಿಬಿಡುತ್ವೆ. ಕನಸಿನ ಗುಂಗಲ್ಲಿ ಕಣ್ತೆರೆದರೆ - ಕಣ್ಣೆದುರಿನ ವಾಸ್ತವ ರಾಚುತ್ತೆ. ಆದ್ರೂ ಈ ಕನಸುಗಳೇನೇನೋ ಬದುಕನ್ನು ಇಷ್ಟಾದರೂ ಸಹನೀಯವಾಗಿರಿಸೋದು. ಅಲ್ವಾ.? ಅದಕ್ಕೇ ಇರಬೇಕು ಕವಿ ಪ್ರೀತೀನ ಮಧುರ ಯಾತನೆ ಅಂತಂದದ್ದು. ಕೆಲವರು ಪ್ರೀತಿಸಲಾರದೇ - ಪ್ರೀತಿ ಸಿಗದೇ ಒದ್ದಾಡ್ತಾರೆ. ಇನ್ಕೆಲವರು ಪ್ರೀತಿಸಿ - ಪ್ರೀತೀನ ಉಳ್ಸ್ಕೊಳ್ಳೋಕಾಗ್ದೇ ಒದ್ದಾಡ್ತಾರೆ. 



ಒಟ್ನಲ್ಲಿ ಈ ಪ್ರೀತಿ ಒಂಥರಾ.....
                                    
               Yes, ಈ ಪ್ರೀತಿ ಒಂಥರಾsssss.....




Monday, February 14, 2011

ಗೊಂಚಲು - ಐದು...

ಎನ್ನ 'ಉಸಿರಿಗೆ'
                      ನಾ
                           ಬರೆದ ಒಂದು 
                                               ಒಲವಿನೋಲೆ...


                            
                           ಇಂದು ಪ್ರೇಮಿಗಳ ದಿನ. ನಂಗೆ ಪ್ರೇಮದ ಬಗೆಗೆ ಅಂಥ ದೊಡ್ಡ ನಂಬಿಕೆಯೇನಿಲ್ಲ. ನಾನು ಯಾರದೇ ಪ್ರೇಮಿ ಕೂಡ ಅಲ್ಲ. ಆದರೂ ಆಗಾಗ ಎಲ್ಲೋ ಮನದಾಳದಲ್ಲಿ ಮೂಡಿ ಮರೆಯಾಗುವ ಪ್ರೇಮದ ಭಾವಗಳನ್ನೆಲ್ಲ ಒಟ್ಟುಗೂಡಿಸಿ - ಅವನ್ನೆಲ್ಲ ಒಂದು ಚೌಕಟ್ಟಿನಲ್ಲಿ ಒಂದೆಡೆ ಸೇರಿಸಿ ಈ ದಿನ ಇಲ್ಲಿ ಬರೆದಿದ್ದೇನೆ. ಇದು ಎಂದೂ ಬಾರದ,ಯಾರೆಂದು ತಿಳಿಯದ,ನನ್ನ ಕನಸಿನ ಕನ್ಯೆಗೆ - ನಾನು ಈ ಪ್ರೇಮಿಗಳ ದಿನದಂದು ಬರೆದಿಟ್ಟ ಪ್ರೇಮ ಪತ್ರವು...

"ಮನವೆಂಬ ಸರೋವರದಿ ಭಾವ ಕಮಲಗಳು ಅರಳಿ ನಳನಳಿಸುತಿವೆ...
ಗೆಳತೀ -
ಮಧುರ ಸ್ಮೃತಿಗಳ ಗಾನ
ನಿನ್ನ ನೆನಪಿನ ಯಾನ..."


ಕಳೆದ ಇಷ್ಟೆಲ್ಲ ವರ್ಷಗಳ ಕಾಲ ಕಂಡ ಕನಸುಗಳೆಲ್ಲ ಈಗ ನಿನ್ನ ಸನ್ನಿಧಿಯಲ್ಲಿ ನನಸಾಗುತ್ತಿರುವ ಈ ದಿವ್ಯ ಕಾಲದಲ್ಲಿ.... ಏನಂತ ಬರೆಯಲಿ. ಏನು ಬರೆದರೂ, ಹೇಗೆ ಬರೆದರೂ ಅದು ಅಪೂರ್ಣವೇ. ಯುಗಯುಗಾಂತರಗಳಿಂದ ಎಷ್ಟೆಲ್ಲ ಮಂದಿ ಕವಿಗಳು, ಲೇಖಕರು, ವಿಮರ್ಶಕರು ಎಲ್ಲರೂ ಪ್ರೇಮವೆಂಬ ಒಂದೇ ಶಬ್ದದ ಬಗ್ಗೆ ಎಷ್ಟೆಲ್ಲ ಬರೆದರು. ಏನೇನೆಲ್ಲ ಬರೆದರು. ಅವರೆಲ್ಲ ಅಷ್ಟೆಲ್ಲ ಬರೆದ ನಂತರವೂ ಆ ಬರವಣಿಗೆಗಳು ಅಪೂರ್ಣವೇ ಎಂಬುದು ನನ್ನ ಅನಿಸಿಕೆ. ಯಾಕೇಂದ್ರೆ ಅವರ್ಯಾರೂ ಇಂದು ನನಗೆ ನನ್ನ ಮನದ ಭಾವಗಳನ್ನು ಅಕ್ಷರಕ್ಕಿಳಿಸಲು ಸಹಾಯಕ್ಕೆ ಬರುತ್ತಿಲ್ಲ. 

ಅನುಭವಕ್ಕೂ ಅನುಭೂತಿಗೂ ತುಂಬಾ ವ್ಯತ್ಯಾಸವಿದೆ. ಅನುಭವವನ್ನು ವಿವರಿಸಬಹುದು. ಅನುಭೂತಿ ವಿವರಣೆಗೆ ದಕ್ಕದು. ಅನುಭವ ಲೌಕಿಕ. ಅನುಭೂತಿ ಅಲೌಕಿಕ. ಪ್ರೇಮ ಅನುಭವವಲ್ಲ ಅನುಭೂತಿ. ಅದಕ್ಕಾಗಿ ಅದನ್ನು ಕೇವಲ Feel ಮಾಡಬಹುದಷ್ಟೇ. ಗಾಳಿಯಂತೆ, ಆತ್ಮದಂತೆ. ಪ್ರೇಮದ ಭಾವಗಳನ್ನು ವಿವರಿಸಬಾರದಂತೆ. ನಮ್ಮಲ್ಲೇ ಅಡಗಿಸಿಕೊಂಡು ಆನಂದಿಸಬೇಕಂತೆ. ಹಾಗಂತ ಹೇಳದೇ ಇರಲೂ ಆಗದು. ಯಾಕೇಂದ್ರೆ - ಮನದ ಸರೋವರದಿ ಧುಮ್ಮಿಕ್ಕುವ ಪ್ರೇಮಧಾರೆಯನ್ನು ಎಷ್ಟು ಕಾಲ ಅಂತ ತಡೆದಿಡಲು ಸಾಧ್ಯ. ಎಷ್ಟೇ ಬೇಡ ಬೇಡವೆಂದರೂ - ಮಾತಿನಿಂದಲ್ಲದಿದ್ದರೆ ಕಣ್ಣಿನಿಂದಲಾದರೂ ಹೊರ ನುಸುಳಿಬಿಡುತ್ತೆ ಮನದಾಳದ ಪ್ರೇಮದ ಭಾವ ತರಂಗ...

ಬೆಳ್ಳಂಬೆಳಗ್ಗೆ ಸುಪ್ರಭಾತವ ಹಾಡುವ ಗೋಪಿ ಹಕ್ಕಿಯ ದನಿಯ ಇಂಪಿನಲ್ಲಿ, ಅಟ್ಟದ ಮೇಲೆ ಹರವಿದ ಅಡಿಕೆಯ ಮೇಲೆ ಬೀಳುವ ಮೊದಲ ರವಿ ಕಿರಣದಲ್ಲಿ, ತೆಳ್ಳವು ದೋಸೆ ತಿನ್ನಲು ಕರೆಯುವ ಆಯಿಯ ಆತುರದಲ್ಲಿ, ಹಾಲು ಕರೆವಾಗ ಪಾತ್ರೆ ತುಂಬಿ ಬರುವ ಹಾಲ ಬಿಳಿ ನೊರೆಯಲ್ಲಿ, ತಾಯ ಮೊಲೆಗಾಗಿ ಚಡಪಡಿಸುವ ಕರುವಿನ ಧಾವಂತದಲ್ಲಿ, ಮಧ್ಯಾಹ್ನದ ಸೆಖೆಯ ಒದ್ದಾಟದಲ್ಲಿ, ಸಂಜೆಯ ತಂಗಾಳಿಯೊಂದಿಗೆ ಬರುವ ಏನೋ ಅರಿಯದ ಮಧುರ ವೇದನೆಯಲ್ಲಿ, ರಾತ್ರಿಯ ಮೊದಲ ಭಾಗದ ಉದ್ವೇಗ-ಉನ್ಮಾದಗಳಲ್ಲಿ, ನಂತರದ ಗಾಢ ನಿದ್ರೆಯಲ್ಲಿ, ಬೆಳಗಿನ ಜಾವದ ಬೆಚ್ಚಗಿನ ಕನಸಿನಲ್ಲಿ, ಕುಳಿತಲ್ಲಿ, ನಿಂತಲ್ಲಿ, ಎಲ್ಲೆಂದರಲ್ಲಿ ನೀನೇ ಕಾಣುವ - ನಿನ್ನದೇ ನೆನಪಾಗುವ ಈ ಪರಿಯನ್ನು ಹೇಗೆ ವಿವರಿಸಲಿ. ನಿಂಗೆ ಹೇಗೆ ವರ್ಣಿಸಲಿ...


ನಿನ್ನ ನೆನಪಾದರೆ ಸಾಕು ಮನಸು ಏಕಾಂತವ ಬಯಸುತ್ತೆ. ಮಾತು ಮೌನದ ಮೊರೆ ಹೋಗುತ್ತೆ. ನಾನೇ ಸೃಷ್ಟಿಸಿಕೊಂಡ ಏಕಾಂತದ ಮೌನದಲ್ಲಿ ನಾನು ನಿನ್ನೊಂದಿಗೆ ಮಾತಿಗಿಳಿಯುತ್ತೇನೆ. ಏನೆಲ್ಲ ಮಾತುಗಳು - ಏನೆಲ್ಲ ಸ್ವಪ್ನಗಳು. ಆಗ ನಾ ನೋಡುವ ಪ್ರತಿ ವಸ್ತು - ಪ್ರತಿ ಜೀವ ಸೌಂದರ್ಯದ ಕಾಂತಿಯಿಂದ ಪ್ರಜ್ವಲಿಸುತ್ತಿರುತ್ತೆ. ಕಾರಣ ಅಲ್ಲೆಲ್ಲ ನಂಗೆ ನೀನೇ ಕಾಣ್ತಿರ್ತೀಯ. ಕಣ್ಣಲ್ಲಿ ನಿನ್ನ ಬಿಂಬ ಸ್ಥಿರವಾಗಿರುವಾಗ ಕಣ್ಣು ಬೇರೇನನ್ನೂ ನೋಡಲು ನಿರಾಕರಿಸುತ್ತೆ. ನೋಡಿದರೂ ಅಲ್ಲಿ ನೀನೇ ಕಾಣ್ತೀಯ. ಹಾಗಾಗಿ ಜಗವೆಲ್ಲ ಸುಂದರವೇ. ನಿನ್ನ ನೆನಪು ನನ್ನ ಮನವನ್ನಾಳುತ್ತಿರುವಾಗ ಕಾರ್ಗತ್ತಲು ಕೂಡ ಎಷ್ಟು ಸಹನೀಯವಾಗಿರತ್ತೆ ಗೊತ್ತಾ..! ಅವನ್ನೆಲ್ಲ ಅಕ್ಷರದಲ್ಲಿ ಹಿಡಿದಿಡೋಕಾಗತ್ತಾ. ಆ ಭಾವಗಳ ತೀವ್ರತೆ ಎಷ್ಟಿತ್ತೆಂದು ನಂತರ ವಿವರಿಸುತ್ತೇನೆ. ಅಕ್ಷರದಿಂದಲ್ಲ. ನೀನು ನನ್ನೆದುರಲ್ಲಿ ನನ್ನನ್ನೇ ಆ ನಿನ್ನ ಬೊಗಸೆ ಕಂಗಳಲ್ಲಿ ಕಂಡೂ ಕಾಣದ ನಾಚಿಕೆಯಿಂದ, ಹಿಡಿದಿಡಲಾಗದ ಪ್ರೇಮದಿಂದ ನೋಡುತ್ತಿರುವಾಗ ಆ ನಿನ್ನ ಕಂಗಳಿಗೆ ಮೃದುವಾಗಿ ಮುತ್ತಿಡುವ ಮೂಲಕ.

 ಹೇಯ್ ! ಯಾಕೆ ಈಗ್ಲೇ ಕೆನ್ನೆ ಕೆಂಪಾಯ್ತು. ಕಂಗಳೇಕೆ ಮುಚ್ಕೋತಿವೆ.? ನಾನು ಈಗಿನ್ನೂ ನಿನ್ನ ಮುತ್ತಿಟ್ಟಿಲ್ಲ ಕಣೇ. ಅದೆಲ್ಲ ಆಮೇಲಿನ ಮಾತು. ಆದರೂ ಈ ನಾಚಿಕೇನೂ ತುಂಬಾ ಚೆನ್ನಾಗೇ ಇದೆ ಬಿಡು.

ನಿಜಕ್ಕೂ ಇದೆಲ್ಲ ಆಶ್ಚರ್ಯಕರವಾಗಿದೆ. ಈಗಲೂ ಕನಸಿನಂತೆಯೇ ಭಾಸವಾಗ್ತಿದೆ.
"ಎನ್ನ ಬದುಕಿನ ಮರವ 
ಬಳ್ಳಿಯಾಗಿ ಬಳಸಿ ಬೆಸೆದು
ಉಳಿದೆನ್ನ ಬದುಕ - ನಗುವ 
ಶ್ರೀಮಂತಗೊಳಿಸ ಬರುವ
ಮುಗ್ಧ ಕಂಗಳ ಮುದ್ದು ಹುಡುಗೀ..."      


ನಿನ್ನ ಪುಟ್ಟ ಹೃದಯದ ಗೂಡಲ್ಲಿ ನಂಗೊಂದು ವಿಶೇಷ ಸ್ಥಾನವಿದೆ. ನಿನ್ನ ಭವಿಷ್ಯದ ಬಗೆಗಿನ ಕನಸುಗಳಲ್ಲಿನ್ನು ನಾನು ಸಂಮಿಳಿತಗೊಂಡಿರುತ್ತೇನೆ ಎಂಬ ಭಾವಗಳೇ ಎಂಥ ಸಂತೋಷ ಕೊಡುತ್ತವೆ ಗೊತ್ತಾ..! ಇನ್ನು ಮುಂದೆ ನನ್ನ ಮನಸಿನ ಜೊತೆಗೆ ಮಾತಾಡಲೊಂದು ಮನಸು ಜೊತೆಗಿರುತ್ತೆ - ನನ್ನ ಕನಸುಗಳನ್ನು ಹಂಚಿಕೊಳ್ಳಲು - ಹೊಸ ಕನಸುಗಳನ್ನು ಕಟ್ಟಿ ಕೊಡಲು - ಪುಟ್ಟ ಕನಸೊಂದು ನನಸಾದಾಗ ನನ್ನೊಂದಿಗೆ ಸಂಭ್ರಮಿಸಲು - ನನ್ನ ಗೆಲುವಿಗೆ, ನನ್ನ ನಗುವಿಗೆ ಸ್ಫೂರ್ತಿಯಾಗಿ - ನನ್ನ ಸೋಲಿಗೆ, ನನ್ನ ನೋವಿಗೆ ಸಾಂತ್ವನವಾಗಿ - ಮಧ್ಯಾಹ್ನದ ಸುಡು ಬಿಸಿಲಿಗೆ ಹೊಂಗೆಯ ನೆರಳಂತೆ - ರಾತ್ರಿಯ ಕಾರ್ಗತ್ತಲಲ್ಲಿ ಹೆಜ್ಜೆ ಎಡವದಂತಿರಲು ಬೆಳದಿಂಗಳಂತೆ - ನನ್ನ ಹೆಗಲಿಗೆ ಹೆಗಲಾಗಿ - ಬದುಕಿನ ಶಕ್ತಿಯ ಸೆಲೆಯಾಗಿ ನನ್ನೊಂದಿಗೆ ನನ್ನ ಬಾಳ ಪಯಣದಲ್ಲಿ ಕೊನೆ ತನಕ ಒಂದು ಹೆಣ್ಣು ಜೀವ ಜೊತೆಗಿರುತ್ತೆ ಎಂಬ ಭಾವದ ಕಲ್ಪನೆಯೇ ಎಂಥ ಚೈತನ್ಯವನ್ನು ತುಂಬುತ್ತೆ ಗೊತ್ತಾ..!

ಗಣಿತದಲ್ಲಿ ಒಂದು ಒಂದು ಸೇರಿದರೆ ಮೊತ್ತ ಎರಡಾಗುತ್ತೆ. ಆದರೆ ಪ್ರೇಮದಲ್ಲಿ ಒಂದು ಒಂದು ಸೇರಿದರೆ ಮೊತ್ತವೂ ಒಂದೇ ಆಗುತ್ತೆ ಅಂತ ಎಲ್ಲೋ ಓದಿದ ಮಾತು ಎಷ್ಟು ಸತ್ಯ ಎಂದು ಇಂದು ಗೊತ್ತಾಗ್ತಿದೆ. ನನ್ನ ಮನಸು ನನ್ನನ್ನೇ ಮರೆತು ನಿನ್ನಲ್ಲಿ ಲೀನವಾಗಿ ನೀನೇ ಆಗಿ ಹೋದ ಈ ಘಳಿಗೆಯಲ್ಲಿ...

ಮಾಯಾವೀ -
ಇಷ್ಟೆಲ್ಲ ವರ್ಷಗಳ ಕಾಲ ಯಾರ ಕೈಗೂ ಸಿಗದಂತೆ ನನ್ನೆದೆಯ ಗೂಡಲ್ಲಿ ಬಚ್ಚಿಟ್ಟುಕೊಂಡಿದ್ದ ನನ್ನ ಮನವನ್ನು ಕೇವಲ ಒಂದೇ ಒಂದು ಕ್ಷಣದಲ್ಲಿ, ಕಡೆಗಣ್ಣ ಕುಡಿನೋಟವೊಂದರಿಂದಲೇ ಎಷ್ಟು ಸಲೀಸಾಗಿ ಅಪಹರಿಸಿಬಿಟ್ಟೆಯಲ್ಲೇ... ನಿಂಗಿದು ಹೇಗೆ ಸಾಧ್ಯವಾಯ್ತು.? ನಿನ್ನನ್ನು ಮಾಯಾವಿ ಅಂದದ್ದು ತಪ್ಪಾ.?  ಮೀಸೆ ಚಿಗುರಿದ್ದು ಗೊತ್ತಾದ ಮೊದಲ ದಿನದಿಂದ ಕಟ್ಟಿಕೊಳ್ಳುತ್ತ ಬಂದ ಕನಸುಗಳು ನಿನ್ನ ರೂಪದಲ್ಲಿಂದು ನನಸಾಗುತ್ತಿವೆ.ಚಂದ್ರನನ್ನೂ ಅಣಕಿಸುವಂಥ ನಿನ್ನ ಸಹಜ ಸುಂದರ ನಗುವಿನ್ನು ನನಗೆ ಸ್ವಂತ ಎಂಬ ಭಾವ  ಮನದಿ ಮೂಡುತಿರೆ ಎಂಥ ರೋಮಾಂಚನ ಗೊತ್ತಾ..! ಬದುಕಿನ ಮರ ಹೊಸ ರೆಂಬೆಗೆ ಜನ್ಮವೀಯುವ ಕಾಲ. ಬದುಕಿಗೆ ಹೊಸ ಅರ್ಥ ಸ್ಫುರಿಸುವ ಕಾಲ ಇದಲ್ಲವೇನೇ ಗೆಳತೀ. ಏನಂತೀಯಾ..?

ಇನ್ನಷ್ಟು ವಿಚಾರಗಳನ್ನು ಇನ್ನೊಂದು ಪತ್ರದಲ್ಲಿ ಬರೀತೀನಿ. ನಿಂಗೇನನ್ನಿಸ್ತಾ ಇದೆ. ಪತ್ರ ಓದಿ ಖುಷಿಯ ಝಲಕೊಂದು ನಿನ್ನ ಕಣ್ಣಂಚಲ್ಲಿ ಮಿಂಚಿದರೆ ನಂಗಷ್ಟೇ ಸಮಾಧಾನ. ಈ ಪತ್ರಕ್ಕಷ್ಟೇ ಸಾರ್ಥಕ್ಯ.....

ಮತ್ತೊಮ್ಮೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.....

Saturday, February 5, 2011

ಗೊಂಚಲು - ನಾಕು...


ಪ್ರತೀ ವ್ಯಕ್ತಿಯ ಆಸೆಯೂ ತನ್ನ ಬದುಕು ವೈವಿಧ್ಯತೆಗಳಿಂದ,ವಿಧವಿಧದ ಬಣ್ಣಗಳಿಂದ ತುಂಬಿರಬೇಕೆನ್ನುವುದಾಗಿರುತ್ತೆ. ನಿತ್ಯವೂ ಹೊಸಹೊಸ ಅನುಭವಗಳು,ನವನವೀನ ಅನುಭೂತಿಗಳು ತನ್ನದಾಗಬೇಕೆಂದು ಬಯಸುತ್ತಾನೆ.ಆ ಕಾಲಕ್ಕೆ ಆ ಕ್ಷಣಕ್ಕೆ ತನ್ನಲ್ಲಿ ಏನೇನು ಕನಸುಗಳು,ಆಸೆಗಳು ಮೂಡುತ್ವೋ ಅವೆಲ್ಲ ಈಡೇರಬೇಕೆಂದು ಹಂಬಲಿಸ್ತಾನೆ. ಆದರೆ ಬಯಕೆಗಳೇ ಬೇರೆ ಬದುಕೇ ಬೇರೆ ಅಲ್ವಾ..! ನಾವು ಬಯಸಿದ್ದೆಲ್ಲಾ ನಮಗೆ ಸಿಗೋಹಂಗಿದ್ರೆ ನಾವೆಲ್ಲ ಹಿಂಗಿರ್ತಿದ್ವಾ..?



'ಬದುಕು ಬಿಳಿಯ ಕ್ಯಾನ್ವಾಸಿದ್ದ ಹಾಗೆ.ಅದರ ಮೇಲೆ ಚಿತ್ರಾನ ನಾವೇ ಬಿಡಿಸಿಕೊಳ್ಳಬೇಕು'ಅಂತ ಎಲ್ಲೋ ಓದಿದ್ದೆ.ಮಾತು ಸತ್ಯವಾದದ್ದೇ.ಆದ್ರೆ ಎಲ್ರಿಗೂ ಚಿತ್ರ ಬಿಡಿಸೋ ಸಾಮರ್ಥ್ಯ ಇರಲ್ವಲ್ಲಾ. ಗೆರೆ ಎಳೆದು, ಚಿತ್ರಕ್ಕೆ ರೂಪ ಕೊಟ್ಟು, ಬಣ್ಣಗಳ ಕಾಂಬಿನೇಷನ್ ತಿಳ್ಕೊಂಡು,ಒಂದು ಚಂದನೆಯ ಬಣ್ಣದ 
ಚಿತ್ರಾನ ಬಿಡಿಸಿಕೊಳ್ಳೋ ಕಲೆ ಎಲ್ರಿಗೂ ಸಿದ್ಧಿಸಿರೊಲ್ಲವಲ್ಲಾ. ಹಾಗೆ ತನ್ನ ಬದುಕಿನ ಚಿತ್ರವನ್ನು ತಾನೇ ಬಿಡಿಸ್ಕೊಳ್ಳೋ ತಿಳುವಳಿಕೆ,ಸಾಮರ್ಥ್ಯಗಳಿಲ್ಲದವನು ಏನ್ಮಾಡ್ಬೇಕು.?




ಸ್ವಂತವಾಗಿ ಬದುಕು ರೂಪಿಸಿಕೊಳ್ಳೋ ಸಾಮರ್ಥ್ಯ ಇಲ್ಲ ಅಂತ - ಮನದಲ್ಲಿ ಮೂಡೋ ಆಸೆಗಳನ್ನ ಹತ್ತಿಕ್ಕಲಾಗುತ್ತಾ.? ಇಲ್ಲ ಅಲ್ವಾ..! ನಿಜದಲ್ಲಿ ಅರಮನೆ ಕಟ್ಟಲಾಗದವರು ಕನಸಲ್ಲೂ ಅರಮನೇನ ಕಾಣಬಾರದೆಂದೇನೂ ಇಲ್ವಲ್ಲಾ. ಕನಸು ಕಾಣೋಕೇನು ಕಾಸು ಕೊಡ್ಬೇಕಾ..? ತನ್ನ ಕನಸನ್ನು ನನಸು ಮಾಡ್ಕೊಳ್ಳೋ ತಾಕತ್ತಿರೋನು ತನ್ನ ಬದುಕನ್ನು ತಾನೇ ರೂಪಿಸಿಕೊಂಡು ಆನಂದದ ಮಹಲನ್ನು ಕಟ್ಟಿಕೊಂಡು ಅಲ್ಲಿ ಸುಖವಾಗಿ ಜೀವಿಸ್ತಾನೆ. ಆ ಶಕ್ತಿ ಇಲ್ದೋನು ಸುಳ್ಳೇ ಕನಸನ್ನು ಕಾಣ್ತಾ, ಭಾವಗಳನ್ನು ಅದೇ ಭಾವಕೋಶಗಳಲ್ಲಿ ಹೂತು ಸಮಾಧಿ ಮಾಡ್ಕೊಂಡು, ತನ್ನ ಮಿತಿ ಇಷ್ಟೇ ಅಂದ್ಕೊಂಡು, ಮೊಗದಲ್ಲಿ ಸುಳ್ಳೇ ನಗು ಮೂಡಿಸ್ಕೊಂಡು (ಸಮಾಜಕ್ಕೆ ತಾನು ಖುಷಿಯಾಗಿದೀನಿ ಅಂತ ತೋರಿಸ್ಕೋಬೇಕಲ್ಲಾ...) ಭ್ರಮೆಗಳಲ್ಲಿ ಬದುಕ್ತಿರುತ್ತಾನೆ. ಅವನಾದ್ರೂ ಇನ್ನೇನ್ಮಾಡೋಕಾಗುತ್ತೆ? ಆತ ಸಾಮಾನ್ಯ...


 ವ್ಯತ್ಯಾಸ ಇಷ್ಟೇ...
 ಒಬ್ಬ ಮನಸಾರೆ ನಗ್ತಾನೆ. ಮತ್ತೊಬ್ಬ ಮುಖದ ತುಂಬ   ನಗ್ತಾನೆ...

Sunday, January 30, 2011

ಗೊಂಚಲು - ಮೂರು...

"ಕನಸು ಕೊಳೆತ ನಾತ":~


ಒಂದು ಸುಂದರ ಬದುಕಿತ್ತು.
ಅಲ್ಲೊಂದಿಷ್ಟು ಚಂದನೆಯ ಕನಸುಗಳಿದ್ದವು...


ಬದುಕು -
ಬದುಕೆಂದರೆ ಅದೇ ತಾನೆ - ಗಿಜಿಗುಡುವ ಅನಿಶ್ಚಿತತೆಗಳ ಸಂತೆ.
ಅಂಥದೊಂದು ಅನಿಶ್ಚಿತ ಅವಘಡಕ್ಕೆ ಎದುರು ನಿಲ್ಲಲಾಗದೇ, ಬದುಕಿಗಾಗಿ - ಅಲ್ಲ ಕೇವಲ ಬದುಕಿರುವುದಕ್ಕಾಗಿ,
ಆ ಎಲ್ಲ ಕನಸುಗಳನ್ನೂ ಪ್ರಜ್ಞಾಪೂರ್ವಕವಾಗಿ ಕೊಂದೆ.
ಕೊಂದುದಲ್ಲದೇ ಮನದ ಮೂಲೆಯ ಆಳದಲ್ಲಿ ಹೂತುಬಿಟ್ಟೆ.


ಆದರೀಗ,
ಹೂತ ಕನಸುಗಳ ಕೊಳೆತ ನಾತ ಬರುತ್ತಿದೆ.


ಆಸೆಯೆಂಬ ನಾಯಿಗೆ ನಾಚಿಕೆಯೇ ಇಲ್ಲ.
ಸಮಾಧಿಯನ್ನೂ ಅದು ಬಿಡಲಾರದಲ್ಲ...!
ಸಮಾಧಿಯ ಹೊಟ್ಟೆಯ ಬಗೆಬಗೆದು ಕೊಳೆತು ಜೀರ್ಣವಾದ ಶವವ ಹೊರತೆಗೆದು ಅದರ ನಾತ ಜೀವವ ಹಿಂಡುವಂತೆ ಮಾಡಿ ನಗುವುದಲ್ಲ..!


ಮತ್ತೆ ಹೂಳಲೂ ಆಗದೆ, ಇತ್ತ ನಾತವ ಸಹಿಸಲೂ ಆಗದೆ ಮಿಡುಕಿ ಒದ್ದಾಡುತಿದೆ ನನ್ನ ಜೀವಾತ್ಮ.


ನಿನ್ನೆಗಳ ಭಗ್ನ ಕನಸುಗಳ ಘೋರಿಯ ಮೇಲೆ ಕುಳಿತು ನಾಳೆಗಳ ಭವ್ಯತೆಯ ಬಗೆಗೆ ಹಗಲ್ಗನಸುಗಳ ಕಾಣುತ್ತಾ ಇಂದನ್ನು ಹಾಗೇ ಸುಮ್ಮನೆ ತಳ್ಳಿಬಿಡುವುದೇ ಬದುಕಾಗಿ ಹೋಯಿತಾ..?
ಹೀಗೆ ಬದುಕಿರುವುದಕ್ಕೋಸ್ಕರ ಬದುಕಿರುವುದು ಅಷ್ಟೊಂದು ಅಗತ್ಯವಾ..?
ಇಂಥ ಬದುಕಿಗಿಂತಲೂ ಸಾವಿಗೇ ಒಂದು ಸೌಂದರ್ಯವಿದೆಯೇನೋ..!!!


ಆದರೆ - ನಂಗೆ
"ಸಾಯಲು ಮನಸಿಲ್ಲ..."





Wednesday, January 26, 2011

ಗೊಂಚಲು - ಎರಡು...

ಬೆಳದಿಂಗಳು ಚೆಲ್ಲಿರುವ ರಾತ್ರಿ ಒಂಟಿಯಾಗಿ ಪ್ರಕೃತೀನ ನೋಡೋದು ಎಷ್ಟು ಖುಷಿಯ ಸಂಗತಿ ಗೊತ್ತಾ..! ಚಂದಿರನ ಹಾಲು ಬೆಳಕಿನ ತಂಪನ್ನ ಆಸ್ವಾದಿಸುತ್ತಾ ಒಮ್ಮೆ ಆಕಾಶಾನ ಒಮ್ಮೆ ಪ್ರಕೃತೀನ ನೋಡೋ ಮುದವೇ ಬೇರೆ.ಜಗವನೆಲ್ಲ ತಣ್ಣಗಿಡ್ತೀನಿ ಅಂತ ಬೀಗೋ ಚಂದ್ರ - ಆತನ ಬೆಳಕಿನ ನಡುವೆಯೇ ತಮ್ಮ ಅಸ್ತಿತ್ವಾನ ಸಾರುತ್ತಾ,ತಾವೇನು ಕಮ್ಮಿ ಅಂತ ಕೇಳ್ತಾ ಮಿನುಗೋ ತಾರೆಗಳು - ತನ್ನ ನೀಲಿಯ ವಿಸ್ತಾರದಲ್ಲಿ ಇವರನ್ನೆಲ್ಲ ಸಾಕ್ತಿದೀನಿ ಅಂತ ಬಿಂಕ ತೋರೋ ಬಾನ ನಿಶ್ಚಲತೆ. ಓಹ್..! ಗ್ರೇಟ್.

ಇನ್ನು ಭುವಿಗೆ ಬಂದ್ರೆ: ನಿಗೂಢವಾಗಿ,ಗಂಭೀರವಾಗಿ ಗೋಚರಿಸೋ ದೂರದ ಬೆಟ್ಟಗಳು - 'ಅವು ಬದುಕಿನಂತೆ'. ಸುಮ್ಮನೇ ಅಲುಗಾಡುತ್ತಾ ಬೆಳಕಿನ ಜೊತೆ ಚೆಲ್ಲಾಟವಾಡೋ ತೆಂಗಿನ ಗರಿಗಳು - 'ಅಂಗಳದಲ್ಲಿ ಆಡೋ ಹಸುಳೆಯಂತೆ.' ಹಾಲಿನ ಅಭ್ಯಂಜನ ಮಾಡ್ಕೊಂಡು ಹಾಗೇ ನಿಂತಂತೆ ಕಾಣೋ ಅಡಿಕೆಮರಗಳು - 'ಮುಖಕೆಲ್ಲ ಅರಿಶಿನ ಬಳ್ಕೊಂಡು ಸುಮ್ನೇ ನಾಚುತ್ತಾ, ಹಾಗೇ ನಗುತ್ತಾ ಯಾರಿಗೋ ಕಾದು ನಿಂತ ಹೊಸ ಹರೆಯದ ಮುಗುದೆಯಂತೆ.' ಚಂದ್ರಂಗೇ ಮುತ್ತಿಡಬೇಕೆಂಬ ಆಸೆಯಿಂದ ತೀರಾ ತೀರಾ ಎತ್ತರಕ್ಕೆ ಬೆಳೆದು ಇನ್ನು ಬೆಳೆಯೋಕಾಗದೇ ತಲೆ ಬಾಗಿಸಿ ನಿಂತ ಹುಲ್ಲ ಗರಿಕೆಯಂತೆ ಕಾಣೋ ಬಿದಿರ ಹಿಂಡು - 'ಹದಿವಯಸಿನ ಹುಡುಗನ ಮನದ ಆಸೆಯಂತೆ.' ಬೋಳುಗುಡ್ಡೆಯ ತಲೆಯ ಮೇಲೆ ಆಗಸವನ್ನೇ ಆಸೆಯಿಂದ ನೋಡ್ತಾ ಕೂತಂತೆ ಕಾಣುವ ಕಲ್ಲು ಬಂಡೆ - 'ಪ್ರಿಯತಮನ ಬರವಿಗಾಗಿ ಕಾದು ಕುಳಿತ ವಿರಹಿಣಿಯಂತೆ.'

ಓಹ್..! ಎಂಥ ಅಧ್ಬುತ. ಎಷ್ಟೊಂದು ವೈವಿಧ್ಯದ ಸೊಬಗು.ಬೆಳಿಗ್ಗೆ ಸೂರ್ಯನ ಬೆಳಕಲ್ಲಿ ಸರ್ವೇ ಸಾಮಾನ್ಯ ಎಂಬಂತೆ ಕಾಣುವ ವಸ್ತುಗಳು ಕೂಡಾ ರಾತ್ರಿಯ ಬೆಳದಿಂಗಳಲ್ಲಿ ವಿಶಿಷ್ಟವಾಗಿ, ಮನೋಹರವಾಗಿ,ಮನಮೋಹಕವಾಗಿ ಗೋಚರಿಸುತ್ತವೆ.ಅದೊಂದು ಬೇರೆಯದೇ ಪ್ರಪಂಚ. ಕಲ್ಲು ಮನಸಲ್ಲು ಕೂಡಾ ಭಾವನೆಗಳ ಒರತೆ ಚಿಮ್ಮುವಂತೆ ಮಾಡಬಲ್ಲ ದಿವ್ಯ ಲೋಕವದು. ಆ ದಿವ್ಯ ಲೋಕದಲ್ಲಿ ಒಂಟಿಯಾಗಿ ವಿಹರಿಸೋದೊಂದು ಅಧ್ಬುತ ಅನುಭೂತಿ.ಹಾಗೇ ಚಂದ್ರ ತಾರೆಗಳ ಲೋಕದಲ್ಲಿ, ಅದರಾಚೆಯ ಬಾನ ನೀಲಿಯಲ್ಲಿ ವಿಹರಿಸುತ್ತಾ ಮನದ ಭಾವಗಳನ್ನು ಸ್ವಚ್ಛಂದವಾಗಿ ಹರಿಯಬಿಡೋದು - ಆ ಮೂಲಕ ಕನಸುಗಳಿಗೆ ಪಕ್ಕಾಗೋದು. ಓಹ್..! ಅದೆಂಥ ದಿವ್ಯ ರಸಾನುಭೂತಿ. ಮನಸು ಖುಷಿಯಿಂದ ಹುಚ್ಚಾಗಿಬಿಟ್ಟಿರುತ್ತೆ. ಹಾಗೆ ಹುಚ್ಚಾದಾಗಲೇ ಮನಕ್ಕೆ ತನ್ನ ಹುಚ್ಚನ್ನು ಹಂಚಿ ಹೆಚ್ಚಿಸಿಕೊಳ್ಳಲು ಪಕ್ಕದಲ್ಲೊಬ್ಬಾಕೆ ಹುಚ್ಚಿಯ ಸಾಂಗತ್ಯ ಬೇಕೆನಿಸೋದು. ಒಮ್ಮೆ ಆ ಸಾಂಗತ್ಯದ ಆಸೆ ಮನದಿ ಮೂಡಿತೆಂದರೆ ಸಾಕು. ಅಷ್ಟು ಹೊತ್ತು ಒಂಟಿಯಾಗಿ ಏಕಾಂತವನ್ನು ಬಯಸ್ತಿದ್ದ ಮನ ಆಮೇಲಿಂದ ಸಂಗಾತಿ & ಆಕೆಯೊಂದಿಗೆ ಸೇರಿ ನಡೆಯುವ ಪಯಣದ ಕನಸನ್ನು ಕಾಣೋಕೆ ಶುರುಹಚ್ಕೊಂಬಿಡತ್ತೆ. ಆ ಕನಸು ಕಲ್ಪನೆಗಳು ಕೂಡ ಸೊಗಸಾಗಿಯೇ ಇರುತ್ವೆ ಅನ್ನಿ. ಆ ಅನುಭೂತೀನ ಆಸ್ವಾದಿಸಿಯೇ ತಿಳ್ಕೋಬೇಕು. ಅಕ್ಷರಗಳಲ್ಲಿ ಬಿಂಬಿಸೋಕದು ಅಸಾಧ್ಯ.

ಹಾಗೆ ಆಸ್ವಾದಿಸಬೇಕೆಂದರೆ - ಬೀಸುವ ತಂಗಾಳಿಯೊಂದಿಗೆ ತೇಲಿ ಬರೋ ಎಲ್ಲ ತರಹದ ಭಾವಗಳೂ ಒಳ ತೂರಿ ಬರುವಂತೆ ಮನದ ಬಾಗಿಲನ್ನು ಪೂರ್ಣವಾಗಿ ತೆರೆದಿಟ್ಕೋಬೇಕು. ಆ ಉದಾರ ಭಾವ ನಮ್ಮ ಬುದ್ಧಿಗಿರಬೇಕು.

ಈ ಎಲ್ಲ ರಸಾನುಭೂತೀನೂ ಆಸ್ವಾದಿಸಿದ ಆ ಕ್ಷಣ ನನಗನ್ನಿಸಿದ್ದೇನಂದ್ರೆ ಎಂದಾದರೊಂದು ದಿನ ಇಂಥದೇ ಬೆಳದಿಂಗಳ ರಾತ್ರಿಯಲ್ಲಿ,ಇಷ್ಟೇ ಸ್ವಚ್ಛಂದ -  ಪ್ರಪುಲ್ಲ ಮನಸ್ಥಿತೀಲಿ ಬಾಳಸಂಗಾತಿಯೊಂದಿಗೆ ಆಕೆಯ ಹೆಗಲು ತಬ್ಬಿ ಓಡಾಡಬೇಕು. ಹಾಗೇ ಕೂತು ಕನಸುಗಳನ್ನು ಶೇರ್ ಮಾಡ್ಕೋಬೇಕು. ಮಡಿಲಲ್ಲಿ ಒರಗಿ ನಕ್ಷತ್ರಗಳನ್ನೆಣಿಸಬೇಕು.ಆಕೇನ ನಗಿಸಿ ಚಂದ್ರನನ್ನೇ ಅಣಕಿಸಬೇಕು. ಆಕೆಯ ಕಂಗಳಲ್ಲಿ ಮಿನುಗೋ ಖುಷಿಗೆ ನಾನು ಕಾರಣನಾಗಬೇಕು. ಆ ಖುಷಿ ಮುತ್ತಾಗಿ ತುಟಿಯ ತೋಯಿಸಬೇಕು. ಅದ ನೋಡಿ ಚಂದ್ರನೂ ನಾಚಿ ಮೋಡದ ಮರೆಯಲಿ ಅಡಗಬೇಕು.

ಈ ಕಲ್ಪನೆ ಚೆನ್ನಾಗಿದೆ ಅಲ್ವಾ..? ಅದು ಬರೀ ಕಲ್ಪನೆ ಅಂದ್ರೆ ತಪ್ಪಾಗುತ್ತೆ. ಅದು ನನ್ನ ಕನಸೂ ಆಗಿತ್ತು. (ವಾಸ್ತವದ ಭೀಕರತೆಯಲ್ಲಿ ಇಂಥ ಸಾವಿರಾರು ಕನಸುಗಳು ಸತ್ತು ಸಮಾಧಿಯಾಗಿ ಹೋದವು.)

ಇಂಥ ಮಧುರ ಭಾವಗಳಿಗೆ ಬಸಿರಾಗುವಂತೆ ಪ್ರೇರೇಪಿಸಿದ ಅಂದಿನ ಆ ಬೆಳದಿಂಗಳ  ಹುಣ್ಣಿಮೆ ರಾತ್ರಿಗೆ - ಆ ಬೆಳದಿಂಗಳ ಸೂಸಿದ ಚಂದಿರನಿಗೆ - ಅವನ ಚಂದಕ್ಕೆ ಇನ್ನಷ್ಟು ಮೆರಗು ತುಂಬಿದ ತಾರೆಗಳಿಗೆ - ಅವಕ್ಕೆಲ್ಲ ಆಶ್ರಯ ನೀಡಿದ ಬಾನ ನಿಶ್ಚಲ ನಿರ್ಮಲ ನೀಲಿಗೆ. ಎಲ್ಲವಕ್ಕೂ ಸೇರಿ ನನ್ನದೊಂದು ಸಲಾಮ್..

ಗೊಂಚಲು - ಒಂದು...

"ಭೂತಕಾಲದ ನೋವು ವರ್ತಮಾನದ ನಗುವಾಗುತ್ತೆ. ಎದುರಾಗುವ ಪ್ರತಿ ನೋವನ್ನೂ ನಗುವಾಗಿಸಿಕೊಳ್ಳಬಲ್ಲವರಾದರೆ ಕೊನೆಗೆ ಬದುಕೆಲ್ಲ ನಗುವೇ ಆಗಿಬಿಡುತ್ತೆ."


ಸವಿನೆನಪುಗಳ ನಡುವೆ ಇಣುಕಿ ನೋಡುವ ಒಂದ್ಯಾವುದೋ ಕಹಿ ನೆನಪಿಗೆ ತನ್ನ ಕಣ್ಣಂಚ ನಗುವನ್ನು ಕೊಲ್ಲುವ ತಾಕತ್ತಿಲ್ಲದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ವ್ಯಕ್ತಿಗೆ ಬದುಕೊಂದು ಸ್ವರ್ಗವೇ ಆಗುತ್ತದೆ..


ಒಂದು ಭವ್ಯ ಭವಿಷ್ಯತ್ತಿನ ಪುಟ್ಟ ಪ್ರಣತಿ ಸದಾ ಮನದಲ್ಲಿ ಉರಿಯುತ್ತಲೇ ಇರಲಿ. ಬದುಕಿನ ಯಾವುದೋ ಒಂದು ತಿರುವಿನಲ್ಲಿ ಗೆಲುವೆಂಬುದು ಅನಿರೀಕ್ಷಿತವಾಗಿ ಫಕ್ಕನೇ ಎದುರಾಗಿ ಕೈಯ ಹಿಡಿಯುತ್ತೆ ಎಂಬ ಭರವಸೆ ಬದುಕಿಗೆ ಬೆನ್ನು ತಿರುಗಿಸದೇ ಮುನ್ನಡೆಯಲು ಪ್ರೇರೇಪಿಸುತ್ತಿರಲಿ. ಅದು ಸುಳ್ಳೇ ಭರವಸೆಯಾದರೂ ಸರಿ. ಅದು ನಮ್ಮೊಳಗೆ ನಾವು ಸದಾ ನಗುತಿರಬಲ್ಲ ಆತ್ಮ ಶಕ್ತಿಯನ್ನು ಹೊಂದಿಸಿಕೊಟ್ಟರೆ ಅಷ್ಟೇ ಸಾಕು.


ನಗೆಯು ಸಾಂಕ್ರಾಮಿಕವಾಗಲಿ....